- ಎಡನೀರು ಮಠದಲ್ಲಿ ಶ್ರೀ ಸಚ್ಛಿದಾನಂದ ಭಾರತಿ ಶ್ರೀಪಾದರ ಷಷ್ಠ ಚಾತುರ್ಮಾಸದ 60ದಿನಗಳ ಕನ್ನಡ ಕಲೋತ್ಸವಕ್ಕೆ ಚಾಲನೆ
ಎಡನೀರು(ಜು 29):
ವಿವಿಧತೆಯಲ್ಲಿ ಏಕತೆ ಎಂಬ ಭಾರತೀಯ ಪ್ರಜಾಪ್ರಭುತ್ವದ ಐಕ್ಯಮಂತ್ರಕ್ಕೆ ಶ್ರೀಶಂಕರ ಭಗವತ್ಪಾದರ ಅದ್ವೖತವೇ ಅಡಿಗಲ್ಲು. ಇದೇ ಏಕತಾ ಮಂತ್ರದ ಪರಂಪರೆಯನ್ನು ಎಡನೀರು ಮಠ ದಿವ್ಯ ಶ್ರದ್ಧೆಯಿಂದ ಪಾಲಿಸುತ್ತದೆ. ಎಲ್ಲ ಜಾತಿ- ವರ್ಗಗಳನ್ನು ಜೋಡಿಸಿ ಆರಾಧನೆ-ಅನುಷ್ಠಾನ- ಕಲಾ ಸಂಸ್ಕೃತಿ ಪೋಷಣೆ- ಧಾರ್ಮಿಕ ಸೇವೆಗಳೊಂದಿಗೆ ಮುನ್ನಡೆಯುವ ಮಠ ದೇಶಕ್ಕೆ ಮಾದರಿಯಾಗಿದೆ ಎಂದು ಹುಬ್ಬಳ್ಳಿ ಶಾಸಕ, ಕರ್ನಾಟಕ ವಿಧಾನಸಭೆಯ ವಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ನುಡಿದರು.
ಶ್ರೀಮದೆಡನೀರು ಮಠದಲ್ಲಿಂದು ಶ್ರೀ ಸಚ್ಛಿದಾನಂದ ಭಾರತೀ ಶ್ರೀಪಾದಂಗಳವರ ಷಷ್ಠ ಚಾತುರ್ಮಾಸ್ಯದಂಗವಾದ 60ದಿನಗಳ ಕನ್ನಡ ಕಲೋತ್ಸವ-ಸಾಂಸ್ಕೃತಿಕ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಶಂಕರಾಚಾರ್ಯರು ಯಾವುದೂ ಶಾಶ್ವತ ವಲ್ಲ ಎಂದೇ ಬೋಧಿಸಿದವರು. ಸತ್ಕಾರ್ಯ, ಸತ್ಕರ್ಮವೇ ಶಾಶ್ವತ ಎಂದು ಸಾರಿದವರು. ಇದೇ ಪಥದಲ್ಲಿ ಸಾಗಿ ಬಂದಿರುವ ಎಡನೀರು ಮಠದ ಬ್ರಹ್ಮೖಕ್ಯ ಶ್ರೀ ಕೇಶವಾನಂದ ಭಾರತೀ ಅವರ ದೇಶ ಪ್ರಸಿದ್ಧವಾದ ಕೇಸು ಕೂಡಾ ಪರಮ ಅದ್ವೖತದ ಸಂದೇಶವನ್ನೇ ಸಾರುತ್ತದೆ.
ದೇಶದಲ್ಲಿ ಅಧಿಕಾರ ದೊಡ್ಡದಲ್ಲ. ಕಾನೂನು, ಸುಪ್ರೀಂಕೋರ್ಟು ದೊಡ್ಡದಲ್ಲ. ಅದಕ್ಕೂ ದೊಡ್ಡದು ಮೃಲಭೂತ ಹಕ್ಕುಗಳನ್ನು ಸಾರಿದ ಸಂವಿಧಾನ ಎಃದು ಕೇಶವಾನಂದ ಭಾರತೀ ಕೇಸ್ ಪ್ರಕರಣ ಸಾರಿದೆ. ಇದು ಎಡನೀರು ಮಠ ದೇಶಕ್ಕೆ ಸಾರಿದ ಅಮೂಲ್ಯ ಸಂದೇಶ. ಈ ಪರಂಪರೆಯ ಮುಂದುವರಿಕೆಯಾಗಿ ಅವರು-ಇವರೆಂಬ ಬೇಧವಿಲ್ಲದೇ ಹರಿಹರಾದ್ದೖತ ಸಿದ್ಧಾಂತದಂತೆ ಸನಾತನ ಧರ್ಮ ರಕ್ಷಣೆಯ ಕಾಳಜಿಯೊಂದಿಗೆ ಎಡನೀರು ಶ್ರೀಮಠದ ಎಲ್ಲಾ ಚಟುವಟಿಕೆ ನಡೆಯುತ್ತದೆ. ಇದು ದೇಶದ ಮತ-ಮಠ ಪರಂಪರೆಗೆ ಮಾದರಿಯಾದ ಚಟುವಟಿಕೆ ಎಂದವರು ಶ್ಲಾಘಿಸಿದರು.

ಎಡನೀರು ಮಠದ ಶ್ರೀ ಸಚ್ಛಿದಾನಂದ ಭಾರತೀ ಶ್ರೀಪಾದಂಗಳವರು ಆಶೀರ್ವಚನವನ್ನಿತ್ತರು. ಹೖದರಾಬಾದ್ ಉದ್ಯಮಿ, ಕಲಾಪೋಷಕ ಕೃಷ್ಣ ಮೂರ್ತಿ ಮಂಜ, ಅನಿವಾಸಿ ಉದ್ಯಮಿ, ಧಾರ್ಮಿಕ ಕ್ಷೇತ್ರದ ದಾನಿ ಎಡಕ್ಕಾನ ಮಹಾಬಲೇಶ್ವರ ಭಟ್ ಅತಿಥಿಗಳಾಗಿ ಪಾಲ್ಗೊಂಡರು.
ಸಮಾರಂಭದಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ವಿಜೇತ, ಶ್ರೀಮಠದ ಜತೆ ದೀರ್ಘ ಕಾಲದ ಸಂಬಂಧ ಉಳ್ಳ ಸಂಗೀತಜ್ಞ ಕಲಾವಿದ ಆನೂರು ಅನಂತಕೃಷ್ಣ ಶರ್ಮ ಅವರನ್ನು ಶ್ರೀಮಠದ ಪರವಾಗಿ ಸ್ವಾಮೀಜಿ ಅಭಿನಂಧಿಸಿದರು.

ಎಡನೀರು ಮಠ ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಜಿ. ಎಲ್. ಬಲರಾಮ ಆಚಾರ್ಯ ಪುತ್ತೂರು ಸ್ವಾಗತಿಸಿದರು. ಕೆಯ್ಯೂರು ನಾರಾಯಣ ಭಟ್ ಪ್ರಾಸ್ತಾವಿಕ ಮಾತನಾಡಿದರು. ಅರ್ಥದಾರಿ, ಕಲಾವಿದ ಉಜಿರೆ ಅಶೋಕ ಭಟ್ ನಿರೂಪಿಸಿದರು. ಮಠದ ಪ್ರಬಂಧಕ ರಾಜೇಂದ್ರ ಕಲ್ಲೂರಾಯ ವಂದಿಸಿದರು.
60 ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಇಂದು ಬೆಳಿಗ್ಗೆ 60ದಿನಗಳ ಸಂಕೀರ್ತನೆಯೊಂದಿಗೆ ಆರಂಭಗೊಂಡಿದೆ. ಶ್ರೀ ಗೋಪೋಲಕೃಷ್ಣ ಮಹಿಳಾ ಭಜನಾ ಮಂಡಳಿ ಭಜನಾ ಸಂಕೀರ್ತನಾ ಹಬ್ಬಕ್ಕೆ ನಾಂದಿ ಹಾಡಿದರು.
60 ದಿನಗಳ ಕನ್ನಡ ಕಲಾ ಸಂಸ್ಕೃತಿ ಉತ್ಸವವು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸಹಕಾರದೊಂದಿಗೆ ಆಯೋಜನೆಗೊಂಡಿದೆ.





