ತುಳುನಾಡಿನೆಲ್ಲಡೆ ದೖವಕೋಲ ನಿಷಿದ್ಧ ಇರುವಾಗ ಆದೂರಿನಲ್ಲಿ ಮಾತ್ರ ಆಟಿ ತಿಂಗಳಿಡೀ ಕಲ್ಲುರ್ಟಿ ದೖವದ ಹರಿಕೆ ಕೋಲ..!

by Narayan Chambaltimar
  • ವರ್ಷ ಇಡೀ ಮುಚ್ಚಿರುವ ದೖವಸ್ಥಾನದಲ್ಲಿ ಆಟಿ ತಿಂಗಳು ಪೂರ್ಣ ಹರಿಕೆಯ ದೖವ ನೇಮ
  • ಆದೂರು ಮಲ್ಲಾವರ ಕುಂಡಲದಲ್ಲಿದೆ ಅಪೂರ್ವ ಕಲ್ಲುರ್ಟಿ-ಕಲ್ಕುಡ ದೖವ ತಾಣ

✍️ kanipura special
ಎಂ. ನಾ. ಚಂಬಲ್ತಿಮಾರ್

ಮುಳ್ಳೇರಿಯ (ಜು 25):
ತುಳುನಾಡ ಸೀಮೆಯ ಎಲ್ಲೆಡೆ ಆಟಿ ತಿಂಗಳೆಂಬ ಕರ್ಕಾಟಕ ಮಾಸದಲ್ಲಿ ದೖವಾರಾಧನೆಗಳು ನಿಷಿದ್ಧವಾದರೆ ಗಡಿನಾಡು ಕಾಸರಗೋಡಿನ ಮುಳ್ಳೇರಿಯ ಬಳಿಯ ಆದೂರು ಮಲ್ಲಾವರದ ಕುಂಡಲ ಕಲ್ಲುರ್ಟಿ-ಕಲ್ಕುಡ ದೖವಸ್ಥಾನದಲ್ಲಿ ಆಟಿ ತಿಂಗಳಲ್ಲಿ ಮಾತ್ರವೇ ಕಲ್ಲುರ್ಟಿ ನೇಮಗಳು ವಾಡಿಕೆಯಂತೆ ನಡೆಯುತ್ತಿವೆ.
ವರ್ಷದ ಹನ್ನೊಂದು ತಿಂಗಳೂ ಮುಚ್ಚಿರುವ ಈ ದೖವ ಕ್ಷೇತ್ರ ವರ್ಷಂಪ್ರತಿ ಕರ್ಕಾಟಕ ಎಂಬ ಆಟಿ ತಿಂಗಳಲ್ಲಿ ತೆರೆದು, ತಿಂಗಳಿಡೀ ದೖವ ನೇಮಗಳಿಂದ ವೖಶಿಷ್ಟ್ಯ ಪೂರ್ಣವಾಗಿ ಗಮನ ಸೆಳೆಯುತ್ತಿದೆ. ಆಟಿ ಮಾಸದಲ್ಲಿ ಕಲ್ಲುರ್ಟಿ ದೖವಕ್ಕೆ ಕೋಲ ಸಹಿತ ಸಮ್ಮಾನಗಳನ್ನು ನೀಡಿ, ಪ್ರಸಾದ ಪಡೆದು ಭಕ್ತರೂ ಕೃತಾರ್ಥರಾಗುತ್ತಾರೆ.

 

ಹರಿಕೆ ಕೋಲಗಳ ಅಪರೂಪದ ತಾಣ

ಇದು ಪುತ್ತೂರು ಸೀಮೆಗೆ ಸೇರಿದ ಮಣ್ಣು. ಜನಪದ ಐತಿಹ್ಯಗಳಂತೆ ನಾಲ್ಕು ಶತಮಾನದ ಹಿಂದೆ ಘಟ್ಟದಿಂದ ಇಳಿದು ಬಂದ ಕಲ್ಕುಡ -ಕಲ್ಲುರ್ಟಿ ದೖವಗಳಿಗೆ ಆದೂರು ಏಳ್ನಾಡು ಗುತ್ತು ಮನೆಯವರು ಆಶ್ರಯ ನೀಡಿದ್ದರು. ಇದರಂತೆ ದೖವದ ಭಂಡಾರ ಮನೆ ಇಂದಿಗೂ ಏಳ್ನಾಡು ಗುತ್ತು. ಈಗಲೂ ಏಳ್ನಾಡು ಗುತ್ತಿನ ಗುರು ಹಿರಿಯರಿಗೆ ಬಡಿಸುವುದು ಸೇರಿದಂತೆ ಕುಟುಂಬದ ದೖವ ಕಾರ್ಯ ನಡೆಯಬೇಕಿದ್ದರೆ ಆಟಿ ತಿಂಗಳು ಪೂರ್ಣ ಕಲ್ಲುರ್ಟಿ ನೇಮ ನಡೆಯಲೇ ಬೇಕು. ಇದು ವಾಡಿಕೆಯಂತೆ ನಡೆಯುತ್ತಾ ಕೖ ದಾಟಿ ಬಂದಿದೆ.ಇತ್ತೀಚಿನ ವರ್ಷಗಳ ವರೆಗೂ ಇದು ಆದೂರು ಗ್ರಾಮದ ಪ್ರಮುಖ, ಪಟೇಲ ನಾರಾಯಣ ಭಂಡಾರಿಗಳ ಮೇಲುಸ್ತುವಾರಿಯಲ್ಲಿ ನಡೆಯುತ್ತಿತ್ತು. ಅವರು ಅಗಲಿದ ಅನಂತರ ಪ್ರಸ್ತುತ ಏಳ್ನಾಡು ಗುತ್ತಿನ ಬಿಪಿನ್ ದಾಸ್ ರೖ ಅವರ ಯಜಮಾನಿಕೆಯಲ್ಲಿ ದೖವಕಾರ್ಯ ನಡೆಯುತ್ತಿದೆ.

ಅಂತರ್ ರಾಜ್ಯದ ಭಕ್ತರ ಹರಿಕೆ

ಇತ್ತೀಚಿನ ದಶಕಗಳ ವರೆಗೂ ಇದು ದಟ್ಟ ಕಾಡಿನ ಪ್ರದೇಶವಾಗಿತ್ತು. ವನ್ಯ ಮೃಗ ಮತ್ತು ದೖವಗಳ ಭಯ, ಭಕ್ತಿಯಿಂದ ಜನರಿಲ್ಲಿ ವಾಸ ಮಾಡುತ್ತಲೇ ಇರಲಿಲ್ಲ. ಆಗ ವರ್ಷಕ್ಕೊಮ್ಮೆ ಆಟಿಯ ಜಡಿಮಳೆಗೆ ಮಳೆಯಲ್ಲೇ ದೖವಕೋಲ ಆಗುತಿತ್ತು. ಈಗ ಕಾಲವೇ ಪರಿಷ್ಕಾರಗೊಂಡಿದೆ. ಜನ ಸಾಂದ್ರತೆ ಹೆಚ್ಚಿದೆ. ಇದರಂತೆ ಆದೂರಿನ ಕಲ್ಲುರ್ಟಿಯ ಆಟಿ ತಿಂಗಳ ಕೋಲಕ್ಕೂ ಪ್ರಚಾರ, ಪ್ರಸಿದ್ದಿ ಬಂದಿದೆ. ಕೇವಲ ಆದೂರು ಗ್ರಾಮಸ್ಥರಲ್ಲದೇ, ಮಡಿಕೇರಿ, ಸುಳ್ಯ, ಪುತ್ತೂರು, ಮಂಜೇಶ್ವರ, ಮಂಗಳೂರು ಭಾಗದಿಂದಲೂ ಜನರಾಗಮಿಸಿ ಹರಿಕೆಯ ಕೋಲ ಸಲ್ಲಿಸುತ್ತಾರೆ. ನಾನಾ ಪ್ರಾರ್ಥನೆಗಳನ್ನು ಸಮರ್ಪಿಸುತ್ತಾರೆ. ಹರಿಕೆಯ ಕೋಲ ನಡೆಸಬೇಕಾದರೆ ಮುಂಗಡ ಬುಕ್ಕಿಂಗ್ ಮಾಡಬೇಕು.
ಒಂದು ಕೋಲ ಸೇವೆಗೆ 16,500 ರೂ ಕಾಣಿಕೆ. ಕೆಲವೊಂದು ವರ್ಷ ತಿಂಗಳ ದಿನದ ಅವಧಿಗೂ ಅಧಿಕ ಕೋಲ ಬುಕ್ಕಿಂಗ್ ಆದದ್ದಿವೆ. ಅಂತವರಿಗೆ ಮುಂದಿನ ವರ್ಷದ ಸರದಿಯಲ್ಲಿ ಅವಕಾಶ ನೀಡಲಾಗುತ್ತದೆ. ಕಳೆದ ವರ್ಷ 16ಕೋಲಗಳು ನಡೆದಿದ್ದುವು ಎಂದರು ಸ್ಥಳೀಯರಾದ ಪ್ರಕಾಶ ಭಂಡಾರಿ.

ಯಾಕೆ ಆಟಿಯಲ್ಲಿ ಮಾತ್ರ ಕೋಲ?

ಆದೂರಿನ ಆಟಿ ಕೋಲ ಪ್ರಾಚೀನ ಹಿನ್ನೆಲೆಯುಳ್ಳದ್ದು. ಆದರೆ ತುಳುನಾಡಿನ ಇತರೆಡೆ ಕೋಲ ನಡೆಯುವಾಗ ಇಲ್ಲಿ ಕೋಲಗಳೇ ಇಲ್ಲ. ದೖವಸ್ಥಾನವೇ ಮುಚ್ಚುಗಡೆ. ತುಳುನಾಡಿನ ಎಲ್ಲೆಡೆ ಕೋಲಗಳೇ ನಿಷಿದ್ಧ ಆಗಿರುವಾಗಲಷ್ಟೇ ಆದೂರಿನಲ್ಲಿ ಕೋಲ! ಇದೇಕೆ..? ಎಂಬ ಪ್ರಶ್ನೆಗೆ ನಿಖರ ಉತ್ತರಗಳು ಸಿಕ್ಕಿಲ್ಲ. ಇದು ಪರಂಪರೆಯಿಂದಲೇ ಬಂದ ವಾಡಿಕೆಯ ಆಚರಣೆ. ಅದು ಯಥಾನುಕ್ರಮ ಮುಂದುವರಿಯುತ್ತದೆ ಎಂದು ಸ್ಥಳೀಯರು ತಿಳಿಸಿದರು.

  • ಒಂದು ತಿಂಗಳ ಕಲ್ಲುರ್ಟಿ ಕೋಲ:
    ಕೊನೇಯ ದಿನ 1ಸಾವಿರಕ್ಕೂ ಅಧಿಕ ಹರಿಕೆಯ ನಾಟಿ ಕೋಳಿ ಸಾರಿನ ಕಡುಬು ಪ್ರಸಾದ

ಆಟಿ ಒಂದರಂದು ಆರಂಭದ ಕೋಲ ನಡೆಯುತ್ತದೆ. ಇದು ಏಳ್ನಾಡು ಗುತ್ತಿನ ಮನೆಯವರ ಲೆಕ್ಕದಲ್ಲಿ ನಡೆಯುವುದು ವಾಡಿಕೆ. ಬಳಿಕ ಸೋಮವಾರದ ಹೊರತು ಇತರ ದಿನಗಳಲ್ಲಿ ಹರಿಕೆದಾರರ ಸೇವೆ. ಸೋಮವಾರ ದೖವಕ್ಕೆ ಬಾರಣೆ ಕೊಡುವ ಕ್ರಮ ವಿಲ್ಲದ ಕಾರಣ ಸೋಮವಾರ ಸೇವೆ ನಡೆಯುತ್ತಿಲ್ಲ. ಆಟಿ ತಿಂಗಳ ಕೊನೆಯ ದಿನವಾದ ಸಿಂಹ ಸಂಕ್ರಮಣ( ಸೋಣ ಸಂಕ್ರಾಂತಿ)ದಂದು ಗ್ರಾಮಸ್ಥರ ವತಿಯ ಸೇವೆ. ಪ್ರತಿ ದಿನ ಬೆಳಿಗ್ಗೆ 9.30 ಕ್ಕೆ ಆರಂಭಗೊಂಡು ಮಧ್ಯಾಹ್ನ 12.30 ಕ್ಕೆ ಮುಗಿದರೆ, ಅಂತಿಮ ದಿನವಾದ ಸೋಣ ಸಂಕ್ರಮಣದ ಕೋಲ ಇಡೀ ದಿನ ಜರಗುತ್ತದೆ. ಅಂದು ಎರಡು- ಮೂರು ಸಾವಿರ ಮಂದಿ ನೆರೆಯುತ್ತಾರೆ. 1 ಸಾವಿರಕ್ಕೂ ಮಿಕ್ಕಿ ಹರಿಕೆಯ ನಾಟಿ ಕೋಳಿ ಸಮರ್ಪಣೆಯಾಗುತ್ತದೆ. ಇದೇ ಕೋಳಿಯ ಪದಾರ್ಥ ಸಹಿತ ಪುಂಡಿ(ಕಡುಬು) ಪ್ರಸಾದವಾಗಿ ಭಕ್ತರಿಗೆ ವಿತರಣೆಯೂ ಆಗುತ್ತದೆ.

  • ಗ್ರಾಮಸ್ಥರ ಒಮ್ಮತದ ಸೇವೆ

ಆದೂರು ಮಲ್ಲಾವರ ಕ್ಷೇತ್ರ ಸಮೀಪದಲ್ಲೇ ಇರುವ ಆದೂರು ಕುಂಡಲ ಕಲ್ಲುರ್ಟಿ ದೖವಸ್ಥಾನ ಬಾಹ್ಯ ನೋಟದಲ್ಲೇ ತುಳುನಾಡ ಚಾವಡಿ ಮನೆಯಂತೆ ಕಂಡು ಗೌರವದ ಭಕ್ತಿ ಮೂಡಿಸುತ್ತದೆ. ವರ್ಷವಿಡೀ ಜನ ಸಾನ್ನಿಧ್ಯ ಇಲ್ಲದೇ ಇದ್ದರೂ ವರ್ಷಕ್ಕೊಮ್ಮೆ ಆಟಿ ತಿಂಗಳಲ್ಲಿ ಗ್ರಾಮ ವಾಸಿಗಳೆಲ್ಲ ಇಲ್ಲಿಗೆ ಬಂದು ಕೖಗೆ ಕೖ, ಮನಸ್ಸಿಗೆ ಮನಸ್ಸು ಕೊಟ್ಟು ದುಡಿಯುತ್ತಾರೆ. ಜನ ಸಹಭಾಗಿತ್ವದ ಸೇವಾ ರೂಪದ ಕಾಯಕಗಳಿಂದಲೇ. ಇಲ್ಲಿನ ಎಲ್ಲಾ ಕೆಲಸವೂ ನಡೆಯುತ್ತದೆ. ಆಟಿ ತಿಂಗಳ ಕೊನೆಯಾಗಿ, ಸೋಣಕ್ಕೆ ಸುಗಿಪು ಹೇಳುವಾಗ ಇಲ್ಲಿ ನಡೆಯುವ ವಾರ್ಷಿಕ ಕೊನೇಯ ಕೋಲ ನೊಡಲೇಬೇಕಾದ್ದು. ಅಂದು ಇಡೀ ಆದೂರು ಗ್ರಾಮವೇ ಇಲ್ಲಿಗೆ ಹರಿದು ಬರುತ್ತದೆ.ಈ ಬಾರಿಯ ಅಕೇರಿ ಕೋಲ ಆಗಸ್ಟ್ 16ರಂದು ಜರಗಲಿದೆ.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00