- ದೇವಾಲಯ ಸ್ಥಳಾಂತರಕ್ಕೆ ಅಡ್ಡಿಯಾದ ಹನುಮನ ಅಚಲತೆ: ಇದು ದೇಶವೇ ಅಚ್ಚರಿಗೊಂಡ ಘಟನೆ!
ಇಡೀ ದೇವಾಲಯ ಧ್ವಂಸಗೊಂಡರೂ ಉಜ್ಜಯಿನಿಯಲ್ಲಿ ಶತಮಾನಗಳಿಂದ ಭಕ್ತರನ್ನು ಪೊರೆದ ಆಂಜನೇಯನ ಪ್ರತಿಮೆ ಒಂದಿಂಚೂ ಕದಲದೇ ನಿಂತಿದೆ. ಪ್ರತಿಮೆ ತೆರವು ಗೊಳಿಸಲು ನಡೆಸಿದ ಯಂತ್ರೋಪಯೋಗದ ಪ್ರಯತ್ನಗಳೆಲ್ಲವೂ ವಿಫಲವಾಗಿದೆ.
ಉಜ್ಜಯಿನಿ ( ಮಧ್ಯಪ್ರದೇಶ ಸೆ. 10):
ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಹನುಮಾನ್ ಪ್ರತಿಮೆಯೊಂದು (ಖಡೇ ಹನುಮಾನ್) ಇಡೀ ದೇಶಕ್ಕೆ ಅಚ್ಚರಿ ಮೂಡಿಸಿದೆ. ಯಂತ್ರ-ತಂತ್ರಗಳನ್ನೆಲ್ಲಾ ಬಳಸಿದರೂ ಕಳೆದ ನಾಲ್ಕು ದಿನಗಳ ಸತತ ಪ್ರಯತ್ನದಿಂದಲೂ ವಿಗ್ರಹವನ್ನು ಒಂದಿಂಚೂ ಕದಲಿಸಲಾಗಲೇ ಇಲ್ಲ!
ರಸ್ತೆ ಅಗಲೀಕರಣಕ್ಕಾಗಿ ಹನುಮಾನ್ ಕ್ಷೇತ್ರವನ್ನು ಈಗಾಗಲೇ ಮುರಿದು ತೆರವು ಮಾಡಲಾಗಿದೆ. ಆದರೆ ಪ್ರಾಣಪ್ರತಿಷ್ಠೆ ನಡೆಸಿದ್ದ ಹನುಮನ ವಿಗ್ರಹ ಯಾವ ಶಕ್ತಿಗೂ ಬಗ್ಗದೇ ಅಚಲವಾಗಿರುವುದು ಕೌತುಕ ಮೂಡಿಸಿದೆ.
ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಸಿಂಹಸ್ಥ ಕುಂಭಮೇಳಕ್ಕೆ ಸಿದ್ಧತೆ ಆರಂಭಗೊಂಡಿದೆ. ಇದರಂಗವಾಗಿ ಕಾಂತನ್ – ಛತ್ರಿ ರಸ್ತೆಯನ್ನು ಅಗಲಗೊಳಿಸಲು ರಸ್ತೆ ಬದಿಯಲ್ಲಿದ್ದ ಹನುಮಾನ್ ದೇವಾಲಯ ತೆರವುಗೊಳಿಸಲಾಗಿತ್ತು. ಪುರಸಭೆಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸೆ. 4,5 ರಂದು ಕ್ಷೇತ್ರದ ತೆರವು ನಡೆದಿತ್ತು. ಆದರೆ ಸುಮಾರು 200 ವರ್ಷಗಳಿಂದ ಪೂಜೆಗೊಂಡ ಹನುಮನ ವಿಗ್ರಹವನ್ನು ತೆರವುಗೊಳಿಸಲು ಯಾವುದೇ ಪ್ರಯತ್ನಕ್ಕೂ ಸಾಧ್ಯವಾಗುತ್ತಿಲ್ಲ!.
ಯುಂತ್ರ-ತಂತ್ರಗಳಿಂದ ನಡೆದ ಎಲ್ಲಾ ಪ್ರಯತ್ನಗಳೂ ವಿಫಲವಾದ್ದರಿಂದ, ಪ್ರತಿಮಾ ರಕ್ಷಣೆಗೆ ಟೆಂಟ್ ಹಾಕಲಾಗಿದೆ. ಜತೆಗೆ ಪ್ರತಿಮೆ ಏಕೆ ಚಲನೆಯಾಗದೇ ಉಳಿದಿದೆ ಎಂದರಿಯಲು ಆಡಳಿತವು ಎಎಸ್ಐ ತಂಡವನ್ನು ನಿಯೋಜಿಸಿದೆ. ಜತೆಗೆ ತೆರವು ಕಾರ್ಯಾಚರಣೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಿ, ಪೂಜೆ ಸಲ್ಲಿಕೆ ಪುನರಾರಂಭಿಸಲಾಗಿದೆ.





