ಮಂಜೇಶ್ವರ ಬಂಟರ ಸಂಘದಿಂದ ಗತ ಕಾಲೀನ ಆಟಿ ತಿಂಗಳ ಬಂಟರ ಬದುಕಿನ ಸಂಸ್ಕೃತಿ ಸ್ಮರಿಸಿದ ತೃತೀಯ ವರ್ಷದ “ಆಟಿ ಕೂಟ”

by Narayan Chambaltimar
  • ದಿನವಿಡೀ ರಂಜಿಸಿದ ಸಂಭ್ರಮದಲ್ಲಿ ಬಂಟರ ಮನೆಯ ಆಟಿ ಔತಣ, ಸಾಂಸ್ಕೃತಿಕ ವೖಭವ, ಮಾತೃ ಸಂಘದ ಅಧ್ಯಕ್ಷರಿಗೆ ಸನ್ಮಾನ, ಗಣ್ಯರ ಉಪಸ್ಥಿತಿ

ಮಂಜೇಶ್ವರ(ಆ4):
ಬಂಟರು ಭೂ ಮಾಲೀಕರಾಗಿ ಕೃಷಿ ಸಂಸ್ಕೃತಿಯನ್ನು ಪೋಷಿಸಿ ಬದುಕಿದ್ದ ಗತಕಾಲದ ಆಟಿ ತಿಂಗಳ ಜೀವನ ಕ್ರಮ, ಸಾಂಪ್ರದಾಯಿಕ ಆಚಾರಗಳನ್ನು ಮೆಲುಕುತ್ತಾ ಮಂಜೇಶ್ವರ ಬಂಟರ ಸಂಘದ ಮೂರನೇ ವರ್ಷದ ಆಟಿದ ಕೂಟ ನಡೆಯಿತು. ಆ. 2ರಂದು ಉದ್ಯಾವರ ಮಾಡದ ಸಂಘದ ಕಚೇರಿಯಲ್ಲಿ ನಡೆದ ಆಟಿದಕೂಟ ದ ಜತೆಯಲ್ಲೇ ಸಂಘದ ವಾರ್ಷಿಕ ಮಹಾಸಭೆ, ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ಸಹಾಯಧನ ವಿತರಣಾ ಸಮಾರಂಭ ನಡೆಯಿತು. ಡಾ. ಜಯಪಾಲ ಶೆಟ್ಟಿ ತಲಪಾಡಿ ದೊಡ್ಡಮನೆ ದೀಪ ಬೆಳಗಿಸಿ ಉದ್ಘಾಟಿಸಿದರು.

ಸಮಾರಂಭದಲ್ಲಿ ಶ್ರೀಕ್ಷೇತ್ರ ಮಾಡದ ಗಡಿಪ್ರಧಾನರಾದ ಮಂಜಪ್ಪ ರೈ, ಕುಂಞಣ್ಣ ಚೌಟರು, ಶ್ರೀಕ್ಷೇತ್ರ ಮಾಡದ ಪ್ರಧಾನ ಅರ್ಚಕರಾದ ಬೀರು ಚೌಟರು ಹಾಗೂ ಹಲವಾರು ಹಿರಿಯ ಮತ್ತು ಕಿರಿಯ ಸದಸ್ಯರು ಉಪಸ್ಥಿತರಿದ್ದರು.

ಬಂಟರ ಸಂಘ ಮಂಜೇಶ್ವರದ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಮಡಿವಾಳಪಾಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ, ಸಂಘದ ನಿಕಟಪೂರ್ವ ಅಧ್ಯಕ್ಷ ದಾಮೋದರ ಶೆಟ್ಟಿ ಹೊಸಮನೆ ಸನ್ನಡ್ಕ ಅವರು ಸ್ವಾಗತಿಸಿದರು. ಆಟಿ ತಿಂಗಳಲ್ಲಿನ ಬಂಟರ ಜೀವನಶೈಲಿ, ಆಹಾರ ಪದ್ಧತಿ ಹಾಗೂ ಕೃಷಿ ಸಂಪ್ರದಾಯಗಳ ಕುರಿತು ವಿಶೇಷ ಮಾಹಿತಿಯನ್ನು ಹಂಚಿಕೊಳ್ಳಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿ ಕಿರಣ್ ಬಿ. ಶೆಟ್ಟಿ ಮಜಲು, ಕುಂಜತ್ತೂರು ವಂದಿಸಿದರು.

ನಂತರ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ, ವರ್ಷದ ವರದಿ, ಆದಾಯ-ವೆಚ್ಚದ ಲೆಕ್ಕಪತ್ರಗಳನ್ನು ಕಾರ್ಯದರ್ಶಿ ಸಂಘದ ಸದಸ್ಯರ ಮುಂದಿಟ್ಟರು.

  • ದಿನವಿಡೀ ಮನರಂಜನೆ, ಸಾಂಪ್ರದಾಯಿಕ ಔತಣ

ದಿನವಿಡೀ ವಿವಿಧ ಸ್ಪರ್ಧೆಗಳು ಹಾಗೂ ಮನೋರಂಜನಾ ಚಟುವಟಿಕೆಗಳು ಸದಸ್ಯರನ್ನು ರಂಜಿಸಿದವು. ಮಧ್ಯಾಹ್ನದ ವಿಶೇಷ ಭೋಜನ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಆಟಿ ತಿಂಗಳಲ್ಲಿ ಬಂಟ ಸಮುದಾಯದಲ್ಲಿ ಸಾಂಪ್ರದಾಯಿಕವಾಗಿ ತಯಾರಿಸಲಾಗುವ ವಿವಿಧ ಬಗೆಯ ಖಾದ್ಯಗಳನ್ನು ಸದಸ್ಯರೇ ತಮ್ಮ ಮನೆಗಳಲ್ಲಿ ತಯಾರಿಸಿ ತಂದು ಪ್ರೀತಿಯಿಂದ ಬಡಿಸಿದ್ದು, ಎಲ್ಲರಿಂದಲೂ ಅಪಾರ ಮೆಚ್ಚುಗೆಗೆ ಪಾತ್ರವಾಯಿತು.

ಭೋಜನದ ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತುಳು ಜನಪದ ಶೈಲಿಯ ವೇಷಭೂಷಣಗಳೊಂದಿಗೆ ಹಾಡು, ಪಾಡ್ದನ, ನೃತ್ಯ, ಹಾಸ್ಯ ಪ್ರಹಸನ ಹಾಗೂ ಇತರ ವೈವಿಧ್ಯಮಯ ಪ್ರದರ್ಶನಗಳು ಪ್ರೇಕ್ಷಕರನ್ನು ರಂಜಿಸಿದವು. ಬಂಟರ ಪರಂಪರೆ, ಆಚಾರ-ವಿಚಾರ ಹಾಗೂ ಸಂಸ್ಕೃತಿಯ ವೈಭವವನ್ನು ಅನಾವರಣಗೊಳಿಸಿ ಅಚ್ಚುಕಟ್ಟಾಗಿ ಮೂಡಿಬಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮಂಜೇಶ್ವರ ಬಂಟರ ಪ್ರತಿಭೆಯನ್ನು ಅನಾವರಣಗೊಳಿಸಿದ್ದು ಮಾತ್ರವಲ್ಲದೆ, ಆಗಮಿಸಿದ್ದ ಅತಿಥಿಗಳಿಂದಲೂ ಭಾರೀ ಪ್ರಶಂಸೆಗೆ ಪಾತ್ರವಾಯಿತು.

ಸಂಜೆ 4 ಗಂಟೆಗೆ ನಡೆದ ಸಭಾ ಕಾರ್ಯಕ್ರಮದಲ್ಲಿ, ಬಂಟರ ಯಾನೆ ನಾಡವರ ಮಾತೃ ಸಂಘ, ಮಂಗಳೂರು ಇದರ ಅಧ್ಯಕ್ಷರಾಗಿ ಆಯ್ಕೆಯಾದ ಅಜಿತ್ ಕುಮಾರ್ ರೈ ಮಲಾಡಿ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಉದ್ಯಮಿ, ದಾನಿ ಕೆ. ಕೆ. ಶೆಟ್ಟಿ ಕುತ್ತಿಕಾರು ಮತ್ತು ಕೆ. ಡಿ. ಶೆಟ್ಟಿ, ಫಿಟ್ನೆಸ್ ಹಬ್ ಮಂಗಳೂರು ಸಂಸ್ಥಾಪಕಿ ನಯನ ಶೆಟ್ಟಿ ಸೇರಿದಂತೆ ಹಲವು ಗಣ್ಯ ಅತಿಥಿಗಳು ಭಾಗವಹಿಸಿದ್ದರು. ನಿರ್ಮಾಣ ಹಂತದಲ್ಲಿರುವ ಸಂಘದ ನೂತನ ಸಭಾಂಗಣದ ಕಾಮಗಾರಿಯನ್ನು ವೀಕ್ಷಿಸಿದ ಅತಿಥಿಗಳು, ಮಂಜೇಶ್ವರ ಬಂಟರ ಸಂಘದ ಸಮಾಜಮುಖಿ ಕಾರ್ಯಗಳು ಹಾಗೂ ಅಭಿವೃದ್ಧಿ ಯೋಜನೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು.

ಕಾಸರಗೋಡು ಜಿಲ್ಲಾ ಬಂಟರ ಸಂಘದ ಅಧ್ಯಕ್ಷರಾದ ಸುಬ್ಬಯ್ಯ ರೈ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ, 2025–26ನೇ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ 5ನೇ ತರಗತಿಯಿಂದ 10ನೇ ತರಗತಿಯವರೆಗೆ ಕಲಿತು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಸಹಾಯಧನ, ಅತ್ಯಧಿಕ ಅಂಕ ಗಳಿಸಿದವರಿಗೂ, ಕಲೆ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗೈದ ಮಂಜೇಶ್ವರ ಬಂಟರ ಸಂಘದ ಸಾಧಕರಿಗೂ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಮಾರೋಪ ಸಮಾರಂಭದಲ್ಲಿ ದಾಮೋದರ ಶೆಟ್ಟಿ ಹೊಸಮನೆ ಸನ್ನಡ್ಕ ಸ್ವಾಗತಿಸಿದರು. ಹರೀಶ್ ಶೆಟ್ಟಿ ಮಾಡ ಕಾರ್ಯಕ್ರಮ ನಿರೂಪಿಸಿದರೆ, ಮೋಹನ್ ಮಾಡ ವಂದಿಸಿದರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕಾರ್ಯಕ್ರಮದ ಕೊನೆಯವರೆಗೂ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆರುಗು ತಂದ ಸದಸ್ಯರಿಗೆ ವಿಶೇಷ ಬಂಪರ್ ಬಹುಮಾನಗಳನ್ನು ನೀಡಿ ಗೌರವಿಸಲಾಯಿತು. ರಾಷ್ಟ್ರ ಗೀತೆಯೊಂದಿಗೆ ಕಾರ್ಯಕ್ರಮ ಸಮಾಪನೆಗೊಂಡಿತು.
ಚಿತ್ರಗಳು : “ಪ್ರಭಾ” ಮಂಜೇಶ್ವರ

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00