ಕಾಸರಗೋಡು(ಸೆ. 11):
ಕಾಸರಗೋಡು ನಗರದ ಅಣಂಗೂರು ಜೆಪಿ ಕಾಲನಿಯ ಸಂಘಪರಿವಾರದ ಸಕ್ರಿಯ ಕಾರ್ಯಕರ್ತನಾಗಿದ್ದ ಜ್ಯೋತಿಷ್ ನನ್ನು ಕಡಿದು ಕೊಲೆ ನಡೆಸಲು ಯತ್ನಿಸಿದ ಪ್ರಕರಣದಲ್ಲಿ ತಲೆಮರೆಸಿಕೊಂಡು, ಸೆರೆಸಿಗದ ಆರೋಪಿ ಎನಿಸಿಕೊಂಡಿದ್ದ ತಳಂಗರೆ ಪಳ್ಳಿಕಾಲ್, ಪಡುಪ್ಪಿಲ್ ಮನೆಯ ಅಬ್ದುಲ್ ಷಹೀರ್ ಅನಸ್ ( 33) ನನ್ನು ತಮಿಳುನಾಡಿನ ಕೊಯಮತ್ತೂರಿಂದ ಬಂಧಿಸಲಾಗಿದೆ.
ಪ್ರಕರಣದಲ್ಲಿ ಆರೋಪಿಯನ್ನು 13 ವರ್ಷದ ಬಳಿಕ ಸೆರೆ ಹಿಡಿಯಲಾಗಿದ್ದು, ಈತನನ್ನು ನ್ಯಾಯಾಲಯ ಸೆರೆ ಸಿಗದ ಆರೋಪಿ ಎಂದು ಘೋಷಿಸಿತ್ತು. ಜಿಲ್ಲಾ ಪೋಲೀಸ್ ವರಿಷ್ಟರ ನೇತೃತ್ವದ ವಿಶೇಷ ದಳ ಈ ಕಾರ್ಯಾಚರಣೆ ನಡೆಸಿದೆ.
2013ರಲ್ಲಿ ಕೊಲೆ ಯತ್ನ ಪ್ರಕರಣ ನಡೆದಿತ್ತು.
ಬೈಕಿನಲ್ಲಿ ಸಂಚರಿಸುತ್ತಿದ್ದ ಜ್ಯೋತಿಷ್ ನನ್ನು ಚೆಂಗಳದಲ್ಲಿ ತಡೆದು ನಿಲ್ಲಿಸಿ ಆಕ್ರಮಿಸಿ ಕೊಲೆ ಯತ್ನ ನಡೆಸಲಾಗಿತ್ತು.ಪ್ರಕರಣಕ್ಕೆ ಸಂಬಂಧಿಸಿ ಈತನನ್ನು ಸೆರೆ ಹಿಡಿಯಲಾಗಿತ್ತು. ಆದರೆ ಜಾಮೀನು ಪಡೆದು ತಲೆಮರೆಸಿಕೊಂಡಿದ್ದನು. ಬಳಿಕ ನಿರಂತರ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ತಲೆಮರೆಸಿಕೊಂಡ ಆರೋಪಿ ಎಂದು ನ್ಯಾಯಾಲಯ ಘೋಷಿಸಿ ಬಂಧನ ವಾರಂಟ್ ಹೊರಡಿಸಿತ್ತು.





