ಕುಂಟಾರು ಸಾಹಿತ್ಯೋತ್ಸವ: ಗಡಿನಾಡಿನಲ್ಲಿ ಯಕ್ಷಗಾನ ಪೋಷಿಸಿದ ಮಾಟೆಡ್ಕ ಪುರುಷೋತ್ತಮಣ್ಣನ ನೆನಪಿನ ದ್ವಾರವೇ ಭೂಷಣದ ಗೌರವ..!

by Narayan Chambaltimar
  • ಮೆಲುಕಿನ ಮಾತು…
    ✍️ ಎಂ. ನಾ. ಚಂಬಲ್ತಿಮಾರ್

ಮಾಟೆಡ್ಕ ಪುರುಷೋತ್ತಮ ರಾವ್ ಒಂದು ಕಾಲಕ್ಕೆ ಗಡಿನಾಡಿನಲ್ಲಿ ಯಕ್ಷಗಾನಕ್ಕೆ ನೀರೆರೆದು ಪೋಷಿಸಿದವರು. ತಾನೊಬ್ಬ ಕಲಾವಿದನಲ್ಲದಿದ್ದರೂ ಕಲಾಸ್ವಾದನೆಯಿಂದ ಕಲೆ-ಕಲಾವಿದರನ್ನು ಪೋಷಿಸಿದವರು. ಹಳ್ಳಿಗರ ಕಲಾ ಪ್ರೀತಿಯ ಚಪ್ಪರಕ್ಕೆ ತಾನೊಂದು ಕಂಬದಂತೆ ನಿಂತವರು. ಕುಂಟಾರು ಸಾಹಿತ್ಯೋತ್ಸವದ ದ್ವಾರದಲ್ಲಿ ಅವರ ಹೆಸರು ಕಂಡಾಗ ನೆನಪು ಹಿಂದಕ್ಕೋಡಿತು. ನಾವು ಮೆರವಣಿಗೆಯಲ್ಲಿ ಮುನ್ನಡೆದೆವು….

ಅಬ್ಬರದ ಪ್ರಚಾರ ಕೋಲಾಹಲಗಳೇನೂ ಮಾಡದೇ ತಾನು ಹುಟ್ಟಿ ಬೆಳೆದ ಹಳ್ಳಿಯಲ್ಲಿ, ತಾನು ಮೊದಲಕ್ಷರ ಕಲಿತ ಶಾಲೆಯಲ್ಲಿ
ಲೇಖಕ, ಕತೆಗಾರ, ಅನುವಾದಕ ಡಾ. ಮೋಹನ ಕುಂಟಾರ್ ಕಾಳಜಿಯಲ್ಲೊಂದು ಸಾಹಿತ್ಯೋತ್ಸವ ನಡೆದಿದೆ. ಕುಂಟಾರು ನಿಜಕ್ಕೂ ಕುಗ್ರಾಮ. ಒಂದೆಡೆ ಮಾಯಿಲಂಕೋಟೆ ಬೆಟ್ಟ ಸಹಿತ ಗೇರು ನಿಗಮದ ಕೂಪು. ಅದರ ತಪ್ಪಲಿನಲ್ಲೇ ಕುಂಟಾರಿಗೊಂದು ಗಡಿ ಎಳೆದಂತೆ ಹರಿಯುವ ಗಡಿನಾಡಿನ ಜೀವನದಿ ಪಯಸ್ವಿನಿ. ಇದರ ದಂಡೆಯಲ್ಲಿದೆ ಕುಂಟಾರು ಹಿರಿಯ ಪ್ರಾಥಮಿಕ ಶಾಲೆ. ಇಲ್ಲಿ ಮಾ. 15ರ ಭಾನುವಾರ ಸಾಹಿತ್ಯೋತ್ಸವ ನಡೆಯಿತು. ಉದ್ದೇಶ ಗ್ರಾಮೀಣ ಜನತೆಗೂ ಕನ್ನಡ ಸಾಹಿತ್ಯ ಮುಟ್ಟಿಸಬೇಕು, ಗ್ರಾಮೀಣರೂ ಸಾಹಿತ್ಯಾಸಕ್ತಿ ಪಡೆಯಬೇಕು, ಕನ್ನಡದ ಹೊಸ ತಲೆಮಾರೊಂದನ್ನು ಸದಭಿರುಚಿಗಳಿಂದ ರೂಪಿಸಬೇಕು ಇತ್ಯಾದಿ..
ಆದರೆ ಹೊಸ ತಲೆಮಾರಿಗೆ ಕನ್ನಡ ಪ್ರೀತಿ ಹುಟ್ಟಿಸುವ, ಎಳೆಯರನ್ನು ಒಲುಮೆಯಿಂದ ಸೆಳೆಯುವಂಥದ್ದೇನೂ ಅಲ್ಲಿರಲಿಲ್ಲ ಎಂಬ ವಾಸ್ತವ
ದ ಜತೆಯಲ್ಲೇ, ನಿನ್ನೆಯನ್ನು ಸ್ಮರಿಸಿದ ಕಾಳಜಿಯಿತ್ತು. ಪೂರ್ವಸೂರಿಗಳನ್ನು ನಮಿಸಿದ ಕಾಯಕವಿತ್ತು. ಅದಕ್ಕಾಗಿ ನಾನೆರಡು ಸಾಲು ಬರೆಯದಿದ್ದರೆ ಹೇಗೆ?

ನಿಜಕ್ಕೂ ನಾನಷ್ಟೂ ದೂರದ ಸಾಹಿತ್ಯೋತ್ಸವದಲ್ಲಿ ಹೋಗಿ ಭಾಗವಹಿಸುವ ಆಸಕ್ತಿ ಹೊಂದಿರಲಿಲ್ಲ. ಆದರೆ ಗೆಳೆಯ ‘ಉದಯವಾಣಿ’ ಯ ಪ್ರಕಾಶ್ ಮಂಜೇಶ್ವರ್ ‘ಹೋಗಿ ಬರುವ’ ಎಂದೊತ್ತಾಯಿಸಿದಾಗ ಇಲ್ಲ ಎನ್ನಲಾಗಲಿಲ್ಲ. ಎಂದಿನಂತೆ ಮನೆಗೆ ಬಂದು, ಹೆಂಡತಿ ಮಾಡಿ ಕೊಡುವ ಚಾ ಹೀರಿ, ನಾವಿಬ್ಬರೂ ಬೖಕೇರಿ ಹೊರಟು ಎಲ್ಲೂ ನಿಲ್ಲದೇ ಕುಂಟಾರು ಶಾಲೆ ತಲುಪಿದಾಗ
ದ್ವಾರದ ಎದುರು ಶಾಲಾ ಮಕ್ಕಳದೇ ಚೆಂಡೆ ಮೇಳ. ಅದು ಕುಂಟಾರು ಸಾಹಿತ್ಯೋತ್ಸವದ ಪ್ರವೇಶದ್ವಾರ. ಅದರ ಉದ್ಘಾಟನೆಗೆ ಸಂಘಟಕರು ಯಾರನ್ನೂ ನಿರ್ಣಯಿಸಿರಲಿಲ್ಲ. ಯಾವ ಗಣ್ಯರು ಆ ಕ್ಷಣ ಒದಗುತ್ತಾರೋ ಅವರಿಗದು ನಿಗದಿಯಾಗಿತ್ತು. ವಿಶೇಷ ಎಂದರೆ ಎಳವೆಯಲ್ಲಿ ಯಕ್ಷಗಾನದ ಹುಚ್ಚು ಹತ್ತಿಸಿಕೊಂಡಲ್ಲಿಂದ ಯಾವ ಪುರುಷೋತ್ತಮ ಮಾಟೆಡ್ಕ ಅವರನ್ನು ಬೆರಗಿನ ಗೌರವದಿಂದ ಕಂಡೆನೋ ಅದೇ ನನಗೆ ಅವರ ಹೆಸರಿನ ದ್ವಾರ ಉದ್ಘಾಟಿಸುವ ಸುಯೋಗ ಸಿಗಬೇಕೇ?
ಇಷ್ಟಕ್ಕೂ ಕುಂಟಾರು ಸಾಹಿತ್ಯೋತ್ಸವ ಕಾರ್ಯಕ್ರಮಗಳಿಗೆ ಚಾಲನೆ ಕಂಡದ್ದೇ ಇಲ್ಲಿಂದ. ನಿಜಕ್ಕೂ ಇದು ಕಾಲ ನಿರ್ಮಿತ ಸುಯೋಗ.

ಪುರುಷೋತ್ತಮ ಮಾಟೆಡ್ಕ ಕೃಷಿ ಹಿನ್ನೆಲೆಯ ಸಾಮಾಜಿಕ ಧುರೀಣರು. 1980ರಿಂದ 2005ರ ತನಕ ಗಡಿನಾಡಿನ ಯಕ್ಷಗಾನ ಕಲಾ ಸಾಂಸ್ಕೃತಿಕ ಪರಂಪರೆ ಪೋಷಿಸಿದವರು. ಅವರು ಸ್ವತಃ ಕಲಾವಿದರೇನಲ್ಲ. ಆದರೆ ಹವ್ಯಾಸಿ ಕಲಾವಿದರ ಪ್ರದರ್ಶನಕ್ಕೆ ಪ್ರೋತ್ಸಾಹಿಸಿದ್ದಾರೆ. ಪ್ರದರ್ಶನಕ್ಕೆ ನೆರವಾಗಿದ್ದಾರೆ. 95ರ ದಶಕ ದಾಟುವ ಕಾಲಕ್ಕೆ ಮುಳ್ಳೇರಿಯದಲ್ಲಿ ನಿರಂತರ ಮೇಳದಾಟ ಮಾಡಿಸುತ್ತಲೇ ಬಂದಿದ್ದಾರೆ. ಡಿ. ಮನೋಹರ ಕುಮಾರ್ ಕದ್ರಿ ಮೇಳವನ್ನು ಉತ್ತುಂಗಕ್ಕೇರಿಸಿದ ಕಾಲಕ್ಕೆ ಕಾಸರಗೋಡಿನ ನೆಲದಲ್ಲಿ ಅದಕ್ಕೆ ಹೆಗಲೆಣೆ ಆಗಿದ್ದಾರೆ.
ಮಲ್ಲ ಮೇಳಕ್ಕೂ ಆಧಾರಸ್ತಂಭದಂತೆ ಪ್ರೋತ್ಸಾಹಿಸಿದ್ದಾರೆ. ಹವ್ಯಾಸಿ ಯಕ್ಷಗಾನಕ್ಕೆ ಊರುಗೋಲಾಗಿದ್ದಾರೆ. ಹಳ್ಳಿಗರನ್ನು ಕುಣಿಸಿ ಮೆರೆಸಿದ್ದಾರೆ.

ಒಟ್ಟಿನಲ್ಲಿ ತೋಳ ಸಂಧಿಯಲ್ಲೊಂದು ಕರಿಕಪ್ಪು ಬ್ಯಾಗ್ ಇರಿಸಿಕೊಂಡು, ಅದರೊಳಗೆ ಆ ಕಾಲದ ನೂರರ ಗರಿಗರಿ ನೋಟೇರಿಸಿಕೊಂಡು ಕಲಾವಿದರಿಗೆ ಉದಾರತೆಯ ಮಮತೆಯಿಂದ ಹಂಚುತ್ತಿದ್ದ ಪುರುಷೋತ್ತಮಣ್ಣ ಯಕ್ಷಗಾನದ ಮೂಲಕ ಕಲೆ, ಕಲಾವಿದ, ಸಮಾಜ, ಸಂಸ್ಕೃತಿ ಇವಿಷ್ಟನ್ನೂ ನೀರೆರೆದು ಪೋಷಿಸಿದವರು.

ಕುಂಟಾರು ಸಾಹಿತ್ಯೋತ್ಸವಕ್ಕೆ ಸಾಗುವ ದ್ವಾರದಲ್ಲಿ, ಅವರದೇ ಊರಿನಲ್ಲಿ-ಅವರದ್ದಲ್ಲದೇ ಹೆಸರು ಮತ್ಯಾರದ್ದು ಇಡಬೇಕು ಹೇಳಿ?
ಸಾಹಿತ್ಯೋತ್ಸವ ಸಂಘಟಕರ ನಿನ್ನೆಗಳ ನೆನಪಿನ ಈ ಕಾಳಜಿಗೆ ನಮೋ ಎನ್ನುವೆ. ಕೆಲವು ಸಂದರ್ಭಗಳೇ ಹಾಗೆ, ನಾವು ಬಯಸದೇ ಇದ್ದರೂ ಅಯಾಚಿತವಾಗಿ ನಮಗೊದಗುತ್ತದೆ. ಇಲ್ಲೂ ಹಾಗೇ ಆಯಿತು, ಬಂಧು ಡಾ. ಮೋಹನ ಕುಂಟಾರ್ ನೀವೇ ದ್ವಾರ ಉದ್ಘಾಟಿಸಬೇಕೆಂದರು. ನಾನೊಲ್ಲೆ ಎಂದಿದ್ದೆ. ಒತ್ತಾಯಿಸಿದರು. ನನಗೆ ಮಲ್ಲ ಮೇಳದ ರಜತ ಮಹೋತ್ಸವದೊಂದಿಗೆ ಮುಳ್ಳೇರಿಯ ಆಸುಪಾಸಿನಲ್ಲಿ ಮಾಟೆಡ್ಕ ಪುರುಷೋತ್ತಮಣ್ಣ ನಡೆಸಿದ ಯಕ್ಷಗಾನ ಕೖಂಕರ್ಯಗಳು ನೆನಪಿಗೆ ಬಂತು. ಆ ದಿವ್ಯ ವ್ಯಕ್ತಿತ್ವಕ್ಕೆ ನಮಿಸಿದೆ. ಭಗವನ್ನಾಮ ಸ್ಮರಿಸಿ ಲಾಡಿ ಕತ್ತರಿಸಿ, ಮೆರವಣಿಗೆಯಲ್ಲಿ ಮುನ್ನಡೆದೆ..

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00