- ಪೆರಡಾಲ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಕೊಂಡೆವೂರು ಶ್ರೀ ಅಭಿಮತ
ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ 3ನೇ ದಿನ ನಡೆದ ಧಾರ್ಮಿಕ ಸಭೆಯಲ್ಲಿ ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಕೊಂಡೆವೂರು ಇವರು ಆಶೀರ್ವಚನ ನೀಡಿದರು. ಅವರು ಮಾತನಾಡಿ ಸನಾತನ ಸಂಸ್ಕೃತಿಯ ಕೇಂದ್ರ ಬಿಂದು ಧಾರ್ಮಿಕ ಕೇಂದ್ರಗಳು. ಒಂದು ದೇವಸ್ಥಾನವು ಆ ಗ್ರಾಮದ ಅಳತೆಗೋಲು ಎಂದರೆ ತಪ್ಪಾಗಲಾರದು. ಅಂತಃಕರಣ ಶುದ್ಧವಾಗಿದ್ದರೆ ಲೋಕವನ್ನು ನೋಡುವ ದೃಷ್ಟಿ ಬದಲಾಗುತ್ತದೆ. ಪ್ರಾಚೀನ ಗ್ರಂಥಗಳು ನಮ್ಮ ಜೀವನಕ್ಕೆ ಅದೆಷ್ಟೋ ಒಳ್ಳೆಯ ಸಂದೇಶಗಳನ್ನು ನೀಡಿದೆ. ನಮ್ಮಲ್ಲಿರುವ ಒಳ್ಳೆಯತನ, ಉತ್ತಮ ಭಾವವನ್ನು ಜಾಗೃತಗೊಳಿಸಬೇಕು. ದೇವರು ಬಿಂಬವಾದರೆ ನಾವು ದೇವರ ಪ್ರತಿಬಿಂಬ ಎಂಬುದು ಎಲ್ಲಾ ಭಕ್ತರ ಮನದಲ್ಲಿರಬೇಕು ಎಂದರು.

ಖ್ಯಾತವಾಸ್ತುಶಿಲ್ಪಿ ಕೃಷ್ಣಪ್ರಸಾದ ಮುನಿಯಂಗಳ ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು. ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು, ಬ್ರಹ್ಮಶ್ರೀ ವಾಸುದೇವ ಕೊಳತ್ತಾಯ ಕುಂಬಳೆ ದಿವ್ಯ ಉಪಸ್ಥಿತರಿದ್ದರು. ದೈವ ನರ್ತಕ ಡಾ. ರವೀಶ ಪರವ ಪಡುಮಲೆ ಧಾರ್ಮಿಕ ಭಾಷಣ ಮಾಡುತ್ತಾ ಪೆರಡಾಲ ಎಂಬ ಹೆಸರು ನಾಡಿನಾದ್ಯಂತ ವಿಸ್ತಾರಗೊಂಡಿದೆ. ಕೇಸರಿ ತೋರಣದೊಂದಿಗೆ ಪೆರಡಾಲ ಶೃಂಗಾರಗೊAಡಿದೆ. ಬ್ರಹ್ಮಕಲಶ ಎಂದು ಬೆವರು ಸುರಿಸುವ ಸ್ವಯಂಸೇವಕರ ಶ್ರಮಕ್ಕೆ ಬೆಲೆಕಟ್ಟಲಾಗದು. ಅವರ ಶ್ರಮದ ಫಲವಾಗಿ ಹತ್ತೂರಿನಲ್ಲಿ ಪೆರಡಾಲ ಎಂಬ ಹೆಸರು ಇಂದು ಮನೆಮಾತಾಗಿದೆ. ಧಾರ್ಮಿಕ ಶ್ರದ್ಧಾಕೇಂದ್ರ ಪೆರಡಾಲದಂತಿರಬೇಕು ಎಂದರು.
ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಪುತ್ತೂರು ಮುಖ್ಯ ಅಭ್ಯಾಗತರಾಗಿ ಪಾಲ್ಗೊಂಡು ಮಾತನಾಡಿ ಇಂದಿನ ಕಾಲದಲ್ಲಿ ಧಾರ್ಮಿಕತೆಯತ್ತ ಜನರ ಒಲವು ಕಡಿಮೆಯಾಗದೇ ಹಿರಿಯರ ಆದರ್ಶವನ್ನು ಪಾಲಿಸಿಕೊಂಡು ಮುಂದುವರಿಯಬೇಕು ಎಂದರು.
ಭಾರತ ಸರಕಾರದ ಹುಡ್ಕೋ ಮಾಜಿ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಆಳ್ವ ಕೋಟೆಕುಂಜ, ಪ್ರಸಿದ್ಧ ವೈದ್ಯ ಡಾ| ನಾಗರಾಜ ಭಟ್ ಚೇತನಡ್ಕ ಘನ ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿಯ ರಕ್ಷಾಧಿಕಾರಿ ಯೋಗೀಶ ಕಡಮಣ್ಣಾಯ ಆರಿಕ್ಕಾಡಿ, ಕಾಟಿಪಳ್ಳ ಸುಬ್ರಹ್ಮಣ್ಯ ಭಟ್, ಮಲಬಾರ್ ದೇವಸ್ವಂ ಬೋರ್ಡ್ನ ಎ.ಕೆ.ಶಂಕರ್, ಡಾ| ಎಂ. ಮನೋಹರ್ ಮುಳ್ಳೇರಿಯ, ಪ್ರಗತಿಪರ ಕೃಷಿಕ ಶಂಕರನಾರಾಯಣ ಭಟ್ ಪೆರುಮುಂಡ, ಉದ್ಯಮಿ ಜಯಪ್ರಸಾದ್ ರೈ ಕಾರಿಂಜ, ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ನಾರಾಯಣ ಕಾಟುಕುಕ್ಕೆ, ಹಿರಿಯರಾದ ಪ್ರಭಾಕರ ಕಲ್ಲೂರಾಯ ಬನದಗದ್ದೆ ಗೌರವ ಉಪಸ್ಥಿತರಿದ್ದರು. ಸುಬ್ರಾಯ ಭಟ್ಟ ಪುದ್ಯೋಡು, ಕೃಷ್ಣ ಪ್ರಸಾದ ರೈ ಪೆರಡಾಲ, ಸೂರ್ಯನಾರಾಯಣ ಬಿ., ಶಿವರಾಮ ಭಟ್ ಪೆರ್ಮುಖ, ಶಿವಪ್ರಕಾಶ್ ಎಂ., ಮಂಜುನಾಥ ಆಳ್ವ ಮಡ್ವ, ಬಿ.ನಾರಾಯಣ, ಜಯರಾಮ ಪೊನ್ನಂಗಳ, ಸದಾಶಿವ ಪೆರಡಾಲ ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷರುಗಳಾದ ಪದ್ಮರಾಜ ಪಟ್ಟಾಜೆ ಸ್ವಾಗತಿಸಿ, ಅನಂತ ಕುಮಾರ್ ಬರ್ಲ ವಂದಿಸಿದರು. ಪ್ರೊ.ಎ.ಶ್ರೀನಾಥ್ ಕಾರ್ಯಕ್ರಮ ನಿರೂಪಿಸಿದರು.
…
ಹಿರಿಯರು ನೀಡಿದ ಈ ಪುಣ್ಯಭೂಮಿ, ಉತ್ತಮ ಪ್ರಕೃತಿಯನ್ನು ಹಾಗೆಯೇ ಉಳಿಸಿಕೊಂಡು ಮುಂದಿನ ತಲೆಮಾರಿಗೆ ಶುದ್ಧವಾಗಿ ಹಸ್ತಾಂತರಿಸಬೇಕು. ನಮ್ಮ ಪರಿಸರ ಸಂರಕ್ಷಣೆಯನ್ನು ಮಾಡುವ ನಿಟ್ಟಿನಲ್ಲಿ ಎಲ್ಲರೂ ಜಾಗೃತರಾಗಬೇಕು. ಪ್ಲಾಸ್ಟಿಕ್ ಬಳಕೆಯನ್ನು ಆದಷ್ಟು ಕಡಿಮೆಗೊಳಿಸಿ ಕೋಟಿಗಿಂತ ಹೆಚ್ಚು ಬೆಲೆಬಾಳುವ ಮನುಷ್ಯ ಜೀವವನ್ನು ಉಳಿಸಿಕೊಳ್ಳಬೇಕು. ಪ್ಲಾಸ್ಟಿಕ್ ಮುಕ್ತ ವಾತಾವರಣವನ್ನು ಸೃಷ್ಟಿಸುವ ಕಾರ್ಯ ನಮ್ಮದಾಗಬೇಕು. ಧಾರ್ಮಿಕ ನೆಲೆಗಟ್ಟಿನಲ್ಲಿರುವ ಭಾರತದ ನಿಜವಾದ ಪ್ರಭೆಯನ್ನು ಜಗತ್ತಿಗೆ ನೀಡಬೇಕು.
– ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಕೊಂಡೆವೂರು







