- ಮಂಜೇಶ್ವರ ಉದ್ಯಾವರ ಮಾಡ ಪ್ರಾಥಮಿಕ ಶಾಲೆಯಲ್ಲಿ ‘ಆಟಿದ ಬೂತಾರಾಧನೆ- ಸಾಕ್ಷ್ಯಚಿತ್ರ ಪ್ರದರ್ಶನ ಸಹಿತ ಸಂವಾದ
- ಕಂಡಡೊಂಜಿ ದಿನ ಎಂದು ಆಟಿ ಪರ್ಬದ ಮೋಜು ಮಾಡುವವರಿಗೆ ನಾಲ್ಕು ನೇಜಿ ನೆಟ್ಟು ಒಂದು ಬೆಳೆ ತೆಗೆಯಬಾರದೇ?
- ಆಟಿ ಆಚರಣೆಗಳು ನೆಲ ಮೂಲ ಸಂಸ್ಕೃತಿ ಜನಪದದ ಅರಿವಿನ ಹಬ್ಬವಾಗಬೇಕು
ಮಂಜೇಶ್ವರ(ಆ. 10):
ತುಳು ನಾಡಿನಲ್ಲಿ ಆಟಿ ತಿಂಗಳು ಈ ನೆಲದ ದೖವಗಳೆಲ್ಲ ಘಟ್ಟ ಏರುತ್ತವೆ ಎಂಬ ವಾಙ್ಮಯ ನಂಬಿಕೆಗಳಿವೆ. ಹೀಗಿದ್ದರೂ ತುಳುನಾಡಿನ ಅಲ್ಲಲ್ಲಿ ಆಟಿ ತಿಂಗಳಲ್ಲಷ್ಟೇ ಕೋಲ ನಡೆಯುವ ಸಂಪ್ರದಾಯಗಳೂ ಇವೆ. ವಾಸ್ತವದಲ್ಲಿ ತುಳುನಾಡಿನ ದೖವಗಳು ಕೀರಿಗುಟ್ಟುವ ಮಳೆಯ ಆಟಿ ತಿಂಗಳು ಘಟ್ಟವೇರಿ, ಮತ್ತೆ ಘಟ್ಟ ಇಳಿದು ಬರುತ್ತವೆ ಎಂಬ ಜನಪದರ ನುಡಿಗಳ ಕುರಿತು ಜಿಜ್ಞಾಸೆ ಇದೆ. ಈ ಜಿಜ್ಞಾಸೆಯ ಶೋಧನೆಯೇ ‘ಆಟಿದ ಬೂತಾರಾಧನೆ’ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡು ಹೇಳಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಯುವ ಸಂಗಮ ಉದ್ಯಾವರ ಮಾಡ ಇಂದರ ಜಂಟಿ ನೇತೃತ್ವದಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಉದ್ಯಾವರ ಮಾಡ ದಲ್ಲಿ ಇಂದು ನಡೆದ ‘ಆಟಿದ ಬೂತಾರಾಧನೆ’ ತುಳು ಸಾಕ್ಷ್ಯಚಿತ್ರ ಪ್ರದರ್ಶನ-ಸಂವಾದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶ್ರೀಮಂತ ಭೂಮಾಲೀಕ, ಕಡು ಬಡ ಕಾರ್ಮಿಕರೆಲ್ಲರಿಗೂ ಹಿಂದೆ ಕೀರಿಗುಟ್ಟುವ ಕಡು ಮಳೆಯ ಆಟಿಯ ದಿನಗಳ ಕಷ್ಟ ಒಂದೇ ರೀತಿಯದ್ದಾಗಿತ್ತು. ಆದರೆ ಇಂದು ಅಂದಿನ ಬಡತನದ ಆಟಿ ಆಚರಣೆಗಳಾಗಿ ಬದಲಾಗಿದೆ. ಕಂಡಡೊಂಜಿ ದಿನ ಎಂದು ಮೋಜಿನ ಹಬ್ಬವಾಗಿದೆ. ನಾನು ಆಚರಣಾ ವಿರೋಧಿಯಲ್ಲ. ಬದಲು ‘ಕಂಡಡೊಂಜಿ ದಿನ ಎಂದು ಆಟಿ ಪರ್ಬ ಮಾಡುವವರು ನಮ್ಮೂರ ಹಡೀಲು ಬಿದ್ದ ಗದ್ದೆಯಲ್ಲಿ
ನಾಲ್ಕು ನೇಜಿ ನೆಟ್ಟು ಒಂದು ಬೆಳೆ ತೆಗೆಯಲಿ. ಅದುವೇ ನಿಜವಾದ ಕಂಡಡೊಂಜಿ ದಿನದ ಆಚರಣೆಯ ಸಾರ್ಥ್ಯಕ್ಯ. ಆಟಿ ನೆಲ ಮೂಲ ಸಂಸ್ಕೃತಿಯ ಅರಿವಿನ ಹಬ್ಬವಾಗಬೇಕು ಎಂದವರು ನುಡಿದರು.
ವಾಸ್ತವದಲ್ಲಿ ನಮ್ಮ ದೖವಗಳು ಮಳೆಗಾಲದಲ್ಲಿ ಘಟ್ಟ ಹತ್ತಿಲ್ಲ. ಅದು ನಮ್ಮಲ್ಲೇ, ನಮ್ಮೊಳಗೇ ಇದೆ. ದೖವಗಳು ಘಟ್ಟ ಹತ್ತಿವೆ ಎಂಬ ಪ್ರಚಾರ ಹೇಗೆ ಬಂತೆಂಬುದೇ ಜಿಜ್ಞಾಸೆ. ಹಿಂದಿನ ಕಾಲದ ಆಟಿಗೂ, ಆಧುನಿಕ ಆಟಿಗೂ ವ್ಯತ್ಯಾಸಗಳಿವೆ. ಇಂದೀಗ ದಲಿತ ಸಮುದಾಯದ ಮಗುವನ್ನು ನಮ್ಮ ಮನೆಯಂಗಳದಲ್ಲಿ ಕುಣಿಸಿ ನಮ್ಮ ಮನೆಯ ಮಾರಿಯನ್ನು ನೀ ಕೊಂಡೊಯ್ಯಬೇಕೆಂದು ಹೊರಿಸುವುದು ಆಧುನಿಕ ಕಾಲಕ್ಕೆ ಸರಿಯಲ್ಲ ಎಂದು ತಾರಾನಾಥ್ ಗಟ್ಟಿ ಅಭಿಪ್ರಾಯಪಟ್ಟರು.
ಉದ್ಯಾವರ ಮಾಡ ಸರಕಾರಿ
ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ರಾಧಾಕೃಷ್ಣ ಎಚ್ ಸಮಾರಂಭಕ್ಕೆ ದೀಪ ಬೆಳಗಿಸಿ ಚಾಲನೆ ಇತ್ತರು. ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗ ಪ್ರಾಧ್ಯಾಪಕ ಡಾ. ಬಾಲಕೃಷ್ಣ ಹೊಸಂಗಡಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂರು.
ಸ್ಥಳೀಯ ಪುಸ್ತಕ ಪ್ರೇಮಿ ಸುರೇಂದ್ರ ಮಾಡ ಮುಖ್ಯ ಅತಿಥಿಯಾಗಿದ್ದರು. ಲೀಲಾಧರ ಮಾಡ ಸ್ವಾಗತಿಸಿದರು.
ಸಾಕ್ಷ್ಯಚಿತ್ರ ನಿರ್ದೇಶಕ, ಪತ್ರಕರ್ತ ರಮೇಶ್ ಮಂಜೇಶ್ವರ ವಂದಿಸಿದರು.
ಭಾಸ್ಕರ ಕುಲಾಲ್, ರಾಮಚಂದ್ರ ಆರ್, ಕೆ, ಶಿವಾನಂದ ಮಾಡ, ಚಂದ್ರಶೇಖರ ದೊಡ್ಡಮನೆ, ಅಜಿತ್ ಕುಮಾರ್ ಕೊಳಕ್ಕೆ ಮೊದಲಾದವರು ಕಾರ್ಯಕ್ರಮಕ್ಕೆ ಸಹಕರಿಸಿದರು.





