- ಸಿರಿನುಡಿ-ಅಂಕಣ18
✍️ಕೃತಿಕಾ ಎನ್ ಆಳ್ವ
ಜೀವಶಾಸ್ತ್ರದ ಪ್ರಕಾರ ಒಂದು ಆಹಾರದ ಪಚನ ಕ್ರಿಯೆಗೆ ಬೇಕಾಗುವ ತಯಾರಿ ಆ ಆಹಾರ ವಸ್ತುವನ್ನು ನಾವು ನಮ್ಮ ಕಣ್ಣಿಂದ ನೋಡುವಾಗಲೇ, ನಮ್ಮ ದೇಹದಲ್ಲಿ ಶುರುವಾಗುತ್ತದಂತೆ. ಉದಾಹರಣೆಗೆ ಒಂದು ಹಣ್ಣನ್ನು ತಿನ್ನುವಾಗ ಮೊದಲು, ಕಣ್ಣಲ್ಲಿ ಅದರ ಬಣ್ಣ ಅಂದಾಜು ಮಾಡಿಕೊಳ್ಳುವುದರಿಂದ ಹಿಡಿದು ಕೈಯ್ಯಲ್ಲಿ ಮುಟ್ಟುವಾಗ ಅದು ಎಷ್ಟು ಮೃದುವಾಗಿದೆ ಎಂಬುದನ್ನು ಕೂಡ ನಮ್ಮ ದೇಹ ಅರ್ಥ ಮಾಡಿಕೊಳ್ಳುತ್ತದೆ. ಮೂಗು ಅದರ ಸುವಾಸನೆಯನ್ನು ಅರಿತರೆ, ಕೊನೆಗೆ ನಾಲಿಗೆಯು ಅದನ್ನು ಸವಿಯುತ್ತದೆ. ಈ ಎಲ್ಲಾ ದೈಹಿಕ ಅನುಭವಗಳಿಗೆ, ತಕ್ಕಂತೆ ಪಚನ ಕ್ರಿಯೆಗೆ ಬೇಕಾದ ಸಾಮಾಗ್ರಿಗಳು ತಯಾರಾಗುತ್ತವಂತೆ.

ಕೆಲವು ಆಹಾರ ವಸ್ತುಗಳಿಗೆ, ಈ ದೈಹಿಕ ಅನುಭವಗಳನ್ನಲ್ಲದೆ, ಅದ್ಭುತವಾದ ಕೆಲವು ಮಾನಸಿಕ ಅನುಭವವನ್ನು ಸಹ ನಮ್ಮಲ್ಲಿ ಉಂಟು ಮಾಡುವ ಶಕ್ತಿ ಇದೆ ಎಂದು ನನಗನಿಸುತ್ತದೆ. ಅಂತಹ ಮಾನಸಿಕ ಅನುಭವದ ಹೆಸರೇ ‘ನಾಸ್ಟಾಲ್ಜಿಯಾ’! ‘ನಾಸ್ಟಾಲ್ಜಿಯಾ’ ಎಂದರೆ ಹಳೆಯ ದಿನಗಳನ್ನು ನೆನೆಸಿದಾಗ ಬರುವ ಒಂದು ಮಧುರವಾದ, ಸ್ವಲ್ಪ ದುಃಖದ ಭಾವನೆ. ಹಲವು ವಿಷಯಗಳು ನಮ್ಮನ್ನು ‘ನಾಸ್ಟಾಲ್ಜಿಕ್’ ಆಗಿ ಮಾಡುತ್ತವೆ. ಅದರಲ್ಲೂ, ಮಾವಿನ ಹಣ್ಣಿನಲ್ಲಿ, ಆ ಭಾವನೆಯನ್ನು ಕೆರಳಿಸುವ ಒಂದು ವಿಶೇಷವಾದ ಶಕ್ತಿಯಿದೆ ಎಂದು ನನ್ನ ವಾದ.
ಕಳೆದ ವಾರ ಬಿಸು ಹಬ್ಬಕ್ಕೆಂದು ಊರಿಗೆ ಬಂದಾಗ, ಅಡುಗೆ ಕೋಣೆಯಲ್ಲಿ ಒಂದು ಬುಟ್ಟಿಯೊಳಗೆ, ಸುಮಾರು ಹಣ್ಣುಗಳಿದ್ದವು. ಅದರಲ್ಲಿ, ಒಂದೆರಡು ಮಾವಿನ ಹಣ್ಣುಗಳೂ ಇದ್ದವು. ನನ್ನ ಕೈ ಸ್ವಾಭಾವಿಕವಾಗಿ ಮೊದಲು ಮಾವಿನ ಹಣ್ಣಿನ ಬಳಿ ಹೋಯಿತು. ಮನೆಯ ಹಿತ್ತಲಲ್ಲಿ ಇರುವ ದೊಡ್ಡ ಮಾವಿನ ಹಣ್ಣಿನ ಮರದಲ್ಲಿ ಆದ ರುಚಿಕರವಾದ ಹಣ್ಣು. ಒಂದು ಸಲ ಕಚ್ಚಿದಾಗ ಮಾವಿನ ಹಣ್ಣಿನ ರುಚಿಯಾದ ರಸದ ಜೊತೆಗೆ ಅದರ ಸುವಾಸನೆ ಮೂಗಿಗೆ ಘಮ್ಮೆಂದು ಬಡಿಯಿತು. ಅದರ ಹಿಂದೆಯೇ ಭೋರ್ಗರೆಯುತ್ತಾ ಬಂದಿದ್ದು, ನೆನಪುಗಳು. ಅದೇ, ‘ನಾಸ್ಟಾಲ್ಜಿಯಾ’!

ಸಣ್ಣವರಿದ್ದಾಗ ನಾನು ಮತ್ತೆ ಅಣ್ಣ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬೆಳಗ್ಗೆ ಸುಮಾರು ಆರು ಗಂಟೆಗೆ ಏಳುತ್ತಿದ್ದೆವು. ವರ್ಷ ಇಡೀ ಸೂರ್ಯ ಕುಂಡೆಗೆ ಬಿದ್ದಾಗ ಮಾತ್ರ ಏಳುತ್ತಿದ್ದ ನಾವು ಆ ಎರಡು ತಿಂಗಳಲ್ಲಿ, ಕೋಳಿ ಕೂಗುವ ಮುನ್ನ ಎದ್ದು, ಮಾವಿನ ಮರದಡಿಗೆ ಓಡುತ್ತಿದ್ದೆವು. ಒಂದು ಬುಟ್ಟಿ ಮತ್ತೆ, ತಲೆಗೆ ಒಂದು ರುಮಾಲು – ಹನಿ ಬಿದ್ದರೆ ಶೀತ ಆಗುತ್ತದೆ ಎಂದು. ಕೆಲಸ ಏನಿಲ್ಲ. ಬಿದ್ದ ಮಾವಿನ ಹಣ್ಣನ್ನು ಹೆಕ್ಕಿ ಬುಟ್ಟಿಯೊಳಗೆ ಹಾಕುವುದು ಅಷ್ಟೇ. ಸ್ವಲ್ಪ ತಡವಾದರೆ, ನಮಗೆ ಒಂದು ಮಾವಿನ ಹಣ್ಣೂ ಸಿಗುತ್ತಿರಲಿಲ್ಲ. ಊರಿನ ಇತರ ಮಕ್ಕಳು ಹೆಕ್ಕಿ ತೆಗೆದುಕೊಂಡು ಹೋಗುತ್ತಿದ್ದರು. ಹಾಗಾಗಿ ಪ್ರತೀ ದಿನ ಎದ್ದು, ಮಾವಿನ ಹಣ್ಣನ್ನೆಲ್ಲ ಹೆಕ್ಕಿ, ಮತ್ತೆ ಬಂದು ಮಲಗುತ್ತಿದ್ದೆವು. ಮತ್ತೆ ಬೆಳಗ್ಗೆ ಎದ್ದು ಹೆಕ್ಕಿದ ಮಾವಿನ ಹಣ್ಣನ್ನು ತೊಳೆದು, ಒಳ್ಳೆ ಬಟ್ಟೆಯಲ್ಲಿ ಒರಸಿ, ಮಾವಿನ ಮರದಡಿಯಲ್ಲಿ ಕುಳಿತು, ಬಂದವರಿಗೆ ಮಾರುತ್ತಿದ್ದೆವು. ಕೆಲವೊಮ್ಮೆ ಐವತ್ತು ಪೈಸೆಗೆ ಮಾರಿದರೆ, ಅಪರೂಪಕ್ಕೆ ಒಂದೋ ಎರಡೋ ರೂಪಾಯಿಗೆ ಮಾವಿನ ಹಣ್ಣುಗಳು ಮಾರಾಟವಾಗುತ್ತಿದ್ದವು. ಮತ್ತೆ ಸುಸ್ತಾದಾಗ ಒಂದು ಮಾವಿನ ಹಣ್ಣಿನ ಜೊತೆ ಎರಡು ಮಾವಿನ ಹಣ್ಣನ್ನು ಉಚಿತಕ್ಕೆ ಕೊಟ್ಟಿದ್ದೂ ಇದೆ!

ಅದೇ ಮಾವಿನ ಮರದಡಿಯಲ್ಲಿ, ಅಪ್ಪ ಕಟ್ಟಿದ್ದು – ನಮ್ಮ ಮೊದಲ ಉಯ್ಯಾಲೆ. ಉಯ್ಯಾಲೆಯಲ್ಲಿ ಕುಳಿತು ಕಣ್ಣು ಮುಚ್ಚಿದರೆ, ವಿಮಾನದಲ್ಲಿ ಹಾರಾಡಿದ ಅನುಭವ. ಕೆಲವೊಮ್ಮೆ ಎತ್ತರಕ್ಕೆ ಹೋದಾಗ ಶಾಲೆಯ ಮಾಡಿನ ಮೇಲೆ ಬಿದ್ದ ಮಾವಿನ ಹಣ್ಣು ಕಾಣ ಸಿಗುತ್ತಿತ್ತು. ಬೇಸಗೆ ಕಾಲದಲ್ಲಿ, ಪ್ರತೀ ವರ್ಷ ಒಂದು ರಾತ್ರಿ ನಾವು ಮಾವಿನ ಮರದಡಿಯಲ್ಲಿ ಮಲಗುತ್ತಿದ್ದೆವು. ಚಾಪೆ, ಹೊದಿಕೆ ಮತ್ತೆ ನೀರಿನ ಒಂದು ಚೊಂಬು ತಗೊಂಡು ನಾಲ್ಕೂ ಜನ ಮಾವಿನ ಮರದಡಿಯಲ್ಲಿ ಹೋಗಿ ಮಲಗುತ್ತಿದ್ದೆವು. ಒಳ್ಳೆ ಗಾಳಿ, ನಾಲ್ಕೈದು ಸೊಳ್ಳೆ, ಮತ್ತೆ ತಲೆಯೇ ಮೇಲೆ ವಿಶಾಲವಾದ ಮಾವಿನ ಮರ. ನಿದ್ದೆ ಬಂದದ್ದೇ ಗೊತ್ತಾಗುತ್ತಿರಲಿಲ್ಲ.
ಏಪ್ರಿಲ್ ತಿಂಗಳ ಕೊನೆಯಲ್ಲೆಲ್ಲಾ ಜೋರು ಮಳೆ ಶುರುವಾದಾಗ, ಮಿಂಚು, ಗುಡುಗು, ಮನೆಯೊಳಗೇ ಬಂದ ಅನುಭವ. ಅಮ್ಮ ಮತ್ತೆ ಅಪ್ಪ ನ ಮಧ್ಯೆ ಹೋಗಿ ಮಲಗಲು ಏನೋ ಖುಷಿ. ಕೆಲವೊಮ್ಮೆ, ಅಜ್ಜಿಯ ಕೋಣೆಗೆ ಹೋಗಿ ಅಜ್ಜಿಯನ್ನು ಗಟ್ಟಿ ತಬ್ಬಿ, ಅಜ್ಜಿಯ ಸೀರೆಯನ್ನು ಹೊದ್ದು ಮಲಗಿದ್ದೂ ಇದೆ. ಆಗ ಅಜ್ಜಿಯ ಬೆವರು ಸಹ ಒಂದು ರೀತಿಯ ಸುರಕ್ಷತಾ ಭಾವನೆಯನ್ನು ನೀಡುತ್ತಿತ್ತು. ಯಾವುದೇ ರಾಕ್ಷಸ, ಪ್ರೇತ ಬಂದರೂ ಎದುರಿಸುವ ಧೈರ್ಯ, ನೀಡುತ್ತಿತ್ತು.

ಹಲವು ಬಾರಿ, ಈ ನಾಸ್ಟಾಲ್ಜಿಯಾ ಬಡಿದಾಗ, ನನಗೆ ಅನಿಸಿದ್ದಿದೆ – ಎಲ್ಲ ಬಿಟ್ಟು, ಮತ್ತೆ ಆ ಕಾಲಕ್ಕೆ ತಿರುಗಿ ಹೋಗಬೇಕೆಂದು. ಆದರೆ ಅದೊಂದು ರೀತಿಯ ವಿಚಿತ್ರವಾದ ಭಾವನೆ. ಅದು ಸುಂದರವಾದ ಹಳೆಯ ನೆನಪುಗಳನ್ನು ತೋರಿಸುತ್ತಾ ಎದೆಯಲ್ಲಿ ತೀವ್ರವಾದ ನೋವನ್ನು ಉಂಟು ಮಾಡುತ್ತದೆ. ನಮ್ಮನ್ನು ಕೈ ಬೀಸಿ ಕರೆಯುತ್ತದೆ. ಆದರೆ ಅದನ್ನು ನೋಡಿ ನಾವು ಆ ಕಾಲಕ್ಕೆ ಹೋಗಲು ಹೊರಟರೆ, ಅಲ್ಲಿ ಎಲ್ಲ ಬರೀ ಖಾಲಿ. ಅಲ್ಲಿ ಯಾರೂ, ಏನೂ ಇಲ್ಲ. ಮಾವಿನ ಮರದಲ್ಲಿ ಹಿಂದೆ ಆದಷ್ಟು ಹಣ್ಣುಗಳಿಲ್ಲ. ಹಣ್ಣುಗಳಿದ್ದರೂ, ನಾನು-ತಾನೆಂದು ಹೆಕ್ಕಿ ತಿನ್ನಲು, ಊರಲ್ಲಿ ಅಷ್ಟು ಮಕ್ಕಳಿಲ್ಲ, ಮರಕ್ಕೆ ಕಟ್ಟಿದ್ದ ಉಯ್ಯಾಲೆ ಯಾವಾಗಲೋ ಕಡಿದು ಬಿದ್ದಿದೆ, ಮನೆಯಲ್ಲಿ ಅಜ್ಜಿಯಿಲ್ಲ, ಅಪ್ಪ-ಅಮ್ಮನಿಗೆ ಈಗ ನೆಲದ ಮೇಲೆ ಮಲಗುವಷ್ಟು ಆರೋಗ್ಯ ಇಲ್ಲ.
ಹೀಗಾಗಿ ಮಾವಿನ ಹಣ್ಣನ್ನು ತಿನ್ನುತ್ತಾ, ಮನಸ್ಸಿನಲ್ಲಿ ಆ ಎಲ್ಲ ನೆನಪುಗಳನ್ನು ಮೃದುವಾಗಿ ಮೆಲುಕು ಹಾಕುತ್ತೇನೆ. ಕಣ್ಣಲ್ಲಿ ತುಂಬುವ ನೀರನ್ನು ಯಾರಿಗೂ ಕಾಣದಂತೆ ಸದ್ದಿಲ್ಲದೆ ಒರೆಸಿಕೊಳ್ಳುತ್ತೇನೆ. ಗಂಟಲಲ್ಲಿ ಉಬ್ಬಿ ಬಂದ ನೋವನ್ನು ನುಂಗಿ, ಮುಂದೆ ಸಾಗುವ ಪ್ರಯತ್ನ….ಅಲ್ಲ…ನಾಟಕ ಮಾಡುತ್ತಿರುತ್ತೇನೆ.









































