- ತುಳುನಾಡಿನ ಜನಪದ ಪರಂಪರೆಯ ಆಚರಣೆ ಮಲಬಾರಿನಲ್ಲಿಂದಿಗೂ ಜೀವಂತ
ಕಾಸರಗೋಡು(ಆ 2):
ವರ್ಷಂಪ್ರತಿ ಮಲಯಾಳಂ ವರ್ಷ ಋತುವಿನ ಕ್ಯಾಲಂಡರ್ ಅನುಸಾರ ಕರ್ಕಾಟಕ 16ರಂದು ನಡೆಯುವ ಮಾಡಾಯಿಕ್ಕಾವ್ ನಲ್ಲಿ (ಕೇರಳದ ಕಣ್ಣೂರು ಜಿಲ್ಲೆಯ ಪಯಂಗಾಡಿ ಬಳಿ) ಈ ಬಾರಿಯೂ ವಾಡಿಕೆ ತಪ್ಪದೇ, ಸುರಿವ ಮಳೆ ಲೆಕ್ಕಿಸದೇ ಮಾರಿ ದೖವಗಳು ಅಬ್ಬರಿಸಿ ಕುಣಿದವು. ಮಳೆಯಬ್ಬರದ ನಡುವೆಯೂ ನಾಡಿನ ಮಾರಿ ನೀಗಿಸುವ ದೖವಗಳ ದರ್ಶನಕ್ಕೆ ನೂರಾರು ಮಂದಿ ನೆರೆದರು. ಇದು ಗಡಿನಾಡಿನ ತುಳು-ಮಲಯಾಳದ ಜನಪದ ಸಾಂಸ್ಕೃತಿಕ ಸೇತುವೆಯಾಗಿ ನೂರಾರು ವರ್ಷಗಳಿಂದ ಕೖದಾಟಿ ಬಂದ ಆಚಾರ. ಈ ಬಾರಿಯ ಮಾರಿ ತೖಯ್ಯಂ ಆ. 1 ರಂದು ಶನಿವಾರ ಮಧ್ಯಾಹ್ನ ನಡೆಯಿತು.

ಮಧ್ಯಾಹ್ನ ಮಾಡಾಯಿಕಾವ್ ದೖವಸ್ಥಾನದಲ್ಲಿ ಪೂಜೆ ನಡೆದ ಬಳಿಕ ಮಧ್ಯಾಹ್ನ 12.30 ಕ್ಕೆ ದೖವಸ್ಥಾನದಿಂದ ದೖವಗಳಿಗೆ ಪಾಯಸ ಕಳುಹಿಸುವ ರೂಢಿ ಇದೆ. ಪಾಯಸ ತಲುಪಿ ಸೇವಿಸುವುದರೊಂದಿಗೆ ಗುಡ್ಡೆಯಲ್ಲಿ ಮಾರಿ ದೖವಗಳ ಪ್ರದರ್ಶನ ಸೇವೆಗೆ ಆರಂಭವಾಗುತ್ತಿದೆ. ಬಟಾಬಯಲಿನ ಗುಡ್ಡೆಯಲ್ಲಿ ನಡು ಮಧ್ಯಾಹ್ನ ಬಿಸಿಲೋ, ಮಳೆಯೋ ಲೆಕ್ಕಿಸದೇ ಮಾರಿ ನೀಗಿಸುವ ಜನಪದ ದೖವಗಳನ್ನು ಕಣ್ತುಂಬಾ ಕಂಡು ಪ್ರಾರ್ಥಿಸುವವರು ನೂರಾರು ಮಂದಿ.

ಮಾರಿ ಕುಲವನ್, ಮಾಮಾರಿಕುಲವನ್, ಮಾರಿ ಕಾಲಿಚ್ಚಿ, ಮಾಮಾಯಿ ಕಾಲಿಚ್ಚಿ, ಮಾರಿ ಗುಳಿಗನ್, ಮಾಮಾಯ ಗುಳಿಗನ್ ಎಂಬೀ ಆರು ಜೋಡಿ ದೖವಗಳು ಮಾರಿ ದೖವಗಳಾಗಿ ಪ್ರದರ್ಶನವಾಗುತ್ತದೆ. ಮಲಬಾರಿನ ಪುಲಯ ಜನಾಂಗದವರು ಇದನ್ನು ಕಟ್ಟಿ ಆಡುತ್ತಾರೆ. ಇದು ಅವರದೇ ಜನಾಂಗಿಕ ಆಚಾರ ಸಂಪ್ರದಾಯವೂ ಹೌದು.
ಪ್ರಾಚೀನ ಕಾಲದ ಮಾರಕ ರೋಗ ರುಜಿನಗಳಾದ ಸಿಡುಬು, ಕಾಲರಾ ಮೊದಲಾದ ವ್ಯಾಧಿಗಳೆಂಬ ಮಾರಿಯನ್ನು ನಾಡಿನಿಂದ ಅಟ್ಟಲು ಆರಾಧಿಸುವ ಶಕ್ತಿರೂಪಿ ದೖವಾರಾಧನಾ ಸಂಪ್ರದಾಯ ಇದಾಗಿದೆ. ವರ್ಷಕ್ಕೊಮ್ಮೆ ಕರ್ಕಾಟಕ ಮಾಸದಲ್ಲಿ ಮಾತ್ರ ಆರಾಧಿಸಲ್ಪಡುವ ಈ ದೖವಗಳನ್ನು ಗ್ರಾಮದೇವತೆಗಳೆಂದು ಜನಪದ ಪರಿಗಣಿಸಿದೆ.

ತುಳುನಾಡಿನಲ್ಲಿ ಮಾರಿ ದೖವಗಳ ವಿಶೇಷ ಆಚಾರಗಳಿದ್ದುದರ ಪಳೆಯುಳಿಕೆ ಇದಾಗಿದೆ. ದುಡಿ ಮತ್ತು ಡೋಲು ವಾದ್ಯಗಳನ್ನಷ್ಟೇ ಬಳಸುವ ಮಾಡಾಯಿಕಾವಿನ ಮಾರಿದೖವಗಳಲ್ಲಿ ಕೇರಳದ ತೖಯ್ಯಂ ಪ್ರಭಾವ ಕಡಿಮೆ. ತುಳು ನಾಡಿನ ಪ್ರಭಾವ ಅಧಿಕ. ಕುಣಿತಗಳೂ ಅಶಾಸ್ತ್ರೀಯ ಮತ್ತು ಭಿನ್ನ.
ಹಳ್ಳಿಯಲ್ಲಿ ಮಾರಣಾಂತಿಕ ರೋಗಗಳು, ಪ್ರಾಕೃತಿಕ ವಿಕೋಪಗಳು ಸಂಭವಿಸಿದಾಗ ಮಾರಿಗೆ ಬಡಿಸುವುದು, ಮಾರಿ ಕೋಲ ನಡೆಸುವುದು, ವಿಶೇಷ ತಂಬಿಲ ನೀಡುವುದು ಜನಪದ ಆರಾಧನಾ ಪದ್ಧತಿಗಳಾಗಿದ್ದುವು. ತುಳು ನಾಡಿನಲ್ಲಿ ಈ ಪರಂಪರೆ ಕಾಣೆಯಾಗುತ್ತಿದೆಯಾದರೂ ಮಾಡಾಯಿ ಕಾವಿನ ಎತ್ತರದ ಗುಡ್ಡದಲ್ಲಿ ಇಂದಿಗೂ ವರ್ಷಕ್ಕೊಮ್ಮೆ ದುಡಿ, ಡೋಲು ಸದ್ದು ಕೇಳುತ್ತದೆ. ಮಾರಿಗಳ ದೖವಗಳ ಕೇಕೆ, ಅಟ್ಟಹಾಸಗಳು ಮೊಳಗುತ್ತವೆ.





