ಗಡಿನಾಡಿನ ಮಂಜೇಶ್ವರದಲ್ಲಿ ಕೊಂಡಿ ಕಳಚದ ಸಾಮರಸ್ಯದ ಭಾತೃತ್ವ: ಉದ್ಯಾವರ ಸಾವಿರ ಜಮಾಯತ್ ಮಸೀದಿಗೆ ತೆರಳಿ ಅರಸು ದೖವಗಳ ಜಾತ್ರೆಗೆ ಮುಸಲ್ಮಾನರಿಗೆ ಆಮಂತ್ರಣ

by Narayan Chambaltimar
  • ವಾಡಿಕೆ ತಪ್ಪದ 800ವರ್ಷಗಳ ಆಚಾರ: ಮಸೀದಿಯಂಗಳದಲ್ಲಿ ದೖವಪಾತ್ರಿಗಳಿಗೆ ಗೌರವದ ಉಪಚಾರ
  • ಕರ್ನಾಟಕದಿಂದ ಕೇರಳಕ್ಕೆ ಕಾಲೂರಿದೊಡನೆಯೇ ಮತಸಾಮರಸ್ಯದ ಮೊದಲ ಜಾತ್ರಾ ಸಂದೇಶ ‘ಮಾಡ’ದ ವೖಶಿಷ್ಠ್ಯ..
  • 8ಶತಮಾನದ ಧಾರ್ಮಿಕ ಸಾಮರಸ್ಯದ ಆಚಾರಕ್ಕೆ ಈಗಲೂ ಗೌರವದ ಮನ್ನಣೆ
  • ದೖವದ ನಡೆ-ದೖವದ ನುಡಿಯೇ ಪ್ರಧಾನವಾದ ತುಳುನಾಡಿನ ಅಪೂರ್ವ ಸಾಮರಸ್ಯದ ತಾಣ ಉದ್ಯಾವರ ಮಾಡ
  • ಮೇ 9ರಿಂದ 12ರ ತನಕ ಮಾಡ ಜಾತ್ರೋತ್ಸವ: 11,12ರಂದು ಬಂಡಿ ಉತ್ಸವ

ಮಂಜೇಶ್ವರ: ನಾಡಿನಲ್ಲಿ ಮತೀಯ ಸಾಮರಸ್ಯಗಳ ಬಾಂಧವ್ಯಗಳನ್ನೇ ಕೆಡಿಸುವ ಮತ್ತು ಕೆಡುವ
ಕಾಲದಲ್ಲಿ ಮಂಜೇಶ್ವರ ಉದ್ಯಾವರ ಮಾಡದ ಅರಸುದೖವಗಳ 800 ವರ್ಷಗಳ ಜಾತ್ರಾ ಹಿನ್ನೆಲೆಯ ಸಾಮರಸ್ಯದ ಪರಂಪರೆ ನಾಡಿಗೆ ಅಭಿಮಾನವಾಗಿ ಈಗಲೂ ಮುಂದುವರಿಯುತ್ತದೆ. ಇದುವೇ ಕರ್ನಾಟಕದ ಗಡಿದಾಟಿ ಕೇರಳಕ್ಕೆ ಕಾಲೂರುವಾಗ ಸಿಗುವ ಉದ್ಯಾವರ ಮಾಡದ ಜಾತ್ರಾ ವೖಶಿಷ್ಟ್ಯ.

ಈ ಬಾರಿಯ ಜಾತ್ರೋತ್ಸವದ ಅಂಗವಾಗಿ ದೖವಗಳು ಇಂದು ಶುಕ್ರವಾರ (ಎ. 17) ಉದ್ಯಾವರ ಮಾಡ ಸಾವಿರ ಜಮಾಯತ್ ಮಸೀದಿಗೆ ಕಿರುವಾಲ್ ಸಹಿತ ತೆರಳಿ ಸಮಸ್ತ ಮುಸ್ಲಿಂ ಬಾಂಧವರನ್ನು ಜಾತ್ರೆಗೆ ಆಹ್ವಾನಿಸುವ ಸಾಂಪ್ರದಾಯಿಕ ಆಚಾರ ಕಟ್ಟುಕಟ್ಟಳೆಯಂತೆ ಶುಕ್ರವಾರ ಮಧ್ಯಾಹ್ನ ನಡೆಯಿತು. ವಿಷು ಹಬ್ಬದ ಬೆನ್ನಲ್ಲೇ ಸಿಗುವ ಮೊದಲ ಶುಕ್ರವಾರ ಮಸೀದಿಗೆ ದೖವಗಳಾಗಮನ ನಡೆಯುವುದು ಶತಮಾನಗಳ ಹಿಂದಿನ ಪರಂಪರೆ.

ಮೇಷ ಸಂಕ್ರಮಣ ಕಳೆದು ಸಿಗುವ ಮೊದಲ ಶುಕ್ರವಾರ ಉದ್ಯಾವರ ಅರಸು ಮಂಜೀಷ್ಣಾರ್ ದೖವಗಳ ಮಾಡದಿಂದ ಅನುಮತಿ ಕೋರಿ ಸಾವಿರ ಜುಮಾ ಮಸೀದಿಗೆ ಕಿರ್ವಾಲ್ ಹೋಗುವುದು ರೂಢಿ. ಈ ಹೋಗಿ ಬರುವುದನ್ನು ನೋಡಲು ದಾರಿ ಇಕ್ಕೆಲದ ಹಿಂದೂ ಮುಸ್ಲಿಂ ಮನೆಯವರು ಶ್ರದ್ಧಾ ಭಕ್ತಿಯಿಂದ ನಿಂತಿರುತ್ತಾರೆ. ಸುಡು ಬಿಸಿಲಿನ ಕಡು ಮಧ್ಯಾಹ್ನ 1.30 ಕ್ಕೆ ಮಸೀದಿಗೆ ತಲುಪುದ ದೖವ ಪರಿವಾರವನ್ನು ಸಾವಿರ ಜುಮಾ ಮಸೀದಿ ಆಡಳಿತ ಮಂಡಳಿಯವರು ಗೌರವದ ಮರ್ಯಾದೆ ಸಲ್ಲಿಸಿ ಮಸೀದಿ ಅಂಗಣಕ್ಕೆ ಕರೆತರುತ್ತಾರೆ. ಈ ವೇಳೆ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆ ಮುಗಿಸಿ ಸಾವಿರಾರು ಮಂದಿ ನೆರೆದು, ದೖವಗಳನ್ನು ಗೌರವದಿಂದ ಸ್ವಿಕರಿಸುತ್ತಾರೆ.
ಈ ವೇಳೆ ದೖವಪಾತ್ರಿಗಳು ಪ್ರಸನ್ನ ಚಿತ್ತದಿಂದ ಆವೇಶ ಭರಿತರಾಗಿ ದೖವರೂಪದಲ್ಲಿ ಮಸೀದಿಯ ಶೇಖ್ ಸಾಹೇಬರನ್ನು ಮಾಯಕದ ಭೇಟಿ ಆಗುತ್ತಾರೆ. ಬಳಿಕ ಜಮಾಯತಿನ ಸರ್ವರನ್ನೂ ತನ್ನ ಜಾತ್ರೋತ್ಸವಕ್ಕೆ ಆಹ್ವಾನಿಸಿ ನಮ್ಮ ನಾಡು ಶಾಂತಿ, ಸಾಮರಸ್ಯದ ಭಾವೖಕ್ಯತೆಯಲ್ಲಿರಬೇಕೆಂದು ಅಭಯದ ಮದಿಪು ನೀಡಿ ಮರಳುತ್ತದೆ. ಇದರಂತೆ ವರ್ಷಂಪ್ರತಿ ಉದ್ಯಾವರ ಮಾಡದ ಜಾತ್ರೆಯಲ್ಲಿ ಹಿಂದೂ ಮುಸಲ್ಮಾನರೆಲ್ಲರೂ ಭಾವೖಕ್ಯತೆಯಿಂದ ನೆರೆಯುತ್ತಾರೆ. ಇಂಥ ಅಪೂರ್ವ ಸಂಗಮದ ಜಾತ್ರೋತ್ಸವ ಕರ್ನಾಟಕದ ಗಡಿ ನಾಡಿ ಕೇರಳಕ್ಕೆ ಕಾಲೂರುವಾಗಲೇ ಸಿಗುತ್ತದೆ. ಕೇರಳದ ಸಾಮಾಜಿಕತೆ ಕನ್ನಡಿ ಹಿಡಿಯುತ್ತದೆ.

ಮಸೀದಿಯ ಬಳಿ ದೖವದರ್ಶನ ಕಾದು ಕಲ್ಯಾಣಿಯಕ್ಕ..
ಮಧ್ಯಾಹ್ನ ಸಮಯ 1.30. ಸಾವಿರ ಜುಮಾ ಮಸೀದಿಯ ದ್ವಾರದ ಬಳಿ ವೃದ್ಧೆ ಕಲ್ಯಾಣಿಯಕ್ಕ ಚಡಪಡಿಸುತ್ತಿದ್ದರು. ಛೇ.. ಒಂದೂವರೆ ಆಯ್ತಲ್ಲಾ.. ಯಾಕಿನ್ನೂ ಕಿರ್ವಾಲು ಬರಲಿಲ್ಲ?
ಅಷ್ಟರಲ್ಲಾಗಲೇ ಓಲಗದ ಸದ್ದಿನೊಂದಿಗೆ ಮಸೀದಿ ದ್ವಾರಕ್ಕೆ ದೖವಪಾತ್ರಿಗಳನ್ನು ಅನುಗಮಿಸಿ ಕೀರ್ವಾಲು ಬಂತು. ನಾನು ಸುಮಾರು ಆರು ದಶಕಕ್ಕೂ ಅಧಿಕ ಕಾಲದಿಂದ ಇದನ್ನು ನೋಡಿದ್ದೇನೆ. ನಾನು ಇಲ್ಲೇ ನಿಂತು ನೋಡೋದು. ಮಸೀದಿ ಅಂಗಳಕೆ ಹೋಗಿಲ್ಲ. ಅಂದಿಗೂ ಇಂದಿಗೂ ಆಚಾರ, ಗೌರವಗಳಲ್ಲಿ ಏನೂ ವ್ಯತ್ಯಾಸವಾಗಿಲ್ಲ.
-ಕಲ್ಯಾಣಿ
ಸ್ಥಳೀಯ ನಿವಾಸಿ, ವೃದ್ಧೆ

ಸಾವಿರ ಜುಮಾ ಮಸೀದಿಗೆ ತೆರಳಿ ಬರುವ ದಾರಿಯಲ್ಲಿ ಕೋಳಿ ಅಂಕಕ್ಕೂ ದೖವ ಅಪ್ಪಣೆ ನೀಡುತ್ತದೆ. ಹತ್ತು ಸಮಸ್ತರು ಸೇರಿ ಜಾತ್ರೆಯನ್ನು ಚಂದಗಾಣಿಸಿ, ಕೋಳಿ ಅಂಕ ನಡೆಸಿ, ಮಣ್ಣಿಗೆ ನೆತ್ತರು ಚೆಲ್ಲಿ ಎಂಬ ದೖವದ ನುಡಿ ಕೇಳುವುದೇ ಚಂದ..
ಬಳಿಕ ಮಾಡ ಅರಸು ಮಂಜಿಷ್ಣಾರ್ ಸನ್ನಿಧಿಗೆ ತಲುಪಿ ಮುಂಭಾಗದ ಬ್ರಹ್ಮ ಸಭಾ ಮಂಟಪದಿಂದ ದೖವ ಪ್ರತಿನಿಧಿಗಳು ಮಲ್ಲಿಗೆಯ ಹಾರ ತೊಟ್ಟುಕೊಳ್ಳುತ್ತವೆ
ನೆರೆದ ಗಣ್ಯರಿಗೆ ಮಲ್ಲಿಗೆ ಮಾಲೆಯ ತುಂಡೇ ಪ್ರಸಾದವಾಗಿ ನೀಡಲಾಗುತ್ತದೆ. ಒಟ್ಟಂದದಲ್ಲಿ 16 ಸಮುದಾಯದವರು ಸೇರಿ ಅರಸು ದೖವಗಳ ಜಾತ್ರೆಯನ್ನು ಚಂದಗಾಣಿಸಿಕೊಡಬೇಕೆಂದು ದೖವಪಾತ್ರಿಗಳ ಮೂಲಕ ಸಂಬಂಧಪಟ್ಟ ಜಾತೀಯ ಪ್ರಮುಖರಿಗೆ ಆಜ್ಞೆ ನೀಡುವುದೇ ಈ ಸಂಭ್ರಮ.

ಮಂಜೇಶ್ವರ ಅರಸು ದೖವಗಳ ಮಸೀದಿ ಭೇಟಿ ಮತ್ತು ಮಾಯಕದ ದರ್ಶನ ಹಾಗೂ ಜಮಾಯತಿನ ಜನರಿಗೆ ಆಹ್ವಾನ ನೀಡುವ ಈ ಪರಂಪರೆಗೆ 8 ಶತಮಾನದ ಹಿನ್ನೆಲೆ ಇದೆ. ಇದು ಮತೀಯ ಸಾಮರಸ್ಯದ ಭಾತೃತ್ವದ ಅಪೂರ್ವ ಸಂಕೇತ. ಇಂಥ ನಲ್ಮೆಯ ಧಾರ್ಮಿಕ ಪರಂಪರೆಯೇ ಉದ್ಯಾವರ ಮಾಡದ ವೖಶಿಷ್ಟ್ಯ. ಅದು ನಾಡಿನ, ಜನರ ಸಂಭ್ರಮವಾಗಬೇಕು. ದೖವದ ಕರೆಯಂತೆ ವರ್ಷಂಪ್ರತಿ ಮುಸಲ್ಮಾನ ಬಾಂಧವರು ಜಾತ್ರೆಯಲ್ಲಿ ಭಾಗವಹಿಸುತ್ತಾರೆ. ಅವರಿಗೆ ಕೂರಲೆಂದೇ ಪ್ರತ್ಯೇಕ ಕಟ್ಟೆ ಗೌರವಗಳಿವೆ. ಅಲ್ಲದೇ ಅವರಿಗೆ ಮಲ್ಲಿಗೆ ಪ್ರಸಾದವನ್ನೂ ನೀಡಲಾಗುತ್ತದೆ. ವರ್ಷಂಪ್ರತಿ ಜಾತ್ರೆಗೆ ದಿನ ನಿರ್ಣಯವಾಗುವುದೇ ಮುಸಲ್ಮಾನ ವ್ಯಾಪಾರಿಯಿಂದ ವೀಳ್ಯದೆಲೆ, ಅಡಿಕೆ ಖರೀದಿಯ ಮೂಲಕ. ಈ ಮೂಲಕ ಮತೀಯ ವೖರತ್ವಗಳಿಲ್ಲದೇ, ಬೇಧ, ಭಾವ ರಹಿತವಾಗಿ ಉದ್ಯಾವರ ಮಾಡದ ಜಾತ್ರೆ ಒಂದಮ್ಮನ ಮಕ್ಕಳಂತೆ ದೖವಕೃಪೆಯಿಂದ ನಡೆಯುತ್ತದೆ. ಈ ಮೂಲಕ ಸಹೃದಯ ಸಂದೇಶ ಸಾರುತ್ತದೆ.
-ರಾಜು ಬೆಳ್ಚಪಾಡ
(ಉದ್ಯಾವರ ಮಾಡ ಅಣ್ಣ ದೖವದ ಪಾತ್ರಿ)

ಈ ಬಾರಿಯ ಉದ್ಯಾವರ ಜಾತ್ರೆ ಮೇ 9ರಂದು ಆರಂಭಗೊಂಡು 12ರ ತನಕ ಜರಗಲಿದೆ. ಐದು ದಿನಗಳ ಜಾತ್ರೋತ್ಸವ ಗಡಿನಾಡಿನ ಹಬ್ಬ. 11ರಂದು ನಡು ಬಂಡಿ ಮತ್ತು 12ರಂದು ಕಡೆ ಬಂಡಿಯೊಂದಿಗೆ ಜಾತ್ರೆ ಸಂಪನ್ನವಾಗಲಿದೆ. ಭಕ್ತಾದಿಗಳೆಲ್ಲರೂ ಅರಸು ದೖವಕ್ಕೆ ಮಲ್ಲಿಗೆ ಸಮರ್ಪಿಸುವ ಅಪರೂಪದ ಮಲ್ಲಿಗೆ ಜಾತ್ರೆಯಾಗಿಯೂ ಉತ್ಸವ ಘಮಿಸುತ್ತದೆ.
ಚಿತ್ರಗಳು: ಕಣಿಪುರ ನ್ಯೂಸ್

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00