- ಏಳು ವರ್ಷಗಳಿಂದ ಸದ್ದಿಲ್ಲದ ಸೇವೆ: ತಮಿಳುನಾಡಿಂದ ಕಾಸರಗೋಡಿಗೆ ಬಂದು ನೆಲೆಸಿದ ಕ್ಷೌರಿಕ ಸಮಾಜದಿಂದ ಮಮತೆಯ ಕಾಯಕ
ಕುಂಬಳೆ: ನಾಗರಿಕರ ತಲೆಗೂದಲು, ಗಡ್ಡ ಬೋಳಿಸುವ ಕ್ಷೌರಿಕ ವೃತ್ತಿ ಇವರಿಗೆ ಬರೇ ಕಸುಬಷ್ಟೇ ಅಲ್ಲ. ಆ ಕಸುಬಿನಲ್ಲೂ ಮಮತೆಯಿಂದ ಮಾನವ ಸೇವೆ ಮಾಡುವ ಮೂಲಕ ತಮಿಳುನಾಡಿಂದ ಬಂದು ಕಾಸರಗೋಡಿನಲ್ಲಿ ನೆಲೆಸಿ ಕೇರಳೀಯರೇ ಆಗಿಹೋದ ತಮಿಳ್ ಪಾರಂಪರಿಕ ಕ್ಷೌರಿಕ ಸಮುದಾಯವಾದ ಮರ್ತೂರ್ ಸಮಾಜ ಸದ್ದಿಲ್ಲದೇ ಗಮನ ಸೆಳೆದಿದೆ. ಕಾಞಂಗಾಡು ಬಳಿಯ ಅಂಬಲತ್ತರ ಸ್ನೇಹಾಲಯದ ಸುಮಾರು 200 ಮಂದಿ ಅನಾಥ ಆಶ್ರಮವಾಸಿಗಳ ಪಾಲಿಗೆ ಎರಡು ತಿಂಗಳಿಗೊಮ್ಮೆ ಇವರು ಉಚಿತವಾಗಿ ಮಾಡುವ ಕ್ಷೌರ ಸೇವೆ ಬರೇ ಸೇವೆಯಷ್ಟೇ ಅಲ್ಲ. ಅದರಾಚೆಗದು ಮಾನವೀಯ ಮಮತೆಯ ಆರೖಕೆಯ ಸ್ನೇಹ ಸಾಂತ್ವನವೂ ಹೌದು.

ಕಳೆದ ಐದಾರು ದಶಕಗಳ ಹಿಂದೆಯೇ ತಮಿಳುನಾಡಿನಿಂದ ಕ್ಷೌರಿಕ ವೃತ್ತಿಗಾಗಿ ಕಾಸರಗೋಡಿಗೆ ಬಂದ ಮರ್ತೂರ್ ಸಮಾಜದವರು ಇಂದೀಗ ಕೇರಳೀಯರಾಗಿ ಬದಲಾಗಿದ್ದಾರೆ. ಇಲ್ಲೇ ನೆಲೆಯಾಗಿ ಕ್ಷೌರಿಕ ವೃತ್ತಿ ನಡೆಸುತ್ತಿದ್ದಾರೆ. ಈ ಪೖಕಿ ಪಳ್ಳಿಕೆರೆ ಪಾಕಂ ನಿವಾಸಿ ವಿಜಯನ್ ಎಂಬವರ ಕಾಳಜಿಯಿಂದ ಆರಂಭಗೊಂಡದ್ದೇ ಈ ಉಚಿತ ಸೇವೆ.
ಅನಾಥಾಲಯದಲ್ಲಿರುವ ಅನಾಥ ಜೀವಗಳಿಗೆ ಅವರವರೇ ಆತ್ಮೀಯ ಬಂಧುಗಳು. ಅವರ ನಡುವೆ ಎರಡು ತಿಂಗಳಿಗೊಮ್ಮೆ ಕ್ಷೌರ ಮಾಡಿಸುವ ಇವರು ಅವರ ಪಾಲಿಗೆ ಸ್ನೇಹಿತರಾಗಿದ್ದಾರೆ. ಏಳು ವರ್ಷಗಳ ನಿರಂತರ ಭೇಟಿ, ಸ್ಪರ್ಶಗಳಿಂದ ಇವರ ನಡುವೆ ಆತ್ಮೀಯತೆಯ
ಒಲವಿನ ಬಳ್ಳಿ ಪ್ರೀತಿಯಾಗಿ ಹಬ್ಬಿದೆ..
ಇದು 2019ರ ಕೊರೋನಾ ಕಾಲದಲ್ಲಿ ಆರಂಭಗೊಂಡ ಮಮತೆಯ ಮಾನವ ಸೇವೆ. ಅಲ್ಲಿಂದೀಚೆಗೆ ಕಳೆದ ಏಳು ವರ್ಷದಲ್ಲಿ ಪ್ರತಿ ಎರಡು ತಿಂಗಳಿಗೊಮ್ಮೆ ಇವರು ತಪ್ಪದೇ ಸ್ನೇಹಾಲಯ ತಲುಪಿದ್ದಾರೆ. ಸುಮಾರು 200ಮಂದಿ ಅನಾಥರ ತಲೆಗೂದಲು ಕತ್ತರಿಸಿ, ಕ್ಷೌರ ಮಾಡಿಸಿ, ಅವರೊಂದಿಗೆ ಮಾತಾಡಿ ಕ್ಷೇಮ-ಕುಶಲ ವಿಚಾರಿಸಿ ಬೆರೆತು ಬದುಕಿದ್ದಾರೆ. ಕಾಞಂಗಾಡಿನಿಂದ ಕುಂಬಳೆ ವರೆಗಿನ ಸುಮಾರು 16 ಮಂದಿ ಮರ್ತೂರ್ ಸಮುದಾಯದ ಕ್ಷೌರಿಕರು ಇದರಲ್ಲಿ ತಪ್ಪದೇ ಭಾಗವಹಿಸಿದ್ದಾರೆ. ಕುಂಬಳೆಯಲ್ಲಿ ಲವ್ಲೀ ಹೇರ್ ಡ್ರೆಸ್ಸೆಸ್ ನಡೆಸುವ ಗೋಪಿ ಎಂ, ಸೆಂಥಿಲ್, ಗೋಪಿ ಕೆ, ರಾಘವನ್, ಮನೋಜ್, ರಾಜಕುಮಾರ್, ಚಿಲಂಬರಸನ್, ಸೆಂಥಿಲ್ ಕುಮಾರ್ ಮೊದಲಾದ 16 ಮಂದಿ ಉಚಿತವಾಗಿ ವ್ರತದಂತೆ ನಡೆಸುವ ಈ ಸೇವೆ ಅನಾಥಾಲಯದಲ್ಲಿರುವ ಅನಾಥರಿಗಂತೂ ಭಾರೀ ಖುಷಿ ನೀಡಿದೆ. ಎರಡು ತಿಂಗಳಿಗೊಮ್ಮೆ ಭೇಟಿಯಾಗುತ್ತಾ ಬಂದ ಇವರೊಳಗೊಂದು ಆತ್ಮೀಯತೆಯ ಒಲವಿನ ಬಳ್ಳಿ ಪ್ರೀತಿಯಾಗಿ ಹಬ್ಬಿದೆ.
ಮರ್ತೂರ್ ಸಮುದಾಯದ ಕ್ಷೌರಿಕರ ನಡುವೆ “ಇನ್ನೂ ಮುಂದಕ್ಕೆ” ಎಂಬ ವಾಟ್ಸಪ್ ಗ್ರೂಪಿದೆ. ಇದು ಕಾಲಹರಣಕ್ಕಲ್ಲ. ಈ ಮೂಲಕ ಅವರು ಸಮಾಜ ಸೇವೆ ಮಾಡುತ್ತಾರೆ. ತಮ್ಮ ಬಳಗದ ಯಾರಿಗಾದರೂ ತೊಂದರೆಯಾದರೆ ರಕ್ಷಣೆಗೆ ಧಾವಿಸುತ್ತಾರೆ. ಸೇವೆ ನಡೆಸುತ್ತಾರೆ. ವೃತ್ತಿಯ ಜತೆಯಲ್ಲೇ ಇಂಥ ಮಾನವೀಯ ಅಂತಃಕರಣದ ಕಾಯಕ ನಡೆಸುವ ಇವರ ಪ್ರವೃತ್ತಿ ಪ್ರಶಂಸೆಗೆ ಪಾತ್ರವಾಗಿದೆ.
ನಾವು ಕಳೆದ ಏಳು ವರ್ಷಗಳಿಂದ ಒಮ್ಮೆಯೂ ತಪ್ಪಿಸದೇ ಸ್ನೇಹಾಲಯಕ್ಕೆ ಹೋಗಿದ್ದೇವೆ. ಅಲ್ಲಿ ಎಲ್ಲಾ ರೀತಿಯ ಭೌತಿಕ ಸಹಾಯ ಆಶ್ರಮದ ವತಿಯಿಂದ ಒದಗಿಸುತ್ತಾರೆ. ಅನಾಥರಿಗೂ ಅಷ್ಟೇ ನಾವು ಪ್ರೀತಿ ವಾತ್ಸಲ್ಯಗಳಿಂದ ಸೇವೆ ನೀಡುತ್ತೇವೆ. ನಮ್ಮ ಅನ್ನದ ವೃತ್ತಿಯ ನಡುವೆ ನಮಗಿದು ನೀಡುವ ನೆಮ್ಮದಿ ಸಣ್ಣದೇನಲ್ಲ. ನಾವಿದನ್ನು ಪ್ರಚಾರಕ್ಕೋ,. ಪ್ರಶಂಸೆಗೋ ಬಳಸಲಿಲ್ಲ. ಕ್ಷೌರಿಕ ವೃತ್ತಿ ನಮಗೆ ಪೂರ್ವ ಪರಂಪರೆಯಿಂದ ಸಾಮುದಾಯಿಕವಾಗಿ ಒಲಿದು ಬಂದಿದೆ. ನಾವಿಂದು ಈ ನಾಡಿನವರೇ ಆಗಿಹೋಗಿದ್ದೇವೆ.
-ಗೋಪಿ. ಎಂ. ಕುಂಬಳೆ
ಬಾರ್ಬರ್, ಲವ್ಲೀ ಹೇರ್ ಡ್ರೆಸ್ಸೆಸ್)(






