ಕುಂಬಳೆ: ಕಡು ಬೇಸಗೆಯ ಅತ್ಯುಷ್ಣ ವಾತಾವರಣದ ವೇಳೆ ರಾತ್ರಿ ವೇಳೆಗಳಲ್ಲಿ ಮೊಗ್ರಾಲ್ ನಾಂಗಿ ಕಡಪ್ಪರ ಪರಿಸರ ಸಹಿತ ಮೊಗ್ರಾಲ್ ಕಡವತ್, ಕೆಕೆ ಪುರಂ, ಬಣ್ಣಾತ್ ಕಡವ್ ಪರಿಸರಗಳಲ್ಲಿ ನಿರಂತರ ವಿದ್ಯುತ್ ವಿಚ್ಛೇದಿಸಲ್ಪಡುತ್ತಿದ್ದು, ಸಾರ್ವಜನಿಕರು ತೀವ್ರ ತೊಂದರೆಗಳ ಬವಣೆ ಅನುಭವಿಸುತ್ತಿದ್ದಾರೆ. ಜತೆಗೆ ಈ ಪ್ರದೇಶದಲ್ಲಿ ಎಲ್ಲೂ ಟ್ರಾನ್ಸ್ ಫರ್ಮರ್ ಇಲ್ಲದೇ ಜನತೆ ವೋಲ್ಟೇಜ್ ಕ್ಷಾಮ ಅನುಭವಿಸುತ್ತಿದ್ದಾರೆ. ಒಂದು ಪ್ರದೇಶವನ್ನಿಡೀ ಗಂಭೀರ ಕಾಡುವ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವಂತೆ ವಿನಂತಿಸಿ ಕುಂಬಳೆ ಕೆಎಸ್ಇಬಿ ಕಚೇರಿಗೆ ಮೊಗ್ರಾಲಿನ ಗ್ರೀನ್ ಸ್ಟಾರ್ ಕ್ಲಬ್ ವತಿಯಿಂದ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ.
ರಾತ್ರಿ ವೇಳೆಯ ನಿರಂತರ ವಿದ್ಯುತ್ ವಿಚ್ಛೇದನದಿಂದ ರೋಗಿಗಳು, ಎಳೆಯಮಕ್ಕಳು, ವಿದ್ಯಾರ್ಥಿಗಳು ಸಹಿತ ನಾಗರಿಕರು ತೀವ್ರ ಸಮಸ್ಯೆ ಅನುಭವಿಸುತ್ತಿದ್ದಾರೆ. ಅಸಹನೀಯ ಉಷ್ಣ ವಾತಾವರಣದ ಜತೆ ವೋಲ್ಟೇಜ್ ಕ್ಷಾಮವೂ ಈ ಪರಿಸರವನ್ನು ಕಾಡುತ್ತದೆ. ಇದಕ್ಕೆ ಶಾಶ್ವತ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿ ಕುಂಬಳೆ ಕೆಎಸ್ಇಬಿ ವಿಭಾಗೀಯ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು. ಕಾಸರಗೋಡು ಬ್ಲಾಕ್ ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಲೇ, ಕುಂಬಳೆ ಗ್ರಾ. ಪಂ. ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಎ. ಕೆ. ಆರಿಫ್, ಗ್ರೀನ್ ಸ್ಟಾರ್ ಮೊಗ್ರಾಲ್ ಕ್ಲಬ್ ಅಧ್ಯಕ್ಷ ಮಕ್ದೂಂ, ಕೆ. ವಿ. ಯೂಸುಫ್, ಎಂಎಸ್ಎಫ್ ರಾಜ್ಯ ಕಾರ್ಯದರ್ಶಿ ಇರ್ಷಾದ್ ಮೊಗ್ರಾಲ್, ಗ್ರೀನ್ ಸ್ಟಾರ್ ಕ್ಲಬ್ಬಿನ ಎಂ. ಜಿ. ರಹ್ಮಾನ್, ನೌಷಾದ್ ಕೋಟ, ಮುಜೀಬ್ ಪೇರಾಲ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.






