ಬೆಂಗಳೂರು: ಕರ್ನಾಟಕದ ಯೋಜನಾ ಮತ್ತು ಸಾಂಖಿಕ ಸಚಿವ, ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಹೊಂದಿದ್ದ ಡಿ. ಸುಧಾಕರ್ (62) ಇಂದು ಬೆಳಗ್ಗಿನ ಜಾವ ನಿಧನರಾದರು. ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಅವರು ಬಳಲುತ್ತಿದ್ದರು. ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಅವರು ಬೆಳಗ್ಗೆ ನಿಧನರಾದರು.
ಅವರು ಹಿರಿಯೂರು ಕ್ಷೇತ್ರದ ಶಾಸಕರಾಗಿದ್ದರು.
ಮಂಡಿ ಚಿಪ್ಪು ಚಿಕಿತ್ಸೆಗಾಗಿ ಯಶವಂತಪುರದ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ಈ ವೇಳೆ ಶ್ವಾಸಕೋಶದ ಸೋಂಕು ತಗುಲಿತ್ತು. ಬಳಿಕ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ತಜ್ಞ ವೖದ್ಯರಿಂದ ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗಲಿಲ್ಲ.
ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನಗಲಿದ್ದಾರೆ. 1961 ಮಾರ್ಚ್ 28 ರಂದು ಜನಿಸಿದ್ದ ಇವರು 2004ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿದ್ದರು. 2008 ರಲ್ಲಿ ಪಕ್ಷ ಟಿಕೆಟ್ ನಿರಾಕರಿಸಿದಾಗ ಪಕ್ಷೇತರನಾಗಿ ಸ್ಪರ್ಧಿಸಿ ಜಯಿಸಿದ್ದರು. ಬಿ. ಎಸ್. ಯಡಿಯೂರಪ್ಪರನ್ನು ಬೆಂಬಲಿಸಿ ಅವರ ಸರಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದರು..
2013 ರಲ್ಲಿ ಕಾಂಗ್ರೆಸ್ ನಿಂದ ಮತ್ತೆ ಶಾಸಕರಾದರೂ, 2018 ರಲ್ಲಿ ಬಿಜೆಪಿ ವಿರುದ್ಧ ಸೋಲುಂಡಿದ್ದರು. 2023 ರಲ್ಲಿ ಕಾಂಗ್ರೆಸ್ ನಿಂದ ಪುನರಾಯ್ಕೆಯಾಗಿ ಸಚೀವರಾದರು. ಜನರೊಂದಿಗೆ ಬೆರೆತು ಬಡವರ ಬಂಧು ಎಂದೇ ಖ್ಯಾತರಾಗಿದ್ದ ಇವರು ಸಹಕಾರ ಕ್ಷೇತ್ರದ ಮೂಲಕ ರಾಜಕೀಯದಲ್ಲಿ ಬೆಳೆದವರು.
ಇವರ ಅಗಲುವಿಕೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ.








