- ಪಾರ್ತಿಸುಬ್ಬನ ಆಡುಂಬೊಲದಲ್ಲಿ ಕಲೆ, ಧರ್ಮ, ಸಂಸ್ಕೃತಿಗೆ ಪೋಷಣೆಯ ಕೊಡೆ ಹಿಡಿದ ಹಿಳ್ಳೆಮನೆ ಭಟ್ರು ಮೆಟ್ಟಿಲಿಳಿಯುತ್ತಾರೆಂದರೆ….
- Kanipura special
. ಸುದ್ದಿಕತೆ
. ಎಂ. ನಾ. ಚಂಬಲ್ತಿಮಾರ್
ಕುಂಬಳೆ ಸೀಮಾ ಕ್ಷೇತ್ರ ಕಣಿಪುರ ಶ್ರೀಗೋಪಾಲಕೃಷ್ಣ ದೇವಾಲಯದಲ್ಲಿ ನಿರಂತರ 40 ವರ್ಷಗಳ ಕಾಲ ಹುದ್ದೆ ಏನೇ ಆದರೂ ಚಿಂತಿಸದೇ
” ಸರ್ವ ಸೇವಾ ಕಾಯಕ” ಗಳನ್ನು ಕೃಷ್ಣ ನಿಷ್ಠೆಯಿಂದ ಮಾಡಿದ
ಎಚ್. ಎಸ್. ವೆಂಕಟಕೃಷ್ಣ ಭಟ್ ಹಿಳ್ಳೆಮನೆ ಸೇವಾ ನಿವೃತ್ತರಾಗುತ್ತಿದ್ದಾರೆ.
ಇದೇ ಜೂನ್ 30ರಂದು ಸೋಮವಾರ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಳದಲ್ಲಿ ಭಕ್ತಾದಿ ಬಂಧು ಮಿತ್ರರಿಗೆ ಸೇವಾ ವಿದಾಯದ ಸ್ನೇಹ ಭೋಜನವನ್ನಿತ್ತು ಅವರು ಕ್ಷೇತ್ರ ಕಚೇರಿಯ ಜವಾಬ್ದಾರಿಯಿಂದ ಹೊಸ್ತಿಳಿಯಲು ಸಜ್ಜಾಗಿದ್ದಾರೆ.
ಇದೇ ಜುಲೖ 1 ರಿಂದ ಅವರಿಗೆ ನಿವೃತ್ತ ವಿಶ್ರಾಂತ ಜೀವನ..

ಕುಂಬ್ಳೆಯ ಹಿರಿಯರಿಗೆಲ್ಲಾ ಅವರು ಹಿಳ್ಳೆಮನೆ ಭಟ್ರಣ್ಣ. ವಾತ್ಸಲ್ಯದ ಪ್ರೀತಿಗೊಳಗಾದ ಕಿರಿಯರಿಗೆಲ್ಲಾ ಭಟ್ರು ಮಾವ!
ಹೀಗೆ ಎಲ್ಲಾ ವಯೋಮಾನದ ಜನರೊಂದಿಗೆ ತಲೆಮಾರು ಬೇಧವಿಲ್ಲದೇ ಅಂತರಂಗದ ಪ್ರೀತಿ ಹಂಚಿಕೊಂಡ ಇವರು 1987ರ ಎಪ್ರೀಲ್ 1 ರಂದು ಕಣಿಪುರ ಕ್ಷೇತ್ರ ಕಚೇರಿಯ ಸೇವಾ ಕ್ಲರ್ಕ್ ಆಗಿ ಮಲಬಾರ್ ದೇವಸ್ವಂ ಮಂಡಳಿ ಆಧೀನದಲ್ಲಿ ಔದ್ಯೋಗಿಕ ನೌಕರಿ ನೇಮಕ ಪಡೆದವರು.
ಆದರೆ ಆ ಮೊದಲೇ ಅವರಿಲ್ಲಿ ಸೇವಾ ಕರ್ತವ್ಯಕ್ಕೆ ನಿಯುಕ್ತರಾಗಿದ್ದರು.
ಉದ್ಯೋಗ ದೊರೆಯುವಾಗ ಅವರಿಗೆ ತಾರುಣ್ಯದ 25 ರ ಹರೆಯ. ಈಗ ಮಾಗಿದ 65 ರ ಹರೆಯದಲ್ಲಿ ಕ್ಷೇತ್ರ ಕಚೇರಿಯ ಉಸ್ತುವಾರಿ ಹೊಂದಿದ ಹಿರಿಯ ಕ್ಲರ್ಕ್ ಹುದ್ದೆಯಿಂದ ನಿವೃತ್ತಿಯ ಸರದಿ…

ಯಕ್ಷಗಾನ ಆಚಾರ್ಯ ಪಾರ್ತಿಸುಬ್ಬನ ಕರ್ಮಕ್ಷೇತ್ರವಾದ ಕಣಿಪುರ ದೇವಾಲಯದಲ್ಲಿ ಕಳೆದ 4 ದಶಕದಲ್ಲಿ ಏನೆಲ್ಲಾ ಸ್ಥಿತ್ಯಂತರಗಳು ನಡೆದಿವೆಯೋ ಅವಕ್ಕೆಲ್ಲಾ ಭಟ್ಟರು ಸಾಕ್ಷಿಯಾಗಿದ್ದಾರೆ. ಅಭ್ಯುದಯ ಕೖಂಕರ್ಯಗಳಲ್ಲಿ ಕೖ ಜೋಡಿಸಿದ್ದಾರೆ. ಚಾರಿತ್ರಿಕವಾದ 1989ರ ಬ್ರಹ್ಮಕಲಶದಲ್ಲಿ ಸಂಪೂರ್ಣ ತೊಡಗಿಸಿದ್ದ ಅವರು ಬಳಿಕ ಕ್ಷೇತ್ರದ ಸುಪ್ರಭಾತ ಬಿಡುಗಡೆ, ಅಂಗಣಕ್ಕೆ ಶಿಲಾ ಹೊದಿಕೆ, ಸುತ್ತು ಗೋಪುರಕ್ಕೆ ತಾಮ್ರದ ಹೊದಿಕೆ, ಎದುರಿನ ರಾಜಗೋಪುರ, 2024 ರ ನವೀಕರಣ ಬ್ರಹ್ಮ ಕಲಶ, ಪುಷ್ಕರಣಿ ನಿರ್ಮಾಣ ಮುಂತಾದ ಕ್ಷೇತ್ರದ ಎಲ್ಲಾ ಅಭಿವೃದ್ಧಿ ಕಾಯಕಗಳಲ್ಲೂ ಸಕ್ರಿಯ ತೊಡಗಿಸಿಕೊಂಡಿದ್ದಾರೆ.
ದೇವಳದ ಯಾವುದೇ ಕೆಲಸ ಇದ್ದರೂ ಇವರಿಲ್ಲದೇ, ಅವರಿಗರಿಯದೇ ನಡೆಯುತ್ತಿರಲಿಲ್ಲ. ಅದವರ ಕ್ಷೇತ್ರ ನಿಷ್ಠ ಕರ್ತವ್ಯ ಬದ್ಧತೆಗೆ ಕನ್ನಡಿ..
ಕುಂಬಳೆ ಕಣಿಪುರ ಕ್ಷೇತ್ರಕ್ಕೆ ದೇಶ-ವಿದೇಶಗಳಲ್ಲಿ ನೆಲೆಸಿದ ಕುಂಬಳೆ ಸೀಮೆಯವರು ಊರಿಗೆ ಬಂದಾಗಲೆಲ್ಲಾ ಬರುವುದು ರೂಢಿ. ನಾಡಿಗೆ ಅಪರಿಚಿತರಾಗಿ ದೂರದಲ್ಲಿ ನೆಲೆಸಿರುವ ಇಂತವರು ಬಂದಾಗಲೆಲ್ಲಾ, ಊರಿನ ಆತಿಥ್ಯ ಗೌರವ ನೀಡಿ ಅವರನ್ನು ಕ್ಷೇತ್ರಕ್ಕೆ ಬರಮಾಡಿಸಿಕೊಂಡು, ಮಮತಾ ವಚನದ ಉಪಚಾರ ನೀಡಿ, ಸೇವಾ ಸೌಕರ್ಯ ಒದಗಿಸಿ ದೇವರ ನಡೆಯಲ್ಲಿ ಅವರ ಸಂಪ್ರಾರ್ಥನೆ ಮಾಡಿಸಿಕೊಡುವುದರಲ್ಲಿ ಭಟ್ಟರದ್ದು ಪಾದರಸ ಪ್ರತಿಭೆ. ಮುಂಚೂಣಿಯ ಸಾರಥ್ಯ..
ಅವರ ಈ ನಡವಳಿಕೆಯೇ ಅನ್ಯ ನಾಡಲ್ಲಿರುವ ಅನೇಕರಿಗೆ ಕಣಿಪುರ ಕ್ಷೇತ್ರ ಎಂದಾಗಲೇ ಸಂಭ್ರಮದ ಸಂಬಂಧ ಮೂಡಲು ಕಾರಣವಾಗಿದೆ.
ಅನೇಕರಿಗೆ ಸಂತೃಪ್ತಿ ತಂದಿದೆ.
ಹೀಗೆ ದೇವಸ್ಥಾನಕ್ಕೆ ಬಂದು ಆತಿಥ್ಯ, ಮರ್ಯಾದೆಗಳ ಗೌರವ ಪಡೆದವರಲ್ಲಿ ಉಚ್ಛ ನ್ಯಾಯಾಲಯದ ನ್ಯಾಯಾಧೀಶರಿಂದ ಮೊದಲ್ಗೊಂಡು ನಾನಾ ವರ್ಗದ ಪ್ರಸಿದ್ಧರಿದ್ದಾರೆ. ರಾಜಕೀಯ ಮುಖಂಡರಿದ್ದಾರೆ.

ಕಳೆದ ಶತಮಾನದ ಅಂತ್ಯದ ವರೆಗೂ ಕಣಿಪುರ ಕ್ಷೇತ್ರ ನಾಡಿನ ಸಾಂಸ್ಕೃತಿಕ ನೆಲೆಯಾಗಿತ್ತು. ಹರಿದಾಸ ದಿ. ಶೇಣಿ ಗೋಪಾಲಕೃಷ್ಣ ಭಟ್, ಹರಿದಾಸ ದಿ. ಸಂತ ಭದ್ರಗಿರಿ ಅಚ್ಯುತ ದಾಸ, ಗಾನಯೋಗಿ ವಿದ್ಯಾಭೂಷಣ, ವಿದ್ವಾನ್ ಬಾಬು ರೖ ಸಹಿತ ನಾಡು-ಹೊರನಾಡಿನ ಕಲಾವಿದರಿಂದ ಹಳೇ ಗೋಪುರದಲ್ಲಿ ನಿರಂತರ ಸಾಂಸ್ಕೃತಿಕ ಕಲರವಗಳು ನಡೆಯುತ್ತಿದ್ದುವು. ಅದಕ್ಕೆಲ್ಲಾ ಕಲಾಪ್ರಿಯನಾದ ಹಿಳ್ಳೆಮನೆ ಭಟ್ಟರು ಪ್ರೋತ್ಸಾಹದ ಅವಕಾಶ ಸಹಿತ ಪೂರಕ ಬೆಂಬಲಗಳನ್ನೂ ನೀಡುತ್ತಿದ್ದರು.
ವಾರ್ಷಿಕ ಜಾತ್ರಾ ಸಹಿತ ದೇವಳದಲ್ಲಿ ಏನೇ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದರೂ ಅದರ ಜೋಡಣೆ, ಪ್ರದರ್ಶನ ಜವಾಬ್ದಾರಿ, ಕಲಾಗೌರವ ಎಲ್ಲದರ ಸುಸೂತ್ರ ನಿರ್ವಹಣೆ ಇವರದ್ದೇ…!
ಒಟ್ಟು ನಾಲ್ಕು ದಶಕದ ಯಾನದಲ್ಲಿ ನಾಡು ಸಮಗ್ರ ಪರಿಷ್ಕಾರ ಕಂಡಂತೆಯೇ ದೇವಳವೂ ಬದಲಾಗಿದೆ. ಈ ಬದಲಾವಣೆಯ ಪಲ್ಲಟ ಪರ್ವದಲ್ಲವರು ಅನೇಕ ಕೃಷ್ಣ ಚಮತ್ಕಾರಗಳನ್ನು ಕಂಡಿದ್ದಾರೆ. ಅನುಭವಕ್ಕೆ ಒಳಗಾಗಿದ್ದಾರೆ. ಅದನ್ನೆಲ್ಲಾ ಹಂಚದೇ ಭಕ್ತಿ ಎಂದರೆ ಬಾಹ್ಯ ಪ್ರದರ್ಶನವಲ್ಲ, ಅಂತರಂಗದ ಮಮತೆ ಎಂದಷ್ಟೇ ಮಾಗಿದ ಮನಸ್ಸಿನ ಪಕ್ವತೆಯಿಂದವರು ಹೇಳುತ್ತಾರೆ.
ಮೂರು ದಶಕಗಳ ಶ್ವೇತವಸನಧಾರಿ…
ಹಿಳ್ಳೆಮನೆ ವೆಂಕಟಕೃಷ್ಣ ಭಟ್ಟರದ್ದು ನಿತ್ಯವೂ ಶ್ವೇತ ವಸನ. ಬಿಳಿ ಅಲ್ಲದೇ ಮತ್ತೊಂದು ಬಣ್ಣದ ಉಡುಪಿನಲ್ಲಿ ಅವರನ್ನು ಹೊರಜಗತ್ತಲ್ಲಿ ಕಂಡವರೇ ಇಲ್ಲ. ನಿತ್ಯವೂ ಬಿಳಿ ಮುಂಡು, ತೋಳು ಮಡಚಿದ ಬಿಳಿ ಅಂಗಿ. ಇದು ಶುಭ್ರತೆ, ಸೌಮ್ಯತೆ, ಸಭ್ಯತೆಯ ಕುಲೀನ ಉಡುಪು ಎನ್ನುವ ಅವರು ಭರ್ತಿ ಮೂವತ್ತು ವರ್ಷಗಳಿಂದ ಬಿಳಿ ಉಡುಗೆಯನ್ನೇ ತೊಡುತ್ತಾರೆ. ಒಮ್ಮೆ ಇದು ಅಭ್ಯಾಸವಾಯಿತೋ ಮತ್ತೆ ಬಿಡಲಾಗದು ನಂಟು ಎನ್ನುತ್ತಾರವರು. ದೇವಳದ ಜಾತ್ರೆ, ವಾರ್ಷಿಕ ಕಟ್ಟುಕಟ್ಟಳೆಯ ಆರಾಧನಾ ವ್ಯವಸ್ಥೆಗೆ ಏನೇನು ಬೇಕು ಎಂಬಲ್ಲಿಂದ ಹೇಗೆಲ್ಲಾ ನಡೆಯಬೇಕೆನ್ನುವುದು ದಶಕಗಳ ಕಾಯಕದಿಂದ ಅವರಿಗೆ ನೀರು ಕುಡಿದಷ್ಟೇ ಸಲೀಸು. ಎಷ್ಟೇ ಜನ ದಟ್ಟಣೆ ಇದ್ದರೂ ವಿಚಲಿತರಾಗುವ ಜಾಯಮಾನ ಅವರಲ್ಲಿಲ್ಲ.
ಅವರದ್ದು ಶಾಂತ ಚಿತ್ತದ ಮೌನ ಸೇವೆಯ ದಕ್ಷತೆ.

55 ರಲ್ಲಿ ಕಾರು ಚಾಲನೆ ಕಲಿತ ಕಲಾವಿದ
ಹಿಳ್ಳೆಮನೆ ವೆಂಕಟಕೃಷ್ಣ ಭಟ್ಟರದ್ದು ಹಠ ಮತ್ತು ಛಲದ ನಿಲುಮೆ. ಅದಕ್ಕೆ ಉದಾಹರಣೆ 55ರ ಹರೆಯದಲ್ಲಿ ಕಾರು ಡ್ರೖವಿಂಗ್ ಕಲಿತು ಕಾರು ಖರೀದಿಸಿ, ನಿತ್ಯವೂ ದೇವಳಕ್ಕೆ ಕಾರಲ್ಲೇ ಬಂದು ಹೋಗಲಾರಂಭಿಸಿದ್ದು.
ಇಷ್ಟಕ್ಕೂ ಅವರ ಮನೆ ಇರುವುದು ನಾರಾಯಣ ಮಂಗಲದಲ್ಲಿ. ಅಲ್ಲಿಗೆ ಕಣಿಪುರ ಕ್ಷೇತ್ರದಿಂದ ಕೇವಲ 4 ಕಿ. ಮೀ. ದೂರ. ಕಾರು ನಿತ್ಯಕ್ಕೆ ಅತ್ಯಗತ್ಯ ಏನಲ್ಲ. ಆದರೆ ಸ್ವಂತ ವಾಹನವಿಲ್ಲದೇ ಬಸ್ಸನ್ನೇ ಆಶ್ರಯಿಸುತ್ತಿದ್ದ ಅವರು ಒಮ್ಮೆ ನೊಂದಿದ್ದಾರೆ. ಆ ಬಳಿಕ ಚಾಲನೆ ಖಲಿತು,
ಛಲ ತೊಟ್ಟು ಕಾರು ಖರೀದಿಸಿದ್ದಾರೆ.
ಇನ್ನೊಂದು ವೖಶಿಷ್ಟ್ಯ ಎಂದರೆ 60ರ ಹರೆಯದಲ್ಲವರು ತಬ್ಲಾ ಕಲಿತವರು.
ಬದುಕಿನ ಉಲ್ಲಾಸಕ್ಕೆ, ಲವಲವಿಕೆಗೆ ಕಲೆಯಲ್ಲಿ ತೊಡಗಿಸಬೇಕೆನ್ನುವುದೇ ಅವರ ಸಂದೇಶ. ಅನೇಕರು
ವಯಸ್ಸಾಯಿತೆಂದು ಗೊಣಗಿ,
ಜಿಗುಪ್ಸೆಯ ಮಾತಾನ್ನಾಡಿದರೆ ಹಿಳ್ಳೆಮನೆ ಭಟ್ರು ಹಿರಿಯ ನಾಗರಿಕರಿಗೆ ಸ್ಫೂರ್ತಿಯಾಗಿದ್ದಾರೆ. ತಬ್ಲಾ ಕಲಿತು ಸಣ್ಣ ಕಾರ್ಯಕ್ರಮಗಳಿಗೆ ನುಡಿಸುತ್ತಾರೆ ಕೂಡಾ. ಇಷ್ಟಕ್ಕೂ ಇವರದ್ದು ಸಂಗೀತ ಕುಟುಂಬ. ಪತ್ನಿ ವಿದುಷಿ ಚಿತ್ತರಂಜಿನಿ ಶಾಸ್ತ್ರೀಯ ಸಂಗೀತದ ಗುರುಗಳು. ನೂರಾರು ಸಂಗೀತ ಪ್ರತಿಭೆಗಳ ಸೃಜಕರು, ಹಾಡುಗಾರ್ತಿ.
ಮಗ ವಿದ್ವಾನ್ ಅನಿಲ್ ಕೃಷ್ಣ(ಬೆಂಗಳೂರು) ಪ್ರತಿಭಾವಂತ ವಯಲಿನ್ ಕಲಾವಿದ. ಸೊಸೆ ವರ್ಷಾ, ಮೊಮ್ಮಗ ಸಾಮಕೃಷ್ಣ.
ಸಂಗೀತಕ್ಕೆ ಪೂರಕವಾದ ಮನೆ, ಮನಸ್ಸಿನ ಸಂಸರ್ಗದಲ್ಲಿ ಬೆಳೆದ ಭಟ್ರು ಸಂಗೀತಾರಾಧಕರು, ಶುಭ್ರ ಮನಸ್ಸಿನ ಆಸ್ವಾದಕರು.

ದೇವಸ್ಥಾನಕ್ಕೆ ಬರುವ ಎಲ್ಲಾ ಭಾಷಿಕರೊಂದಿಗೆ ಅವರದೇ ಭಾಷೆಯಲ್ಲಿ ವ್ಯವಹರಿಸುವ ಭಟ್ಟರು ದೇವಳದ ಆಫೀಸಿನಲ್ಲಿದ್ದರೆ ಬರುವ ಭಕ್ತಾದಿಗಳಿಗೂ ಸಂಭ್ರಮ. ನಮ್ಮದೇ ಪರಿಚಿತರಿದ್ದಾರೆ ಎಂಬ ಆತ್ಮೀಯ ಭಾವ. ಹೀಗೆ ಯಾವುದೋ ಊರಿಂದ ಬರುವವರಿಗೆಲ್ಲಾ ಭಟ್ರಿದ್ದರೆ ಸಮಾಧಾನ. ಒಮ್ಮೆ ಮಾತಾಡಿಸಿ ಹೋಗದವರೇ ವಿರಳ..
ಬದುಕಿನ ಪ್ರಮುಖ ಭಾಗವನ್ನು ಉದ್ಯೋಗ ರೂಪದಲ್ಲಿ ಕಣಿಪುರ ದೇಗುಲಕ್ಕೆ ಸಮರ್ಪಿಸಿದರೂ ಅವರು ಇದೇ ಕುಂಬಳೆಯವರು. ಹಿಳ್ಳೆಮನೆ ಶಂಕರನಾರಾಯಣ ಭಟ್- ಲೀಲಾವತಿ ಇವರ ಆರು ಮಕ್ಕಳಲ್ಲಿ ಮಧ್ಯಮರು.
ನಿವೃತ್ತಿ ಎನ್ನುವುದು ಸರಕಾರಿ ಹುದ್ದೆಯ ಔದ್ಯೋಗಿಕ ಪದವಷ್ಟೇ. ಕುಂಬಳೆಯವರೇ ಆದ ವೆಂಕಟಕೃಷ್ಣ ಭಟ್ಟರಿಗೆ ಕಣಿಪುರ ಕೃಷ್ಣನನ್ನು ತೊರೆದು ಜೀವಿಸಲಾಗದು. ಅಂಥ ಅಬೇಧ್ಯ ನಂಟು ಅವರ ಮಮತೆಯ ಭಕ್ತಿಯಲ್ಲಿದೆ.
ಅದವರ ಕೃಷ್ಣ ವಿಧೇಯತೆ.
ಆದರೆ ಮನುಷ್ಯನ ದುಡಿದು ದಣಿದ ಜೀವಕ್ಕೆ ವಿಶ್ರಾಂತಿ ಬೇಕಲ್ಲ??
ಅದಕ್ಕಾಗಿಯೇ ಇನ್ನವರಿಗೆ ವಿಶ್ರಾಂತ ಜೀವನ.

ಅದನ್ನೂ ಪ್ರಶಾಂತ, ಪ್ರಸನ್ನವಾಗಿರಿಸುವ ಬಯಕೆ ಅವರದ್ದು. ಒಂದಿಷ್ಟು ಭೂಮಿ ಖರೀದಿಸಿ ಅಡಿಕೆ ಗಿಡ ನೆಟ್ಟು ಕೃಷಿಯ ಚಿಗುರಿನಲ್ಲಿ ಇನ್ನುಳಿದ ಜೀವನ ಸಾರ್ಥಕ್ಯಗೊಳಿಸುವ ಅಭಿಲಾಷೆ ಅವರದ್ದು.
ಕೃಷ್ಣ ತಥಾಸ್ತು ಎನ್ನದಿರುವನೇ..?
ಇರಲಾರ. ನಿವೃತ್ತಿಯ ನಂತರ ಮುಂದೇನು..? ನಾನು ಪ್ರಶ್ನಿಸಿದೆ. ನಾವು ದೇವಳದ ಕಚೇರಿಯಲ್ಲಿ ಕುಳಿತಿದ್ದೆವು. ಆಗವರು ಗರ್ಭಗುಡಿಯತ್ತ ಕೖ ಜೋಡಿಸಿ ತೋರಿಸಿ “ಅಲ್ಲಿಂದೇನು ಅಪ್ಪಣೆಯೋ..” ಹಾಗೆ ಎಂದರು. ಮಾಮೂಲಿ ದುಡುಕಿನ, ಸಿಡುಕಿನ ಸ್ವರದೊಳಗೂ ಮಮತೆ ಇತ್ತು.
ಅದು ಹತ್ತಿರದಿಂದ ಅವರನ್ನು ಮಾತಾಡಿಸಿಯೋ, ಮಾತು ‘ನುಡಿಸಿಯೋ’ ಬಲ್ಲವರಷ್ಟೇ ಬಲ್ಲರು!
ಏನೇ ಇರಲಿ.. ಹಿಳ್ಳೆಮನೆ ಭಟ್ರು ಕಣಿಪುರ ದೇವಳದಲ್ಲಿ ಇನ್ನು ಸಿಗಲಾರರು ಎಂದರೆ ಅದೊಂದು ಕೊರತೆಯ ಶೂನ್ಯತೆ. ಕನ್ನಡಿಗರು ಎಲ್ಲಿಂದಲೇ ಬರಲಿ ಭಟ್ರು ಅವರಿಗೆ ಗೖಡು, ಕೖತಾಂಗು, ಆಸರೆ ಎಲ್ಲವೂ ಆಗಿದ್ದರು. ಇನ್ನಿಂತವರು??


































