ಎಲ್ಲಾ ಕಾಲಕ್ಕೂ ಮಾನವ ಸಂಬಂಧಗಳನ್ನು ಬೆಸೆಯುವ ಪ್ರಯತ್ನಗಳು ಕಾವ್ಯ ಸಾಹಿತ್ಯ ಜಗತ್ತಲ್ಲಿ ನಡೆಯುತ್ತಲೇ ಇರಬೇಕು

by Narayan Chambaltimar
  • ಅನಂತಪುರದಲ್ಲಿ “ಬದುಕು ಭಾವ ಜೀವ” ಚೊಚ್ಚಲ ಕವನ ಸಂಕಲನ ಬಿಡುಗಡೆಗೊಳಿಸಿ ಡಾ. ಕೆ. ಚಿನ್ನಪ್ಪ ಗೌಡ

ಕುಂಬಳೆ: ಎಲ್ಲಾ ಕಾಲಕ್ಕೂ ಮಾನವ ಸಂಬಂಧಗಳನ್ನು ಬೆಸೆಯುವ, ಮಾನವೀಯತೆ ಎತ್ತಿ ಹಿಡಿಯುವ ಪ್ರಯತ್ನಗಳು ಕಾವ್ಯ ಸಾಹಿತ್ಯಗಳಲ್ಲಿ ನಡೆಯುತ್ತಲೇ ಇರಬೇಕು.
ಅದರ ಜತೆಗೆ ಕನ್ನಡ ಕಾವ್ಯ ಜಗತ್ತಲ್ಲಿ ನಡೆದಿರುವ ನಾನಾ ರೀತಿಯ ಪ್ರಯೋಗಗಳನ್ನು ಹೊಸ ಪೀಳಿಗೆಯ ಕವಿಗಳು ಓದಿ ಅರಿಯಬೇಕು ಎಂದು ಹಿರಿಯ ಜಾನಪದ ವಿದ್ವಾಂಸ, ಕರ್ನಾಟಕ ಜಾನಪದ ವಿ. ವಿ. ವಿಶ್ರಾಂತ ಕುಲಪತಿ ಡಾ. ಕೆ. ಚಿನ್ನಪ್ಪ ಗೌಡ ನುಡಿದರು.
ಅನಂತಪುರ ಕ್ಷೇತ್ರದ ಅನಂತಶ್ರೀ ಸಭಾ ಭವನದಲ್ಲಿ ಆದಿತ್ಯವಾರ ಅಪರಾಹ್ನ ನಡೆದ ದಿ. ಸದಾಶಿವ ಅನಂತಪುರ ಪಂಚಮಸ್ಮೃತಿ ಪುರಸ್ಕಾರ ಪ್ರದಾನ ಸಮಾರಂಭ ಮತ್ತು ಸತ್ಯ ಶಂಕರ ಅನಂತಪುರ ಅವರ “ಬದುಕು-ಭಾವ-ಜೀವ”
ಚೊಚ್ಚಲ ಕವನ ಸಂಕಲನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಮನುಷ್ಯ ಸಂಬಂಧಗಳನ್ನು ಛಿದ್ರಗೊಳಿಸುವ ಕೆಲಸಗಳೇ ವಿಜ್ರಂಭಿಸುವ ಮತ್ತು ಇಂತಹ ಕೆಲಸಗಳನ್ನು ಸಂಭ್ರಮಿಸುವ ಕಾಲದಲ್ಲಿ ಮಾನವೀಯ ಮೌಲ್ಯಗಳಿಗೆ ಪರವಾಗಿ ನಡೆಯುವ ಜೀವ ಪರವಾದ ಪ್ರಯತ್ನಗಳು ಭವಿಷ್ಯದ ಕುರಿತು ನಮ್ಮಲ್ಲಿ ಭರವಸೆ ಮೂಡಿಸುತ್ತದೆ ಎಂದು ಅವರು ಹೇಳಿದರು.
ಭಾವ ಜಗತ್ತು ಮತ್ತು ವೈಚಾರಿಕತೆ ಎರಡೂ ಸಂತುಲಿತ ಪ್ರಮಾಣದಲ್ಲಿ ಇದ್ದಾಗ ಒಳ್ಳೆಯ ಜೀವನ ಸಾಧ್ಯವಾಗುತ್ತದೆ. ಸತ್ಯ ಶಂಕರ ಅವರ ಕವಿತೆಗಳು ಅವರ ಕುಟುಂಬದ ಮೂರು ತಲೆಮಾರುಗಳ ಜನರ ಬದುಕಿನಿಂದ ಪ್ರಭಾವಿತವಾಗಿವೆ ಎಂದು ಡಾ.ಕೆ.ಚಿನ್ನಪ್ಪ ಗೌಡ ಅಭಿಪ್ರಾಯಪಟ್ಟರು.
ಇತರ ಪ್ರಕಾರಗಳಿಗೆ ಹೋಲಿಸಿದರೆ ಕಾವ್ಯ ಅತ್ಯಂತ ಪ್ರಭಾವಶಾಲಿ ಮಾಧ್ಯಮ. ಕನಿಷ್ಠ ಪದಗಳು, ರೂಪಕಗಳ ಮೂಲಕ ಪರಿಣಾಮಕಾರಿ ಸಂವಹನ ಇಲ್ಲಿ ಸಾಧ್ಯ. ಅಲ್ಲದೆ ಕವನಗಳ ಮೂಲಕ ಕವಿಯೂ ಕೆಲವೆಡೆ ಪ್ರಕಟಗೊಳ್ಳುವುದನ್ನು ಗಮನಿಸಬಹುದು ಎಂದರು.

ಕವಿತೆಗಳು ಒಂದೇ ಓದಿಗೆ ಅರ್ಥ ಆಗಿಲ್ಲ ಎಂದರೆ ಅದು ರಚನೆಯ ಕೋರತೆಯೋ, ಓದುಗನ ಕೊರತೆಯೋ.. ಎಂದು ಪ್ರಶ್ನಿಸಿದ ಡಾ. ಚಿನ್ನಪ್ಪ ಗೌಡರು ಕವಿತೆ ಒದುಗನೊಳಗೆ ಮಿಂಚು ಹರಿಸಿದಂತ ಅನುಭವ ನೀಡಬೇಕು. ಅದೊಂದು ಸಂವೇದನೆ ಮೂಡಿಸಬೇಕು. ಅದು ಕನಿಷ್ಟ ಮನಸ್ಸನ್ನು ತಟ್ಟಬೇಕು. ಬಳಿಕ ಓದುತ್ತಾ ಹೋದಂತೆ ನಾನಾರ್ಥಗಳನ್ನು ತೆರೆಯಬೇಕು ಎಂದರು.

ಹಿರಿಯ ಮೃದಂಗ ವಾದಕ ದಿ.ಶ್ರೀ ಸದಾಶಿವ ಅನಂತಪುರ ಪಂಚಮ ಸ್ಮೃತಿ ಪುರಸ್ಕಾರಕ್ಕೆ
ಹಿರಿಯ ಚರ್ಮ ವಾದ್ಯ ತಯಾರಕ ಕೆ.ಸದಾನಂದ ರಾವ್ ಕೂಡ್ಲು ಅವರು ಆಯ್ಕೆಯಾಗಿದ್ದಾರೆ. ಅನಿವಾರ್ಯ ಕಾರಣಗಳಿಂದ ಸಮಾರಂಭದಲ್ಲಿ ಭಾಗವಹಿಸದ
ಕೆ.ಸದಾನಂದ ರಾವ್ ಕೂಡ್ಲು ಅವರ ಮನೆಗೆ ತೆರಳಿ ಪುರಸ್ಕಾರ ಪ್ರದಾನ ಮಾಡುವ ಕುರಿತು ಸಂಘಟಕರು ಪ್ರಕಟಿಸಿದರು.
ಕವನ ಸಂಕಲನದ ಕವಿ ಸತ್ಯ ಶಂಕರ ಅನಂತಪುರ ತಮ್ಮ ಕಾವ್ಯ ಯಾನದ ಕುರಿತು ಮಾತನಾಡಿದರು.
ಹಿರಿಯ ಕವಿಗಳಾದ ಶ್ರೀಕೃಷ್ಣಯ್ಯ ಅನಂತಪುರ ಅಧ್ಯಕ್ಷತೆ ವಹಿಸಿದರು.

ಅನಂತಪುರ ಕ್ಷೇತ್ರ ಅರ್ಚಕ ವೇ. ಮೂ. ಸುಬ್ರಹ್ಮಣ್ಯ ಭಟ್ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಕೃತಿ ಪರಿಚಯಿಸಿದ ರಾಧಾಕೃಷ್ಣ ಕೆ‌. ಉಳಿಯತ್ತಡ್ಕ ಅವರು, ಸಮಕಾಲೀನತೆಯನ್ನು ಸೃಜನಶೀಲತೆಗೆ ಒಗ್ಗಿಸಿಕೊಂಡ ಸತ್ಯಶಂಕರ ಅವರು ಗಡಿನಾಡಿನ ಸಂವೇದನಾಶೀಲ ಕವಿ ಎಂಬುದನ್ನು ತನ್ನ ರಚನೆಗಳ ಮೂಲಕ ಸಾಬೀತುಪಡಿಸಿದ್ದಾರೆ ಎಂದರು.
ಪದ್ಮಶ್ರೀ ಸತ್ಯನಾರಾಯಣ ಬೆಳೇರಿ, , ಡಾ.ಟಿ.ಕೆ.ಯಶೋಧಾ, ಡಾ.ಬೇ.ಸಿ.ಗೋಪಾಲಕೃಷ್ಣ ಭಟ್, ಪ್ರಕೃತಿ ಯುವ ತಂಡ ಅಧ್ಯಕ್ಷ ಲೋಕಯ್ಯ ಸಿದ್ದಿಬೈಲು ಅತಿಥಿಗಳಾಗಿದ್ದರು.
ಚೈತ್ರಾ ಸತ್ಯ ಶಂಕರ್ ಸ್ವಾಗತಿಸಿದರು. ಕೀರ್ತನಾ ಎನ್.ರಾವ್ ಪ್ರಸ್ತಾವನೆಗೈದರು. ವಿಜಯ ಕುಮಾರ್ ಅನಂತಪುರ ವಂದಿಸಿದರು. ಪತ್ರಕರ್ತ ಎಂ.ನಾ ಚಂಬಲ್ತಿಮಾರ್ ಕಾರ್ಯಕ್ರಮ ನಿರೂಪಿಸಿದರು .
ಸದಾಶಿವ ಅನಂತಪುರ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಪ್ರಕೃತಿ ಯುವ ತಂಡ ಸಹಯೋಗದಲ್ಲಿ
ಸಮಾರಂಭ ಆಯೋಜಿಸಲಾಯಿತು.
ಗ್ರಾಮೀಣ ಪರಿಸರದಲ್ಲಿ ಕವನ ಸಂಕಲನ ಬಿಡುಗಡೆಗೆ ನೂರಾರು ಮಂದಿ ನೆರೆದದ್ದು ಕಾರ್ಯಕ್ರಮದ ವಿಶೇಷತೆ.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00