- ಅನ್ಯಮತೀಯ ಆಕರ್ಷಣೆ: ತಿರುವನಂತಪುರದಿಂದ ಕೌನ್ಸಿಲಿಂಗ್ ನಡೆಸಿ ಮರಳುವ ದಾರಿಯಲ್ಲಿ ಯುವತಿ ನಾಪತ್ತೆ
ಉಪ್ಪಳ: ಇಲ್ಲಿನ ಕೊಂಡೊವೂರು ಶ್ರೀ ನಿತ್ಯಾನಂದ ಆಶ್ರಮಕ್ಕೆ ತಲುಪಿದ್ದ ಕರ್ನಾಟಕ ಮೂಲದ 19ರ ಹರೆಯದ ಇಂಜಿನಿಯರಿಂಗ್ ವಿದ್ಯಾರ್ಥಿನಿ ನಿಗೂಢ ನಾಪತ್ತೆಯಾಗಿದ್ದಾಳೆ. ಆಶ್ರಮದಿಂದ ಬರಿಗೖಯ್ಯಲ್ಲಿ ಕಾಣೆಯಾದ ಈಕೆಯ ಪಲಾಯನ ಹಲವು ಶಂಕೆಗಳನ್ನು ಹುಟ್ಟಿಸಿದೆ.
ಕರ್ನಾಟಕದ ಹಾಸನ ಜಿಲ್ಲೆಯ ಜಕ್ಕನಹಳ್ಳಿ ನಿವಾಸಿ, ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಅಕ್ಷಿತಾ(19) ಎಂಬಾಕೆ ನಾಪತ್ತೆಯಾದವಳಾಗಿದ್ದಾಳೆ.
ನಿನ್ನೆ ಆದಿತ್ಯವಾರ (ಎ. 19) ತಿರುವನಂತಪುರದಿಂದ ಮರಳುವ ದಾರಿಯಲ್ಲಿ ಬೆಳಿಗ್ಗೆ 9ರ ವೇಳೆಗೆ ವಿಶ್ರಾಂತಿ ಮತ್ತು ಫ್ರೆಷ್ ಆಗಲು ತಾಯ್ತಂದೆಯರ ಜತೆ ಈಕೆ ಕೊಂಡೆಯೂರು ಆಶ್ರಮ ತಲುಪಿದ್ದಳು. ಮತೀಯ ಆಕರ್ಷಣೆಗೆ ಬಲಿಯಾಗಿದ್ದ ಈಕೆಗೆ ಮಾನಸಿಕ ಕೌನ್ಸಿಲಿಂಗ್ ನೀಡುವ ಉದ್ದೇಶದಿಂದ ತಿರುವನಂತಪುರಕ್ಕೆ ಕರೆದೊಯ್ಯಲಾಗಿತ್ತು.

ಕೊಂಡೆವೂರು ಆಶ್ರಮ ತಲುಪಿದ ಬಳಿಕ ತಾಯ್ತಂದೆಯರು ಮಠದ ದೇವರ ದರ್ಶನಕ್ಕೆ ಹೋದಾಗ ಈಕೆ ಏಕಾಂಗಿಯಾಗಿ ರೂಮಿನಲ್ಲಿದ್ದಳು. ತಾಯ್ತಂದೆಯರು ಮರಳಿ ಬರುವಷ್ಟರಲ್ಲಿ ಕೋಣೆಯ ಹಿಂಬಾಗಿಲ ಮೂಲಕ ಈಕೆ ಕಾಣೆಯಾಗಿದ್ದಳು. ಪಲಾಯನದ ಸಂದರ್ಭ ಮೊಬೖಲ್ ಫೋನ್ ಸಹಿತ ಮತ್ತೇನನ್ನೂ ಕೊಂಡೊಯ್ದಿಲ್ಲ. ಈ ಸಂಬಂಧ ಈಕೆಯ ಸಹೋದರಿ ಭೂಮಿಕ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ. ಆದಿತ್ಯವಾರ ಬೆಳಿಗ್ಗೆ 10ರಿಂದ 10.30ರ ನಡುವೆ ಘಟನೆ ನಡೆದಿದೆ. ಅಪರಿಚಿತ ಊರಿನಲ್ಲಿ ಅತ್ಯಂತ ಸುಲಭವಾಗಿ ಯುವತಿಯೊಬ್ಬಳು ನಾಪತ್ತೆಯಾಗಿ, 24ತಾಸು ಸಂದರೂ ಸುಳಿವು ಸಿಗದೇ ಇರುವುದು ಪೊಲೀಸರನ್ನೂ ಚಕಿತಗೊಳಿಸಿದೆ.
ತಾನು ಹೆತ್ತವರನ್ನು ಮತ್ತು ಮನೆ ಬಿಟ್ಟು ತೆರಳುವುದಾಗಿ ಈಕೆ ಈ ಹಿಂದೆಯೇ ಹೇಳುತ್ತಿದ್ದಳು ಎನ್ನಲಾಗಿದೆ. ಅಲ್ಲದೇ ಅನ್ಯಮತೀಯ ಆಕರ್ಷಣೆಯಲ್ಲಿದ್ದಳೆಂದೂ ಹೇಳಲಾಗುತ್ತಿದೆ.







