ಪ್ರಧಾನಮಂತ್ರಿ ಆವಾಝ್ ಯೋಜನಾ ನೆರವು ನಿರೀಕ್ಷೆಯಲ್ಲಿ ಮನೆಗೆ ಅಡಿಪಾಯ ಹಾಕಿ ಕಾಡು ಬೆಳೆದರೂ ಸಿಕ್ಕಿಲ್ಲ ನೆರವು!!

by Narayan Chambaltimar
  • ಕುಂಬಳೆ ಪರಿಸರದ ಯೋಜನಾ ಫಲಾನುಭವಿಗಳ ಗೋಳು: ಅಧಿಕೃತ ನಿರ್ಲಕ್ಷ್ಯ ಕಾರಣವೆಂದು ಆರೋಪ

ಕುಂಬಳೆ( ಸೆ. 11):
ವಸತಿ ರಹಿತ ಮಹಿಳೆಯರಿಗೆ ಅತಿ ಕಡಿಮೆ ಬಡ್ಡಿ ದರದಲ್ಲಿ ವಸತಿ ನಿರ್ಮಿಸಿಕೊಡುವ ಕೇಂದ್ರ ಸರಕಾರದ ಪ್ರಧಾನಮಂತ್ರಿ ಆವಾಝ್ ಯೋಜನೆ ಕುಂಬಳೆಯಲ್ಲಿ ಅರ್ಹ ಫಲಾನುಭವಿಗಳಿಗೆ ದೊರೆಯದೇ, ಅದನ್ನೇ ನಂಬಿದ್ದವರು ಸ್ವಂತ ಮನೆಯೆಂಬ ಕನಸು ನುಚ್ಚು ನೂರಾದ ಹತಾಶ ಸ್ಥಿತಿಯಲ್ಲಿದ್ದಾರೆಂದು ಕುಂಬಳೆ ಮಂಡಲ ಕಾಂಗ್ರೆಸ್ ಅಧ್ಯಕ್ಷ ರವಿ ಪೂಜಾರಿ ಕೋಟೆಕ್ಕಾರ್ ಆರೋಪಿಸಿದ್ದಾರೆ.

 

ಗ್ರಾಮಗಳಲ್ಲಿ ವಾಸಿಸುವ ವಸತಿ ರಹಿತರಿಗೆ ಮತ್ತು ಮನೆ ಮುರಿದು, ಕುಸಿದ ಸ್ಥಿತಿಯಲ್ಲಿದ್ದವರಿಗೆ ಸಹಾಯ ಒದಗಿಸಿ ಮನೆ ನಿರ್ಮಿಸಲಿಕ್ಕೆಂದಿರುವ ಕೇಂದ್ರ ಸರ್ಕಾರೀ ಯೋಜನೆ ಇದಾಗಿದೆ. ಪ್ರಸ್ತುತ ಯೋಜನೆಗೆ ಅರ್ಜಿ ಸಲ್ಲಿಸಿ ಫಲಾನುಭವಿಗಳಾಗಿ ಎರಡು, ಮೂರು ವರ್ಷ ದಾಟಿದರೂ ಯೋಜನೆಯ ಸಹಾಯಧನದ ಕಂತು ದೊರೆಯದೇ ಇದ್ದವರು ಕುಂಬಳೆಯಲ್ಲಿದ್ದಾರೆಂದು ಅವರು ಉಲ್ಲೇಖಿಸಿದ್ದಾರೆ.
ಅರ್ಜಿ ಸಲ್ಲಿಸಿ ಫಲಾನುಭವಿಗಳಾಗಿ ಆಯ್ಕೆಗೊಂಡವರಿಗೆ ನಾಲ್ಕು ಗಡುಗಳಲ್ಲಾಗಿ ಯೋಜನಾ ಕಂತು ದೊರೆಯುವುದು ಪ್ರಧಾನಮಂತ್ರಿ ಆವಾಝ್ ಯೋಜನೆಯ ಮಾನದಂಡ. ಆದರೆ ಫಲಾನುಭವಿಗಳಾಗಿ ಆಯ್ಕೆಗೊಂಡ ಬಳಿಕ ನೆರವಿನ ನಿರೀಕ್ಷೆಯಲ್ಲಿ ನೂತನ ಮನೆಗೆ ಅಡಿಪಾಯ ಹಾಕಿದವರ ಅಡಿಪಾಯಕ್ಕೆ ವರ್ಷಗಳು ದಾಟಿ ಅದರ ಮೇಲೆ ಪೊದೆ, ಕಾಡು ಬೆಳೆದಿದೆಯಲ್ಲದೇ ಯೋಜನಾ ಅನುದಾನ ಫಲಾನುಭವಿಗಳಿಗೆ ಸಿಕ್ಕಿದ್ದೇ ಇಲ್ಲ ಎಂದು ರವಿ ಪೂಜಾರಿ ಹೇಳುತ್ತಾರೆ.
ಸ್ವಂತ ಮನೆ ಇಲ್ಲದೇ, ಹೊಸ ಮನೆಯ ನಿರೀಕ್ಷೆಯಲ್ಲಿದ್ದ ಯೋಜನಾ ಫಲಾನುಭವಿಗಳು ಬಾಡಿಗೆ ಮನೆಗಳಲ್ಲಿ ಬಾಡಿಗೆ ತೆತ್ತು ಹೖರಾಣಾಗುವ ಪರಿಸ್ಥಿತಿ ಉಂಟಾಗಿದೆ. ಯೋಜನೆಗಳು ಕೇವಲ ಪ್ರಚಾರ ಮತ್ತು ಜಾಹೀರಾತಿಗೆ ಸೀಮಿತವಾಗುತ್ತದೆ ಅಲ್ಲದೇ ಅರ್ಹ ಫಲಾನುಭವಿಗಳಿಗೆ ಏಕೆ ದೊರೆಯುತ್ತಿಲ್ಲ ಎಂಬುದನ್ನು ಅಧಿಕೃತರು ಏಕೆ ಪರಿಶೀಲಿಸುತ್ತಿಲ್ಲ ಎಂದು ರವಿ ಪೂಜಾರಿ ಪ್ರಶ್ನಿಸಿದ್ದಾರೆ.

ಕುಂಬಳೆ ಪರಿಸರದಲ್ಲಿ ಪ್ರಸ್ತುತ ಯೋಜನೆಯಂತೆ ಮನೆಗೆ ಅಡಿಪಾಯ ಹಾಕಿ ಆರು ತಿಂಗಳು ದಾಟಿದವರಿದ್ದಾರೆ. ಮೂರು ವರ್ಷಗಳಾದವರೂ ಇದ್ದಾರೆ. ಇವರ ಖಾತೆಗೆ ಯೋಜನಾ ಅನುದಾನಗಳು ಈ ವರೆಗೆ ಬಂದಿಲ್ಲ. ಆದರೆ ಹಾಕಿದ ಮನೆ ಅಡಿಪಾಯದಲ್ಲಿ ಪೊದೆ ಕಾಡು ಧಾರಾಳ ಬೆಳೆದಿದೆ. ಇದು ಯೋಜನಾ ಅನುಷ್ಟಾನದ ಜವಾಬ್ದಾರಿಯುಳ್ಳ ಅಧಿಕೃತರ ದಿವ್ಯ ನಿರ್ಲಕ್ಷ್ಯಕ್ಕೆ ಕೖಗನ್ನಡಿ ಎಂದು ರವಿ ಪೂಜಾರಿ ಆರೋಪಿಸಿದ್ದಾರೆ.

ಬಡವರ ಪಾಲಿನ ಕನಸಾದ ಸ್ವಂತ ಮನೆ ಎಂಬುದು ಅವರ ಪಾಲಿಗೆ ಮರೀಚಿಕೆಯಾಗುವುದಕ್ಕೆ ಈ ನಿರ್ಲಕ್ಷ್ಯವೇ ನಿದರ್ಶನ. ಆದರೆ ಯೋಜನಾ ವೖಫಲ್ಯವನ್ನು ಪ್ರಶ್ನಿಸಿ ಅರ್ಹರಿಗೆ ಸವಲತ್ತು ಒದಗಿಸಿಕೊಡಲು ಕೂಡಾ ಸಂಬಂಧ ಪಟ್ಟ ಸಾಮಾಜಿಕ ಕಾಳಜಿಯ ರಾಜಕೀಯ ಸಂಘಸಂಸ್ಥೆಗಳು ಮುಂದಾಗದಿರುವುದು ಖೇದಕರ ಎಂದು ರವಿ ಪೂಜಾರಿ ಅಭಿಪ್ರಾಯಪಟ್ಟಿದ್ದಾರೆ.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00