- ಕುಗ್ರಾಮದಲ್ಲಿ ತಲೆ ಎತ್ತಲಿದೆ ದೇಶದ ಅತ್ಯಪೂರ್ವ ಭತ್ತದ ತಳಿಗಳ ಮ್ಯೂಸಿಯಂ ಸಹಿತ ಅಧ್ಯಯನ ಕೇಂದ್ರ: ಗಡಿನಾಡಿಗೆ ಕೀರ್ತಿಯ ಯೋಜನೆಗೆ ವಿಷು ದಿನ ಮನ್ನುಡಿ..
ಬೆಳ್ಳೂರು: ಪದ್ಮಶ್ರೀ ಸತ್ಯನಾರಾಯಣ ಬೆಳೇರಿ ಅವರಲ್ಲಿರುವ 650 ಕ್ಕೂ ಅಧಿಕ ಭತ್ತದ ತಳಿಗಳನ್ನು ಸಂರಕ್ಷಿಸಿ ಜೋಪಾನ ಮಾಡುವುದರೊಂದಿಗೆ ಭತ್ತದ ತಳಿಗಳ ಮ್ಯೂಸಿಯಂ ಮತ್ತು ಅಧ್ಯಯನ ಕೇಂದ್ರ ಸ್ಥಾಪಿಸಲು ನಿರ್ಧರಿಸಲಾಗಿದೆ.
ವಿಷು ದಿನವಾದ ಎ. 15ರಂದು ನಿನ್ನೆ ಬೆಳೇರಿ ಅಭಿಮಾನಿ ಬಳಗವು ಬೆಳ್ಳೂರು ಶ್ರೀ ಮಹಾವಿಷ್ಣು ಕ್ಷೇತ್ರದಲ್ಲಿ ಪ್ರಾರ್ಥನೆ, ವಿಶೇಷ ಪೂಜೆ ಸಲ್ಲಿಸಿ ಯೋಜನೆ ಸಾಕಾರಕ್ಕೆ ಮುನ್ನಡಿ ಇಟ್ಟಿದೆ.

ಪದ್ಮಶ್ರೀ ಬೆಳೇರಿಗೆ 650 ಕ್ಕೂ ಅಧಿಕ ತಳಿಗಳನ್ನು ಸುವ್ಯವಸ್ಥಿತತವಾಗಿ ಇರಿಸಲು ಜಾಗವಿಲ್ಲ. ಹಟ್ಟಿಯ ಒಂದು ಕೋಣೆಯಲ್ಲೇ ಇದನ್ನೆಲ್ಲಾ ಜೋಪಾನ ಮಾಡಬೇಕಾಗಿದೆ. ಜತೆಗೆ ಪದ್ಮಶ್ರೀ ಸಹಿತ ರಾಷ್ಟ್ರ, ರಾಜ್ಯ ಪ್ರಶಸ್ತಿ ವಿಜೇತನಿಗೆ ಪ್ರಶಸ್ತಿ, ಪಾರಿತೋಷಕ ಇರಿಸಲೂ ಸ್ಥಳಾವಕಾಶಗಳಿಲ್ಲ.
ಜತೆಗೆ ದೇಶದ ನಾನಾ ಕಡೆಯ ಕೃಷಿ ವಿಜ್ಞಾನಿ ಸಂಶೋಧಕರು, ವಿದ್ಯಾರ್ಥಿಗಳು ಅಧ್ಯಯನಕ್ಕೆ ಬರುವ ಭವನವಾಗಿ ಇದು ಬದಲಾಗಿದೆ. ಆದರೆ ಯಾವುದೇ ಪ್ರಾಥಮಿಕ ಸೌಲಭ್ಯಗಳಿಲ್ಲ.

ಈ ಹಿನ್ನೆಲೆಯಲ್ಲಿ ಭತ್ತದ ಮ್ಯೂಸಿಯಂ ಜತೆಗೆ ತಳಿಗಳ ಕುರಿತಾದ ರಾಷ್ಟ್ರಿಯ ಅಧ್ಯಯನ-ಸಂರಕ್ಷಣ ಕೇಂದ್ರ ಸ್ಥಾಪಿಸಿ, ಮುಂದಿನ ಪೀಳಿಗೆಯ ದೃಷ್ಟಿ ಯಿಂದ ಕಾಳಜಿಯ ಕರ್ತವ್ಯ ನಿರತರಾಗುವುದು ಉದ್ದೇಶವಾಗಿದೆ.
ಈ ದೃಷ್ಟಿಯಲ್ಲಿ ಮೊದಲಿಗೆ ಟ್ರಸ್ಟ್ ರೂಪಿಸಿ ಮುನ್ನಡೆಯಲು ಗಣ್ಯರ ಮಾರ್ಗದರ್ಶನದಂತೆ ನಿರ್ಧರಿಸಲಾಯಿತು..
ಯೋಜನೆಗಾಗಿ “ರಾಮಾಯಣ ಕಾಲದ ಭತ್ತದ ತಳಿಯಾದ “ಅತಿಕಾರ” ಹೆಸರಿನಲ್ಲಿ ಟ್ರಸ್ಟ್ ರೂಪಿಸಿ, ಅದರ ಆಶ್ರಿತವಾಗಿ ಬೆಳೇರಿ ತಳಿ ಅಧ್ಯಯನ- ಸಂರಕ್ಷಣ ಕೇಂದ್ರ ಸ್ಥಾಪಿಸಲು ಉದ್ದೇಶಿಸಲಾಗಿದೆ. ಅತ್ಯುತ್ತರ ಕೇರಳ ಮತ್ತು ಕರಾವಳಿಯಲ್ಲಿ ಭತ್ತದ ತಳಿ ಸಂರಕ್ಷಣಾ ಉದ್ದೇಶದೊಂದಿಗೆ ಎಕಾಡೆಮಿಕಲ್ ಸಂಸ್ಥೆಯೊಂದು ಖಾಸಗಿಯಾಗಿ ಕಾಳಜಿಯಿಂದ ಉದಿಸುವುದು ಇದೇ ಮೊದಲಬಾರಿಯಾಗಿದೆ.
ಯೋಜನೆ ಸಾಕಾರಕ್ಕಾಗಿ ಬೆಳೇರಿ ಪರಿಸರದಲ್ಲೇ ವಿಶಾಲ ಸ್ಥಳ ಅವಶ್ಯವಾಗಿದ್ದು, ಅಧರ ಪರಿಶೀಲನೆ ನಡೆದಿದೆ. ಶೀಘ್ರವೇ ಅದರ ಖರೀದಿಯಾಗಿ ಅಲ್ಲಿ ಟ್ರಸ್ಟ್ ಉದ್ಘಾಟನೆ ಸಹಿತ ತಳಿಗಳ ಅಧ್ಯಯನ- ಸಂರಕ್ಷಣ ಕೇಂದ್ರ ಕ್ಕೆ ಶಿಲಾನ್ಯಾಸವಾಗಲಿದೆ. ಬೆಳೇರಿಯವರ ಭತ್ತದ ತಳಿ ಇರಿಸುವ ಸ್ಥಳ ಕಂಡು ಮರುಗಿ ಅದಕ್ಕೊಂದು ಯೋಗ್ಯ ವ್ಯವಸ್ಥೆಗಳಾಗಬೇಕೆಂದು ಬಯಸಿ ಉದ್ಯಮಿ, ಧಾರ್ಮಿಕ ಮುಂದಾಳು ಮಧುಸೂಧನ ಆಯರ್ ಅವರು ಪ್ರಪ್ರಥಮ 4 ಲಕ್ಷ ರೂಗಳ ದೇಣಿಗೆ ನೀಡುವಲ್ಲಿಂದ ಈ ಯೋಜನೆಗೆ ಬೀಜಾಂಕುರವಾಯಿತು.
ಬೆಳ್ಳೂರು ಶ್ರೀ ಮಹಾವಿಷ್ಣು ದೇವಾಲಯದಲ್ಲಿ ನಿನ್ನೆ ಸಂಜೆ ನಡೆದ ಸಮಾಲೋಚನಾ ಸಭೆಯಲ್ಲಿ ಉದ್ಯಮಿ ಮಧುಸೂಧನ ಆಯರ್ ಅಧ್ಯಕ್ಷತೆ ವಹಿಸಿದರು. ಪ್ರಗತಿಪರ ಕೃಷಿಕ, ಸಾಮಾಜಿಕ ಮುಂದಾಳು ಕಲ್ಲಗ ಚಂದ್ರ ಶೇಖರ ರಾವ್ ಮಾರ್ಗದರ್ಶನವಿತ್ತರು. ಪತ್ರಕರ್ತ ಎಂ. ನಾ. ಚಂಬಲ್ತಿಮಾರ್ ಯೋಜನೆಗಳ ಪರಿಕಲ್ಪನೆ, ಟ್ರಸ್ಟ್ ರಚನೆಯ ಕಾರ್ಯವೖಖರಿ ಕುರಿತು ಮಾತನಾಡಿದರು. ಪದ್ಮಶ್ರೀ ಸತ್ಯನಾರಾಯಣ ಬೆಳೇರಿ, ನಿವೃತ್ತ ಅಧ್ಯಾಪಕ ಕುಂಞಿ ರಾಮ ಮಣಿಯಾಣಿ, ಕವಿ, ಲೇಖಕ ದಯಾನಂದ ರೖ ಕಳ್ವಾಜೆ ಉಪಸ್ಥಿತರಿದ್ದು ಅಭಿಪ್ರಾಯ ಮಂಡಿಸಿದರು.






