ಬ್ಯಾಂಕ್ ಗಳು ಅನಗತ್ಯ ನಿಯಮಾವಳಿ ಹೇರಿ ಬಡಜನರಿಗೆ ಸಾಲ ನಿರಾಕರಿಸುವುದೇ ಜನರು ಕೃತ್ರಿಮ ಬಡ್ಡಿ ಜಾಲದ ಸುಳಿಗೆ ಸಿಲುಕಲು ಕಾರಣ: ಸೖಫುಲ್ಲಾ ತಂಙಳ್

by Narayan Chambaltimar
  • ಮೀಯಪದವಿನಲ್ಲಿ ಮೀಂಜ ಗ್ರಾ. ಪಂ. ಮಟ್ಟದ ಮೖಕ್ರೋ ಕ್ರೆಡಿಟ್ ಸಾಲ ವಿತರಣಾ ಸಮಾರಂಭ ಉದ್ಘಾಟನೆ

ಮೀಯಪದವು (ಅ. 18):
ರಾಜ್ಯದಲ್ಲಿ ಈ ಹಿಂದೆ ರಮೇಶ್ ಚೆನ್ನಿತ್ತಲ ಗೃಹ ಸಚಿವರಾಗಿದ್ದಾಗ ‘ಆಪರೇಷನ್ ಕುಬೇರ’ ಮೂಲಕ ಹಿಮ್ಮೆಟ್ಟಿಸಲಾಗಿದ್ದ ಸ್ಥಳೀಯ ಬ್ಲೇಡ್ ಮಾಫಿಯಾ(ಬಡ್ಡಿ ಸಾಲ ದಂಧೆ) ಕ್ಕೆ ಪರ್ಯಾಯವಾಗಿ
ಈಗ ಆನ್‌ಲೈನ್ ಮತ್ತು ಮೊಬೈಲ್ ಆ್ಯಪ್‌ಗಳ ಮೂಲಕ ಬಡ ಜನರಿಗೆ ಸಾಲ ನೀಡಿ ವಂಚಿಸುವ ಹೊಸ ಮಾಫಿಯಾ ತಲೆಯೆತ್ತಿಕೊಂಡಿವೆ. ಬ್ಯಾಂಕಿಂಗ್ ಸಂಸ್ಥೆಗಳು ಸಣ್ಣಪುಟ್ಟ ಕಾರಣಗಳನ್ನು ನೀಡಿ ಸಾಲ ತಿರಸ್ಕರಿಸುವ ನಕಾರಾತ್ಮಕ ಧೋರಣೆಯೇ ಇದಕ್ಕೆ ಪ್ರಮುಖ ಕಾರಣ ಎಂದು ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಯು.ಕೆ. ಸೈಫುಲ್ಲಾ ತಂಙಳ್ ಅಭಿಪ್ರಾಯಪಟ್ಟರು.
ಮೀಂಜ ಪಂಚಾಯತ್ ಕುಟುಂಬಶ್ರೀ ಮಾಡೆಲ್ CDS ಹಾಗೂ ಕೇರಳ ರಾಜ್ಯ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ (KSBCDC) ಕಾಸರಗೋಡು ಜಿಲ್ಲಾ ಕಚೇರಿ ಜಂಟಿಯಾಗಿ ಆಯೋಜಿಸಿದ್ದ ಮೈಕ್ರೋ ಕ್ರೆಡಿಟ್ ಸಾಲ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆರ್ಥಿಕ ನೆರವಿನ ನಿರೀಕ್ಷೆಯಲ್ಲಿ ಬರುವ ಜನಸಾಮಾನ್ಯರ ಸಾಲದ ಅರ್ಜಿಗಳನ್ನು ಬ್ಯಾಂಕ್‌ಗಳು ಸಹಾನುಭೂತಿಯಿಂದ ಪರಿಶೀಲಿಸಬೇಕು. ಬ್ಯಾಂಕ್‌ಗಳು ನಿರಾಕರಿಸಿದಾಗ ಜನರು ಇಂತಹ ಲೇವಾದೇವಿದಾರರ ಜಾಲಕ್ಕೆ ಸಿಲುಕಿಕೊಳ್ಳುತ್ತಾರೆ. ಸಮಾಜದ ಸಾಮಾನ್ಯ ಜನರ ಜೀವನಮಟ್ಟವನ್ನು ಸುಧಾರಿಸುವಲ್ಲಿ ಅಧಿಕೃತ ಹಣಕಾಸು ಮತ್ತು ಸಾಲ ನೀಡುವ ಸಂಸ್ಥೆಗಳ ಪಾತ್ರ ಹಿರಿದು ಎಂಬುದನ್ನು ಮರೆಯಬಾರದು ಎಂದು ಅವರು ನೆನಪಿಸಿದರು.

ಮಹಿಳಾ ಸ್ವಾವಲಂಬನೆ, ಉದ್ಯಮಶೀಲತೆ ಮತ್ತು ಸಬಲೀಕರಣವನ್ನು ಉತ್ತೇಜಿಸುವ ಉದ್ದೇಶದಿಂದ ಕುಟುಂಬಶ್ರೀ ಸದಸ್ಯರಿಗೆ ಕಡಿಮೆ ಬಡ್ಡಿದರದಲ್ಲಿ ಒಟ್ಟು 2 ಕೋಟಿ 44 ಲಕ್ಷ ರೂಪಾಯಿ ಸಾಲ ವಿತರಿಸಲಾಯಿತು.


ಮಿಯಪದವು ಚೌಟರ ಚಾವಡಿಯಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ಮೀಂಜ ಗ್ರಾಮ ಪಂಚಾಯತ್ ಅಧ್ಯಕ್ಷ ಸಿ.ಎ. ತಾಜುದ್ದೀನ್ ವಹಿಸಿದ್ದರು. ಕೇರಳ ರಾಜ್ಯ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಕಾಸರಗೋಡು ಜಿಲ್ಲಾ ವ್ಯವಸ್ಥಾಪಕ ಎನ್.ಎಂ. ಮೋಹನನ್ ಸಾಲದ ವಿವರಗಳು ಹಾಗೂ ವರದಿಯನ್ನು ಮಂಡಿಸಿದರು.
ಮುಖ್ಯ ಅತಿಥಿಗಳಾಗಿ ಮೀಂಜ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಉಷಾ ಪುಂಜ, ಸ್ಥಾಯಿ ಸಮಿತಿ ಅಧ್ಯಕ್ಷ ಸಲೀಂ ಎಂ.ಎ, ಸೌಮ್ಯ ಕೆ, ಕೃಷ್ಣ ಕೆ, ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಶಾಂತಕುಮಾರಿ, ಸಿದ್ಧಿಕ್, ಮೋಹನ್‌ದಾಸ್ ಶೆಟ್ಟಿ, ಶಾಲಿನಿ ಬಿ. ಶೆಟ್ಟಿ, ಮೊಹಮ್ಮದ್ ಶರೀಫ್, ಮಿಸ್ರಿಯಾ ಎಂ. ಕುಂಞಿ, ಶರ್ಮಿಳಾ ಎಂ. ಶೆಟ್ಟಿ, ಆಶಾಲತಾ, ಲತೀಶ್, ಸಂಧ್ಯಾ ಬಿ, ಸುನಿಲ್‌ಕುಮಾರ್ ಎಂ, ಬೀಫಾತಿಮಾ ಉಪಸ್ಥಿತರಿದ್ದರು.
ಮೀಂಜ CDS ಅಧ್ಯಕ್ಷೆ ಕುಮಾರಿ ಪದ್ಮಜಾ ಇ. ಸ್ವಾಗತಿಸಿ, ಸದಸ್ಯ ಕಾರ್ಯದರ್ಶಿ ನಾರಾಯಣ ಕೆ. ವಂದಿಸಿದರು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00