ಮಂಗಳೂರು ವಿ. ವಿಯಲ್ಲಿ ಕಲಾ ಸಾಧಕರಾದ ಕಪ್ಪೆಕೆರೆ, ಮಾಂಬಾಡಿ, ಜಬ್ಬಾರ್ ಮತ್ತು ಉಳಿತ್ತಾಯರಿಗೆ ಯಕ್ಷಮಂಗಳ ಪ್ರಶಸ್ತಿ ಪ್ರದಾನ

by Narayan Chambaltimar
  • ಯಕ್ಷಗಾನ ಕೇಂದ್ರ ಸ್ಥಾಪಕ ಪ್ರಾಯೋಜಕ ಡಾ. ಪಿ. ದಯಾನಂದ ಪೖ ಅವರಿಂದ ಕೇಂದ್ರಕ್ಕೆ ಹೆಚ್ಚುವರಿ 1ಕೋಟಿ ರೂ ದಾನ ಹಸ್ತಾಂತರ

ಉಳ್ಳಾಲ : ಯಕ್ಷಗಾನದ ಗತಕಾಲೀನ ಪರಂಪರೆಯ ಹಾದಿಯಲ್ಲಿ ನಡೆದು, ಹೊಸ ಮಾರ್ಗ ಸೃಷ್ಟಿಸಿಕೊಂಡು ಪರಂಪರೆಯ ದಾರಿ ವಿಸ್ತರಿಸಿದ ಸೃಜನ ಶೀಲ ಕಲಾರತ್ನಗಳಿಗೆ ಮಂಗಳೂರು ವಿವಿಯ 2025-26ನೇ ಸಾಲಿನ ಯಕ್ಷಮಂಗಳ ಪ್ರಶಸ್ತಿ ಮತ್ತು ಯಕ್ಷಮಂಗಳ ಕೃತಿ ಪ್ರಶಸ್ತಿ ಸಲ್ಲುತ್ತದೆ ಎಂದು ಕರ್ನಾಟಕ ಜಾನಪದ ವಿ. ವಿ ವಿಶ್ರಾಂತ ಕುಲಪತಿ, ಜಾನಪದ ತಜ್ಞ ಪ್ರೊ. ಕೆ. ಚಿನ್ನಪ್ಪ ಗೌಡ ನುಡಿದರು. ಅವರಿಂದು ಮಂಗಳೂರು ವಿ. ವಿ. ಯಕ್ಷಗಾನ ಕೇಂದ್ರದಲ್ಲಿ ನಡೆದ
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಭಿನಂದನ ಭಾಷಣ ಮಾಡುತ್ತಿದ್ದರು.


ಹತ್ತು ಸಾವಿರ ರೂ ನಗದು ಪುರಸ್ಕಾರ ಸಹಿತ ಈ ಬಾರಿಯ ಯಕ್ಷಮಂಗಳ ಪ್ರಶಸ್ತಿಯನ್ನು ತೆಂಕುತಿಟ್ಟಿನ ಹಿರಿಯ ಯಕ್ಷಗಾನ ಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್, ಅರ್ಥದಾರಿ ಜಬ್ಬಾರ್ ಸಮೋ ಸಂಪಾಜೆ, ಬಡಗುತಿಟ್ಟಿನ ಕಪ್ಪೆಕೆರೆ ಸುಬ್ರಾಯ ಭಾಗವತರ ಪರವಾಗಿ ಅವರ ಸೋದರ, ಯಕ್ಷಮಂಗಳ ಕೃತಿ ಪ್ರಶಸ್ತಿಯನ್ನು ಕೃಷ್ಣಪ್ರಕಾಶ್
ಉಳಿತ್ತಾಯ ಅವರಿಗೆ ಮಂಗಳಗಂಗೋತ್ರಿ ಯಕ್ಷಗಾನ ಕೇಂದ್ರದ ಮಹಾಪೋಷಕ, ಸ್ಥಾಪಕ ಪ್ರಾಯೋಜಕ ಡಾ. ಪಿ. ದಯಾನಂದ ಪೖ ಪ್ರದಾನ ಮಾಡಿದರು.

ಪ್ರಶಸ್ತಿಗೆ ಉತ್ತರಿಸಿ ಮಾತನಾಡಿದ ತೆಂಕುತಿಟ್ಟು ಯಕ್ಷಗಾನದ ಹಿರಿಯ ಗುರುಗಳಾದ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರು ಯಕ್ಷಗಾನ ಕಲೆ ಬೆಳೆಯಬೇಕಿದ್ದರೆ ಬೆಳವಣಿಗೆಯನ್ನು ಅರ್ಥೖಸಬೇಕು. ಬೆಳವಣಿಗೆ ಎಂದರೆ ವ್ಯಾಪ್ತಿ ವಿಸ್ತರಣೆಯಲ್ಲ. ಬೆಳವಣಿಗೆಯೆಂದರೆ ರಚನಾತ್ಮಕ ಅಧ್ಯಯನಗಳ. ಶೋಧನೆ. ಅಧ್ಯಯನ ಕೇಂದ್ರ ಇದಕ್ಕೆಂದೇ ಇರುವುದು ಎಂದರು.

  • ಒಳ್ಳೆಯ ಕೇಳುಗನಾದವನಷ್ಟೇ
    ಒಳ್ಳೆಯ ಹೇಳುಗನಾಗುತ್ತಾನೆ..

ಪ್ರಶಸ್ತಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಹಿರಿಯ ಅರ್ಥದಾರಿ ಜಬ್ಬಾರ್ ಸಮೋ “ಯಕ್ಷಗಾನದ ಅರ್ಥಗಾರಿಕೆ ಕೇಳುತ್ತಾ ಆಕರ್ಷಣೆಗೊಂಡು ಅರ್ಥದ ಆಳ, ಹರವು, ವ್ಯಾಪ್ತಿ ಹುಡುಕುವ ಕೌತುಕದಿಂದಲೇ ಮಾತುಗಾರಿಕೆಯೆಂಬ ಈ ಕ್ಷೇತ್ರಕ್ಕೆ ನಾನು ಬಂದೆ. ಆದರೆ ಪೂರ್ಣಾವಧಿ ಅರ್ಥದಾರಿಯಾದಾಗ ನನ್ನೊಳಗಿನ ಶೋತೃ ಎಲ್ಲೋ ಕೖ ತಪ್ಪಿ ಹೋದ. ನಾನೊಬ್ಬ ಒಳ್ಳೆಯ ಹೇಳುಗನೆಂಬ ಭ್ರಮೆಯ ಭ್ರಾಂತು ನನಗಿಲ್ಲ. ಆದರೆ ಕೇಳುಗನ ಸರಣಿ ತಪ್ಪಿಸಿದ ವಿಷಾದವಿದೆ. ಕಲೆ ಮನುಷ್ಯರಿಗೆ ರಂಜನೆಗಿಂತಲೂ ಮಿಗಿಲಾಗಿ ಸಂಸ್ಕಾರ ಕೊಡುತ್ತದೆ. ಅದು ಹೃದಯದಿಂದ ಹೃದಯಕ್ಕೆ ಸೇತುವೆ ಬಿಗಿಯುತ್ತದೆ. ವಿಕಸನಶೀಲ ಸಮಾಜ ಕಟ್ಟುತ್ತದೆ. ಹೀಗಾದರೆ ಮಾತ್ರವೇ ಕಲಾಜೀವನ ಸಾರ್ಥಕ “ಎಂದರು.

1ಕೋಟಿ ರೂ ದಾನ ಹಸ್ತಾಂತರ
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಡಾ. ಪಿ. ದಯಾನಂದ ಪೖ ಮತ್ತು ಸತೀಶ್ ಪೖ ಯಕ್ಷಗಾನ ಅಧ್ಯಯನ ಕೇಂದ್ರದ ಸ್ಥಾಪಕ ಪ್ರಾಯೋಜಕ ಡಾ. ಪಿ. ದಯಾನಂದ ಪೖ ಅವರು ಸಮಾರಂಭದಲ್ಲಿ ಹೆಚ್ಚುವರಿಯಾಗಿ 1 ಕೋಟಿ ರೂ. ಅನುದಾನವನ್ನು ಕೇಂದ್ರಕ್ಕೆ ಹಸ್ತಾಂತರಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಮಂಗಳೂರು ವಿ. ವಿ. ಕುಲಪತಿ ಪ್ರೊ. ಪಿ. ಎಲ್. ಧರ್ಮ ಅನುದಾನ ಕೊಡುಗೆ ಸ್ವೀಕರಿಸಿದರು. ಪಾರದರ್ಶಕ ಮತ್ತು ಪ್ರಾಮಾಣಿಕ ಚಟುವಟಿಕೆ ನಡೆಸಿ ಅನುದಾನದ ಸದುಪಯೋಗ ನಡೆಯುವುದೆಂದು ಅವರು ಕೃತಜ್ಞತೆ ಸಲ್ಲಿಸಿದರು. ಅಲ್ಲದೇ ವಿ. ವಿ. ವತಿಯಿಂದ ಅವರನ್ನು ಗೌರವ ಪೂರ್ವಕ ಸನ್ಮಾನಿಸಲಾಯಿತು.

ಯಕ್ಷಗಾನೀಯ ಸಂಭ್ರಮ
ಇಡೀ ಕಾರ್ಯಕ್ರಮ ಯಕ್ಷಗಾನೀಯವಾಗಿ ನಡೆದು ವೖಶಿಷ್ಟ್ಯ ಮೆರೆಯಿತು. ಕಲಾವಿದೆ ಸಾಯಿಸುಮಾ ನಾವಡ ಯಕ್ಷಗಾನ ಅರ್ಥಗಾರಿಕೆ ಶ್ರುತಿಯಲ್ಲಿ ಹಿಮ್ಮೇಳದ ಜತೆ ಕುಳಿತು ಸಭಾ ನಿರೂಪಿಸಿದರು. ಆಗಮನ, ನಿರ್ಗಮನ, ಚಲನಕ್ಕೆ ಚೆಂಡೆ ಮದ್ದಳೆ ನಾದ ಮೊಳಗಿತು. ಪ್ರಶಸ್ತಿ ಪ್ರದಾನದ ವೇಳೆ ಅವರ ಕುರಿತಾಗಿ ದಿವಿತ್ ಕೋಟ್ಯಾನ್ ರಚಿಸಿದ ಪದಗಳನ್ನು ಭಾಗವತ ಚಿನ್ಮಯ ಕಲ್ಲಡ್ಕ ಸೊಗಸಾಗಿ ಹಿಮ್ಮೇಳದೊಂದಿಗೆ ಹಾಡಿದರು. ಕೇಳಿ ಭಾರಿಸಿ ಅತಿಥಿ ಆಹ್ವಾನ ಮಾಡಿ, ಸ್ತುತಿ ಪದ್ಯಗಳ ನರ್ತನದಲ್ಲಾರಂಭಿಸಿ ಬಳಿಕ ಕೊನೆಗೆ ಮಂಗಲ ಪದದಲ್ಲಿ ಕಾರ್ಯಕ್ರಮಕ್ಕೆ ಸಮಾಪ್ತಿಯಿಯಿತು.

ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಧನಂಜಯ ಕುಂಬ್ಳೆ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ವಿ. ವಿ. ಕುಲಸಚಿವ ಡಾ. ಗಣೇಶ ಸಂಜೀವ್, ಮೋಹಿನಿ ದಯಾನಂದ ಪೖ ಉಪಸ್ಥಿತರಿದ್ದರು. ಯಕ್ಷಗಾನ ಕೇಂದ್ರದ ಸತೀಶ್ ಕೋಣಾಜೆ ವಂದಿಸಿದರು.

 

 

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00