ತಿರುವನಂತಪುರ: ಅತ್ಯುಷ್ಣದ ಕಡು ತಾಪದ ಬೇಗೆಯಲ್ಲಿ ಬೆಂದು ಬಸವಳಿದವರಿಗೊಂದು ಸಂತಸದ ಸುದ್ದಿ.. ಮೖಮನಗಳೊಂದಿಗೆ ಭೂಮಿಯನ್ನು ತಂಪಾಗಿಸಲು ನಾಳೆಯಿಂದ ಕೆಲವೆಡೆ ಬೇಸಿಗೆ ಮಳೆ ಸುರಿದು, ವಾತಾವರಣದ ಅತ್ಯುಷ್ಣ ಹವಾಮಾನ ಬದಲಾಗಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಪ್ರಕಟಿಸಿದೆ.
ಕೇರಳದಲ್ಲಿ ಸೋಮವಾರದಿಂದ ಸತತ ಐದು ದಿನ ಮಳೆಯಾಗುವ ಸಂಭವ ಇದೆ. ನಾಳೆಯಿಂದ ಎ. 22ರ ತನಕ ಕೆಲವು ಕಡೆ ಸಿಡಿಲು, ಗುಡುಗು ಸಹಿತ ಮಳೆಯಾಗಲಿದೆ. ನಾಳೆ ಸೋಮವಾರ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಮಳೆ ಯಾಗುವ ಲಕ್ಷಣಗಳಿವೆಯೆಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೇಸಿಗೆ ಮಳೆಯ ಮಿಂಚು ಗುಡುಗು ಅಪಾಯಕಾರಿಯಾಗಿದ್ದು ಮುನ್ನೆಚ್ಚರಿಕೆ ವಹಿಸುವಂತೆ ಎಚ್ಚರಿಕೆ ನೀಡಲಾಗಿದೆ. ಅತ್ಯುಷ್ಣ ಹವೆ ಪರಾಕಾಷ್ಟೆಗೆ ಏರಿದ್ದು ಪಾಲಕ್ಕಾಡ್ ನಲ್ಲಿ ರಾಜ್ಯದಲ್ಲೇ ಅತ್ಯಧಿಕವಾದ 41ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ ದಾಖಲಾಗಿದೆ. ಕಾಸರಗೋಡು ಸಹಿತ 12ಜಿಲ್ಲೆಗಳಲ್ಲಿ ಗರಿಷ್ಟ ಉಷ್ಣತೆಯಿದ್ದು, ರಾತ್ರಿ ಹಗಲೆನ್ನದೇ ಬಿಸಿ ಗಾಳಿ ಬೀಸತೊಡಗಿದೆ. ಇದೇ ವೇಳೆ ಕೇರಳದ ವಿದ್ಯುತ್ ಬಳಕೆಯೂ ಗರಿಷ್ಟತೆ ದಾಟಿ ದಾಖಲೆ ಬರೆದಿದೆ.







