- ದೇಶದ ಮಹಿಳೆಯರ ಹಕ್ಕು ಕಸಿದ ಪ್ರತಿಪಕ್ಷಗಳ ವಿರುದ್ಧ ಮಹಿಳಾ ಮೋರ್ಛಾ ಜನಾಂದೋಲನಕ್ಕೆ ಸಿದ್ಧತೆ
ಕಾಸರಗೋಡು: ಶಾಸನ ಸಭೆಗಳಲ್ಲಿ ಮಹಿಳೆಯರಿಗೆ 33 ಶೇ. ಮೀಸಲಾತಿ ಒದಗಿಸುವ ಉದ್ದೇಶ ಹೊಂದಿದ್ದ ಮಸೂದೆಯನ್ನು ಸಂಸತ್ತಿನಲ್ಲಿ ಜ್ಯಾರಿಗೊಳಿಸದಂತೆ ತಡೆದ ವಿರೋಧ ಪಕ್ಷಗಳು ದೇಶದ ಸಂವಿಧಾನಕ್ಕೆ ಮತ್ತು ರಾಷ್ಟ್ರಹಿತಕ್ಕೆ ಹಾಗೂ ನಾರೀಶಕ್ತಿಗೆ ಅವಮಾನ ಮಾಡಿವೆ. ಇದು ಅತ್ಯಂತ ಖಂಡನೀಯವಾಗಿದ್ದು ಕಾಂಗ್ರೆಸ್ ಸಹಿತ ಪ್ರತಿಪಕ್ಷಗಳ ಮಹಿಳಾ ವಿರೋಧಿ ನಿಲುವನ್ನು ಖಂಡಿಸಿ ಮಹಿಳಾ ಮೋರ್ಛಾ ನೇತೃತ್ವದಲ್ಲಿ ಮಹಿಳಾ ಜನಜಾಗೃತಿ ಆಂದೋಲನ ನಡೆಸುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷೆ ಎಂ. ಎಲ್. ಅಶ್ವಿನಿ ತಿಳಿಸಿದರು.
ಕಾಸರಗೋಡು ಬಿಜೆಪಿ ಕಾರ್ಯಾಲಯದಲ್ಲಿ ಮಹಿಳಾ ಮೋರ್ಛಾ ಜಿಲ್ಲಾ ಪದಾಧಿಕಾರಿಗಳ ಜತೆ ಮಾಧ್ಯಮದೊಂದಿಗೆ ಮಾತಾಡಿದ ಅವರು ಮಹಿಳಾ ಮೀಸಲಾತಿ ಮಸೂದೆ ತಡೆದು ಮಹಿಳೆಯರಿಗೆ ವಂಚನೆ ಮಾಡಿದ ರಾಜಕೀಯ ಕುತಂತ್ರವನ್ನು ಬಯಲಾಗಿಸಲು ಮನೆ ಮನೆ ಸಂಪರ್ಕ, ಕಾರ್ನರ್ ಸಭೆ, ಬೃಹತ್ ಮಹಿಳಾ ರೇಲಿ ಸೇರಿದಂತೆ ಪ್ರತಿಭಟನೆಗೆ ರೂಪುಕಲ್ಪನೆ ನೀಡುವುದಾಗಿ ಹೇಳಿದರು.

ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಗೊಂಡು ಅನುಮೋದನೆ ಪಡೆದಿದ್ದರೆ 2029 ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ 33ಶೇ. ಮೀಸಲಾತಿ ಪಡೆಯಲು ಸಾಧ್ಯವಾಗುತಿತ್ತು. ಮಹಿಳಾ ಮೀಸಲಾತಿ ಮಸೂದೆಯನ್ನು ಸೋಲಿಸುವ ಮೂಲಕ ಪ್ರತಿಪಕ್ಷಗಳು ಒಟ್ಟಾಗಿ ರಾಷ್ಟ್ರವಿರುದ್ಧ, ಮಹಿಳಾ ವಿರುದ್ಧ ನಿಲುವು ಕೖಗೊಂಡಿವೆ. ಬಾಲಾಕೋಟ್, ಆಪರೇಷನ್ ಸಿಂಧೂರ್ ಮೊದಲಾದದು ಪ್ರಧಾನಿಯ ಇಂದ್ರಜಾಲ ಎಂದು ರಾಹುಲ್ ಗಾಂಧಿ ಬಣಿಸಿದ್ದಾರೆ.
ಪ್ರತಿಪಕ್ಷದ ಎಲ್ಲಾ ನಾಯಕರು ಮಹಿಳಾ ಮೀಸಲಾತಿ, ಕ್ಷೇತ್ರ ಪುನರ್ವಿಂಗಡಣೆಯನ್ನು ಪ್ರತಿಭಟಿಸಿ ದೇಶದ ಮಹಿಳೆಯರ ರಾಜಕೀಯ ಹಕ್ಕನ್ನು ಕಸಿದಿದ್ದಾರೆ. ಇದೆಲ್ಲವನ್ನು ಜನತೆಯೆದುರು ಬಿಚ್ಚಿಡಲು ಇಂದಿನಿಂದಲೇ ಮಹಿಳಾ ಮೋರ್ಛಾ ರಂಗಕ್ಕಿಳಿದಿದೆ ಎಂದು ಎಂ. ಎಲ್. ಅಶ್ವಿನಿ ನುಡಿದರು.
ಬಿಜೆಪಿ ಮಹಿಳೆಯರಿಗೆ ಅಗ್ರ ಮಾನ್ಯತೆಯ ರಾಜಕೀಯ ಪ್ರಾಶಸ್ತ್ಯದ ಮನ್ನಣೆ ನೀಡುತ್ತಿದೆ. ಆದರೆ ಮಹಿಳಾ ಪರ ಕಾಪಟ್ಯದ ವಾದ ಮಂಡಿಸುವ ಕಾಂಗ್ರೆಸ್, ಮುಸ್ಲಿಂಲೀಗ್, ಸಿಪಿಎಂ ಸಹಿತ ಉಳಿದೆಲ್ಲಾ ಪಕ್ಷಗಳು ಎಷ್ಟು ಮಹಿಳಾ ಮೀಸಲಾತಿ ನೀಡಿವೆ ಎಂದು ಪ್ರಶ್ನಿಸಿದ ಅವರು ಕೇರಳಕ್ಕೆ ಈ ವರೆಗೆ ಮಹಿಳಾ ಮುಖ್ಯಮಂತ್ರಿ ಆಗಿಲ್ಲ. ಕಾಸರಗೋಡು ಜಿಲ್ಲೆಯಲ್ಲಿ ಬಿಜೆಪಿಯಲ್ಲದೇ ಮತ್ಯಾವ ಪಕ್ಷಕ್ಕೂ ಮಹಿಳಾ ಜಿಲ್ಲಾಧ್ಯಕ್ಷೆ ಇಲ್ಲ. ಆದ್ದರಿಂದಲೇ ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ತಡೆದವರು ನಾರೀ ಶಕ್ತಿ ವಿರೋಧಿಗಳೆಂದು ಎಂ. ಎಲ್. ಅಶ್ವಿನಿ ನುಡಿದರು.
ಮಾಧ್ಯಮಗೋಷ್ಟಿಯಲ್ಲಿ ಬಿಜೆಪಿ ರಾಜ್ಯ ಸಮಿತಿ ಸದಸ್ಯೆ ಸವಿತಾ ಟೀಚರ್, ಕಾರಡ್ಕ ಗ್ರಾ. ಪಂ. ಅಧ್ಯಕ್ಷೆ ಎಂ. ಜನನಿ, ಬದಿಯಡ್ಕ ಗ್ರಾ. ಪಂ. ಉಪಾಧ್ಯಕ್ಷೆ, ಬಿಜೆಪಿ ಜಿಲ್ಲಾ ಕಾರ್ಯದರ್ಶೀ ಅಶ್ವಿನಿ ಕೆ. ಎಂ, ಕುಂಬ್ಡಾಜೆ ಗ್ರಾ. ಪಂ. ಅಧ್ಯಕ್ಷೆ ಯಶೋಧ ಎನ್, ಮಹಿಳಾ ಮೋರ್ಛಾ ಜಿಲ್ಲಾಧ್ಯಕ್ಷೆ ಕೆ. ಎಸ್. ರಮಣಿ, ಕಾರ್ಯದರ್ಶಿ ಪ್ರೇಮಲತಾ ಎಸ್, ಅನಿತಾ ನಾಯ್ಕ್, ಮಧೂರು ಗ್ರಾ. ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಪುಷ್ಪಾ ಗೋಪಾಲನ್, ಬಿಜೆಪಿ ಜಿಲ್ಲಾ ಖಜಾಂಜಿ ವೀಣಾ ಅರುಣ್ ಪಾಲ್ಗೊಂಡರು.








