- ವಾಡಿಕೆಯಂತೆ ಚಾತುರ್ಮಾಸ್ಯ ಪೂರ್ವ ಶ್ರೀ ಮಠಕ್ಕೆ ಸ್ಥಳೀಯರ ಹೊರೆ ಕಾಣಿಕೆ ಸಮರ್ಪಣೆ: ಕೊಂಡೆವೂರು ಶ್ರೀಗಳಿಂದ ಉಗ್ರಾಣ ಮುಹೂರ್ತ
ಎಡನೀರು(ಜು 28)
ಎಡನೀರು ಮಠದ ಶ್ರೀ ಸಚ್ಛಿದಾನಂದ ಭಾರತಿ ಶ್ರೀಪಾದಂಗಳವರ ಆರನೇ ಚಾತುರ್ಮಾಸ ಆಚರಣೆ ಸಂಪನ್ನವಾಗಿಸಲು ಸಿದ್ಧತೆಗಳು ಪೂರ್ಣಗೊಂಡಿದೆ. ವಾಡಿಕೆಯಂತೆ ಎಡನೀರು ಮಠ ಪರಿಸರದ ಭಕ್ತಾದಿಗಳು ಶ್ರೀಮಠದ ಗುರುಪೀಠಕ್ಕೆ ಪ್ರಥಮ ಹೊರೆಕಾಣಿಕಾ ಸಮರ್ಪಣೆಯನ್ನು ಇಂದು ಸಂಜೆ ಅರ್ಪಿಸಿದರು. ಸಂಜೆ 5ಕ್ಕೆ ಶ್ರೀಮಠಕ್ಕೆ ಆಗಮಿಸಿದ ಭಕ್ತರಿಂದ ಶ್ರೀ ಸಚ್ಛಿದಾನಂದ ಭಾರತೀ ಶ್ರೀಪಾದಂಗಳವರ ಸಮಕ್ಷಮ ಕೊಂಡೆವೂರು ಶ್ರೀನಿತ್ಯಾನಂದಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಸ್ವೀಕರಿಸಿ ಉಗ್ರಾಣ ಮುಹೂರ್ತ ನಡೆಸಿದರು.
60 ದಿನಗಳ ಚಾತುರ್ಮಾಸ್ಯ ವ್ರತಾಚರಣೆ ಪೂರ್ವಭಾವಿ ಮಂಗಳಾರ ಶ್ರೀ ಸಚ್ಛಿದಾನಂದ ಭಾರತೀ ಶ್ರೀಪಾದಂಗಳವರು ಮಧೂರು, ಅಜ್ಜಾವರ, ಅನಂತಪುರ, ಮಲ್ಲ, ಕಡುಮನೆ ವನದುರ್ಗಾ ಕ್ಷೇತ್ರ ಸಹಿತ ಹಲವು ಕ್ಷೇತ್ರಗಳಿಗೆ ದರ್ಶನವಿತ್ತರು.


ಶ್ರೀಗಳವರ ಆರನೇ ಚಾತುರ್ಮಾಸ್ಯ ವ್ರತಾಚರಣೆ ಜು. 29ಕ್ಕೆ ಪ್ರಾರಂಭವಾಗಲಿದ್ದು, ಸೆ. 26ರ ತನಕ 60ದಿನಗಳ ಕನ್ನಡ ಕಲೋತ್ಸವ ರೂಪದಲ್ಲಿ ಜರಗಲಿದೆ.
29ರಂದು ಬೆಳಿಗ್ಗೆ 9ಕ್ಕೆ ಸಾಂಸ್ಕೃತಿಕ ಕಲೋತ್ಸವಕ್ಕೆ ಚಾಲನೆಯಾಗಲಿದೆ.
ಎಡನೀರು ಶ್ರೀ ಗೋಪಾಲಕೃಷ್ಣ ಕಲಾಮಂಡಲಿ ಸಂಯೋಜನೆಯಲ್ಲಿ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕೀಲಾರು ಪ್ರತಿಷ್ಠಾನದ ಸಹಕಾರದೊಂದಿಗೆ ಕಾರ್ಯಕ್ರಮಗಳು ಜರಗಲಿವೆ. ಬೆಳಿಗ್ಗೆ 9ಕ್ಕೆ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಕಾರ್ಯಕ್ರಮ ಉದ್ಘಾಟಿಸುವರು. ಸಂಸದ ರಾಜ ಮೋಹನ್ ಉಣ್ಣಿತಾನ್ ಅಧ್ಯಕ್ಷತೆ ವಹಿಸುವರು.
ಶ್ರೀ ಸಚ್ಛಿದಾನಂದ ಭಾರತಿ ಸ್ವಾಮೀಜಿ ಆಶೀರ್ವಚನ ನೀಡುವರು.
ಹುಬ್ಬಳ್ಳಿ ಶಾಸಕ ಅರವಿಂದ ಬೆಲ್ಲದ, ಉದುಮ ಶಾಸಕ ಕೆ. ನೀಲಕಂಠನ್, ಉದ್ಯಮಿ ಕೃಷ್ಣಮೂರ್ತಿ ಮಂಜ, ಅನಿವಾಸಿ ಉದ್ಯಮಿ ಮಹಾಬಲೇಶ್ವರ ಭಟ್ ಅತಿಥಿಗಳಾಗಿ ಪಾಲ್ಗೊಳ್ಳುವರು. ಖ್ಯಾತ ಕಲಾವಿದ ಆನೂರು ಅನಂತಕೃಷ್ಣ ಶರ್ಮ ಅವರಿಗೆ ಶ್ರೀ ಮಠದ ಸನ್ಮಾನ ನಡೆಯಲಿದೆ.
ಚಾತುರ್ಮಾಸ್ಯ ಸಮಿತಿ ಗೌರವಾಧ್ಯಕ್ಷ ಟಿ. ಶ್ಯಾಮ್ ಭಟ್, ಅಧ್ಯಕ್ಷ ಜಿ. ಎಲ್. ಬಲರಾಮ ಆಚಾರ್ಯ ಉಪಸ್ಥಿತರಿರುವರು.





