ದೆಹಲಿ( ಜು 19):
ರಾಷ್ಟ್ರ ರಾಜಧಾನಿಯ ಜಂತರ್ ಮಂಥರ್ ನಲ್ಲಿ ಕೇಂದ್ರ ಸರಕಾರೀ ಧೋರಣೆ ಪ್ರತಿಭಟಿಸಿ ಉಪವಾಸ ಸತ್ಯಾಗ್ರಹ ನಿರತರಾಗಿದ್ದ ಸಾಮಾಜಿಕ ಹೋರಾಟಗಾರ ಸೊನಮ್ ವಾಂಗ್ಚೂಕ್ ಅವರ ಆರೋಗ್ಯ ಹದಗೆಟ್ಟಿದ್ದು, ಆರೋಗ್ಯ ಸ್ಥಿತಿ-ಗತಿಗಳ ಮೇಲೆ ತೀವ್ರ ನಿಗಾ ಇರಿಸಲಾಗಿದೆ. ಅವರನ್ನು ವಿಶೇಷ ತುರ್ತು ನಿಗಾ ಘಟಕದಲ್ಲಿರಿಸಿ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಫ್ದರ್ ಜಂಗ್ ಆಸ್ಪತ್ರೆ ಪ್ರಕಟಣೆ ನೀಡಿದೆ.
ಅವರಿಗೆ 24 ಗಂಟೆಯ ಕ್ಲಿನಿಕಲ್ ನಿಗಾ ಅಗತ್ಯವಿದ್ದು, ರಕ್ತದಲ್ಲಿ ಏರುಪೇರು ಉಂಟಾಗಿದೆ ಎಂದು ಮೆಡಿಕಲ್ ಬುಲ್ಲೆಟಿನ್ ಉಲ್ಲೇಖಿಸಿದೆ.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಶಿಕ್ಷಣ ವ್ಯವಸ್ಥೆಯಲ್ಲಿನ ಅಕ್ರಮ ಸಂಬಂಧ ಕೇಂದ್ರ ಶಿಕ್ಷಣ ಸಚಿವ ದರ್ಮೇಂದ್ರ ಪ್ರಧಾನ್ ರಾಜೀನಾಮೆ ಸಲ್ಲಿಸಬೇಕೆಂದು ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ಪರ ಕಳೆದ 21ದಿನಗಳಿಂದವರು ಉಪವಾಸ ಸತ್ಯಾಗ್ರಹ ನಿರತರಾಗಿದ್ದರು. ನಿನ್ನೆ ಅವರನ್ನು ದೆಹಲಿ ಪೋಲೀಸರು ಬಲವಂತದಿಂದ ಆಸ್ಪತ್ರೆಗೆ ದಾಖಲಿಸಿದ್ದರು.
ಸುದೀರ್ಘ ದಿನದ ಉಪವಾಸದಿಂದ ವಾಂಗ್ಚೂಕ್ ಅವರ ಆರೋಗ್ಯದಲ್ಲಿ ಏರು ಪೇರಾಗಿದೆ. ಈ ಹಿನ್ನೆಲೆಯಲ್ಲಿ ತಜ್ಞ ವೖದ್ಯರ ನಿಗಾ ಮುಂದುವರಿದಿದೆ.
ವೖದ್ಯರ ತಂಡ ಮತ್ತು ಮೆಡಿಕಲ್ ತಜ್ಞರು ಸತತ ಒತ್ತಾಯಿಸಿದರೂ ವಾಂಗ್ಚೂಕ್ ಅವರು ಉಪವಾಸ ಮುರಿದು ಔಷಧಿ ಸೇವಿಸಲು ನಿರಾಕರಿಸಿದ್ದಾರೆಂದು ವರದಿಯಾಗಿದೆ. ವಾಂಗ್ಚೂಕ್ ಅವರ ಚಿಕಿತ್ಸೆಗೆ ಅವರ ಕುಟುಂಬದವರು ಒಪ್ಪಿಗೆ ಇತ್ತಿರಲಿಲ್ಲವೆಂದೂ ಹೇಳಲಾಗಿದೆ.





