- ಮನೆಯಂಗಳದಲ್ಲೇ ಕೃಷಿ ಸಂವಾದ: ಅಧ್ಯಯನಾಸಕ್ತ ಮಕ್ಕಳಿಗೆ ಮೇಷ್ಟ್ರಾದ ಬೇಳೇರಿ
ಬೆಳ್ಳೂರು: ನೀಲೇಶ್ವರದ ಪಡನ್ನಕಾಡು ಕೃಷಿ ಸಂಶೋಧನಾ ಕಾಲೇಜಿನಲ್ಲಿ ದೇಶದ ವಿವಿದೆಡೆಗಳಿಂದ ಬಂದು ಕೃಷಿ ಅಧ್ಯಯನ ನಡೆಸುವ ವಿದ್ಯಾರ್ಥಿಗಳು ತಮ್ಮ ಅಧ್ಯಯನದಂಗವಾಗಿ ಪದ್ಮಶ್ರೀ ಸತ್ಯನಾರಾಯಣ ಬೆಳೇರಿ ಅವರ ಮನೆಗೆ ಭೇಟಿ ಇತ್ತರು.
ಪಾರಂಪರಿಕ ಕೃಷಿ ವಿಧಾನಗಳು ಮತ್ತು ಪಾರಂಪರಿಕ ತಳಿಗಳ ಅಧ್ಯಯನ ದೃಷ್ಟಿಯಲ್ಲಿ ಬೆಳೇರಿ ಜೊತೆ ಅವರು ಬಗು ಬಗೆಯ ಪ್ರಶ್ನೆಗಳಿಂದ ಸಂವಾದ
ನಡೆಸಿಕೊಂಡರು ಮತ್ತು ಬೆಳೆಗಳ ಮಾಹಿತಿ ಕಲೆ ಹಾಕಿದರು.

ಕೇವಲ ಭತ್ತದ ಬೆಳೆ ಹೊರತಾಗಿಯೂ ಇತರ ಮಿಶ್ರ ಬೆಳೆ, ಅವುಗಳ ಪರಂಪರಾಗತ ವಿಧಾನದ ಕುರಿತು ಅಧ್ಯಯನದ ಜತೆಗೆ ಮಾಹಿತಿ ಸಂಗ್ರಹ ವಿದ್ಯಾರ್ಥಿ ತಂಡದ ಉದ್ದೇಶವಾಗಿತ್ತು. ಪಡನ್ನಕಾಡ್ ಕೃಷಿ ಸಂಶೋಧನಾ ಕಾಲೇಜಿನ ಅಧ್ಯಾಪಿಕೆಯರ ಜತೆಗೆ ಸುಮಾರು 40ರಷ್ಟು ಕೃಷಿ ಸಂಶೋಧನಾ ವಿದ್ಯಾರ್ಥಿಗಳು ಪದ್ಮಶ್ರೀ ಬೆಳೇರಿ ಅವರ ಮನೆಗೆ ಆಗಮಿಸಿ ದೇಶದಲ್ಲೇ ಪ್ರಶಂಸೆಗೆ ಪಾತ್ರವಾದ ಬೆಳೇರಿ ಮಾದರಿಯನ್ನು ಪರಿಶೀಲಿಸಿದರು.
ನನ್ನಲ್ಲಿ ಭತ್ತದ ತಳಿಗಳ ಹೊರತಾಗಿ ಎಲ್ಲಾ ಮಿಶ್ರ ಬೆಳೆಗಳೂ ಇವೆ. ಆದರೆ ಅದು ವ್ಯವ್ಯಸ್ಥಿತ ವಿಧಾನದಲ್ಲಿ ಸಿಸ್ಟಂ ಪ್ರಕಾರ ಇಲ್ಲ ಎಂದಷ್ಟೇ. ನಾನು ಹವ್ಯಾಸಕ್ಕೆಂದು ಪ್ರಾಚೀನ, ಸಾಂಪ್ರದಾಯಿಕ ಕೃಷಿಗಳನ್ನೆಲ್ಲಾ ತಂದಿರಿಸಿಕೊಂಡು ಬೆಳೆಸಿದ್ದೇನೆ. ಆದರೆ ಮುಂದೆ ಹೀಗೆಲ್ಲಾ ಆಗಬಹುದೆಂಬ ಕಲ್ಪನೆ ಇರಲಿಲ್ಲ. ಎರಡನೇ ಸಾಲಂಕೃತವಾಗಿ ವ್ಯವಸ್ಥಿತವಾಗಿ ನೆಟ್ಟು ಬೆಳೆಸಿ, ಫಲಕ ಹಾಕಲು ಸ್ಥಳವೂ ಇರಲಿಲ್ಲ.
ನನ್ನನ್ನು ಹುಡುಕಿ ಬಂದವರಿಗೆ
ನನ್ನಲ್ಲಿರುವ ಅರಿವು ಮತ್ತು ಜ್ಞಾನದ ಜತೆ ಮಾಹಿತಿ ಹಂಚುತ್ತೇನೆ ಅಷ್ಟೆ..
ಪದ್ಮಶ್ರೀ ಸತ್ಯನಾರಾಯಣ ಬೆಳೇರಿ.

ಪಡನ್ನಕಾಡ್ ಕೃಷಿ ಕಾಲೇಜಿನವರಿಗೆ ಪಣಿಯೂರು -2, ಪಣಿಯೂರು -5ರ ಮತ್ತು ಇತರ ಕಾಳುಮೆಣಸಿನ ತಳಿ ಕುರಿತಾಗಿ ಮಾಹಿತಿ ಬೇಕಿತ್ತು. ಇದು ನನ್ನಲ್ಲಿದೆ. ನಾನವರಿಗೆ ಮೀಟರ್ ಉದ್ದದ ಗಿಡಬಳ್ಳಿ ಕೊಡುವೆ ಎಂದೆ. ಜತೆಗೆ ಈ ಕುರಿತು ಹೆಚ್ಚಿನ ಮಾಹಿತಿಗೆ ಅಡ್ಯನಡ್ಕದ ವಾರಣಾಸಿ ಫಾರ್ಮ್ ಸಂದರ್ಶಿಸಲೂ ಉಪದೇಶಿಸಿದೆ ಎನ್ನುತ್ತಾರೆ ಬೆಳೇರಿ.
ಸತ್ಯನಾರಾಯಣ ಬೆಳೇರಿ ನಿರ್ದಿಷ್ಟ ಗದ್ದೆಯಿಲ್ಲದೇ ಲಕೋಟೆಗಳಲ್ಲಿ ಮಣ್ಣು ತುಂಬಿಸಿ ತಳಿ ಸಂರಕ್ಷಣೆ ಮಾಡುವವರು. ಅದರ ಜತೆ ಮನೆಯ ಸುತ್ತ ಇದ್ದ ಜಾಗದಲ್ಲೆಲ್ಲಾ ನಾನಾ ವೖವಿಧ್ಯಗಳ ಕೃಷಿ ಗಿಡಗಳನ್ನು ಕಾಪಾಡಿಕೊಂಡವರು. ಇದನ್ನೆಲ್ಲಾ ಆರಂಭಿಸುವ ಕಾಲಕ್ಕೆ ನಾಳೆ ನಾನೇ ಇದರ ತಜ್ಞನಾಗುವೆ, ನನ್ನನ್ನು ಹುಡುಕಿ ಕೃಷಿ ಅಧ್ಯಯನದ ವಿದ್ಯಾರ್ಥಿಗಳು ಬರುವರೆಂಬ ಯಾವ ನಿರೀಕ್ಷೆಯೂ ಇರಲಿಲ್ಲ.
ಇತ್ತೀಚೆಗೆ ಬೆಂಗಳೂರು ಕ್ರೖಸ್ಟ್ ಕಾಲೇಜಿನ ಕೃಷಿ ಸಂಶೋಧನಾ ವಿದ್ಯಾರ್ಥಿನಿಯೊಬ್ಬಳು ಬೆಳೇರಿ ಮನೆಗೆ ಆಗಮಿಸಿದ್ದಳು. ಆಕೆ ನಿರ್ದಿಷ್ಟ ತಳಿಯೊಂದನ್ನು ಮತ್ತು ಇಲ್ಲಿನ ಮಣ್ಣು, ನೀರನ್ನೂ ಕೊಂಡೊಯ್ದಳು. ಅದವರ ಸಂಶೋಧನೆಗೆ ಪೂರಕವಾದರೆ ನನಗೆ ಸಂತೋಷ. ಹೀಗೆ ಕೊಂಡೊಯ್ಯವುದನ್ನೆಲ್ಲಾ ನಾನು ಉಚಿತವಾಗಿ ನೀಡುತ್ತೇನೆ. ಆದರೆ ನನಗವರ ಕಾಲೇಜಿನ ಕೃತಜ್ಞತಾ ಪತ್ರ ಕೊಟ್ಟರೆ ಸಾಕೆಂಬುದೇ ಬೆಳೇರಿ ಅವರ ಕಳಕಳಿ.

ಕೃಷಿ ಸಂಶೋಧನಾ ಕಾಲೇಜು ಮತ್ತು ವಿದ್ಯಾರ್ಥಿಗಳಿಗೆ ಪಾರಂಪರಿಕ ಅರಿವಿನೊಂದಿಗೆ ಹೊಸ ತಳಿಯ ಉತ್ಪಾದನೆ, ಕೊಡುಗೆ ಇತ್ಯಾದಿ ಗುರಿಗಳಿರುತ್ತವೆ. ಅಧ್ಯಯನ ಕೇಂದ್ರವೊಂದು ಏನೇನು ಅಧ್ಯಯನ ನಡೆಸಿವೆ ಎಂಬ ಮಾಹಿತಿ ಕೊಡಬೇಕಾಗುತ್ತದೆ. ಈ ಉದ್ದೇಶದೊಂದಿಗೆ ತಜ್ಞರ ಭೇಟಿಯ ಕ್ಷೇತ್ರ ಸಂದರ್ಶನ ನಡೆಯುತ್ತದೆ.
ಒಟ್ಟಿನಲ್ಲಿ ಸತ್ಯನಾರಾಯಣ ಬೆಳೇರಿ ಅವರ ಮನೆಯಂಗಳ ದೇಶದ ಅಧ್ಯಯನಾಸಕ್ತರ ಭೇಟಿಯ ತಾಣವಾಗಿದೆ. ವಿವಿಧ ಕೃಷಿ ಸಂಶೋಧನಾ ಕೇಂದ್ರದ ವಿದ್ಯಾರ್ಥಿಗಳು ಒಂದಲ್ಲಾ ಒಂದು ವಿಷಯಕ್ಕೆ ಇಲ್ಲಿಗೆ ಭೇಟಿ ಕೊಡುತ್ತಲೇ ಇರುತ್ತಾರೆ. ಆದರೆ ಬಂದವರಿಗೆ ನೆಟ್ಟಗೆ ಕೂರಲಿಕ್ಕೊಂದು, ಕೃಷಿ ಪಾಠ ಕೇಳಲಿಕ್ಕೊಂದು ಸೂಕ್ತ ತಾಣ ಇಲ್ಲಿಲ್ಲ ಎಂಬುದೇ ಕೊರಗು…




