- ನೆನೆಗುದಿಗೆ ಬಿದ್ದ ಅಪೂರ್ಣ ರಸ್ತೆ ಕಾಮಗಾರಿ ಸ್ಥಳ ಸಂದರ್ಶಿಸಿ ಬಿಜೆಪಿ ಜಿಲ್ಲಾಧ್ಯಕ್ಷೆ ಎಂ. ಎಲ್. ಅಶ್ವಿನಿ ಟೀಕೆ
ಪೖವಳಿಕೆ: ಕೇಂದ್ರ ಸರಕಾರದ ಫಂಡ್ ವಿನಿಯೋಗಿಸಿ ನಿರ್ಮಿಸಿದ ಯೋಜನೆಗಳ ಕ್ರೆಡಿಟ್ ತನ್ನದಾಗಿಸಲು ಯತ್ನಿಸುವ ಮತ್ತು ಸಮಾನಾಂತರ ಉದ್ಘಾಟನೆ ನಡೆಸುವುದರ ಬದಲು ಕೇರಳದ ಲೋಕೋಪಯೋಗಿ ಇಲಾಖೆ ಮತ್ತು ಸ್ಥಳೀಯಾಡಳಿತ ಇಲಾಖೆಯ ಯೋಜನೆಗಳನ್ನು ಸಮಯೋಚಿತವಾಗಿ ಪೂರ್ತೀಕರಿಸಲು ಎಡರಂಗ ಸರಕಾರ ಗಮನಹರಿಸಲಿ ಎಂದು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ. ಎಲ್. ಅಶ್ವಿನಿ ಅಭಿಪ್ರಾಯಪಟ್ಟರು.
ಡಾಮರೀಕರಣ ಪೂರ್ತಿಯಾಗದೇ ರಸ್ತೆ ಕಾಮಗಾರಿ ಅರ್ಧಂಬರ್ಧವಾಗಿರುವ ಪೖವಳಿಕೆ ಪಂಚಾಯತಿನ ಲಾಲ್ಭಾಗ್-ಚಿಪ್ಪಾರ್-ಕುರುಡಪದವು ರಸ್ತೆ ಕಾಮಗಾರಿ ವೀಕ್ಷಿಸಿ ಅವರು ಈ ಅಭಿಪ್ರಾಯ ಪ್ರಕಟಿಸಿದರು.

ರಾ. ಹೆದ್ದಾರಿ 66ರ ಅಭಿವೃದ್ಧಿ ಪಿಣರಾಯಿ ಸರಕಾರದ ಸಾಧನೆ ಎಂದು ಎಡರಂಗ ಅಭಿಪ್ರಾಯಪಡುತ್ತಿದೆ. ಆದರೆ ಅದೇ ವೇಳೆ ಕೇರಳ ಸರಕಾರದ ಹಲವು ಯೋಜನೆಗಳು ಪೂರ್ತೀಕರಣವಾಗದೇ ನೆನೆಗುದಿಗೆ ಬಿದ್ದಿದೆ. ಒಂದೂವರೆ ವರ್ಷದ ಹಿಂದೆ ಟೆಂಡರ್ ಮಾಡಲಾದ ಲಾಲ್ಭಾಗ್-ಚಿಪ್ಪಾರ್-ಕುರುಡಪದವು ರಸ್ತೆ ಕಳೆದ ಮೂರು ತಿಂಗಳಿಂದ ಮುಚ್ಚಲ್ಪಟ್ಟಿವೆ. ಪರಿಣಾಮ ಇಲ್ಲಿನ ಬಸ್ ಗಳು ಸಹಿತ ಜನರ ವಾಹನಗಳು ದಾರಿ ಬದಲಿಸಿ ಸಂಚರಿಸುತ್ತವೆ. ರಸ್ತೆ ಅಗಲೀಕರಣದಂಗವಾದ ವಿದ್ಯುತ್ ಕಂಬಗಳ ಸ್ಥಳಾಂತರ
ನಿಧಾನಗತಿಯಲ್ಲಿ ನಡೆಯುತ್ತಿದೆ. ಪ್ರಸ್ತುತ ರಸ್ತೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ನಡೆಸಿ ಪೂರ್ಣಗೊಳಿಸಿ ನಾಡಿಗೆ ಸಮರ್ಪಿಸದಿದ್ದರೆ ಸಾಮಾಜಿಕ ಜನಾಂದೋಲನಕ್ಕೆ ಬಿಜೆಪಿ ನೇತೃತ್ವ ನೀಡಲಿರುವುದೆಂದು ಎಂ. ಎಲ್. ಅಶ್ವಿನಿ ಅಭಿಪ್ರಾಯಪಟ್ಟರು.

ಬಿಜೆಪಿ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಲೋಕೇಶ್ ನೋಂಡ, ಪೖವಳಿಕೆ ನಾರ್ತ್ ಏರಿಯಾ ಅಧ್ಯಕ್ಷ ಸತ್ಯಶಂಕರ ಭಟ್, ಕಾರ್ಯದರ್ಶಿ ಪ್ರವೀಣ ಪಟ್ಲ, ಸೌತ್ ಏರಿಯಾ ಅಧ್ಯಕ್ಷ ಸುಬ್ರಹ್ಮಣ್ಯ ಭಟ್, ಕೀರ್ತಿ ಭಟ್, ಗ್ರಾ. ಪಂ. ಸದಸ್ಯರಾದ ಸುಮನ ಜಿ. ಭಟ್, ರಾಮ ಏದಾರ್, ರಾಮಕೃಷ್ಣ ಬಿ. ಕೆ, ಗಣೇಶ್ ಪ್ರಸಾದ್, ಸುಜಾತ, ಗೋಪಾಲ ಸಫಲ್ಯ, ಸಲೀಲ್ ಮಾಸ್ಟರ್, ಬಾಲಕೃಷ್ಣ, ವಿಶ್ವನಾಥ ಮಾಣಿಪ್ಪಾಡಿ ಮೊದಲಾದವರು ಜಿಲ್ಲಾಧ್ಯಕ್ಷೆಯ ಜತೆಗಿದ್ದರು.






