- ಪೖವಳಿಕೆಯಲ್ಲಿ ಸಿಪಿಐಎಂ ಹುತಾತ್ಮ ಶೆಟ್ಟಿ ಸಹೋದರರ ಸಂಸ್ಮರಣಾ ಸಮಾವೇಶ
ಪೖವಳಿಕೆ(ಸೆ. 2):
ಕೇರಳದಲ್ಲಿ ಎಡರಂಗ ಅಪ್ರಸ್ತುತವಾದರೆ ಉತ್ತರ ಭಾರತದ ಸಾಮಾಜಿಕ ಪರಿಸ್ಥಿತಿ ಕೇರಳದಲ್ಲೂ ಉಂಟಾಗಲಿದೆ ಎಂದು ಸಿಪಿಐಎಂ ರಾಜ್ಯ ಸಮಿತಿ ಸದಸ್ಯ ನ್ಯಾಯವಾದಿ ಕೆ. ಅನಿಲ್ ಕುಮಾರ್ ನುಡಿದರು.
ಕಮ್ಯೂನಿಸ್ಟ್ ಪ್ರಸ್ಥಾನಗಳು ಅಧಿಕಾರ ವ್ಯಾಮೋಹದ ರಾಜಕೀಯ ನಡೆಸುವ ಪಕ್ಷವೇ ಅಲ್ಲ. ಅದು ನಿರಂತರ ಜನಪಕ್ಷದ ನ್ಯಾಯೋಚಿತ ಹಕ್ಕುಗಳಿಗಾಗಿ ಹೋರಾಟಕ್ಕೆಂದೇ ರೂಪುಗೊಂಡದ್ದು. ಹೋರಾಟದ ಪಯಣದಲ್ಲಿ ಸೋಲು ಸಹಜ. ಆದರೆ ಗೆಲುವು ಅನಿಶ್ಚಿತವಲ್ಲ. ಆದ್ದರಿಂದ ಪೖವಳಿಕೆ ಸಹೋದರರ ಹುತಾತ್ಮತನ ಹೊಸ ಪೀಳಿಗೆಗೆ ಸ್ಪೂರ್ತಿಯಾಗಿ ಜನಪಕ್ಷದ ಹೋರಾಟದ ಜಾಗೃತಿಯಾಗಬೇಕು ಎಂದವರು ನುಡಿದರು.


ಪೖವಳಿಕೆಯಲ್ಲಿ ಸೆ. 1ರಂದು ನಡೆದ ಪೖವಳಿಕೆಯ ಹುತಾತ್ಮರಾದ ಸುಂದರ ಶೆಟ್ಟಿ, ಮಹಾಬಲಶೆಟ್ಟಿ, ಚೆನ್ನಪ್ಪ ಶೆಟ್ಟಿ ಸಹೋದರರ 68 ನೇ ಬಲಿದಾನ ದಿನಾಚರಣೆಯ ಸಂಸ್ಮರಣಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಿಪಿಐಎಂ ಮಂಜೇಶ್ವರ ಏರಿಯಾ ಸೆಕ್ರೆಟರಿ ಸಿಜಿ ಮ್ಯಾಥ್ಯೂ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಸೆಕ್ರೇಟರಿಯೇಟ್ ಸದಸ್ಯ ಕೆಆರ್ ಜಯಾನಂದ, ಜಿಲ್ಲಾ ಘಟಕ ಸದಸ್ಯ ಸಿಎ ಸುಬೖರ್, ಹಿರಿಯ ನಾಯಕಿ ಬೇಬಿ ಶೆಟ್ಟಿ ಮೊದಲಾದವರು ಮಾತನಾಡಿದರು. ಅಬ್ದುಲ್ ರಜಾಕ್ ಚಿಪ್ಪಾರು ಸ್ವಾಗತಿಸಿದರು. ಸಂಸ್ಮರಣೆಯಂಗವಾಗಿ ಕಾಯರ್ ಕಟ್ಟೆಯಿಂದ ಪೖವಳಿಕೆಗೆ ಪಥ ಸಂಚಲನ ನಡೆಯಿತು.
ಸಂಸ್ಮರಣೆ ಸಲುವಾಗಿ ಬೆಳಿಗ್ಗೆ ಬೋಳಂಗಳದ ಹುತಾತ್ಮ ಮಂಟಪದಲ್ಲಿ ಪುಷ್ಪಾರ್ಚನೆ ನಡೆಯಿತು. ಸ್ಮೃತಿ ದಿನದಂಗವಾಗಿ ಧ್ವಜಾರೋಹಣ ನಡೆಸಲಾಯಿತು. ಚಂದ್ರ ನಾಯ್ಕ್ ಸ್ವಾಗತಿಸಿದರು. ನೂರಾರು ಕಾರ್ಯಕರ್ತರು ಪಾಲ್ಗೊಂಡರು.





