ಕಾಸರಗೋಡು: ಕೇರಳಾ ಕೇಂದ್ರ ವಿವಿ ಯಲ್ಲಿ ವಂದೇ ಮಾತರಂ ವಿಚಾರಗೋಷ್ಟಿಗೆ ಪ್ರತಿಭಟನೆ, ಅಗೌರವ: ಐವರು ವಿದ್ಯಾರ್ಥಿಗಳ ಅಮಾನತು

by Narayan Chambaltimar
  • ಅಮಾನತು ಖಂಡಿಸಿ ಕ್ಯಾಂಪಸ್ ನಲ್ಲಿ ರಾತ್ರಿ ವೇಳೆಯೇ ಪ್ರತಿಭಟನೆ: 25ಕ್ಕೂ ಅಧಿಕ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲು

ಕಾಸರಗೋಡು ( ಅ. 8):
ಕೇರಳ ಕೇಂದ್ರ ವಿ. ವಿ ಯಲ್ಲಿ ವಂದೇ ಮಾತರಂ ವಿಚಾರಗೋಷ್ಟಿ ಯನ್ನು ಪ್ರತಿಭಟಿಸುವ ನೆಪದಲ್ಲಿ ಗಲಭೆಗೆ ಯತ್ನಿಸಿದ ಐವರು ವಿದ್ಯಾರ್ಥಿಗಳನ್ನು ವಿವಿ ಯಿಂದ ಎರಡು ವಾರದ ಮಟ್ಟಿಗೆ
ಅಮಾನತು ಮಾಡಲಾಗಿದೆ. ಪ್ರಕರಣದಲ್ಲಿ 25 ಕ್ಕೂ ಅಧಿಕ ಮಂದಿ ಗುರುತು ಹಚ್ಚಬಹುದಾದ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ವಿದ್ಯಾರ್ಥಿಗಳ ಅಮಾನತು ಖಂಡಿಸಿ ರಾತ್ರಿಯೇ ವಿಶ್ವ ವಿದ್ಯಾಲಯದಲ್ಲಿ ಸತ್ಯಾಗ್ರಹ ಆರಂಭಗೊಂಡಿದೆ. ಅಮಾನತುಗೊಂಡ ವಿದ್ಯಾರ್ಥಿಗಳು ಎರಡು ವಾರಗಳ ಕಾಲ ವಿವಿ ಕ್ಯಾಂಪಸ್ ಆವರಣಕ್ಕೆ ಆಗಮಿಸಕೂಡದು ಮತ್ತು ಹಾಸ್ಟೆಲ್ ಪ್ರವೇಶಿಸಬಾರದೆಂದು ಆದೇಶಿಸಲಾಗಿದೆ.

ವಿಶ್ವ ವಿದ್ಯಾಲಯದ ಶಿಸ್ತು ಪಾಲನಾ ಅಧಿಕಾರಿ ಪ್ರೊ. ಪಿ. ಶ್ರೀಕುಮಾರ್ ಅವರು ಶಿಸ್ತು ಕ್ರಮದ ಅಂಗವಾಗಿ ಐವರು ವಿದ್ಯಾರ್ಥಿಗಳನ್ನು ಅಮಾನತು ಮಾಡಿದರು. ಎಸ್ಎಫ್ಐ ಯೂನಿಟ್ ಸೆಕ್ರೆಟರಿ ಸಯ್ಯದ್ ಆಲಿ ಎಸ್, ( ಎಂಎಸ್ ಡಬ್ಲ್ಯೃ ವಿದ್ಯಾರ್ಥಿ), ಅವೇದ್ ವಿ
ಬಿ( ಎಸ್ಎಫ್ಐ ಸೆಕ್ರೇಟರಿಯೇಟ್ ಸದಸ್ಯ, ಇಂಟರ್ ನೇಷನಲ್ ರಿಲೇಷನ್ಸ್ ವಿದ್ಯಾರ್ಥಿ), ಯಾಸಿನ್ ( ಎನ್ ಎಸ್ ಯು ಎ, ಇಂಗ್ಲೀಷ್ ವಿಭಾಗ), ಷಾಬಿರ್ ( ಎಂಎಸ್ಎಫ್, ಎಟಿಇಪಿ ವಿದ್ಯಾರ್ಥಿ), ತಖಿಯುದ್ದೀನ್ ( ಎಂಎಸ್ಎಫ್, ಕಂಪ್ಯೂಟರ್ ಸಯನ್ಸ್) ಎಂಬಿವರು ಅಮಾನತು ಗೊಂಡವರಾಗಿದ್ದಾರೆ.

ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಅಖಿಲ ಭಾರತ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ವಂದೇ ಮಾತರಂ 150 ನೇ ವರ್ಷಾಚರಣೆಯಂಗವಾಗಿ ಕೇರಳ ಕೇಂದ್ರ ವಿಶ್ವ ವಿದ್ಯಾಲಯದಲ್ಲಿ ದ್ವಿದಿನ ವಿಚಾರಗೋಷ್ಟಿ ನಡೆದಿತ್ತು. ಇದರಲ್ಲಿ ಆರ್ ಎಸ್ ಎಸ್ ಪ್ರತಿನಿಧಿಗಳು ಪಾಲ್ಗೊಳ್ಳುತ್ತಾರೆ ಮತ್ತು ಸಂಘ ಪರಿವಾರದ ಅಜೆಂಡಾದಂತೆ ಕಾರ್ಯಕ್ರಮ ನಡೆಯುತ್ತದೆ ಎಂದಾರೋಪಿಸಿ, ಕಾರ್ಯಕ್ರಮ ತಡೆಯುವುದಾಗಿ ಘೋಷಿಸಿ ಎಸ್ಎಫಐ, ಎಂಎಸ್ಎಫ್ ಸಂಘಟನೆಗಳು ಕ್ಯಾಂಪಸ್ ನಲ್ಲಿ ಪ್ರತಿಭಟಿಸಿದ್ದುವು. ಈ ಪೖಕಿ ಶಿಸ್ತು ಪಾಲನಾ ವ್ಯವಸ್ಥೆಯ ಚೀಫ್ ಪ್ರೋಕ್ಟರ್ ಪ್ರೊ. ಪಿ. ಶ್ರೀಕುಮಾರ್ ಅವರ
ವಿಷಯ ಮಂಡನೆಯ ವೇಳೆ ವಿದ್ಯಾರ್ಥಿಗಳು ಘೋಷಣೆ ಕೂಗಿ ಅಡ್ಡಿಪಡಿಸಿದರೆಂದು ಆರೋಪಿಸಿ ಶಿಸ್ತು ಕ್ರಮ ಕೖಗೊಳ್ಳಲಾಗಿದೆ.

ಆಹ್ವಾನಿತ ಗಣ್ಯರು, ಮಾಧ್ಯಮ ಪ್ರತಿನಿಧಿಗಳ ಸಮ್ಮುಖದಲ್ಲಿ ವಿದ್ಯಾರ್ಥಿಗಳು ನಡೆಸಿದ ರೋಷಾವೇಶದ ಪ್ರತಿಭಟನೆ, ಚಪ್ಪಲಿ ಕೖಯ್ಯಲ್ಲಿ ಹಿಡಿದು ವೇದಿಕೆಯಲ್ಲಿದ್ದ ಅತಿಥಿಗಳಿಗೆ ತೋರಿಸಿರುವುದು ವಿದ್ಯಾರ್ಥಿಗಳಿಂದ ನಿರೀಕ್ಷಿಸಲಾಗದ ಹೀನವಾದ ಪ್ರವೃತ್ತಿ ಮತ್ತು ಶಿಸ್ತು ಉಲ್ಲಂಘನೆ ಎಂದು ಅಮಾನತು ಆದೇಶದ ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ.

ಅಕ್ಟೋಬರ್ 6,7ರಂದು ವಿಚಾರಗೋಷ್ಟಿ ನಡೆದಿತ್ತು. ಇದರ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಆರ್ಲೇಕರ್ ವಂದೇಮಾತರಂ ಗೀತೆಯನ್ನು ಗೌರವಿಸದೇ, ವಿವಿಯಲ್ಲಿ ಘರ್ಷಣೆ ಯ ವಾತಾವರಣ ಸೃಷ್ಟಿಸಿದ ವಿದ್ಯಾರ್ಥಿಗಳು ಮತ್ತು ಇದಕ್ಕೆ ಕುಮ್ಮಕ್ಕು ನೀಡಿದವರು ದೇಶ ದ್ರೋಹಿಗಳು ಹಾಗೂ ಇವರ ವಿರುದ್ಧ ಕಾನೂನು ಕ್ರಮ ಕೖಗೊಳ್ಳಬೇಕೆಂದು ತಮ್ಮ ಭಾಷಣದಲ್ಲಿ ಹೇಳಿದ್ದರು. ಪ್ರಸ್ತುತ ಘಟನೆ ಇದೀಗ ರಾಷ್ಟ್ರೀಯ ಮಟ್ಟದಲ್ಲಿ ವರದಿಯಾಗಿದೆ.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00