- ಕಾಸರಗೋಡು ಜಿಲ್ಲೆಯ ಎಣ್ಮಕಜೆ ಗ್ರಾ. ಪಂ.ನಲ್ಲಿ ಭೂಮಿಗೆ ಹಸುರೆಲೆಯ ಕೊಡೆ ಹಿಡಿವ ಅಧ್ಯಾಪಕನ ಪ್ರಕೃತಿ ಪಾಠ ನಾಡಿಗೆ ಮಾದರಿ
- ಇಂದು ಎ. 22 ಭೂಮಿ ದಿನಾಚರಣೆ. ತನ್ನಿಮ್ಮಿತ್ತ ಈ ಬರಹ…
✍️ ಎಂ. ನಾ. ಚಂಬಲ್ತಿಮಾರ್
ಪೆರ್ಲ: ಸೂರ್ಯನ ತಾಪ ದಿನೇ, ದಿನೇ ಏರಿಕೆಯಾಗಿ ನಾಡು ಅತ್ಯುಷ್ಣದ ಪ್ರಖರ ಬಿಸಿಲಿನಿಂದ ಬಳಲಿ, ಭೂಮಿಯೇ ಕೊತಕೊತ ಕುದಿಯತೊಡಗಿರುವಾಗ ಪಡ್ರೆ ಸಾಲೆತ್ತಡ್ಕ ಮೂಲದ ವೇಣುಗೋಪಾಲ್ ಊರೆಲ್ಲಾ ಸಾಲಾಗಿ ಮರ ನೆಟ್ಟಿದ್ದಾರೆ. ಮಣ್ಣಿಗೆ ಕೊಡೆ ಹಿಡಿದಿದ್ದಾರೆ. ಭೂಮಿಗೆ ನೆರಳುಣಿಸುತ್ತಿದ್ದಾರೆ.
ರಸ್ತೆ ಬದಿಯ ಪ್ರಪಾತಕ್ಕೆ ಮರಗಳ ಬೇಲಿ ಕಟ್ಟಿ, ರಸ್ತೆಗೆ ಸುರಕ್ಷೆ ನೀಡುತ್ತಿದ್ದಾರೆ.
ಕಳೆದ ಆರು ವರ್ಷದಲ್ಲಿ ತನ್ನ ಗ್ರಾಮದಲ್ಲಿ ಮಾತ್ರವೇ ಒಂದು
ಸಾವಿರಕ್ಕೂ ಅಧಿಕ ಮಹಾಗಣಿ ಮರವನ್ನು ಮಾತ್ರವೇ ನೆಟ್ಟು ಪ್ರಕೃತಿಗೆ ಹಸಿರುಣಿಸಿರುವ ಈ ಅಪೂರ್ವ ಭೂಮಿ ಸೇವಕ ನಮ್ಮೆಲ್ಲರ ನಡುವಿನ ಮಾದರಿ.


ಪೆರ್ಲ ಸ. ನಾ. ಹೖಸ್ಕೂಲಿನಲ್ಲಿ ಅಧ್ಯಾಪಕನಾದ ವೇಣುಗೋಪಾಲರಿಗಿದು ಶಾಲೆಯ ನೇಚರ್ ಕ್ಲಬ್ ನಿಂದ ದೊರೆತ ಸ್ಪೂರ್ತಿ. 2018ರ ಕಾಲಕ್ಕೆ ಶಾಲೆಯ ಸುತ್ತ ಗುಡ್ಡದಲ್ಲಿ ಬರಡಾದ ಖಾಲಿ ಜಾಗಗಳಿದ್ದುವು. ಅಧ್ಯಾಪಕ ಉಮೇಶ್ ಪೆರ್ಲರ ಪರಿಸರ ಕಾಳಜಿಯಿಂದ ಅಧ್ಯಾಪಕರೂ, ಮಕ್ಕಳೂ ಸೇರಿ ಅಲ್ಲೆಲ್ಲಾ ಗಿಡ ನೆಟ್ಟರು. ಅಲ್ಲಿಯೂ ಜಾಗ ತುಂಬಿದಾಗ ಇನ್ನೆಲ್ಲಿ ನೆಡಲಿ? ಯೋಚನೆ ಬಂತು. ಆಗ ಹೊಳೆದದ್ದೇ ಭೂಮಿಗೆ ನೆರಳಾಗುವ, ಪ್ರಪಾತಕ್ಕೆ ಬೇಲಿಯಾಗುವ ನಾಡಿನ ರಕ್ಷಣಾ ಯೋಜನೆ!

ಇವರ ಊರು ಕಾಸರಗೋಡು
ಜಿಲ್ಲೆಯ ಎಣ್ಮಕಜೆ ಗ್ರಾ. ಪಂ. ನ
ಪಡ್ರೆ ಸಾಲೆತ್ತಡ್ಕದಲ್ಲಿ ಅದೊಂದು ದಿನ ಹೊಯ್ಗೆ ಹೇರಿ ಬಂದಿದ್ದ ಲಾರಿಯೊಂದು ರಸ್ತೆ ಬದಿಯ ಇಳಿಜಾರಿಗೆ ಮಗುಚಿತು. ಫಲ್ಟಿಯಾದ ಲಾರಿಯಲ್ಲಿದ್ದ ಇಬ್ಬರು ಇವರ ಕಣ್ಣೆದುರೇ ಮೃತಪಟ್ಟಿದ್ದರು. ಆಗ ಹೊಳೆದದ್ದೇ ಛೆ… ರಸ್ತೆ ಬದಿಯ ಇಳಿಜಾರಿಗೆ ತಡೆಯಾಗಿ ಬೃಹತ್ ಮರಗಳಿರುತ್ತಿದ್ದರೆ ಈ ಜೀವಗಳೆರಡು ಕಾಪಾಡಲ್ಪಡುತ್ತಿತ್ತಲ್ಲವೇ?
ಎಂದು…
ವೇಣುಗೋಪಾಲ್ ಮತ್ತೇನೂ ಯೋಚಿಸಲಿಲ್ಲ. ತಮ್ಮ ಜಮೀನಿನಲ್ಲಿ ಹುಲುಸಾಗಿ ಬೆಳೆದು ಸಿಗುವ ಮಹಾಗಣಿ ಮರದ ಗಿಡಗಳನ್ನು ಆಯ್ದರು. ಪೆರಿಯಾಲ್ತಡ್ಕದ ರಸ್ತೆ ಬದಿ ನೆಟ್ಟರು. ವರ್ಷಂಪ್ರತಿ ಬಿಡದೇ
ಸಾಲಾಗಿ ನೆಡುತ್ತಲೇ ಬಂದರು. ವರ್ಷಕ್ಕೆ ಸರಾಸರಿ 150ರಿಂದ 175ರಷ್ಟು ಗಿಡಗಳನ್ನು ನೆಡುತ್ತಾ ಸಾಗಿದರು. ಈಗ ಇದು ಗಾಳಿಗೋಪುರದಿಂದ ಸೖಪಂಗಲ್ಲು ವರೆಗಿನ ಐದು ಕಿ. ಮೀ ವ್ಯಾಪಿಸಿದೆ. ಎಂಥಾ ಸುಡು ಬಿಸಿಲೇ ಇರಲಿ, ಈ ದಾರಿಯಲ್ಲಿ ತೆರಳುವವರಿಗೆಲ್ಲಾ ನೆರಳ ನೆಮ್ಮದಿಯ ತಂಪಿನ ಪಯಣದ ಸೌಭಾಗ್ಯ ಸಿಕ್ಕೇ ಸಿಗುತ್ತದೆ.

ಕಾಸರಗೋಡು ಜಿಲ್ಲೆಯ ಎಣ್ಮಕಜೆ ಪಂಚಾಯತಿನ ತನ್ನೂರ ಪರಿಸರವಷ್ಟೇ ಅಲ್ಲ, ಈಗ ಮರ ನೆಡುವುದನ್ನವರು ಪಕ್ಕದ ಬದಿಯಡ್ಕ ಪಂ. ವ್ಯಾಪ್ತಿಗೂ ವಿಸ್ತರಿಸಿದ್ದಾರೆ. ಉಕ್ಕಿನಡ್ಕ ಇಂಜಿನಿಯರಿಂಗ್ ಕಾಲೇಜಿನ ಪರಿಸರದಿಂದ ಪಕ್ಕದ 1ಕಿ. ಮೀ ದೂರದ ಗೋಳಿಯಡಿ ತನಕ ಗಿಡ ನೆಟ್ಟಿದ್ದಾರೆ. ಎಲ್ಲಿ ರಸ್ತೆ ಬದಿಯ ಒಂದು ಪಾರ್ಶ್ವ ಇಳಿಜಾರಾಗಿ ಪ್ರಪಾತ ಸದೃಶ ಇದೆಯೋ ಅಲ್ಲೆಲ್ಲಾ ತಡೆ ಬೇಲಿಯ ಊರುಗೋಲಿನಂತೆ ಮರ ಬೆಳೆಸಿ, ರಕ್ಷಣಾ ಕವಚ ಒದಗಿಸಬೇಕೆಂದು ಇವರ ಆಗ್ರಹ. ಅದಕ್ಕಾಗಿಯೇ ಪರಿಶ್ರಮ.
ಇವರು ಗಿಡ ನೆಡುವುದೆಂದರೆ ಅದು ಪ್ರದರ್ಶನಕ್ಕಲ್ಲ. ವರ್ಷಂಪ್ರತಿ ಜೂನ್-ಜುಲೖ ತಿಂಗಳಲ್ಲಿ ಅವರಿಗಿದೇ ಕಾಯಕ. ತಾನು ನೆಟ್ಟ ಮರಗಳನ್ನು ಮಳೆಗಾಲದಲ್ಲೂ, ಬೇಸಿಗೆಯಲ್ಲೂ ತೆರಳಿ ಪರಿಚರಿಸಿ, ಅದರ ಸುತ್ತಲಿನ ಪೊದೆ ಕಾಡು ತೆಗೆದು ಉಪಚರಿಸಿ ಪೋಷಿಸುವ ಇವರ ಕಾಳಜಿ ಭೂಮಿ ತಾಯಾಣೆ ಭೂಮಾತೆಯ ಮೇಲಿನ ಮಮತೆಯ ಆರಾಧನೆ. ಅದು ಸ್ಥದ್ದಿಲ್ಲದ ಪ್ರಚಾರ ರಹಿತ ಸೇವೆ.
ಆರಂಭದಲ್ಲಿವರು ಮಹಾಗಣಿಯಷ್ಟೆ ಅಲ್ಲ ತೊಗಟೆ ಹುಳಿ, ಮಾವು, ಹಲಸು ಇನ್ನಿತ್ಯಾದಿ ಗಿಡಗಳನ್ನು ನೆಟ್ಟಿದ್ದರು. ಆದರೆ ಅದು ಸಂರಕ್ಷಣೆಯಾಗುವುದು ಕಷ್ಟ ಎಂದರಿತು ಮಹಾಗಣಿಗಷ್ಟೇ ಸೀಮಿತರಾದರು. ತಾನು ನೆಟ್ಟ 90ಶೇ. ಗಿಡಗಳೂ ಈಗ ಮರಗಳಾಗಿ ನಾಡ ನೆಮ್ಮದಿಗೆ ಉಸಿರು ನೀಡಿವೆ ಎಂದು ಸಂಭ್ರಮಿಸುವ ಇವರ ವ್ಯಥೆ ಎಂದರೆ ಮರ, ಗಿಡಗಳನ್ನು ಕಡಿದು-ನಾಶ ಮಾಡಿದರೆ ಕೇಳೋರೇ ಇಲ್ಲ ಎಂಬ ನಿರ್ಲಕ್ಷ್ಯ ಒಂದೇ..
ವೇಣುಗೋಪಾಲರು ಅತ್ಯಧಿಕ ಗಿಡ ನೆಟ್ಟದ್ದು ಪ್ಲಾಂಟೇಷನ್ ನಿಗಮದ ತೋಟ ಒಳಗೊಂಡ ರಸ್ತೆ ಬದಿ. ತೋಟ ಸ್ವಚ್ಛದ ನೆಪದಲ್ಲಿ ಪ್ಲಾಂಟೇಷನ್ ನೌಕರರೇ ಇವರು ನೆಟ್ಟ ಗಿಡಗಳನ್ನೆಲ್ಲಾ ಕಡಿದದ್ದೂ ಉಂಟು! ಇನ್ನು ಊರಲ್ಲೇ ಕೆಲ ವಿಘ್ನ ಸಂತೋಷಿಗಳೂ ಗಿಡ ಕಂಡರೆ ಚಿವುಟುವುದೂ ಉಂಟು. ಇಷ್ಟೇ ಅಲ್ಲದೇ ನನ್ನನ್ನು ಈ ವರೆಗೆ ಯಾರೂ ನಿರುತ್ಸಾಹ ಪಡಿಸಿಲ್ಲ ಎನ್ನುವ ಈ ಮಾಸ್ತರ್ ಶಾಲೆಯ ಮಕ್ಕಳಿಗಷ್ಟೇ ಅಲ್ಲ, ಸಮಾಜದ ಸರ್ವರಿಗೂ ಭೂಮಿ ಪ್ರೀತಿಯ ಪಾಠವನ್ನು ಮೌನವಾಗಿ ಮಾಡುತ್ತಿದ್ದಾರೆ.
ಇಂಥವರು ಆಧುನಿಕ ಕಾಲದಲ್ಲಿ ಅಪರೂಪ ಅಲ್ವೇ…?








