ಎತ್ತ ನೋಡಿದರೂ ಸುದ್ದಿಜ್ಞಾನ ಬಿತ್ತುವ ಕಾಲದಲ್ಲಿ ಒಂದರ್ಧ ತಾಸು ಸುಮ್ಮನಿದ್ದು ಯೋಚಿಸಿದರೆ ಅದು ಅದ್ಭುತಗಳನ್ನೇ ಸೃಷ್ಟಿಸಬಹುದು!

by Narayan Chambaltimar
  • ನುಡಿಸಿರಿ-ಅಂಕಣ
    ಕೃತಿಕಾ ಯನ್ ಆಳ್ವ

ಲೋಕವು ಈಗ ಅತ್ಯಂತ ವೇಗದಲ್ಲಿ ಚಲಿಸುತ್ತಿದೆ. ಬೆರಳಂಚಿನಲ್ಲಿ ಚಾಟ್ ಜಿ ಪಿ ಟಿ, ಕೆಲವು ಬಟನ್ಗಳನ್ನು ಒತ್ತಿದರೆ ನಿಮಿಷಗಳಲ್ಲಿ ಮನೆ ಬಂದು ಸೇರುವ ಸಾಮಗ್ರಿ, ನಿಮಿಷಕ್ಕೊಂದು ಬಸ್ ಅಥವಾ ಮೆಟ್ರೋ, ಹೀಗೆ ಸುಮಾರು. ಎಣಿಸಲು ಹೋದರೆ ತುಂಬಾ ಸಮಯ ಬೇಕಾಗಬಹುದು. ಲೋಕವು ಉತ್ಪಾದನೆಯ ಹಿಂದೆ ಓಡುತ್ತಿರುವಾಗ, ನನ್ನ ಈ ಪಟ್ಟಿ ಓದಲು ಯಾರಿಗೆ ತಾನೇ ಸಮಯವಿರುತ್ತದೆ. ನಾನು ಬರೆಯುತ್ತಿರುವ ಈ ಕೃತಿಯನ್ನು ಕೂಡಾ ಎ. ಐ. ಯು ಕ್ಷಣ ಮಾತ್ರದಲ್ಲಿ ಬರೆದು ನಿಮ್ಮ ಕಣ್ಣ ಮುಂದಿಟ್ಟು, ಇನ್ನೇನು ಸಹಾಯ ಬೇಕು ಎಂದು ಕೇಳಬಲ್ಲುದು!

ಇಂತಹ ಒಂದು ಈ ಸಮಯದಲ್ಲಿ, ನನಗೆ ನೆನಪಾಗುತ್ತಿರುವುದು, ಮತ್ತು ನಾನು ನಿಮಗೆ ನೆನಪಿಸಲು ಬಯಸುವುದು, ‘ದಿ ಆರ್ಟ್ ಆಫ್ ಡೂಯಿಂಗ್ ನಥಿಂಗ್’ ಎಂಬ ಒಂದು ಸುಂದರ ಪರಿಕಲ್ಪನೆಯ ಬಗ್ಗೆ. ಈ ಪರಿಕಲ್ಪನೆಯ ಅರ್ಥ: ಏನೂ ಮಾಡದೇ ಇರುವ ಕಲೆ ಎಂದು. ಹಿಂದಿನ ಕಾಲದಲ್ಲಿ, ಏನೂ ಮಾಡದೇ ಇರುವುದು ಅಂದರೆ, ಉದಾಸೀನ ಮತ್ತು ಕೆಲಸಕ್ಕೆ ಬಾರದೇ ಇರುವ ಲಕ್ಷಣವಾಗಿತ್ತು. ಆದರೆ ಈಗ ಅದೊಂದು ಅಗತ್ಯದ ಕಲೆ.

ಒಂದು ನಿಮಿಷ ಕುಳಿತಾಗ ನಾವು ಏನೋ ನಮ್ಮ ಅತ್ಯಮೂಲ್ಯವಾದ ಸಮಯವನ್ನು ಸುಮ್ಮನೆ ಕುಳಿತು ವ್ಯರ್ಥಗೊಳಿಸುತ್ತಿದ್ದೇವೆ ಎನ್ನುವಂತೆ ಭಾಸವಾಗುವ ಕಾಲ ಇದು. ಯಾಕೆ ಹಾಗೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ನಾವು ನಮ್ಮ ಸುತ್ತ-ಮುತ್ತ ನೋಡುವುದು ಅಗತ್ಯ. ನಮ್ಮ ಫೋನ್ ನಲ್ಲಿ ಮೊದಲು ಇಪ್ಪತ್ತು ನಿಮಿಷದ ವಿಡಿಯೋ ನಾವು ನೋಡುತ್ತಿದ್ದರೆ, ಈಗ ಅರುವತ್ತು ಸೆಕೆಂಡುಗಳಿಗಿಂತ ವಿಡಿಯೋ ಸ್ವಲ್ಪ ಹೆಚ್ಚಾದರೂ, ನಮ್ಮಿಂದ ಪೂರ್ತಿ ನೋಡಲಾಗುವುದಿಲ್ಲ. ಅದು ಬೋರಿಂಗ್ ಅನಿಸಿ ತೋರು ಬೆರಳಲ್ಲಿ ಮೇಲಕ್ಕೆ ಸ್ವೈಪ್ ಮಾಡಿಬಿಟ್ಟರೆ ಅಂತಹದೇ ಎಷ್ಟೋ ವಿಡಿಯೋಗಳು, ನಮ್ಮ ಕಣ್ಣ ಮುಂದೆ ಬಂದು ಬಿಡುತ್ತದೆ. ಮೊದಲು ದೂರದರ್ಶನದಲ್ಲಿ ಬರುತ್ತಿದ್ದ ಎಂಟು ಗಂಟೆ ರಾತ್ರೆಗೆ ಪ್ರಸಾರವಾಗುತ್ತಿದ್ದ ಸುದ್ದಿಗೆ ಕಾಯುತ್ತಿದ್ದರೆ, ಈಗ 200 ಚಾನಲ್ಗಳಲ್ಲಿ ಒಬ್ಬರಿಗಿಂತ ಒಬ್ಬರು ವೇಗವಾಗಿ ಮಾತನಾಡುವ 500 ಜನ ಸುದ್ದಿ ವಾಚಕರು ನಮ್ಮ ಮುಂದೆ ಬರುತ್ತಾರೆ. ಹಿಂದೆ ರೇಡಿಯೋದಲ್ಲಿ ಬ್ಯಾಂಡ್ ತಿರುಗಿಸಿದಾಗ ಬರುತ್ತಿದ್ದ ಹಾಡುಗಳು, ಈಗ ನಮ್ಮ ಕೈಯಲ್ಲೇ ಒಂದು ಸಣ್ಣ ಪೆಟ್ಟಿಗೆಯಲ್ಲಿ ದಿನವಿಡೀ ಲಭ್ಯವಿರುವಂತಾಗಿದೆ.

ಹೀಗಾದಾಗ ತೊಂದರೆ ಏನು? ಸರಳವಾದ ಭಾಷೆಯಲ್ಲಿ ಹೇಳುವುದಾದರೆ ‘ಇಂಫಾರ್ಮೇಶನ್ ಓವರ್ ಲೋಡ್’ ಆಗುತ್ತದೆ. ನಿರಂತರವಾಗಿ ನಮ್ಮ ಮೆದುಳಿಗೆ ನಾವು ಒಂದಲ್ಲ ಒಂದು ವಿಷಯವನ್ನು ತಿನಿಸುತ್ತ ಇರುತ್ತೇವೆ. ಹಾಗಾಗಿ ನಮ್ಮ ಮೆದುಳಿಗೆ ಅದರ ಅಭ್ಯಾಸವಾಗಿ ಬಿಡುತ್ತದೆ. ಅದು ನಮ್ಮನ್ನು ಸುಮ್ಮನೆ ಕುಳಿತುಕೊಳ್ಳಲು ಬಿಡುವುದೇ ಇಲ್ಲ. ಐದು ನಿಮಿಷ ಸಹ ಸುಮ್ಮನೆ ಕುಳಿತುಕೊಳ್ಳಲು ಅಸಾಧ್ಯ ಎನಿಸಿಬಿಡುತ್ತದೆ. ಹೇತು ಹಾಕಲು ಹೋದಾಗ ಸಹ ಕೈಯಲ್ಲಿ ಮೊಬಾಯಿಲ್ ಫೋನ್ ಹಿಡಿಕೊಂಡು ಹೋಗುವವರೇ ನಾವೆಲ್ಲ. ಆರ್ಕಿಮಿಡೀಸ್ ಈ ಯುಗದಲ್ಲಿ ಹುಟ್ಟಿದ್ದರೆ ಬಹುಶಃ ಅವನು “ಯುರೇಕಾ” ಎಂದು ಕೂಗುವ ಬದಲು, ಫೋನ್ ನಲ್ಲಿ ವಿಡಿಯೋ ನೋಡುತ್ತಾ ಕುಳಿತು ಬಿಡುತ್ತಿದ್ದ.

ಹಾಗಾಗಿ “ಸುಮ್ಮನೆ ಕುಳಿತುಕೊಳ್ಳುವ ಕಲೆಯು” ಪ್ರಮುಖವಾಗುವುದು. ಸುಮ್ಮನೆ ಏನೂ ಮಾಡದೆ, ಯಾವುದೇ ರೀತಿಯ ಪ್ರಚೋದನೆ ಇಲ್ಲದೆ, ಸುಮ್ಮನೆ ಕುಳಿತುಕೊಂಡಾಗ ಮೊದಮೊದಲು ತುಂಬಾ ಕಿರಿ ಕಿರಿ ಆಗುವುದು ಸಹಜ. ಒಂದು ನಿಮಿಷ ಕೂಡ ಸುಮ್ಮನೆ ಕುಳಿತುಕೊಳ್ಳಲು ಆಗದೆ ಇರಬಹುದು. ಹತ್ತು ಸಲ ಕೈಯು ಮೊಬೈಲ್ ಫೋನ್ ಎತ್ತಲು ಹೋಗಬಹುದು. ನೂರು ಬಾರಿ, ಒಂದು ಹಾಡಾದರೂ ಹಾಕಿ ಕೇಳುತ್ತ ಕುಳಿತುಕೊಳ್ಳೋಣ ಎಂದು ಅನಿಸಬಹುದು. ಸರಿ, ಒಂದು ಪುಸ್ತಕವನ್ನಾದರೂ ಓದಿ ಬಿಡುವ ಎಂದನಿಸಬಹುದು. ಏನನ್ನೂ ಮಾಡದೆ, ಸುಮ್ಮನೆ ಕುಳಿತು, ನಮ್ಮ ತಲೆಯಲ್ಲಿನ ಆಲೋಚನೆಗಳೊಂದಿಗೆ ಸುಮ್ಮನೆ ಕುಳಿತುಕೊಳ್ಳುವುದು ಎಂದರೆ ಅದು ಸುಲಭದ ಕೆಲಸವಲ್ಲ ಬಿಡಿ. ಆದರೆ, ಅದು ನಮ್ಮ ಮೆದುಳಿಗೆ ಅಗತ್ಯ. ದಿನದ ಅಂತ್ಯದಲ್ಲಿ ಮೆದುಳಿಗೂ ಸ್ವಲ್ಪ ವಿಶ್ರಾಂತಿ ಬೇಡವೇ?

ಅದರಲ್ಲೂ ಈಗಿನ ಕಾಲದಲ್ಲಿ, ಇಷ್ಟೊಂದು ವಿಷಯಗಳು, ನಮ್ಮ ಬೆರಳಂಚಿನಲ್ಲಿ ಸಿಗುವಾಗ ಸುಮ್ಮನೆ ಕುಳಿತುಕೊಳ್ಳುವುದು ವ್ಯರ್ಥ ಅನಿಸಿಬಿಡುವುದು ಸಹಜ. ಕೆಲವು ವರ್ಷಗಳ ಹಿಂದೆ ನಮಗೆ ವಿಷಯಗಳನ್ನು ಅರಿಯುವ ಅಗತ್ಯ ಇತ್ತು. ಲೋಕ ಜ್ಞಾನ ಇದ್ದವ ಮುಂದೆ ಬರುತ್ತಿದ್ದ, ಮೇಲಕ್ಕೆ ಏರುತ್ತಿದ್ದ. ಆದರೆ ಈಗ ಕಾಲ ಬದಲಾಗಿದೆಯಲ್ಲ? ವಿಷಯ, ವಿಚಾರಗಳು ಎಲ್ಲರಿಗೂ ಸುಲಭವಾಗಿ ಸಿಗುತ್ತದೆ. ಸಿಗದೇ ಇರುವುದು ಸಮಯವೇ. ನಿರಂತರವಾಗಿ ತಲೆಗೆ ವಿಷಯವನ್ನು ನಾವು ತುರುಕುತ್ತಲೇ ಇರುತ್ತೇವೆ. ಅದು ವಿಡಿಯೋ ಮೂಲಕ ಆಗಿರಬಹುದು, ಪುಸ್ತಕಗಳ ಮೂಲಕ ಆಗಿರಬಹುದು, ಸುದ್ದಿ-ಸಮಾಚಾರಗಳ ಮೂಲಕ ಆಗಿರಬಹುದು, ಇನ್ನೊಬ್ಬರ ಜೊತೆಗಿನ ಸಂಭಾಷಣೆಯಿಂದಾಗಿರಬಹುದು, ಅಥವಾ ದಾರಿಯಲ್ಲಿ ಹೋಗುವಾಗ ಪದೇ ಪದೇ ಕಣ್ಣಿಗೆ ಬೀಳುವ ಜಾಹೀರಾತುಗಳ ಮೂಲಕ ಆಗಿರಬಹುದು.ಕೆಲವು ನಮಗೆ ಸಾಮಾನುಗಳನ್ನು ಮಾರಿದರೆ, ಇನ್ನು ಕೆಲವು ನಮಗೆ ವಿಚಾರಗಳನ್ನು ಮಾರುತ್ತವೆ.


ಇದರಿಂದ ಪೂರ್ತಿ ದೂರ ಹೋಗಲು ನಮ್ಮಿಂದ ಅಸಾಧ್ಯ. ಅದು ಅನಗತ್ಯ ಕೂಡ. ಮಲಯಾಳಂ ನಲ್ಲಿ “ನಾಡ್ ಓಡುಂಬೊಳ್ ನಡುವೆ ಓಡಣಮ್” ಅನ್ನುವ ಒಂದು ಮಾತಿದೆ. ಕಾಲಕ್ಕೆ ತಕ್ಕಂತೆ ಬದಲಾಗುವುದು ಅಗತ್ಯ ಎಂದು ಈ ಮಾತು ಸಾರುತ್ತದೆ. ನಾನು ಯಾವುದೇ ವಿಷಯ ಕೇಳುವುದಿಲ್ಲ, ನೋಡುವುದಿಲ್ಲ, ಹೇಳುವುದಿಲ್ಲ ಎಂದು ಕೂತರೆ, ಕಾಲ ನಮ್ಮನ್ನು ಬಿಟ್ಟು ಮುಂದಕ್ಕೆ ಸಾಗಬಹುದು. ಆದರೆ, ದಿನದಲ್ಲಿ ಕನಿಷ್ಟ, ಮೂವತ್ತು ನಿಮಿಷವಾದರೂ ಸುಮ್ಮನೆ, ಬರೀ ನಮ್ಮ ಆಲೋಚನೆಗಳೊಂದಿಗೆ ಕುಳಿತುಕೊಳ್ಳಲು ಸಾಧ್ಯವಾದರೆ ಅದು ಅದ್ಭುತಗಳನ್ನು ಉಂಟುಮಾಡಬಹುದು. ನಮ್ಮ ಯೋಚನೆಗಳ ಬಗ್ಗೆ ನಮಗೆ ಸ್ಪಷ್ಟತೆ ದೊರಕುವುದರಿಂದ ಆರಂಭಿಸಿ, ಆಲೋಚನೆಗಳನ್ನು ನಿಧಾನಿಸುವುದು, ಅಥವಾ ವಿಶ್ರಮಿಸುವುದು ತಪ್ಪಲ್ಲ ಎಂದು ಅರ್ಥವಾಗುವಲ್ಲಿಯೂ ಸಹಾಯವಾಗಬಹುದು.

ಯಾರೋ ಹೇಳಿದಂತೆ, “ಸ್ಲೋಯಿಂಗ್ ಡೌನ್ ಈಸ್ ಓಕೆ. ಇಟ್ ಐಸ್ ನಾಟ್ ದಿ ಎಂಡ್ ಆಫ್ ದ ವರ್ಲ್ಡ್. ಈವನ್ ಇಫ್ ಇಟ್ ಐಸ್, ಸ್ಲೋ ಡೌನ್ . ಬಿಕಾಸ್ ದೇರ್ ಈಸ್ ನಥಿಂಗ್ ಆಫ್ಟರ್ ದಾಟ್ ಎನಿವೇ.” ಅಂದರೆ, “ನಿಧಾನಿಸಿ, ಪರವಾಗಿಲ್ಲ.ಇದು ಪ್ರಪಂಚದ ಅಂತ್ಯವಲ್ಲ. ಹಾಗಾದರೂ ಕೂಡಾ, ನಿಧಾನಿಸಿ. ಏಕೆಂದರೆ ಅದರ ಮುಂದೆ ಮತ್ತೆ ಹೇಗೂ ಏನೂ ಇಲ್ಲವಲ್ಲ.”

-ಕೃತಿಕಾ ಯನ್ ಆಳ್ವ

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00