ಕಾಸರಗೋಡು-ಮಂಗಳೂರು ರೂಟಿನಲ್ಲಿ ಒಂದು ವಾರದಿಂದ ಕೇರಳ ಕೆಎಸ್ಸಾರ್ಟೀಸಿ ಸಂಚಾರ ಕಡಿತ: ನಿತ್ಯಬಸ್ ಪ್ರಯಾಣಿಕರಿಗೆ ತೀವ್ರ ಸಂಕಷ್ಟ

by Narayan Chambaltimar
  • ಬಸ್ ಕೊರತೆಯ ಸಾರ್ವಜನಿಕ ಸಮಸ್ಯೆ ಪರ ಸೊಲ್ಲೆತ್ತದೇ ರಾಜಕೀಯ ಪಕ್ಷಗಳಿಗೆ ಮೌನ

ಕುಂಬಳೆ: ಯಾವುದೇ ಕಾರಣಗಳಿಲ್ಲದೇ, ಮುನ್ಸೂಚನೆಯ ಪ್ರಕಟಣೆಗಳಿಲ್ಲದೇ ಕಾಸರಗೋಡು- ಮಂಗಳೂರು ರೂಟಿನಲ್ಲಿ ವ್ಯಾಪಕವಾಗಿ ಕೇರಳ ಕೆಎಸ್ಸಾರ್ಟೀಸಿ ಬಸ್ ಸಂಚಾರ ಕಡಿತಗೊಳಿಸಲಾಗುತ್ತಿದೆ. ಅತ್ಯಧಿಕ ಪ್ರಯಾಣಿಕ ದಟ್ಟಣೆ ಇರುವ ಈ ರೂಟಿನ ಬಸ್ ಕಡಿತದಿಂದ ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಆದರೆ ನಾಗರಿಕರ ಬವಣೆಯನ್ನರಿತು ಸಾಮಾಜಿಕ ಬದ್ಧತೆಯಿಂದ ಯಾರೊಬ್ಬರೂ ಸಮಸ್ಯೆಗೆ ಸ್ಪಂದಿಸಿ, ಮಧ್ಯಪ್ರವೇಶಿಸಿಲ್ಲ ಎಂಬುದಂತೂ ವಾಸ್ತವವಾಗಿದೆ.

ರಾಜ್ಯ ವಿಧಾನಸಭಾ ಚುನಾವಣೆಯಂದು ಮತ್ತು ತದನಂತರ ಮೊನ್ನೆಯಷ್ಟೇ ನಡೆದ ವಿಷು ಆಚರಣೆಯಂದು ಈ ರೂಟಿನಲ್ಲಿ ಕೇರಳ ಕೆಎಸ್ಸಾರ್ಟೀಸಿ ಸಂಪೂರ್ಣ ಸಂಚಾರವೇ ನಡೆಸಿಲ್ಲ. ಚುನಾವಣೆಯ ಬಳಿಕವೂ ದೖನಂದಿನ ಬಸ್ ಸಂಚಾರ ಕಡಿತ ವಾಡಿಕೆಯಾಗಿದೆ. ಹಗಲೂ ರಾತ್ರಿ ಪ್ರಯಾಣಿಕರ ದಟ್ಟಣೆ ಇರುವ ಮಂಗಳೂರು ರೂಟಿನಲ್ಲಿ ಕೇರಳ ಸಾರಿಗೆ ಬಸ್ ಕೊರತೆಯ ಸಮಸ್ಯೆಯಿಂದ ಸಾರ್ವಜನಿಕರು ಗಂಭೀರವಾದ ಪ್ರಯಾಣ ಸಮಸ್ಯೆ ಅನುಭವಿಸುತ್ತಿದ್ದಾರೆ.
ಪ್ರತಿ 3 ಮಿನಿಟಿಗೆ ಒಂದರಂತೆ ಈ ರೂಟಿನಲ್ಲಿ ಅಂತರಾಜ್ಯ ಸಾರಿಗೆ ಬಸ್ಗಳು ಓಡಾಡಬೇಕೆಂಬುದು ನಿಬಂಧನೆ ಮತ್ತು ಪರ್ಮಿಟ್ ಇದೆ. ಆದರೆ ಪ್ರಸ್ತುತ ಕೆಲವೊಮ್ಮೆ 15 ಮಿನಿಟು, 25 ಮಿನಿಟಿಗೊಂದರಂತೆ ಕೇರಳ ಬಸ್ ಓಡಾಡುತ್ತಿವೆ. ಇದರಲ್ಲಾದರೋ ಪ್ರಯಾಣಿಕರು ತುಂಬಿ ತುಳುಕಿ ಘರ್ಷಣೆಗಳಿಗೂ ಕಾರಣವಾಗುತ್ತಿವೆ. ಕಾಸರಗೋಡು ಕೆ. ಎಸ್. ಆರ್. ಟಿ. ಸಿ ಡಿಪೋ ಅವ್ಯವಸ್ಥೆ, ಕರ್ತವ್ಯ ದಕ್ಷತೆ ಇಲ್ಲದ ನಿರ್ಲಕ್ಷ್ಯ, ಸಿಬಂದಿಗಳ ಅನಿಯಂತ್ರಿತ ರಜೆ ಮತ್ತು ಬಸ್ ಗಳ ಕೊರತೆಯಿಂದಾಗಿ ಈ ಸಮಸ್ಯೆ ಉಂಟಾಗಿದೆ ಎನ್ನಲಾಗಿದೆ. ಆದರೆ ಡಿಪೋ ಅಧಿಕೃತರು ಸಮಸ್ಯೆಗೆ ಕಾರಣವನ್ನಾಗಲೀ, ಪರಿಹಾರ ಕ್ರಮವನ್ನಾಗಲೀ ತಿಳಿಸುತ್ತಿಲ್ಲ.

ಮಂಗಳೂರು ರೂಟಿನ ಕೇರಳ ಸಾರಿಗೆ ಬಸ್ ಸಮಸ್ಯೆ ಯನ್ನು ಪರಿಹರಿಸಿ, ಹೆಚ್ಚುವರಿ ಬಸ್ ಚಲಾಯಿಸಬೇಕೆಂದು ಕೆಎಸ್ಸಾರ್ಟೀಸಿ ಇಲಾಖೆ ಅಧಿಕೃತರು ತುರ್ತು ಕ್ರಮ ಕೖಗೊಳ್ಳುವಂತೆ ಪಿಡಿಪಿ ಮಂಜೇಶ್ವರ ಮಂಡಲ ಘಟಕ ಒತ್ತಾಯಿಸಿದೆ. ನಾಗರಿಕರ ಪ್ರಯಾಣ ಸಂಕಷ್ಟಕ್ಕೆ ಪರಿಹಾರ ಮಾಡದಿದ್ದರೆ ತೀವ್ರ ಪ್ರತಿಭಟನೆ ನಡೆಸುವುದಾಗಿ ಪಿಡಿಪಿ ಪ್ರಕಟಣೆಯಲ್ಲಿ ಎಚ್ಚರಿಸಿದೆ. ಕಳೆದ ಒಂದು ವಾರಕ್ಕಿಂತಲೂ ಅಧಿಕ ಮಂಗಳೂರು- ಕಾಸರಗೋಡು ರೂಟಿನಲ್ಲಿ ಬಸ್ ಕೊರತೆ ಉಂಟಾಗಿ ಪ್ರಯಾಣಿಕರು ಪ್ರಯಾಣಕ್ಕೆ ಸಂಕಷ್ಟ ಪಡುತ್ತಿದ್ದರೂ ಸಮಸ್ಯೆ ಪರಿಹಾರಕ್ಕೆ ರಾಜಕೀಯ ಸಂಘಟನೆಗಳು ಮುಂದಾಗದೇ ಇರುವುದೇಕೆಂದು. ನಾಗರಿಕರು ಪ್ರಶ್ನಿಸಲಾರಂಭಿಸಿದ್ದಾರೆ.

ರಾತ್ರಿ 7 ಗಂಟೆ ದಾಟಿದರೆ ಮಂಗಳೂರು ಭಾಗಕ್ಕೆ ಕೆಲವೇ ಕೆಲವು ಬಸ್ ಗಳಿವೆ. ಕರ್ನಾಟಕ ಸಾರಿಗೆ ಬಸ್ ಗಳು ಆರಂಭವಾಗಬೇಕಿದ್ದರೆ 8.30 ದಾಟಬೇಕು. ಈ ಒಂದೂವರೆ ತಾಸಿನಲ್ಲಿ ಕೆಲವೇ ಕೆಲವು ಬಸ್ ಗಳಿದ್ದು, ಅದರಲ್ಲಂತೂ ಪ್ರಯಾಣಿಕ ಬಾಹುಳ್ಯದಿಂದ ಪ್ರಯಾಣಿಸಲಾಗುತ್ತಿಲ್ಲ. ಈ ಕಾರಣದಿಂದಲೇ ಕೇರಳ. ಸಾರಿಗೆ ವಿರುದ್ಧ ಪ್ರಯಾಣಿಕರು ರೋಸಿ ಹೋಗಿದ್ದಾರೆ. ಈ ಸಮಸ್ಯೆಯನ್ನು ಪರಿಹರಿಸಿ ಕೊಡಲು ರಾಜಕೀಯ ಪಕ್ಷ, ಸಾಮಾಜಿಕ ಸಂಘಟನೆಗಳೂ ಆಸಕ್ತಿ ತೋರಿಸದಿರುವುದು ನಮ್ಮ ಭಾಗದ ದುರಂತ.
ಸಂದೀಪ್ ಕುಮಾರ್ ವರ್ಕಾಡಿ
ನಿತ್ಯ ಪ್ರಯಾಣಿಕ

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00