- ಕನ್ನಡ ಮಕ್ಕಳನ್ನು ಸಾಧಕರನ್ನಾಗಿಸುವ
ರಂಗಚೇತನದ ಕಾಳಜಿಯ ಕಾಯಕ ನಿಜವಾದ ಕನ್ನಡ ಕಟ್ಟುವ ಕೆಲಸ: ಮಂಜೇಶ್ವರ ಶಿಕ್ಷಣಾಧಿಕಾರಿ ಜಾರ್ಜ್ ಕ್ರಾಸ್ತ
ಪೆರ್ಮುದೆ:ಗಡಿನಾಡಿನ ಗ್ರಾಮೀಣ ಕನ್ನಡ ವಿದ್ಯಾರ್ಥಿಗಳನ್ನು ಸಾಧನಾಶೀಲ ಪ್ರತಿಭೆಗಳನ್ನಾಗಿ ಮೂಡಿಸುವ ಉದ್ದೇಶದೊಂದಿಗೆ ಕಾಸರಗೋಡಿನ ಕನ್ನಡ ರಂಗಾಸಕ್ತ ಅಧ್ಯಾಪಕರ ಒಕ್ಕೂಟವಾದ ‘ರಂಗಚೇತನ ಕಾಸರಗೋಡು’ ವತಿಯಿಂದ ಆರನೇ ವರ್ಷದ ಚಿಣ್ಣರ ದೃಶ್ಯಕಾವ್ಯ-ತ್ರಿದಿನ ಸನಿವಾಸ ಶಿಬಿರ ‘ಚಿತ್ತಾರ-2026’ ಚೇವಾರಿನ ಎಸ್. ಎಸ್. ಎಯುಪಿ ಶಾಲೆಯಲ್ಲಿ ಆರಂಭಗೊಂಡಿತು. ಎ. 11ರಿಂದ 13 ರ ತನಕ ನಡೆಯುವ ತ್ರಿದಿನ ಸಮಾರಂಭವನ್ನು ಶಿಬಿರಾರ್ಥಿಗಳಲ್ಲಿ ಭವಿಷ್ಯದ ಭರವಸೆಯ ಕನಸುಗಳನ್ನು ಬಿತ್ತಿ ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿ ಜಾರ್ಜ್ ಕ್ರಾಸ್ತ ದೀಪ ಬೆಳಗಿಸಿ ಉದ್ಘಾಟಿಸಿದರು.

ಗಡಿನಾಡ ಕನ್ನಡ ವಿದ್ಯಾರ್ಥಿಗಳು ಸ್ಪರ್ಧಾ ಪ್ರಪಂಚದಲ್ಲಿ ಹಿಂದುಳಿಯಬಾರದು ಎಂಬ ಕಾಳಜಿಯಿಂದ ಕಾಸರಗೋಡಿನ ರಂಗಪ್ರೇಮಿ ಕನ್ನಡ ಅಧ್ಯಾಪಕರು ಸ್ವ ಇಚ್ಛೆಯಿಂದ ನಡೆಸುವ ಈ ಶಿಬಿರ ಕನ್ನಡ ಮಕ್ಕಳ ಪ್ರತಿಭಾ ಪೋಷಣೆಯೊಂದಿಗೆ ನಿಜವಾದ ಕನ್ನಡ ಸಾಧಕರನ್ನು ಸೃಷ್ಟಿಸುವ ಮತ್ತು ಕನ್ನಡ ಕಟ್ಟುವ ಕೆಲಸ. ಇದು ಅತ್ಯಂತ ಶ್ಲಾಘನೀಯ ಎಂದರು. ಆಧುನಿಕ ಜಗತ್ತಿನಲ್ಲಿ ಡಿಜಿಟಲ್ ವ್ಯಸನಗಳಿಂದ ಮಕ್ಕಳನ್ನು ಪಾರಾಗಿಸಲು ಇಂಥಾ ಬೇಸಿಗೆ ಶಿಬಿರ ಅತ್ಯಗತ್ಯ. ಇದು ವಿದ್ಯಾರ್ಥಿ ವಿಕಾಸಕ್ಕೆ ಪೂರಕ ಎಂದವರು ನುಡಿದರು.
ಕಾರ್ಯಕ್ರಮದಲ್ಲಿ ಪ್ರಸಕ್ತ ವರ್ಷ ಸೇವಾ ನಿವೃತ್ತಿ ಹೊಂದುವ ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿ ಜಾರ್ಜ್ ಕ್ರಾಸ್ತ ಅವರನ್ನು ರಂಚೇತನ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ಕುಂಬಳೆ ಜಿಎಸ್ ಬಿಎಸ್ ಮುಖ್ಯೋಪಾಧ್ಯಾಯ ವಿಜಯ ಕುಮಾರ ಪಾವಳ ಸನ್ಮಾನ ಪತ್ರ ವಾಚಿಸಿದರು.

ಸಮಾರಂಭದಲ್ಲಿ ಕಾಸರಗೋಡು ರಂಗಚೇತನ ಅಧ್ಯಕ್ಷ ಡಾ. ಯತೀಶ್ ಕುಮಾರ್ ರೖ ಅಧ್ಯಕ್ಷತೆ ವಹಿಸಿದರು. ಕಸಾಪ ಕೇರಳ ಗಡಿನಾಡ ಘಟಕದ ಪ್ರಧಾನ ಕಾರ್ಯದರ್ಶಿ ಪ್ರದೀಪ ಕುಮಾರ ಶೆಟ್ಟಿ ಬೇಳ ಮುಖ್ಯ ಅತಿಥಿಯಾಗಿ ಪಾಲ್ಗೊಂಡರು.
ಚೇವಾರು ಎಸ್. ಎಸ್. ಎಯುಪಿ ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ಯು, ಪತ್ರಕರ್ತ ಎಂ. ನಾ. ಚಂಬಲ್ತಿಮಾರ್ ಶುಭಾಶಂಸನೆ ಮಾಡಿದರು. ರಂಗಚೇತನ ಕಾರ್ಯದರ್ಶಿ ಗೋಪಾಲ ಪಿ. ಕೆ ಸ್ವಾಗತಿಸಿ, ಅಶೋಕ ಕೊಡ್ಲಮೊಗರು ವಂದಿಸಿದರು. ದಿವಾಕರ ಬಲ್ಲಾಳ್ ಕಾರ್ಯಕ್ರಮ ನಿರೂಪಿಸಿದರು.
ಗಡಿನಾಡ ರಂಗಾಸಕ್ತ ಕನ್ನಡ ಅಧ್ಯಾಪಕರ ರಂಗವೇದಿಕೆ ರಂಗಚೇತನ ವತಿಯಿಂದ ವರ್ಷಂಪ್ರತಿ ಕನ್ನಡ ವಿದ್ಯಾರ್ಥಿಗಳಿಗಾಗಿ ಉಚಿತ ರಂಗಶಿಬಿರ ನಡೆಸುತ್ತಿದೆ. ಕೇವಲ ರಂಗಭೂಮಿಯಷ್ಟೇ ಅಲ್ಲ, ಮಕ್ಕಳ ಸೃಜನಶೀಲ ಸುಪ್ತ ಪ್ರತಿಭೆಯನ್ನು ಪೋಷಿಸಿ ವ್ಯಕ್ತಿತ್ವ ವಿಕಾಸದ ಜತೆ ವಿದ್ಯಾರ್ಥಿಗಳನ್ನು ಸಾಧನಾ ಶೀಲರನ್ನಾಗಿಸುವುದೇ ಉದ್ದೇಶ. ಕೇವಲ ಆರು ವರ್ಷ ದಾಟಿದ ಈ ಶಿಬಿರಕ್ಕೆ ಈಗ ಬೇಡಿಕೆ ಬಂದಿದೆ. ನಮ್ಮಲ್ಲಿ ಮಾಡಿ ಎಂದು ವಿವಿಧ ಶಾಲೆಯವರು ಆಹ್ವಾನಿಸುತ್ತಿದ್ದಾರೆ.
–ದಿವಾಕರ ಬಲ್ಲಾಳ್ ಎಬಿ

ಮಂಜೇಶ್ವರ- ಕುಂಬಳೆ ಉಪಜಿಲ್ಲೆಯ ವಿವಿಧ ಶಾಲೆಗಳಿಂದ ಆಯ್ದ 60 ಮಕ್ಕಳು ತ್ರಿದಿನ ಸನಿವಾಸ ಶಿಬಿರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮೊದಲ ದಿನ ಉದ್ಘಾಟನೆಯ ಬಳಿಕ ‘ಕರಗಲಿ ಮೋಡ -ಒಂದಾಗಿ ಕುಣಿಯೋಣ’ ಎಂಬ ಶೀರ್ಷಿಕೆಯೊಂದಿಗೆ ಮಕ್ಕಳನ್ನು ಶಿಬಿರದ ಲೋಕಕ್ಕೆ ಕರೆ ತರುವ ಆರಂಭಿಕ ಸೆಷನ್ ಸದಾಶಿವ ಬಾಲಮಿತ್ರ ಮತ್ತು ದಿವಾಕರ ಬಲ್ಲಾಳ್ ಎ. ಬಿ. ನಡೆಸಿಕೊಟ್ಟರು. ಬಳಿಕ ರಂಗಾಭಿನಯ-ಸಂವಹನದ ಕುರಿತು ನಿರ್ಮಲ್ ಕಾರಡ್ಕ ತರಗತಿ ನಡೆಸಿದರು. ಮೂರು ದಿನಗಳ ಪರ್ಯಂತ ನಡೆಯುವ ಶಿಬಿರದಲ್ಲಿ ವಿವಿಧ ಕ್ಷೇತ್ರದ ಸಂಪನ್ಮೂಲ ವ್ಯಕ್ತಿಗಳು ಪಾಲ್ಗೊಳ್ಳುವರು.






