- ಸಮಗ್ರ ಪಕ್ಷಿ ವಿವರಣೆಗಳ ಅಪೂರ್ವ ಪುಸ್ತಕದ ಬಿಡುಗಡೆಗೆ ಸರಕಾರವೇಕೆ ಸಹಾಯ ಹಸ್ತ ನೀಡಬಾರದು?
ಕುಂಬಳೆ: ಐದನೇ ತರಗತಿಯಿಂದ ಏಳನೇ ತರಗತಿ ತನಕ ಕೇವಲ ಮೂರು ವರ್ಷದ ಶಾಲಾಧ್ಯಯನದ ನಡುವೆ ಬೇಳ ಧರ್ಬೆತ್ತಡ್ಕದ ಪುಟಾಣಿ ಪಕ್ಷಿ ನಿರೀಕ್ಷಕಿ ಕು. ನೆಹಾರಿಕಾ ಭರ್ತಿ 180ಪಕ್ಷಿಗಳನ್ನು ಸ್ವತಂತ್ರವಾಗಿ ಗುರುತಿಸಿದ್ದಾಳೆ. ಇಷ್ಟೇ ಅಲ್ಲ ಇವಿಷ್ಟನ್ನೂ ಅದರ ಸಮಗ್ರ ವಿವರಣೆಗಳೊಂದಿಗೆ ವಿಶ್ಲೇಷಿಸಿ ಅಪರೂಪದ ಪಕ್ಷಿ ಜಾಲದ ಕೃತಿಯೊಂದನ್ನು ರೂಪಿಸಿದ್ದಾಳೆ. ಬರ್ಡ್ಸ್ ದ ಹಿಡೆನ್ ವರ್ಲ್ಡ್ ಇನ್ ಅವರ್ ಕ್ಯಾಂಪಸ್ ( Birds, the Hidden World In Our Campus) ಎಂದು ಹೆಸರಿಸಲಾದ ಏಳನೇ ತರಗತಿ ವಿದ್ಯಾರ್ಥಿನಿಯ ಈ ಕೃತಿ ಸಾಂಕೇತಿಕವಾಗಿ ಪ್ರಕಟಗೊಂಡಿದೆ. ಕೇರಳ ರಾಜ್ಯದ ಗಮನ ಸೆಳೆದಿದೆ.
ಆದರೆ ವ್ಯವಸ್ಥಿತವಾಗಿ, ಔದ್ಯೋಗಿಕವಾಗಿ ಅಪರೂಪದ ಅಧ್ಯಯನಶೀಲ ಪರಿಸರದ ಕೃತಿಯೊಂದು ಅಚ್ಚುಗೊಂಡು ಬಿಡುಗಡೆಯ ಭಾಗ್ಯ ಕಾಣಲು ಬಾಲಕಿ ನೆಹಾರಿಕಾ ತವಕದ ಕಂಗಳಿಂದ ಕಾಯುತ್ತಿದ್ದಾಳೆ. ಇದು ಸರಕಾರಿ ಕೃಪೆಯಿಂದಲೇ ನಡೆದರೆ ಧನ್ಯ ಎಂಬ ನಿರೀಕ್ಷೆಯಲ್ಲಿದ್ದಾಳೆ.


- ಯಾರು ಈ ನೆಹಾರಿಕಾ ಎಂಬ ಪುಟಾಣಿ ಪಕ್ಷಿ ಶೋಧಕಿ?
ಮಳೆ, ಬಿಸಿಲು, ಬೇಸಗೆ, ಚಳಿ ಎಂಬ ಮಾತೇ ಇಲ್ಲದೇ ಇತರ ಮಕ್ಕಳೆಲ್ಲ ಮೊಬೖಲು ಹಿಡಿದು ವೀಡಿಯೋ ಗೇಮ್ ಗಳಲ್ಲಿ ರಜಾ ಅವಧಿ ಕಳೆದರೆ ಈಕೆ ಮಾತ್ರ ಹೆಗಲಿಗೆ ಕ್ಯಾಮರಾ ಏರಿಸಿ ಗುಡ್ಡೆ, ಬಯಲು ನಡೆಯುತ್ತಾಳೆ. ಮರದ ರೆಂಬೆಗಳೆಡೆ ಪಕ್ಷಿಯನ್ನು ಹುಡುಕುತ್ತಾಳೆ. ಚಂದದ ಫೋಟೋ ಕ್ಲಿಕ್ಕಿಸಿ ಅದರ ಸಮಗ್ರ ಮಾಹಿತಿ ದಾಖಲಿಸುತ್ತಾಳೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಬೇಳ ಪರಿಸರದ ಗ್ರಾಮಗಳನ್ನಿಡೀ ಸುತ್ತಾಡಿರುವ ಈಕೆ ಧರ್ಬೆತ್ತಡ್ಕದ ಕೃಷಿಕ ಗೋಪಾಲಕೃಷ್ಣ, ಚಾಯ್ಯೋತ್ ಹಯರ್ ಸೆಕಂಡರಿ ಶಾಲಾಧ್ಯಾಪಿಕೆ ಆಶಾಕಿರಣರ ಪುತ್ರಿ.
ಬೇಳ. ಸಂತ ಬಾರ್ತಲೋಮಯ ಹಿರಿಯ ಬುನಾದಿ ಶಾಲೆಯಲ್ಲಿ 4ನೇ ತರಗತಿ ಕಲಿಯುವಾಗ ಪಠ್ಯದಲ್ಲಿ ಪಕ್ಷಿ ವೀಕ್ಷಣೆಯ ಪಾಠವಿತ್ತು. ಈ ಪಾಠ ಬಾಲಕಿ ನೆಹಾರಿಕಾಳ ಮೇಲೆ ಪ್ರಭಾವಿಸಿ ಆಸಕ್ತಿ ಮೂಡಿಸಿತು. ಕ್ಲಾಸ್ ಟೀಚರ್ ಬನಶಂಕರಿ ಪ್ರೋತ್ಸಾಹಿಸಿ ಬೆನ್ತಟ್ಟಿದರು. ಜತೆಗೆ ಪಕ್ಷಿಪ್ರೇಮಿ ರಾಜು ಕಿದೂರು ಶಾಲೆಯಲ್ಲಿ ನಡೆಸಿದ ಪರಿಸರ ಸಂಬಂಧೀ ಕ್ಲಾಸ್ ಬಾಲಕಿಗೆ ಪ್ರಚೋದನೆ, ಪ್ರೇರಣೆಯಾಯಿತು. ಸಹಜವಾಗಿಯೇ ಬಾಲಕಿ ರಾಜು ಕಿದೂರು ಶಿಷ್ಯೆಯಾದಳು. ಬಾನಾಡಿಗಳ ಲೋಕವನ್ನರಸಿ ನಡೆದೇ ಬಿಟ್ಟಳು…
ಮಗಳ ಆಸಕ್ತಿ ಮತ್ತು ಉತ್ಸಾಹ ಕಂಡು ಹೆತ್ತವರು ಅವಳಿಗೊಂದು ಎಸ್ಎಲ್ಆರ್ ಕ್ಯಾಮರಾ ಕೊಡಿಸಿದ್ದಾರೆ. ಐದರಿಂದ ಏಳನೇ ತರಗತಿ ತನಕದ ಮೂರು ವರ್ಷದಲ್ಲಿ ಆರು ಎಕ್ರೆಯಷ್ಟಿರುವ ಶಾಲಾ ಕೌಪೌಂಡ್ ಪರಿಸರದಿಂದಲೇ ಈಕೆ 84ಪಕ್ಷಿ ಪ್ರಬೇಧಗಳನ್ನು ಗುರುತಿಸಿದ್ದಾಳೆ. ಅಲ್ಲದೇ ತನ್ನೂರ ಸುತ್ತಲೂ ರಾಜು ಕಿದೂರು ಜತೆ ಪಕ್ಷಿ ವೀಕ್ಷಣೆ ಮಾಡುತ್ತಾ ಅಲೆದಿರುವ ಈಕೆ ಗಡಿನಾಡು ಕಾಸರಗೋಡಿನ ಪಕ್ಷಿ ವೖವಿಧ್ಯಗಳನ್ನು ಅಚ್ಚು ಕಟ್ಟಾಗಿ ದಾಖಲಿಸಿದ್ದಾಳೆ. ಅವುಗಳ ಪ್ರಾದೇಶಿಕ ಹೆಸರು, ವೖಜ್ಞಾನಿಕ ಹೆಸರು, ವೖಶಿಷ್ಟ್ಯ ಇತ್ಯಾದಿಗಳನ್ನೆಲ್ಲಾ ಟಿಪ್ಪಣಿ ಮಾಡಿ 180 ಪಕ್ಷಿ ಮಾಹಿತಿಗಳ ಕಾಫಿ ಟೇಬಲ್ ಬುಕ್ ಸಿದ್ಧ ಪಡಿಸಿದ್ದಾಳೆ. ಇದು ಬಹುವರ್ಣದಲ್ಲಿ ಅಚ್ಚಾಗಿ ಬಂದರೆ ಯು. ಪಿ ಶಾಲಾ ವಿದ್ಯಾರ್ಥಿಗಳಿಗೆಲ್ಲಾ ಉಪಯೋಗಿ ಕೖಪಿಡಿ. ಶಾಲಾ ಪಠ್ಯಕ್ಕೂ ಉಪಯೋಗವಾಗುವ ಅಪೂರ್ವ ಆಕರ.

ಹಿರಿಯ ಪ್ರಾಥಮಿಕ ತರಗತಿಯ ವಿದ್ಯಾರ್ಥಿನಿಯೊಬ್ಬಳು ಪಠ್ಯದಿಂದಲೇ ಪ್ರೇರಣೆ ಪಡೆದು ಪಕ್ಷಿ ನಿರೀಕ್ಷಕಿಯಾದದ್ದು ಕಾಸರಗೋಡಿನಲ್ಲಿ ಇದೇ ಮೊದಲು. ಆಕೆ 180ಪಕ್ಷಿ ಪ್ರಬೇಧ ಗುರುತಿಸಿ ಕೃತಿ ರಚಿಸಿದ್ದು ರಾಜ್ಯದಲ್ಲೇ ಮೊದಲು! ತಾನು ಕಲಿತ ಬೇಳ ಶಾಲೆಯಿಂದ ಏಳನೇ ತರಗತಿ ಮುಗಿಸಿ ಮುನ್ನಡೆಯುವ ಮುನ್ನ ಈ ಕೃತಿ ನಾಡಿಗೆ ಸಮರ್ಪಣೆ ಆಗಬೇಕೆಂಬುದು ಆಕೆಯ ಆಸೆಯಾಗಿತ್ತು. ಇದರಂತೆ ಪ್ರಕಟಣೆ ಬಯಸಿ ಪ. ಜಾತಿ/ಪ. ವರ್ಗ ಇಲಾಖೆ ಕದ ತಟ್ಟಿದ್ದಳು. ಆದರೆ ಔದ್ಯೋಗಿಕವಾಗಿ ಸರಕಾರಕ್ಕೆ ಮನವಿ ತಲುಪಿರಲಿಲ್ಲ. ಈಗ ಸರಕಾರವೇ ಬದಲಾಗಿದೆ. ಗಡಿನಾಡಿನ ಪುಟಾಣಿ ನೆಹಾರಿಕಾಳ ಪಕ್ಷಿ ಶೋಧನೆಯ ಕೃತಿಯನ್ನು ರಾಜ್ಯ ಸರಕಾರವೇ ಏಕೆ ಬಿಡುಗಡೆ ಮಾಡಬಾರದು?
ದಲಿತ ವಿದ್ಯಾರ್ಥಿನಿಯೊಬ್ಬಳ ಶೖಕ್ಷಣಿಕ ಸಾಧನೆಯ ಸ್ಪೂರ್ತಿಗಾಥೆಯನ್ನು ಬೆಂಬಲಿಸಿ ಕೖತಾಂಗು ನೀಡಬಾರದು??
ಹೊಸ ಸರಕಾರ, ಹೊಸ ಸಚಿವರು, ಹೊಸ ಜಿಲ್ಲಾಧಿಕಾರಿಗಳು ಇತ್ತ ಗಮನಿಸಬೇಕು. ಅವರು ಗಮನಿಸುವಂತೆ ನಾಡಿನ ಸಾಮಾಜಿಕ ಕಾಳಜಿಯ ಪ್ರತಿನಿಧಿಗಳು ಹಸ್ತಕ್ಷೇಪ ನಡೆಸಬೇಕು. ಗಡಿನಾಡ ಬಾಲಕಿಯ ಸಾಧನಾ ಪಯಣಕ್ಕೆ ಪ್ರೋತ್ಸಾಹದ ದಾರಿ ದೀಪ ಒದಗಿಸಬೇಕು.









