- 14 ಜಿಲ್ಲೆಗೆ 31 ಅಧ್ಯಕ್ಷರ ನೇಮಕ..!
ಪಕ್ಷ ಕಟ್ಟಲು ಕಾರ್ಯಕರ್ತರಿಗೆ ಅವಕಾಶವಿತ್ತು ಕೇರಳದಲ್ಲಿ ಬಿಜೆಪಿಯಿಂದ ವಿನೂತನ ಪ್ರಯೋಗ..!
ಮುಂಬರುವ ಸ್ಥಳೀಯಾಡಳಿತ ಮತ್ತು ಅನಂತರದ ವಿಧಾನಸಭಾ ಚುನಾವಣೆ ದೃಷ್ಟಿಯಲ್ಲಿರಿಸಿ ಕೇರಳ ಬಿಜೆಪಿ ಘಟಕ ಅಮೂಲಾಗ್ರ ಪುನರ್ ಸಂಘಟನೆಗೆ ತೀರ್ಮಾನಿಸಿದೆ.
ಇದರಂತೆ 14ಜಿಲ್ಲೆಗಳ ಕೇರಳದ ಬಿಜೆಪಿಯನ್ನು ಇನ್ನು 31ಜಿಲ್ಲಾಧ್ಯಕ್ಷರು ಮುನ್ನಡೆಸಲಿದ್ದಾರೆ.
ಬಿಜೆಪಿ ಕೇರಳ ರಾಜ್ಯ ಘಟಕದ ಕೋರ್,ಕಮಿಟಿ ಸಭೆ ನಿನ್ನೆ ಕೊಚ್ಚಿಯಲ್ಲಿ ನಡೆದಿದ್ದು, ಸಭೆಗೆ ಮಾಧ್ಯಮ ಪ್ರತಿನಿಧಿಗಳಿಗೆ ಆಹ್ವಾನವಾಗಲೀ, ಪ್ರವೇಶವಾಗಲಿ ಇರಲಿಲ್ಲ. ಇತ್ತೀಚೆಗೆ ನಡೆದ ಪಾಲಕ್ಕಾಡ್ ಉಪಚುನಾವಣೆಯ ಸೋಲಿನ ಅಂತರ ಹೆಚ್ಚಳದ ಬಗೆಗೆ ಚಿಂತನೆ ನಡೆಸದೇ ಮುಂಬರುವ ಚುನಾವಣೆಗಾಗಿ ಪಕ್ಷ ಸಂಘಟನೆ ಬಲಪಡಿಸುವತ್ತ ಗಮನಿಸಿ ಈ ಹೊಸ ವಿಧಾನವನ್ನು ಅಳವಡಿಸಲಾಗುತ್ತದೆ.
ಎರ್ನಾಕುಳಂ, ಕೋಝಿಕ್ಕೋಡ್ ಮತ್ತು ತಿರುವನಂತಪುರ ಜಿಲ್ಲೆಗಳನ್ನು ತಲಾ ಮೂರು ರೆವೆನ್ಯೂ ಜಿಲ್ಲೆಗಳೆಂದು ವಿಭಾಗೀಕರಿಸಿ ಅಲ್ಲಿಗೆ ತಲಾ ಮೂವರು ಜಿಲ್ಲಾಧ್ಯಕ್ಷರನ್ನು ನೇಮಿಸಲಾಗುವುದು. ಉಳಿದ 11ಜಿಲ್ಲೆಗಳನ್ನು ತಲಾ ಎರಡಾಗಿ ವಿಭಜಿಸಿ ಪ್ರತಿ ಜಿಲ್ಲೆಗೂ ಎರಡು ಜಿಲ್ಲಾ ಘಟಕ, ಇಬ್ಬರು ಅಧ್ಯಕ್ಷರನ್ನು ನೇಮಿಸಿ ಪಕ್ಷದ ಚಟುವಟಿಕೆಯನ್ನು ಸಕ್ರಿಯಗೊಳಿಸಿ ವೇಗ ಹೆಚ್ಚಿಸಲು ನಿರ್ಧಾರವಾಗಿದೆ.
ಸ್ಥಳೀಯಾಡಳಿತ ಚುನಾವಣೆಯಲ್ಲಿ ಅತ್ಯಧಿಕ ವಾರ್ಡುಗಳನ್ನು ಗೆಲ್ಲಬೇಕು ಮತ್ತು ತನ್ಮೂಲಕ ಮುಂಬರುವ 2026ರ ರಾಜ್ಯ ವಿಧಾನಸಭೆಯಲ್ಲಿ ಪಕ್ಷದ ಬೆಳವಣಿಗೆ ಪ್ರದರ್ಶಿಸಬೇಕೆಂಬ ಉದ್ದೇಶದೊಂದಿಗೆ ಕಾರ್ಯಕರ್ತರಿಗೆ ಪಕ್ಷ ಸಂಘಟನೆಯಲ್ಲಿ ಅವಕಾಶ ನೀಡುವುದಕ್ಕಾಗಿ ಬಿಜೆಪಿ ವಿನೂತನ ಪ್ರಯೋಗ ನಡೆಸುತ್ತಿದೆ. ಕೇರಳ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಅವರ ಅಧ್ಯಕ್ಷಾವಧಿ ಮುಗಿಯುತ್ತಿದ್ದರೂ ಅವರನ್ನು ಬದಲಾಯಿಸದೇ ಚಾಲ್ತಿಯಲ್ಲಿರುವ ನಾಯಕತ್ವವನ್ನೇ ಮುಂದುವರಿಸಲು ಪಕ್ಷ ನಿರ್ದೇಶಿಸಿದೆ.