ಬೇಕಲಕೋಟೆಯಲ್ಲಿ ಮಹಿಳಾ ಮೋರ್ಛಾ ಜಿಲ್ಲಾ ಘಟಕದ ತಿರಂಗಾ ಯಾತ್ರೆ: ಕೋಟೆಯಲ್ಲಿ ರಾರಾಜಿಸಿದ ರಾಷ್ಟ್ರಧ್ವಜ

by Narayan Chambaltimar

ಕಾಸರಗೋಡು(ಆ13): ಸ್ವಾತಂತ್ರ್ಯದ 80 ನೇ ವರ್ಷಾಚರಣೆಯ ಅಂಗವಾಗಿ ಮಹಿಳಾ
ಮೋರ್ಚಾ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ತಿರಂಗ ಯಾತ್ರೆಯನ್ನು ಆಯೋಜಿಸಲಾಯಿತು.

ಬೇಕಲ ಕೋಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್. ಬಾಬುರಾಜ್ ಅವರು ಮಹಿಳಾಮೋರ್ಚಾ ಜಿಲ್ಲಾಧ್ಯಕ್ಷೆ ಕೆ. ಎಸ್. ರಮಣಿ ಅವರಿಗೆ ರಾಷ್ಟ್ರಧ್ವಜವನ್ನು ಹಸ್ತಾಂತರಿಸುವ ಮೂಲಕ ತಿರಂಗ ಯಾತ್ರೆಗೆ ಚಾಲನೆ ನೀಡಲಾಯಿತು.

ದೇಶದ ಅಖಂಡತೆ ಮತ್ತು ಜನರ ಐಕ್ಯತೆಯನ್ನು ಎತ್ತಿಹಿಡಿಯುವುದೇ ತಿರಂಗ ಯಾತ್ರೆಯ ಮುಖ್ಯ ಉದ್ದೇಶವಾಗಿದೆ ಎಂದು ಎನ್. ಬಾಬುರಾಜ್ ಹೇಳಿದರು. “ಪ್ರತಿಯೊಂದು ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸಿ” ಎಂಬ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕರೆಗೆ ಓಗೊಟ್ಟು ಆಗಸ್ಟ್ 10 ರಿಂದ 15 ರವರೆಗೆ ಮನೆಗಳಲ್ಲಿ ಮತ್ತು ಆಗಸ್ಟ್ 15 ರಂದು ಎಲ್ಲಾ ಬೂತ್‌ಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲಾಗುವುದು ಎಂದು ಅವರು ತಿಳಿಸಿದರು.

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪ್ರಮೀಳಾ ಮಜಲ್, ಉದುಮ ಮಂಡಲ ಪ್ರಧಾನ ಕಾರ್ಯದರ್ಶಿ ಸೌಮ್ಯಾ, ಮಹಿಳಾಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಅನಿತಾ ನಾಯ್ಕ್, ಪ್ರೇಮಲತಾ ಎಸ್., ಜಿಲ್ಲಾ ಉಪಾಧ್ಯಕ್ಷೆ ಅನುಶ್ರೀ, ಕಾರ್ಯದರ್ಶಿಗಳಾದ ಮಮತಾ ಸಾಗರ್, ಶಶಿಕಲಾ, ಮಹಿಳಾಮೋರ್ಚಾ ತೃಕ್ಕರಿಪುರ ಮಂಡಲ ಅಧ್ಯಕ್ಷೆ ಆಶಾ, ನೀಲೇಶ್ವರಂ ಮಂಡಲ ಅಧ್ಯಕ್ಷೆ ಜಯಂತಿ ಜಯರಾಜ್, ಉದುಮ ಮಂಡಲ ಅಧ್ಯಕ್ಷೆ ಆಶಾ, ಕಾಸರಗೋಡು ಮಂಡಲ ಅಧ್ಯಕ್ಷೆ ಶ್ರೀವಿದ್ಯಾ, ಕುಂಬಳೆ ಮಂಡಲ ಅಧ್ಯಕ್ಷೆ ಸುಧಾ ಗಣೇಶ್, ಮೊಗ್ರಾಲ್ ಪುತ್ತೂರು ಸಮಿತಿ ಅಧ್ಯಕ್ಷೆ ವಾಸಂತಿ ಹಾಗೂ ಮಹಿಳಾ ಜನಪ್ರತಿನಿಧಿಗಳು ಮುಂತಾದವರು ಭಾಗವಹಿಸಿದ್ದರು.

ಬೇಕಲ ಕೋಟೆಯಿಂದ ಆರಂಭಗೊಂಡ ಯಾತ್ರೆಯು ಬೇಕಲ ಕಡಲತೀರದಲ್ಲಿ ಮುಕ್ತಾಯಗೊಂಡಿತು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00