- ಉತ್ತರ ಭಾರತೀಯ ವಲಸಿಗ ಕಾರ್ಮಿಕರ ನೆಪದಲ್ಲಿ ಬಾಂಗ್ಲಾ ಪ್ರಜೆಗಳ ಅನಧಿಕೃತ ವಾಸ್ತವ್ಯ
ಕಾಸರಗೋಡು ( ಜೂನ್ 09):
ಉತ್ತರ ಭಾರತೀಯ ವಲಸಿಗ ಕಾರ್ಮಿಕರ ನೆಪದಲ್ಲಿ ಕೇರಳದಲ್ಲಿ ಯಾವುದೇ ದಾಖಲೆ ಪತ್ರಗಳಲ್ಲಿದೇ ಅನಧಿಕೃತವಾಗಿ ನೆಲೆಸಿದ್ದ ಬಾಂಗ್ಲಾದೇಶದ ಪ್ರಜೆಯಾದ ಯುವತಿಯನ್ನು ಕಾಸರಗೋಡು ಜಿಲ್ಲೆಯ ಕಾಞಂಗಾಡು ರೖಲು ನಿಲ್ದಾಣದಿಂದ ಬಂಧಿಸಲಾಗಿದೆ.
ಯುವತಿ ಮಲಪ್ಪುರಂ ಜಿಲ್ಲೆಯ ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಅಲ್ಲಿ ಪರಿಚಿತನಾದ ಕಾಞಂಗಾಡಿನ ವ್ಯಕ್ತಿಯೊಬ್ಬ ದುಪ್ಪಟ್ಟು ವೇತನದ ಆಮಿಷ ಒಡ್ಡಿ, ಕಾಞಂಗಾಡಿನಲ್ಲಿ ಉದ್ಯೋಗ ಕೊಡಿಸುತ್ತೇನೆಂದು ಭರವಸೆ ನೀಡಿರುವ ಹಿನ್ನೆಲೆಯಲ್ಲಿ ತಾನು ಕಾಞಂಗಾಡಿಗೆ ಬಂದಿರುವುದಾಗಿ ಯುವತಿ ವಿಚಾರಣೆ ವೇಳೆ ತಿಳಿಸಿದ್ದಾಳೆ.
ಬಾಂಗ್ಲಾದೇಶದಿಂದ ಕಲ್ಕತ್ತಾ ತಲುಪಿದ ಯುವತಿ ಅಲ್ಲಿಂದ ನಕಲಿ ಆಧಾರ್ ಕಾರ್ಡು ಮತ್ತು ಪಾನ್ ಕಾರ್ಡು ಮಾಡಿಸಿಕೊಂಡು ಬಳಿಕ ಕೇರಳಕ್ಕಾಗಮಿಸಿದ್ದಳು. ಸುಮಾರು 35ರ ಅಂದಾಜಿನ ಯುವತಿಗೆ ಊರಿನಲ್ಲಿ ತಾಯಿ ಮತ್ತು ಇಬ್ಬರು ಮಕ್ಕಳಿದ್ದಾರೆನ್ನಲಾಗಿದೆ. ಕಳೆದ ಎರಡು ವರ್ಷಗಳಿಂದ ಈಕೆ ಮಲಪ್ಪುರದ ಹೋಟೆಲ್ ನೌಕರಿಯಲ್ಲಿದ್ದಳು.
ಇಂದು ಬೆಳಿಗ್ಗೆ ಮಲಬಾರ್ ಎಕ್ಸ್ಪ್ರೆಸ್ ರೖಲು ಮೂಲಕ ಕಾಞಂಗಾಡು ಬಂದಿಳಿದ ಈಕೆಯನ್ನು ಶಂಕೆಯ ಮೇರೆಗೆ ರೖಲು ನಿಲ್ದಾಣದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರು ವಿಚಾರಣೆ ನಡೆಸಿದಾಗ ಈಕೆ ಬಾಂಗ್ಲಾ ದೇಶದ ಪ್ರಜೆ ಎಂದರಿತು ಬಂಧನ ನಡೆಯಿತು. ಬಂಧಿತಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಈ ಹಿಂದೆಯೂ ಕಾಞಂಗಾಡಿನಿಂದ ಬಾಂಗ್ಲಾ ಪ್ರಜೆಗಳನ್ನು ಬಂಧಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಉತ್ತರ ಭಾರತೀಯ ಕಾರ್ಮಿಕರ ನೆಪದಲ್ಲಿ ಕೇರಳದಲ್ಲಿ ಬಾಂಗ್ಲಾ ಪ್ರಜೆಗಳು ನೆಲೆಸಿದ್ದಾರೆಯೇ ಎಂದು ತನಿಖೆ ನಡೆಸಲಾಗುವುದೆಂದು ಪೊಲೀಸ್ ಮೂಲಗಳು ತಿಳಿಸಿವೆ.




