- ಮಲಬಾರಿನ ತೀಯರನ್ನು ಈಳವರಿಂದ ಬೇರ್ಪಡಿಸಿ ತೀಯ ಪ್ರತ್ಯೇಕ ಜಾತಿಯೆಂದು ಪರಿಗಣಿಸಲು ಆಗ್ರಹ
ಕಾಸರಗೋಡು (ಮೇ 8):
ಮಲಬಾರ್ ಪ್ರದೇಶದ ತೀಯಾ ಸಮುದಾಯ ಎದುರಿಸುತ್ತಿರುವ ಸಂಕೀರ್ಣ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಬೇಕೆಂಬ ಬೇಡಿಕೆಯೊಂದಿಗೆ ತೀಯ ಮಹಾಸಭಾ ರಾಜ್ಯ ಘಟಕ ಪದಾಧಿಕಾರಿಗಳು ಮುಖ್ಯಮಂತ್ರಿ ವಿ. ಡಿ. ಸತೀಶನ್ ಸಹಿತ ವಿವಿಧ ಸಚಿವರುಗಳಿಗೆ ಹಾಗೂ ಇಲಾಖಾ ಮುಖ್ಯಸ್ಥರಿಗೆ ಮನವಿ ಸಲ್ಲಿಸಿ, ಬೇಡಿಕೆ ಮಂಡಿಸಿ ಮಾತುಕತೆ ನಡೆಸಿದರು.
ಮಲಬಾರಿನ ತೀಯ ಸಮುದಾಯವನ್ನು ಸರಕಾರದ ಔದ್ಯೋಗಿಕ ದಾಖಲೆಗಳಲ್ಲಿ ಪ್ರತ್ಯೇಕ ಜಾತಿಯಾಗಿ ಗುರುತಿಸಬೇಕು ಮತ್ತು ಖಚಿತವಾದ ಜನಸಂಖ್ಯಾ ಗಣತಿ ದಾಖಲಿಸಬೇಕು, ಶಿಕ್ಷಣ – ಉದ್ಯೋಗ ವಲಯದಲ್ಲಿ ಸಾಮುದಾಯಿಕ ಪ್ರಾತಿನಿಧ್ಯ ನೀಡಬೇಕು ಮೊದಲಾದ ಕೆಲವು ಬೇಡಿಕೆಗಳನ್ನು ತೀಯ ಮಹಾಸಭಾ ಸರಕಾರಕ್ಕೆ ಮಂಡಿಸಿದೆ.

ತೀಯ ಮಹಾಸಭಾ ರಾಜ್ಯಾಧ್ಯಕ್ಷ ಗಣೇಶ್ ಅರಮಂಗಾನಂ, ಕಾರ್ಯದರ್ಶಿ ಪ್ರೇಮಾನಂದನ್ ನಡುತ್ತೋಡಿ, ಕಣ್ಣೂರು ಜಿಲ್ಲಾಧ್ಯಕ್ಷ ಎಂ. ಟಿ. ಪ್ರಕಾಶನ್, ರಾಜ್ಯ ಸಂಘಟನಾ ಸಂಯೋಜಕ ಗಣೇಶ್ ಮಾವಿನಕಟ್ಟೆ, ಸಹ ಸಂಯೋಜಕ ಜಯಪ್ರಕಾಶ್ ಕೋಟಯಿಲ್ ಮೊದಲಾದವರು ಮುಖ್ಯಮಂತ್ರಿಗಳನ್ನು ಭೇಟಿಯಾದ ನಿಯೋಗದಲ್ಲಿದ್ದರು.
ಮಲಬಾರಿನ ತೀಯರು ಮತ್ತು ಕೇರಳದ ಈಳವರು ಒಂದೇ ಸಮುದಾಯ ಅಲ್ಲವೆಂದೂ ಆಚಾರನುಷ್ಟಾನ ಪರಂಪರೆ ಪಾಲನೆಯ ಸಂಸ್ಕೃತಿಯಲ್ಲಿ ವ್ಯತ್ಯಾಸಗಳಿರುವುದರಿಂದ ಮಲಬಾರಿನ ತೀಯ ಸಮುದಾಯವನ್ನು ಪ್ರತ್ಯೇಕ ಜಾತಿಯಾಗಿ ಈಳವರಿಂದ ಬೇರ್ಪಡಿಸಿ ಪರಿಗಣಿಸಬೇಕೆಂಬುದು ಸಂಘಟನೆಯ ಪ್ರಮುಖ ಬೇಡಿಕೆಯಾಗಿದೆ. ಈ ಕುರಿತು ಕಿತಾರ್ಡ್ಸ್ ನಡೆಸಿದ ಸಾಮುದಾಯಿಕ ಅಧ್ಯಯನದಲ್ಲಿ ತೀಯರು ಮತ್ತು ಈಳವರು ಪ್ರತ್ಯೇಕ ಎರಡು ಸಮುದಾಯಗಳೆಂಬ ಉಲ್ಲೇಖ ಇದೆಯೆಂಬುದನ್ನು ಮುಖ್ಯಮಂತ್ರಿ ಹಾಗೂ ವಿವಿಧ ಸಚಿವರ, ಇಲಾಖೆಯ ಗಮನಕ್ಕೆ ತರಲಾಗಿದೆ ಎಂದು ತೀಯ ಮಹಾಸಭಾ ಅಧ್ಯಕ್ಷ ಗಣೇಶ್ ಅರಮಂಗಾನಂ ಮತ್ತು ಸಂಯೋಜಕ ಗಣೇಶ್ ಮಾವಿನಕಟ್ಟೆ ತಿಳಿಸಿದ್ದಾರೆ.




