ಗಡಿನಾಡು ಕಾಸರಗೋಡು ಭಾಗದಲ್ಲಿ ಭಾರೀ ಸಂಖ್ಯೆಯ ವಿಶೇಷ ಹಲಸು ತಳಿಗಳು ನಾಶ: ಪದ್ಮಶ್ರೀ ಸತ್ಯನಾರಾಯಣ ಬೆಳೇರಿ ವಿಷಾದ

by Narayan Chambaltimar
  • ಕಾಸರಗೋಡು, ಮಂಜೇಶ್ವರ ತಾಲೂಕಿನ ಗಡಿ ಪ್ರದೇಶದ ಹಲಸು ಪ್ರಬೇಧದ ಸಮೀಕ್ಷೆ, ಅಧ್ಯಯನ ಅಗತ್ಯ

ಕೇರಳ ರಾಜ್ಯದ ಔದ್ಯೋಗಿಕ ಹಣ್ಣೆಂಬ ಮಾನ್ಯತೆಗಳಿದ್ದರೂ ಗಡಿನಾಡು ಕಾಸರಗೋಡಿನಲ್ಲಿ ನೆಲಮೂಲದ ಹಲಸು ತಳಿಗಳು ಸಾಕಷ್ಟು ಸಂಖ್ಯೆಯಲ್ಲಿ ನಾಶವಾಗಿದೆ. ಕೆಲವಷ್ಟೇ ಉಳಿದಿದೆ. ಇಲ್ಲಿನ ಹಲಸು ಪ್ರಬೇಧಗಳಿಗೆ ಹಲವು ಶವಿಶೇಷತೆಗಳಿವೆ. ಈ ಕುರಿತೊಂದು ಸಮೀಕ್ಷೆ ಅಗತ್ಯ ಎನ್ನುತ್ತಾರೆ ಪದ್ಮಶ್ರೀ ಸತ್ಯನಾರಾಯಣ ಬೆಳೇರಿ…

ಬದಿಯಡ್ಕ:
ಇತರ ಪ್ರದೇಶಗಳಿಂದ ಭಿನ್ನವಾಗಿ ಮತ್ತು ಹಲವು ವಿಶೇಷ ಹಲಸಿನ ತಳಿಗಳಿದ್ದ ಕಾಸರಗೋಡು ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಪ್ರಾಚೀನ ಹಲಸು ತಳಿಗಳು ನಾಶವಾಗಿದ್ದು, ಕೆಲವೇ ಕೆಲವಷ್ಟೇ ಉಳಿದಿವೆ. ಆಧುನಿಕ ತಳಿ ಭರಾಟೆಯ ಜನಪ್ರಿಯತೆಗಳ ನಡುವೆ, ನೆಲಮೂಲದ ತಾಜಾ ತಳಿಗಳ ಕುರಿತು ಜಾಗೃತಿ ಮತ್ತು ಕಾಳಜಿಯ ಕೊರತೆ ಉಂಟಾಗಿದೆ. ಆದ್ದರಿಂದ ಗಡಿನಾಡು
ಕಾಸರಗೋಡಿನಲ್ಲಿ ನೆಲಮೂಲದ ಪ್ರಾಚೀನ ಹಲಸು ತಳಿಗಳ ಸಮೀಕ್ಷೆ ಮತ್ತು ಸಂರಕ್ಷಣೆ ಅತ್ಯಂತ ಆಗತ್ಯವಾಗಿ ನಡೆಯಬೇಕಿದೆ ಎಂದು ಪದ್ಮಶ್ರೀ ಸತ್ಯನಾರಾಯಣ ಬೆಳೇರಿ ನುಡಿದರು.

‘ಕಣಿಪುರ’ ನ್ಯೂಸ್ ಜತೆ ಮಾತನಾಡಿದ ಅವರು ಆಧುನಿಕ, ಆಕರ್ಷಕ ತಳಿಗಳ ಮಾರಾಟ ಜಾಲಕ್ಕೆ ಮರುಳಾಗುವ ಮುನ್ನ ನಮ್ಮದೇ ನೆಲದ, ವೖಶಿಷ್ಟ್ಯ ಭರಿತ ತಳಿಗಳ ಅರಿವು, ರಕ್ಷಣೆ, ಅಧ್ಯಯನ ಕಾಸರಗೋಡು, ಮಂಜೇಶ್ವರ ತಾಲೂಕಿನಲ್ಲಿ ಅಗತ್ಯ ನಡೆಯಬೇಕೆಂದರು.

ಒಂದು ಹಲಸಿನಲ್ಲಿ ಸಾವಿರ ಬೀಜಗಳಿದ್ದರೂ ಅದರಿಂದ ಹುಟ್ಟುವ ಸಾವಿರ ಗಿಡಗಳೂ ಒಂದೇ ಥರ ಇರಲಾರವು. ಅದು ಮೂಲ ಜಾತಿ, ರುಚಿಬೇಧಗಳಿಂದ ಭಿನ್ನವಾಗಿರುತ್ತದೆ. ಮೂಲ ತಳಿಯನ್ನು ಉಳಿಸಬೇಕಿದ್ದರೆ ಕಸಿ ಕಟ್ಟುವುದಲ್ಲದೇ ಪರ್ಯಾಯ ವಿಧಾನಗಳಿಲ್ಲ. ಅನೇಕ ತಳಿಗಳು ಮಣ್ಣು, ಪರಿಸರದ ಪ್ರಭಾವದಿಂದ ಸಂಕರ ಮಿಶ್ರಿತವಾಗುತ್ತದೆ ಎಂದರು.

ದಶಕಗಳ ಹಿಂದೆ ಕಾಸರಗೋಡಿನ ಬ್ರಾಹ್ಮಣರ ಅಡಿಕೆ ತೋಟಗಳ ಸುತ್ತಲೂ ವಿಭಿನ್ನವಾದ ಹಲಸಿನ ಮರಗಳಿದ್ದುವು. ರುಚಿಕರವಾದ ದೋಸೆಗೆ ಸೂಕ್ತವಾದದ್ದು, ಹಪ್ಪಳಕ್ಕೆ ಸೂಕ್ತವಾದದ್ದು, ತಿಂಡಿ ತಿನಿಸುಗಳಿಗೆ, ಫ್ರೖ, ಕಬಾಬ್ ಗೆ ಸೂಕ್ತವಾದದ್ದು, ಹಣ್ಣಿನ ಸೇವನೆ, ಗುಜ್ಜೆ, ಉಪ್ಪುಸೊಳೆ
ಹೀಗೆ ನಾನಾ ಉದ್ದೇಶಕ್ಕೆಂದೇ ಸೂಕ್ತವಾದ ಹಲಸು ದೊರೆಯುವ ತಳಿಗಳು ಧಾರಾಳ ಇದ್ದುವು. ಆದರೆ ಕಾಲಕ್ರಮೇಣ ಮರಗಳು ಮುಪ್ಪಾಗಿ ಕುಸಿದು ಆಥವಾ ಬೆಳೆದ ಮರ ಕಡಿದು ಮಾರಾಟಗಳಿಂದ ಮರವೇ ನಾಶಗೊಂಡು ತಳಿ ನಿರ್ವಂಶವಾಗಿದೆ. ಕೃಷಿ ಬದುಕಿನ ಸಂಸ್ಕೃತಿಯ ಸ್ಥಿತ್ಯಂತರದಿಂದ ಹೊಸ ಪೀಳಿಗೆಗೆ ಈ ಕುರಿತಾದ ಅರಿವು, ಕಾಳಜಿಯ ಕೊರತೆಯಿಂದಲೂ ತಳಿ ನಾಶ ಉಂಟಾಗುತ್ತಿದೆ. ಈಗಲೂ ಪೖವಳಿಕೆ, ಎಣ್ಮಕಜೆ, ಬೆಳ್ಳೂರು, ದೇಲಂಪಾಡಿ, ಬದಿಯಡ್ಕ, ಮಧೂರು ಮೊದಲಾದ ಗ್ರಾ. ಪಂ ವ್ಯಾಪ್ತಿಯ ಹಳೇ ಅಡಿಕೆ ತೋಟಗಳ ಸುತ್ತ ಗತ ಪರಂಪರೆಯ ಪ್ರಾಚೀನ ತಳಿಗಳ ಪಳೆಯುಳಿಕೆಗಳಿವೆ. ಆದರೆ ಈ ಕುರಿತು ಸಮೀಕ್ಷೆ, ಅಧ್ಯಯನ ನಡೆದಿಲ್ಲ. ಅದರಿಂದಾಗಿ ಕಾಸರಗೋಡಿನ ನೆಲದ ವೖಶಿಷ್ಟ್ಯದ ತಳಿ ವಿಶೇಷಗಳ ದಾಖಲಾತಿಗಳಾಗಿಲ್ಲ ಎಂದು ಸತ್ಯ ನಾರಾಯಣ ಬೆಳೇರಿ ಹೇಳಿದರು.

ನಾನು ಹಿಂದೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ದಿನಗಳಲ್ಲಿ ನಮ್ಮೂರಲ್ಲೇ ಅಡಿಕೆ ತೋಟವೊಂದರಲ್ಲಿ ಬಿಳಿ ಸೊಳೆಯ ಹಲಸನ್ನು ಕಂಡಿದ್ದೆ. ಅದರ ದೋಸೆ ಮಾಡಿದರೂ ಅದು ಬಿಳಿಯೇ ಇರುತಿತ್ತು. ಈ ರೀತಿಯಲ್ಲಿ ಅನೇಕ ತಳಿ ಕಾಸರಗೋಡಿನ ಮಣ್ಣಿನಿಂದ ಕಾಣೆಯಾಗಿದೆ. ನಮ್ಮ ಗಡಿನಾಡ ಮಣ್ಣಿಗೆ ಇತರ ಊರಿನ ಜನಪ್ರಿಯ, ವೖವಿಧ್ಯ ತಳಿಗಳು ಪೂರಕವಲ್ಲ. ಅತ್ಯಧಿಕ ಮಳೆ, ಬಿಸಿಲು ಲಭಿಸುವ ನಮ್ಮ ನೆಲಕ್ಕೆ ಒಗ್ಗಿ, ಇಲ್ಲೇ ಬೆಳೆದ ತಳಿಗಳಿವೆ. ಇಂದೀಗ ಹಲಸಿಗೂ ಬಂಗಾರದ ಬೆಲೆ ಬಂದಿದೆ. ಆದರೆ ಹಿಂದಿನವರು ಉದರ ನಿಮಿತ್ತವಾದರೂ ರುಚಿ ವೖವಿಧ್ಯದ ತಳಿಗಳನ್ನು ಕಾಪಾಡಿದ್ದರು. ನಾವದನ್ನು ಉಳಿಸಬೇಡವೇ?
ಪದ್ಮಶ್ರೀ ಸತ್ಯ ನಾರಾಯಣ ಬೆಳೇರಿ

ಕಾಸರಗೋಡಿನ ತೆಂಕಣ ಭಾಗಕ್ಕಿಂತಲೂ ಗಡಿನಾಡಿನ ಕೃಷಿಕರ ನಡುವೆ ನೂರಾರು ಬಗೆಯ ಹಲಸು ತಳಿಗಳಿವೆ. ಹಣ್ಣಾಗಿಯೂ, ಆಹಾರ ಉತ್ಪನ್ನವಾಗಿಯೂ ಬಳಕೆಯಾಗಿ ಜನಪ್ರಿಯತೆ ಪಡೆದರೂ ಕಾಸರಗೋಡಿನಲ್ಲಿ ಈ ಕುರಿತಾದ ತಾತ್ಸಾರ ಮುಂದುವರಿಯುತ್ತಿದೆ. ಕೆವಿಕೆಯ ಕೃಷಿ ವಿಜ್ಞಾನಿಗಳು, ಕೃಷಿ ಅಧ್ಯಯನ ಕೇಂದ್ರಗಳು ಈ ಕುರಿತು ಗಮನ ಹರಿಸಬೇಕಿವೆ. ಸರಕಾರದ ಕೃಷಿ ಇಲಾಖೆಯೂ ಕಾಳಜಿ ವಹಿಸಬೇಕಿದೆ ಎಂದು ಸತ್ಯನಾರಾಯಣ ಬೇಳೇರಿ ನುಡಿದರು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00