- ವಿಷಮಳೆಯಿಂದ ನೊಂದು,ಬೆಂದ ಗ್ರಾಮದ ವಿಷಕಂಠನಿಗೆ ಈಗ ಬ್ರಹ್ಮಕಲಶೋತ್ಸವ ಸಡಗರ..
- ಏತಡ್ಕದ ಬ್ರಹ್ಮಕಲಶಕ್ಕುಂಟು ಶಿವಸಂಚಾರದ ರಸಕೈಲಾಸದ ಕತೆಗಳು…!
ನುಡಿ ಚಿತ್ರ / ಎಂ.ನಾ.ಚಂಬಲ್ತಿಮಾರ್
ನೋಡಿ.. ಆ ಮುಗುಳಿ ಉಂಟಲ್ಲಾ..ಅದು ಕಾಗೆ ರೆಕ್ಕೆ ಸೋಂಕಿದ್ದರೂ ಸಾಕಿತ್ತು…ಠಪ್ಪನೆ ಕೆಳಗುದುರುವ ಸ್ಥಿತಿಗೆ ತಲುಪಿತ್ತು..!
ಅದನ್ನಿರಿಸಿದ್ದ ಸರಿಗೆ ಸಂಪೂರ್ಣ ತುಕ್ಕು ಹಿಡಿದು ಕ್ಷಯಿಸಿತ್ತು..!
ಎಲ್ಲಾದರೂ ದುರದೃಷ್ಟವಶಾತ್ ಗರ್ಭಗುಡಿಯ ಮೇಲಣ ಮುಗುಳಿ ಕೆಳಗೆ ಬಿದ್ದಿದ್ದರೆ ಅದರಿಂದುಂಟಾಗುವ ದೋಷ-ಪ್ರಾಯಶ್ಚಿತ್ತ ಒಂದೆರೆಡೇ…???
ಗಡಿನಾಡಿನ ಕನ್ನಡ ಪತ್ರಕರ್ತರಾದ ನಮ್ಮನ್ನೆಲ್ಲಾ ಇತ್ತೀಚೆಗೆ ಬ್ರಹ್ಮಕಲಶಾರಂಭಕ್ಕೆ ಮುನ್ನ ಏತಡ್ಕ ಸದಾಶಿವ ದೇವಸ್ಥಾನಕ್ಕೆ ಕರೆಸಿಕೊಂಡು, ನವೀಕೃತ ದೇಗುಲದ ಪ್ರತಿಯೊಂದು ಭಾಗವನ್ನೂ ಖುದ್ದು ವಿಸ್ತ್ರೃತವಾದ ಕಮೆಂಟರಿಯೊಂದಿಗೆ ಬ್ರಹ್ಮಕಲಶೋತ್ಸವದ ಸಂಚಾಲಕ ಚಂದ್ರಶೇಖರ ಏತಡ್ಕ ಹೇಳುತ್ತಲೇ ಹೋದರು. ಸ್ವತಃ ನುಡಿಚಿತ್ರಕಾರರಾದ ಅವರ ಮಾತುಗಳಲ್ಲಿ ಕೇವಲ 90ದಿನದಲ್ಲಿ ನವೀಕರಣಗೊಂಡು ಬ್ರಹ್ಮಕಲಶಕ್ಕೆ ಸಜ್ಜಾದ ಗ್ರಾಮೀಣ ಶುದ್ಧಿಯ ಏತಡ್ಕ ಸದಾಶಿವ ದೇಗುಲದ ಕಥನ ವೈಭವಗಳು ಸಚಿತ್ರವಾಗಿ ಅನಾವರಣಗೊಂಡಿತು..
ಎರಡು ದಶಕದ ಹಿಂದೆ ಇಡೀ ನಾಡನ್ನು ವಿಷಮಳೆಯಿಂದ( ಎಂಡೋಸಲ್ಫಾನ್) ಕಾಡಿ, ಬಾಡಿಸಿದ ಊರದು. ಏತಡ್ಕ ಅಂದರೂ ಪುಟ್ಟ ದೇಗುಲ ಇರುವುದು ಎಣ್ಮಕಜೆ-ಕುಂಬ್ಡಾಜೆ ಗ್ರಾ.ಪಂ.ಗಡಿಯ ಪಡ್ರೆ ಗ್ರಾಮದಲ್ಲಿ.
ದೇಗುಲದ ಮೂಡು ಭಾಗದಲ್ಲಿ ಪ್ರದಕ್ಷಿಣಾಕಾರದಿಂದ ಹರಿದು ಪಳ್ಳತ್ತಡ್ಕ ದಾರಿಯಾಗಿ ಕುಂಬಳೆಯಲ್ಲಿ ಸಮುದ್ರ ಸೇರುವ ಹೊಳೆ ಹರಿಯುತ್ತಿದೆ. 1940ರಲ್ಲಿ ಈ ಹೊಳೆ ಉಕ್ಕಿ ಹರಿಯಿತು. ನೆರೆ ಬಂದು ಸುತ್ತಲಿನ ತೋಟಗಳಿಂದಾವೃತ ಕೃಷಿ ಭೂಮಿ ಹೂಳು ತುಂಬಿ ಕೃಷಿಗೆ ಅಯೋಗ್ಯವಾಯಿತು. ಇಂಥ ನೆಲವನ್ನು 1941ರಲ್ಲಿ ಏತಡ್ಕ ಸುಬ್ರಾಯ ಭಟ್ಟರು ಖರೀದಿಸಿದರು. ಆಗ ಪುಟ್ಟ ಗುಡಿಯಂತಿದ್ದ ದೇಗುಲವನ್ನು 1948ರಲ್ಲಿ ನವೀಕರಿಸಿ ಬ್ರಹ್ಮಕಲಶ ನಡೆಸಲಾಯಿತು.
ಅದು ಬಡತನದ ತಾಂಡವದ ದಿನಗಳು..
ಮನುಷ್ಯ ಬದುಕಿಗೆ ಧನ -ಧಾನ್ಯ ಎರಡೂ ದುರ್ಲಭವಾಗಿದ್ದ ಸಮಯ. ಆಗ ಆಹಾರ ಧಾನ್ಯಕ್ಕೆ ಕ್ಷಾಮ.
ಆದಿನಗಳಲ್ಲಿ ನಾಡಿನ ಜನರೆಲ್ಲರ ಹಸಿವು ನೀಗಿಸಿದ್ದೇ ಹಲಸು. ದಿನದ ಮೂರು ಹೊತ್ತಿಗೂ ಹಲಸಿನ ಹಲವು ಬಗೆಗಳೇ ಆಹಾರ. ಹೀಗೆ ಒಂದು ಗ್ರಾಮವನ್ನು ಬರಗಾಲದ ದಿನಗಳಲ್ಲಿ ಹಲಸೇ ಕಾಪಾಡಿದ್ದನ್ನು ಮರೆಯಲಾಗದು , ನಾವು ಋಣಿಯಾಗಬೇಕೆಂದು ದಿ. ಏತಡ್ಕ ಸುಬ್ರಾಯ ಭಟ್ಟರು ಶ್ರೀ ಸುಬ್ರಿಯ ದೇವರಿಗೆ ಹಲಸಿನ “ಹಣ್ಣಿನ ಅಪ್ಪ ಸೇವೆ” ಆರಂಭಿಸಿದರು. ಇಂದಿಗೂ ವರ್ಷಂಪ್ರತಿ ಈ ಸೇವೆ ತಪ್ಪದೇ ಮುಂದುವರಿಯುತ್ತಿದೆ. ಈಗ ಹಲಸು ಕೇರಳದ ರಾಜ್ಯ ಫಲ. ಆದರೆ ದೇಶದ ಮತ್ತೆಲ್ಲೂ ಇಲ್ಲದಂತೆ ಹಲಸನ್ನೇ ಆರಾಧಿಸುವ ಶಿವಾಲಯ ನಮ್ಮದು ಎನ್ನುತ್ತಾ ಚಂದ್ರಶೇಖರ ಏತಡ್ಕ ಪತ್ರಕರ್ತರ ಜತೆ ಒಂದೊಂದೇ ಕತೆ ಹೇಳುತ್ತಾ ಹೋದರು.
ಅವರಾಡಿದ ಒಂದೊಂದು ಕತೆಯಲ್ಲೂ ಕೌತುಕ ತುಂಬಿದೆ. ನೆಲಮೂಲ ಸಂಸ್ಕೃತಿಯ ಸನಾತನತೆ ಅಡಗಿದೆ..
: ಏತಡ್ಕ ಪುಟ್ಟ ಹಳ್ಳಿ. ನಮಗೆ ಪಟ್ಟಣ, ಮಹಾನಗರಗಳ ಸಂಪನ್ಮೂಲವಿಲ್ಲ. ಬೃಹತ್ ಸಂಖ್ಯೆಯ ಕಾರ್ಯಕರ್ತರೂ ಇಲ್ಲ. ಆದರೆ ಸರ್ವಂ ಶಿವಮಯವಾಗಿಸಿದ ಶಿವಾರ್ಪಣದ ಮನಸ್ಸಿದೆ. ಆದ್ದರಿಂದಲೇ ಹೊರಟ ಮೂರೇ ತಿಂಗಳಲ್ಲಿ ಬ್ರಹ್ಮಕಲಶ ನಡೆಯುತ್ತಿದೆ ಎಂದರು.
ಕುಂಭಮೇಳ ಆರಂಭಕ್ಕೆ ಮೊದಲೇ ಪ್ರಯಾಗ್ ರಾಜ್ ನ ತ್ರಿವೇಣಿ ಸಂಗಮ ಸಹಿತ ದೇಶದ ಪುಣ್ಯ ನದಿಗಳ ನೀರು ಲಭಿಸಿದೆ. ಯಾಗಭೂಮಿಗಳ ಮಣ್ಣು ಸಂಗ್ರಹಿಸಿದ್ದೇವೆ. ಊರ ದನಗಳ ಸಗಣಿ ಬೆರಣಿ ಮಾಡಿ ಸಾಂಪ್ರದಾಯಿಕ ವಿಧಿಯಂತೆ ನಾವೇ ಶುದ್ಧ ಭಸ್ಮ ತಯಾರಿಸಿದ್ದೇವೆ. ಪ್ರತಿ ಮನೆಯಿಂದ ಮಡಲು ಹೆಣೆದು ಸಂಗ್ರಹಿಸಿದ್ದೇವೆ. ಮನೆ,ಮನೆಯಲ್ಲಿ ಶಿವ ಪಂಚಾಕ್ಷರಿ ಜಪಲಿಪಿ ಪುಸ್ತಕ ಬರೆಸಿದ್ದೇವೆ. ಒಬ್ಬರಂತೂ 1ಲಕ್ಷ ಜಪಲಿಪಿ ಬರೆದಿದ್ದಾರೆ!
ಹಸುವಿನ ಕೊಂಬು ಎತ್ತಿದ ಮಣ್ಣು ಸಂಗ್ರಹಿಸಿದ್ದೇವೆ. ಹೆಚ್ಚೇಕೆ ಪರಿಶುದ್ಧ ರುದ್ರಾಕ್ಷಿ ಗಳನ್ನೂ ಕೂಡಾ ನಮ್ಮೂರಿಂದಲೇ ಸಂಗ್ರಹಿಸಿದ್ದೇವೆ ಎಂದರಲ್ಲದೇ
ನನಗೂ ಸಹಿತ ಎಲ್ಲಾ ಪತ್ರಕರ್ತರಿಗೂ ಒಂದೊಂದು ರುದ್ರಾಕ್ಷಿ ಕಾಯಿಗಳನ್ನಿತ್ತರು. ನನಗೆ ಪಂಚಮುಖಿ ರುದ್ರಾಕ್ಷಿ ಒಲಿದಿತ್ತು. ಏತಡ್ಕ ಬ್ರಹ್ಮಕಲಶದ ಮೂಲಕ ನಮ್ಮ ಮನೆಯ ದೇವರ ಗುಡಿಗೆ ಶಿವನ ಸಂಕೇತವಾದ ರುದ್ರಾಕ್ಷಿ ತಲುಪುವಂತಾಯಿತು
ನಿಮಗೆಲ್ಲ ಗೊತ್ತಿರುವಂತೆ ಏತಡ್ಕ ಕ್ಕೆ ಹಳ್ಳಿಯೇ ಉಸಿರು. ಕೇರಳ -ಕರ್ನಾಟಕ ಗಡಿಯ ಪುಟ್ಟ ಗ್ರಾಮವಿದು. ಇಲ್ಲಿನ ಸದಾಶಿವ ದೇವರ ನವೀಕರಣ ಜೀರ್ಣೋದ್ಧಾರ ಬ್ರಹ್ಮಕಲಶ ಶಿವಾರ್ಪಣದ ಮೂಲಕ ನಾಡನ್ನು ಒಂದುಗೂಡಿಸಿದೆ. ನಾಗರಿಕರಲ್ಲಿ ರಸ ಕೈಲಾಸಿ , ಶಿವಸಂಚಾರಿಯಾಗಿದೆ.
ಅದೇ ಈ ಸಂಭ್ರಮ ಎಂದು ಏತಡ್ಕ ದೇಗುಲ ಕುಗ್ರಾಮದಲ್ಲಿ ಅರಳಿದ, ಭಸ್ಮಗಂಧ ಹರಡಿದ ಕತೆ ಹೇಳುತ್ತಲೇ ಹೋದರು…
ಏತಡ್ಕ ಶ್ರೀ ಸದಾಶಿವ ದೇವರ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ನಡೆಯುತ್ತಿದ್ದು, ಫೆ.16ರಂದು ಬೆಳಿಗ್ಗೆ 8.48ರ ಮೀನಲಗ್ನದಲ್ಲಿ ದೇವರ ಪುನರ್ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ನಡೆಯಲಿದೆ. ಅಂದು ಮಧ್ಯಾಹ್ನ 12.30ರಿಂದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಶಿವಸಂದೇಶದೊಂದಿಗೆ ಧಾರ್ಮಿಕ ಸಭೆಯೂ ಜರಗಲಿದೆ.