- ಮಹತೋಭಾರ ಎಂದರೆ ಸಂಸ್ಕೃತವಲ್ಲ, ಅರೇಬಿಕ್ ಶಬ್ದ!
ನಾವು ಕನ್ನಡ ಶಬ್ದಾನ್ವೇಷಣೆ ಮಾಡಬೇಕು: ಡಾ. ವಸಂತಕುಮಾರ ತಾಳ್ತಜೆ
ಮುಳ್ಳೇರಿಯ: ಎತ್ತರದ ಮಾಯಿಲಂ ಕೋಟೆಯ ತಪ್ಪಲಿನಲ್ಲಿ, ಹರಿವ ಪಯಸ್ವಿನಿಯ ದಂಡೆಯ ಕುಂಟಾರು ಎಯುಪಿ ಶಾಲೆಯಂಗಣದಲ್ಲಿ ಮಾ. 15 ಆದಿತ್ಯವಾರ ನಡೆದ ಮೊದಲ ಕುಂಟಾರು ಸಾಹಿತ್ಯೋತ್ಸವ ಗ್ರಾಮದ ಜನರನ್ನೆಲ್ಲ ಕನ್ನಡ ಸಾಹಿತ್ಯಕ್ಕೆ ಕಿವಿಯಾಗಲು ಒಗ್ಗೂಡಿಸಿ ವಿಶೇಷ ಗಮನ ಸೆಳೆಯಿತು. ಕುಂಟಾರು ಎಯುಪಿ ಶಾಲೆ ಮತ್ತು ಮುಳ್ಳೇರಿಯದ ಕಾಸರಗೋಡು ಕನ್ನಡ ಸಂಶೋಧನಾ ಕೇಂದ್ರದ ಸಾರಥ್ಯದಲ್ಲಿ ಜನ ಸಾಮಾನ್ಯರೆಡೆಗೆ ಸಾಹಿತ್ಯ ಎಂಬ ಆಶಯದೊಂದಿಗೆ ಆಯೋಜಿಸಿದ ಸಮಾರಂಭದಲ್ಲಿ ಭಾಷಾ ಬೇಧವಿಲ್ಲದೇ ಗ್ರಾಮೀಣರು ಒಗ್ಗೂಡಿದ್ದು ವಿಶೇಷವೆನಿಸಿತು. ಜೊತೆಗೆ ಕುಂಟಾರಿನ ಸಾಂಸ್ಕೃತಿಕ ಸಭ್ಯತೆಗೆ ಕನ್ನಡಿ ಹಿಡಿಯಿತು.

ಮಹತೋಭಾರ ಎಂದರೆ ಸಂಸ್ಕೃತ ಪದವಲ್ಲ, ಅದು ಅರೇಬಿಕ್ ಶಬ್ದ!
ನಾವು ಕನ್ನಡದ ಶಬ್ದಾನ್ವೇಷಣೆ ಮಾಡಬೇಕು..
ಸಾಹಿತ್ಯ ಉತ್ಸವವನ್ನು ಮುಂಬಯಿ ವಿವಿಯ ವಿಶ್ರಾಂತ ಪ್ರಾಂಶುಪಾಲ ಡಾ. ತಾಳ್ತಜೆ ವಸಂತಕುಮಾರ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಕನ್ನಡದಲ್ಲಿ ಕೆಲವು ಪದಗಳೇ ಕಾಣೆಯಾಗುತ್ತಿದೆ ಮತ್ತು ಅದರ ವೇಗ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ನಮ್ಮ ಪ್ರದೇಶಗಳಲ್ಲಿ ಬಳಕೆಯಲ್ಲಿರುವ ಕೆಲವು ಪದಗಳ ಅಧ್ಯಯನ ನಡೆಯಬೇಕೆಂದರು. ಉದಾಹರಣೆಗೆ ಮಹೋತಾಭಾರ ಎಂಬ ಪದ ಅರೇಬಿಕ್ ನ ಮಹತಬರ್ ಪದವಾಗಿದೆ, ಅದು ಸಂಸ್ಕೃತ ಪದವಲ್ಲ ಎಂದರು.
ನಾವು ಸಾಹಿತ್ಯ ಮತ್ತು ಬದುಕಿನ ದಿನ ಬಳಕೆಯ ಪದಗಳತ್ತ ಮುಖ ಮಾಡಬೇಕೆಂದ ಅವರು ನಮ್ಮ ಓದು ನಮ್ಮೊಳಗೆ ಪ್ರಶ್ನೆಗಳನ್ನು ಹುಟ್ಟಿಸಬೇಕು ಮತ್ತು ನಾವೇ ಅದರ ಉತ್ತರ ಕಂಡುಕೊಳ್ಳಬೇಕು ಎಂದರು. ರಾಮನಿಗೆ ಸೀತೆ ಏನಾಗಬೇಕೆಂದು ಪ್ರಶ್ನಿಸಿದವ ದಡ್ಡನೇನೂ ಅಲ್ಲ. ಅದು ದಡ್ಡನ ಪ್ರಶ್ನೆಯಲ್ಲ, ಬದಲು ರಾಮಾಯಣ ಅರಿತವನ ಪ್ರಶ್ನೆ ಎಂದರು.

ಕಾಸರಗೋಡು ಕನ್ನಡದ ಪರಿವರ್ತನೆ ತಡೆಯಬೇಕು..
ಕಾಸರಗೋಡಿನ ಕನ್ನಡಿಗರಿಗೆ ಕನ್ನಡ ಕಲಿಕಾ ಭಾಷೆಯೇ ಹೊರತು ಮಾತೃಭಾಷೆಯೇನಲ್ಲ. ತುಳು, ಮಲಯಾಳಂ, ಕೊಂಕಣಿ, ಮರಾಟಿ ಸೇರಿದಂತೆ ಎಲ್ಲರಿಗೂ ಕನ್ನಡ ದ್ವಿತೀಯ ಭಾಷೆ. ಆದರದು ಎಲ್ಲರಲ್ಲೂ ಸ್ವಚ್ಛ ಸೊಗಡಿನಿಂದ, ಜೀವಂತಿಕೆಯಿಂದ ತನ್ನದೇ ಓಘ-ವೇಗದಲ್ಲಿ ಸುಂದರವಾಗಿ ಬಳಕೆಯಾಗುತ್ತಿದ್ದ ದಿನಗಳಿದ್ದುವು. ಆ ಪರಂಪರೆಯನ್ನುಳಿಸುವ ಸವಾಲು ಇಲ್ಲಿದೆ. ಇತ್ತೀಚಿನ ದಶಕದಲ್ಲಿ ಕಾಸರಗೋಡು ಕನ್ನಡದ ಸೊಗಸಿನಲ್ಲಿ ಪರಿವರ್ತನೆ ಕಾಣುತ್ತಿದೆ ಎಂದವರು ಬೊಟ್ಟುಮಾಡಿದರು.
ಕುಂಟಾರಿಗೆ ಸಾಂಸ್ಕೃತಿಕ ಹಿನ್ನೆಲೆ ಇದೆ. ಆದರೆ ಸಾಹಿತ್ಯಕ ಹಿನ್ನೆಲೆಯ ಕೊರತೆ ಇದೆ. ಅದು ನೀಗಬೇಕು. ಹೊಸ ಪೀಳಿಗೆ ಮೂಡಬೇಕೆಂಬ ಸಂಕಲ್ಪದಿಂದಲೇ ಸಾಹಿತ್ಯೋತ್ಸವ ಆಯೋಜಿಸಲಾಗಿದೆ. ಇದು ಹೊಸ ತಲೆಮಾರನ್ನು ಹುಟ್ಟಿಸುವ ಮತ್ತು ಮುಟ್ಟುವ ಪ್ರಯತ್ನ. ಸಾಹಿತ್ಯೋತ್ಸವದಂಗವಾಗಿ ಪ್ರದರ್ಶಿಸಿದ ಪುಸ್ತಕಗಳ ಪ್ರದರ್ಶನ ಕುಂಟಾರು ಪರಿಸರದವರ ಓದಿಗೆ ಕನ್ನಡಿ. ವಸ್ತು ಪ್ರದರ್ಶನ ಈ ನಾಡಿನ ಹಿರಿಯರು ಬಳಸಿದ ವಸ್ತುಗಳ ಸಂಕೇತ. ಇವೆಲ್ಲ ಹೊಸ ಪೀಳಿಗೆಗೆ ಅರಿಯಬೇಕು ಮತ್ತು ಸಾಹಿತ್ಯ ಅಭಿರುಚಿಯಿಂದ ಅವರಲ್ಲಿ ಮಾನವತೆ ಮೂಡಬೇಕೆಂಬ ಕಾಳಜಿಯಿಂದ ಸಾಹಿತ್ಯೋತ್ಸವ ಆಯೋಜಿಸಲಾಗಿದೆ.
ಡಾ. ಮೋಹನ ಕುಂಟಾರು
(ಕನ್ನಡ ಸಂಶೋಧನಾ ಕೇಂದ್ರದ ನಿರ್ದೇಶಕರು ಮತ್ತು ಸಾಹಿತ್ಯೋತ್ಸವದ ಅಧ್ಯಕ್ಷರು)

ಕಾಸರಗೋಡು ಸರಕಾರಿ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಡಾ. ಕೆ. ಕಮಲಾಕ್ಷರ ಅಧ್ಯಕ್ಷತೆಯಲ್ಲಿ ಸಾಹಿತ್ಯೋತ್ಸವ ನಡೆಯಿತು. ಕಾರಡ್ಕ ಬ್ಲಾಕ್ ಪಂ. ಅಧ್ಯಕ್ಷೆ ಎಂ. ಜನನಿ, ಗ್ರಾ. ಪಂ. ಸದಸ್ಯೆ ಬೇಬಿ ಕಟ್ಟತ್ತಬಯಲು, ಜಗದೀಶ ಮಾಸ್ತರ್, ಶಾಲಾ ಮುಖ್ಯೋಪಾಧ್ಯಾಯಿನಿ ದಾಕ್ಷಾಯಿಣಿ, ಪಿಟಿಎ ಅಧ್ಯಕ್ಷ ಬಷೀರ್ ನಯೀಮಿ ಶುಭಾಶಂಸನೆ ಮಾಡಿದರು.
ಹಿರಿಯ ವ್ಯಂಗ್ಯಚಿತ್ರಗಾರ ಬೆಂಗಳೂರಿನ ಎಚ್. ಎಸ್. ವಿಶ್ವನಾಥ್ ವ್ಯಂಗ್ಯಚಿತ್ರ ಪ್ರದರ್ಶನ ಮತ್ತು ಬ್ಲಾಕ್ ಪಂ. ಅಧ್ಯಕ್ಷೆ ಜನನಿ ಎಂ ವಸ್ತು ಪ್ರದರ್ಶನವನ್ನೂ, ಪತ್ರಕರ್ತ ಎಂ. ನಾ. ಚಂಬಲ್ತಿಮಾರ್ ದಿ. ಮಾಟೆಡ್ಕ ಪುರುಷೋತ್ತಮ ರಾವ್ ದ್ವಾರವನ್ನು ಉದ್ಘಾಟಿಸಿದರು.

ಬಳಿಕ ವಿಚಾರಗೋಷ್ಟಿಗಳು, ಬಹುಭಾಷಾ ಕವಿಗೋಷ್ಟೀ ನಡೆಯಿತು. ಅಪರಾಹ್ನ ಸಮಾರೋಪ ಮತ್ತು ಸಾಂಸ್ಕೃತಿಕೋತ್ಸವದೊಂದಿಗೆ ಸಮಾಪ್ತಿಯಾಯಿತು.
ಗಡಿನಾಡಿನ ಗಡಿ ಪ್ರದೇಶ ಕುಂಟಾರಿನಲ್ಲಿ ನಡೆದ ಸಾಹಿತ್ಯೋತ್ಸವಕ್ಕೆ ಸುಳ್ಯ, ಬೆಂಗಳೂರು, ಹಂಪಿ ಮೊದಲಾದೆಡೆಗಳಿಂದಲೂ ಜನರಾಗಮಿಸಿದ್ದರು. ಗ್ರಾಮದ ಜನರ ಮನೆಯ ಗ್ರಂಥಾಲಯದಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಪ್ರದರ್ಶನಕ್ಕಿರಿಸಲಾಗಿತ್ತು. ಅದು ಮಾರಾಟಕ್ಕಲ್ಲ. ಗತ ಕಾಲಕ್ಕೆ ಕನ್ನಡಿ ಹಿಡಿದ ಪುಸ್ಥಕಗಳು ಜನರಿಗೆ ಕೌತುಕ ಮೂಡಿಸಿತು. ಕುಂಟಾರಿನವರೇ ಆದ ಖ್ಯಾತ ಕಾರ್ಟೂನಿಸ್ಟ್ ಎಲ್ಲೆನ್ ರಾವ್ ಸಹಿತ ಪ್ರಸಿದ್ಧರ ಕಚಗುಳಿಯಿಡುವ ವ್ಯಂಗ್ಯ ಚಿತ್ರಗಳು ನೋಟಕರ ತುಟಿಯಲ್ಲಿ ನಗು ಮೂಡಿಸಿತು.
ಕುಂಟಾರು ಕೆಳಗಿನ ಮನೆಯ ಅಪ್ಪೋಜಿ ರಾವ್ ರಚಿತ ಪುರಾಣ ಕಥಾ ಕೋಶ ಕೃತಿಯನ್ನು ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು. ಸಮಾರಂಭವನ್ನು ಡಾ. ಯತೀಶ್ ಕುಮಾರ್ ರೖ ನಿರೂಪಿಸಿದರು. ಡಾ. ಸುಂದರ ಕೇನಾಜೆ, ಸಹನಾ ಕಾಂತಬೖಲು, ಡಾ. ವರದರಾಜ ಚಂದ್ರಗಿರಿ, ಡಾ. ಧನಂಜಯ ಕುಂಬಳೆ, ಡಾ. ರತ್ನಾಕರ ಮಲ್ಲಮೂಲೆ, ಡಾ. ಮೀನಾಕ್ಷಿ ರಾಮಚಂದ್ರ, ಡಾ. ಟಿ. ಎ. ಎನ್ ಖಂಡಿಗೆ, ಡಾ. ಬೇ. ಸಿ. ಗೋಪಾಲಕೃಷ್ಣ ಭಟ್, ಡಾ. ಸುಧಾರಾಣಿ ಮೂಡುಬಿದಿರೆ, ಡಾ. ರಾಧಾಕೃಷ್ಣ ಬೆಳ್ಳೂರು, ರಾಧಾಕೃಷ್ಣ ಉಳಿಯತ್ತಡ್ಕ ಸೇರಿದಂತೆ ಪ್ರಮುಖರು ಪಾಲ್ಗೊಂಡರು.
ಚಿತ್ರಗಳು: ಶರತ್ ಪಾಂಡಿ






