- ಕಾಸರಗೋಡಿನಲ್ಲಿ ಬಿಜೆಪಿ ಕೇರಳ ಸೆಲ್ ಕೋರ್ಡಿನೇಟರ್ ವಿ. ಕೆ. ಸಜೀವನ್ ಆರೋಪ
ಕಾಸರಗೋಡು(ಜೂನ್ 8):
ಆಡಳಿತಕ್ಕೇರಿ ಒಂದು ತಿಂಗಳಾಗುವುದರ ಮೊದಲೇ ಬಂಧು ನೆಂಟರನ್ನು ನೇಮಕಾತಿ ನಡೆಸುವ ಮೂಲಕ ವಿವಾದಕ್ಕೊಳಗಾದ ಯುಡಿಎಫ್ ಸರಕಾರ ತನ್ನ ಪ್ರವೃತ್ತಿಯಲ್ಲಿ ಎಡರಂಗ ಸರಕಾರವನ್ನೇ ಅನುಸರಿಸಿದೆ ಎಂಬುದನ್ನು ಪ್ರಾರಂಭದಲ್ಲೇ ತೋರಿಸಿಕೊಟ್ಟಿದೆ ಎಂದು ಬಿಜೆಪಿ ಕೇರಳ ರಾಜ್ಯ ಬಿಜೆಪಿ ಸೆಲ್ ಕೋರ್ಡಿನೇಟರ್ ನ್ಯಾಯವಾದಿ ವಿ. ಕೆ. ಸಜೀವನ್ ಅಭಿಪ್ರಾಯಪಟ್ಟರು.
ಎಡರಂಗ ಸರಕಾರದ ಆಡಳಿತಾವಧಿಯಲ್ಲಿ ಸಚಿವರೊಬ್ಬರು ತನ್ನ ಸೊಸೆಯನ್ನು ಸರಕಾರಿ ಸಿಬಂದಿಯಾಗಿ ನೇಮಿಸಿಕೊಂಡರೆ ಈಗ ಒಬ್ಬರು ಸಚಿವ ಅಳಿಯನನ್ನೇ ಅಡಿಷನಲ್ ಪ್ರೖವೇಟ್ ಸೆಕ್ರೇಟರಿ ಮಾಡಿಕೊಂಡಿದ್ದಾರೆ. ಈ ಮೂಲಕ ಸರಕಾರಕ್ಕೆ ನಾಚಿಕೆಗೇಡು ಸೃಷ್ಟಿಸಿದ್ದಾರೆಂದು ಸಜೀವನ್ ಉಲ್ಲೇಖಿಸಿದರು.
ಕೇರಳದಲ್ಲಿ ನೆಂಟರ ನೇಮಕ, ಸ್ವಜನ ಪಕ್ಷಪಾತ ಕೊನೆಗೊಳಿಸಬೇಕೆಂದು ಭಾಷಣ ಬಿಗಿಯುವ ಎಡರಂಗ ಮತ್ತು ಯೂಡಿಎಫ್ ಆಡಳಿತಕ್ಕೇರಿದರೆ ಒಂದೇ ನಾಣ್ಯದ ಎರಡು ಮುಖಗಳಾಗಿ ಬದಲಾಗುತ್ತದೆಯಲ್ಲದೇ ವ್ಯತ್ಯಾಸವೇನಿಲ್ಲ ಎಂದವರು ದೂರಿದರು. ಸರಕಾರಿ ವ್ಯವಸ್ಥೆಗಳನ್ನು ಪಕ್ಷದ ಹಿತಾಸಕ್ತಿ ಮತ್ತು ನೆಂಟರಾಸಕ್ತಿಗೆ ಬಳಸಿಕೊಳ್ಳುವ ಇಂಥಾ ಸ್ವಾರ್ಥ ಹಿತಾಸಕ್ತಿಗಳಿಂದ ಪ್ರಜಾಪ್ರಭುತ್ವವೇ ದುರ್ಬಲವಾಗುತ್ತದೆ. ಎಲ್. ಡಿ. ಎಫ್ ಮತ್ತು ಯುಡಿಎಫ್ ಈ ವಿಷಯದಲ್ಲಿ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡುತ್ತಿದ್ದರೂ ಪ್ರವೃತ್ತಿಯಲ್ಲಿ ಉಭಯ ಪಕ್ಷೀಯರೂ ಒಂದೇ ಥರ. ಅಧಿಕಾರ ದುರ್ವಿನಿಯೋಗಿಸಿ ನೆಂಟರನ್ನು ಸರಕಾರಿ ಹುದ್ದೆಗೆ ನೇಮಕ ಮಾಡುವುದು ಕೇರಳದ ಜನರಿಗೆ ಮಾಡುವ ವಂಚನೆ ಮತ್ತು ಸವಾಲು ಎಂದು ವಿ. ಕೆ. ಸಜೀವನ್ ಹೇಳಿದರು.




