ಪದ್ಮಶ್ರೀ ಸಾಧಕನ ಬವಣೆಗೆ ಮರುಗಿದ ಮಂಗಳೂರಿನ ಉದ್ಯಮಿ ಆಯರ್: ಭತ್ತದ ತಳಿ ಸಂರಕ್ಷಣಾ ಭವನಕ್ಕೆ 4ಲಕ್ಷರೂ ದಾನ

by Narayan Chambaltimar
  • ಮಿಂಚಿಪದವು ಕ್ಷೇತ್ರ ಬ್ರಹ್ಮಕಲಶ ಸಮಾರೋಪ ವೇದಿಕೆಯಲ್ಲಿ ಪದ್ಮಶ್ರೀ ಸಾಧಕ ಬೆಳೇರಿಗೆ ಸನ್ಮಾನ ಸಹಿತ ಸಹಾಯ

  • ವರದಿ: ಎಂ. ನಾ. ಚಂಬಲ್ತಿಮಾರ್ @Kanipura.in News

ಮುಳ್ಳೇರಿಯ: ದೇಶದಲ್ಲಿ ನಾಶೋನ್ಮುಖವಾಗುತ್ತಿರುವ ಅಪೂರ್ವ ಭತ್ತದ ತಳಿಗಳನ್ನು ದನದ ಹಟ್ಟಿಯೊಂದಿಗಿನ ಪುಟ್ಟ ಗೂಡಂಗಡಿಯಂಥ ಕೋಣೆಯಲ್ಲಿಟ್ಟು ಕಾಪಾಡಿ ಪ್ರತಿಷ್ಠಿತ ಪದ್ಮಶ್ರೀ ಮುಡಿದ ಬೆಳ್ಳೂರು ಪಂಚಾಯತಿನ ಸತ್ಯನಾರಾಯಣ ಬೆಳೇರಿ ಅವರ ಬಹುಕಾಲದ ಬಯಕೆ ಕೊನೆಗೂ ಈಡೇರುತ್ತಿದೆ.
ತನ್ನಲ್ಲಿರುವ 650ಕ್ಕೂ ಅಧಿಕ ಭತ್ತದ ತಳಿ ಸಂರಕ್ಷಣೆ ಮತ್ತು ತನಗೆ ದೊರೆತ ಪದ್ಮಶ್ರೀ ಪ್ರಶಸ್ತಿ ಸಹಿತ ರಾಜ್ಯ ಪ್ರಶಸ್ತಿಗಳನ್ನು ಇರಿಸಲು ಅವರಿಗೆ ಯೋಗ್ಯ ಕೊಠಡಿಯ ಜಾಗವೇ ಇರಲಿಲ್ಲ. ತನಗೆ ಶಾಲು-ಸನ್ಮಾನಕ್ಕಿಂತ ತಳಿ ಸಂರಕ್ಷಣೆ ಮತ್ತು ತಳಿ ಅಧ್ಯಯನ, ಸಂಗ್ರಹಕ್ಕೆ ಬರುವವರೊಂದಿಗೆ ಮಾತಾಡಲು, ತಳಿಗಳನ್ನು ಸುರಕ್ಷಿತವಾಗಿರಿಸಲೊಂದು ಕೋಣೆಯಾದರೂ ಬೇಕೆಂಬುದು ಅವರ ಬಹುಕಾಲದ ಬಯಕೆಯಾಗಿತ್ತು. ಆದರೆ ಸ್ವಾಭಿಮಾನಿಯಾದ ಅವರು ಇದನ್ನೆಲ್ಲಾ ಬಹಿರಂಗ ಹೇಳುತ್ತಾ ನಡೆಯಲಿಲ್ಲ. ಅವರಲ್ಲಿಗೆ ಹೋದ ಯಾವೊಬ್ಬನಿಗೂ ಅರ್ಥವಾಗುವ ಸಮಸ್ಯೆ ಇದಾಗಿತ್ತು. ಆದರೆ ಪದ್ಮಶ್ರೀ ಮುಡಿದ ಸಾಧಕನಿಗೆ ನಾಡು ಗೌರವಿಸಿ ಒದಗಿಸಬೇಕಾದ ಪ್ರಾಥಮಿಕ ಸೌಲಭ್ಯ ಒದಗಿಸಲೇ ಇಲ್ಲ. ಇದನ್ನರಿತ ದಾನಿ, ಸಾಮಾಜಿಕ ಕಳಕಳಿಯ ಮಂಗಳೂರಿನ ಉದ್ಯಮಿ ಮಧುಸೂಧನ ಆಯರ್
ತಮ್ಮ “ಮಾವೋ” ಸಂಸ್ಥೆಯ ವತಿಯಿಂದ ಪದ್ಮಶ್ರೀ ಸತ್ಯನಾರಾಯಣ ಬೆಳೇರಿ ಅವರ ಕಟ್ಟಡ ನಿರ್ಮಾಣ ಸಂಕಲ್ಪಕ್ಕೆ 4ಲಕ್ಷ ರೂ ದಾನದ ಕೊಡುಗೆ ನೀಡಿದರು.

ನಮ್ಮ ಪವಿತ್ರ ಧಾರ್ಮಿಕ ಕೇಂದ್ರಗಳನ್ನು ಜೀರ್ಣೋದ್ಧಾರಗೊಳಿಸಿ ಅಭಿವೃದ್ಧಿ ಮಾಡುವುದರ ಜೊತೆಯಲ್ಲೇ ನಮ್ಮ ಸಮಾಜದ ನಿಜವಾದ ಸಾಧಕರ, ಬಡವರ ಕಣ್ಣೀರೊರೆಸುವ, ಧೖರ್ಯ ತುಂಬುವ ಕೆಲಸಗಳೂ ನಮ್ಮಿಂದಾಗಬೇಕು. ದೇವರು ಮೆಚ್ಚುವ ಕೆಲಸ ಎಂದರೆ ಸತ್ಕಾರ್ಯ.
-ಮಧುಸೂಧನ ಆಯರ್

(ಶ್ರೀ ಕ್ಷೇತ್ರ ಮಿಂಚಿಪದವು ಬ್ರಹ್ಮಕಲಶೋತ್ಸವದ ಅಧ್ಯಕ್ಷೀಯ ಭಾಷಣದಲ್ಲಿ…)

ಮಿಂಚಿಪದವು ಶ್ರೀ ಕಾವೇರಮ್ಮ ಮಹಾಲಿಂಗೇಶ್ವರ ಕ್ಷೇತ್ರ ಪುನರ್ ಪ್ರತಿಷ್ಟಾ ಬ್ರಹ್ಮಕಲಶದ ಸಮಾರೋಪ ಸಮಾರಂಭದಲ್ಲಿ
ಈ ಸತ್ಕಾರ್ಯ ದಾನ ನಡೆಯಿತು. ಎಡನೀರು ಶ್ರೀ ಸಚ್ಛಿದಾನಂದ ಭಾರತಿ ಶ್ರೀಪಾದಂಗಳವರು ಮಧುಸೂಧನ ಆಯರ್ ಸಮ್ಮುಖ ನಾಲ್ಕು ಲಕ್ಷ ರೂಗಳ ಚೆಕ್ ಹಸ್ತಾಂತರಿಸಿ ಮಂತ್ರಾಕ್ಷತೆ ಇತ್ತರು. ಬಳಿಕ ಬ್ರಹ್ಮಕಲಶೋತ್ಸವ ಸಮಿತಿ ವತಿಯಿಂದ ಸಾಧಕ ಬೆಳೇರಿಗೆ ಸನ್ಮಾನ ಗೌರವ ಸಲ್ಲಿಸಲಾಯಿತು.

2024ರ ಸಾಲಿನ ಪದ್ಮಶ್ರೀ ಗೌರವ ಪ್ರಶಸ್ತಿ ಮುಡಿದ ಬಳಿಕ ಸತ್ಯನಾರಾಯಣ ಬೆಳೇರಿ ಅವರ ಮನೆ ನಿತ್ಯ ಸಂದರ್ಶಕರ ಪ್ರವಾಸಿ ತಾಣವಾಗಿದೆ. ದೇಶದ ವಿವಿಧ ರಾಜ್ಯಗಳಿಂದ ಕೃಷಿ ವಿದ್ಯಾರ್ಥಿಗಳು, ಸಂಶೋಧಕರು ಅವರನ್ನು ಹುಡುಕಿ ಬರುತ್ತಾರೆ. ದೇಶದ ವಿವಿಧ ಕೃಷಿ ಸಂಶೋಧನಾಲಯಗಳು, ಕೃಷಿ ತಜ್ಞರು ತಳಿ ಸಂಗ್ರಹವೂ ಸೇರಿದಂತೆ ಮಾಹಿತಿ ವಿನಿಮಯಕ್ಕಾಗಿ ಸಂಪರ್ಕಿಸುತ್ತಾರೆ. ಶಾಲಾ ವಿದ್ಯಾರ್ಥಿಗಳ ಅರಿವಿಗಾಗಿರುವ ಪ್ರವಾಸವೂ ಇವರ ಮನೆ ಹುಡುಕಿ ಬರುತ್ತದೆ. ಆದರೆ ಸತ್ಯನಾರಾಯಣರಿಗೆ ಯೋಗ್ಯ, ಸುವ್ಯವಸ್ಥಿತ ಮನೆ ಇಲ್ಲ. ಪ್ರಶಸ್ತಿ ಪಾರಿತೋಷಕ ಇರಿಸಲು ಸುಭದ್ರ ಜಾಗವಿಲ್ಲ. ತಳಿ ಸಂರಕ್ಷಣೆಗೆ ಸುಸ್ಥಿರ ಜಾಗವಿಲ್ಲ. ಬಂದವರಿಗೆ ತಂಗಲು, ಕುಳಿತು ಮಾತಾಡಲು ಸೌಕರ್ಯಗಳೇ ಇಲ್ಲ. ಅವರಿಗಿರುವುದು ತುಂಡು ಭೂಮಿ. ಅದರಲ್ಲಿ ಲಕೋಟೆಗಳಲ್ಲಿ ಬೆಳೆಸಿ 650ಕ್ಕೂ ಅಧಿಕ ಅಪೂರ್ವ ಪ್ರಬೇಧಗಳ ಭತ್ತದ ತಳಿಯನ್ನವರು ಕಾಪಾಡಿದ್ದಾರೆ. ದೇಶವೇ ಬೆರಗಾಗುವ ಈ ಸಾಧನೆಯನ್ನು ಕರ್ನಾಟಕ ಕೃಷಿ ವಿ. ವಿ. ತಜ್ಞರಃ ಕೇಂದ್ರದ ಗಮನಕ್ಕೆಸತಂದಿದ್ದಾರೆ. ಪದ್ಮಶ್ರೀ ಒಲಿದಿದೆ.

ಸತ್ಯನಾರಾಯಣ ಬೆಳೇರಿ ಅವರ ವಶವುಳ್ಳ ತಳಿ ಸಂರಕ್ಷಣೆ ಸಹಿತ ಅವರಲ್ಲೊಂದು ದೇಸಿ ಭತ್ತದ ತಳಿ ಸಂರಕ್ಷಣಾ, ಅಧ್ಯಯನ ಕೇಂದ್ರ ಮಾಡಬಹುದಾಗಿದೆ. ಸಂಪೂರ್ಣ ತಳಿಗಳ ಬೀಜ, ಚಿತ್ರ ಸಹಿತ ವಿವರಣೆಗಳ ಫಲಕ ಹಾಕಿ ಅಧ್ಯಯನಕ್ಕೆ ಬರುವವರಿಗೆ ವಿವರಿಸಬಹುದಾಗಿದೆ. ಅಕ್ಕಿ ಬೆಳೆಸುವ ರೖತರು ಎಡೆಗೆಡೆಗೆ ಒಂದು ಗೂಡಿ ಕೃಷಿ ಚಿಂತನ ನಡೆಸಬಹುದಾಗಿದೆ. ಅವರ ಅರಿವನ್ನು ಹಂಚಬಹುದಾಗಿದೆ. ಆದರೆ ಸತ್ಯನಾರಾಯಣರು ಕೂಲಿ ಕೆಲಸ ಮಾಡಿ, ರಬ್ಬರ್ ಟ್ಯಾಪಿಂಗ್ ಮಾಡಿ ಬದುಕಿದವರು. ಈಗ ಅದಕ್ಕೂ ಪುರುಸೊತ್ತಿಲ್ಲ. ಆದಾಯ ಮೂಲಗಳೂ ಇಲ್ಲ. ಆದ್ದರಿಂದ ಸ್ಥಳೀಯಾಡಳಿತ ಸಹಿತ ನಾಡಿನ ಸುಮನಸುಗಳು ಸ್ಪಂದಿಸಿದರೆ ನಾವುಣ್ಣುವ ಅನ್ನದ ವೖವಿಧ್ಯ ತಳಿ ಸಂಗ್ರಾಹಕನಿಗೊಂದು ಸುರಕ್ಷಿತ ತಳಿ ಸಂರಕ್ಷಣಾ ಭವನ ನಿರ್ಮಿಸಿ ಕೊಡಲು ಕಷ್ಟವೇ?

ನಾನು ತಳಿ ಸಂರಕ್ಷಣೆ ಮಾಡಿ ಭವಿಷ್ಯಕ್ಕಿದು ಕೖದಾಟಬೇಕೆಂದು ಎಷ್ಟು ಕಾಳಜಿ ವಹಿಸುತ್ತೇನೋ ಅಷ್ಟೇ ಕಾಳಜಿ ತಳಿ ಸಂರಕ್ಷಣಾ ದೃಷ್ಟಿಯಲ್ಲಿ ಮಧುಸೂಧನ ಆಯರ್ ಮಾಡಿದ್ದಾರೆ. ಅವರ ಕೊಡುಗೆ, ಪ್ರೀತಿಗೆ ಆಭಾರಿ. ಪದ್ಮಶ್ರೀ ದೊರೆತ ಬಳಿಕ ನನ್ನಲ್ಲಿಗೆ ಸಾವಿರಾರು ಪ್ರಮುಖರು ಬಂದು ಹೋಗಿದ್ದಾರೆ. ಅವರಲ್ಲಿ ಯಾರಿಗೂ ಮೂಡದ ಕಾಳಜಿ ಮಧುಸೂಧನ ಆಯರ್ ಆವರಿಗೆ ಮೂಡಿದೆಯಲ್ಲಾ..?ಅದಕ್ಕೆ ಶಿರಬಾಗುವೆ. ನನಗೆ ಕೋಣೆ ಎಂಬ ನೆಪದಲ್ಲಿ ಕಟ್ಟಡ ಬೇಕು ಎಂದಲ್ಲ. ಭಾರತೀಯ ಭತ್ತದ ತಳಿ ಮುಂದಿನ ಪೀಳಿಗೆಗೆ, ಭವಿಷ್ಯಕ್ಕೆ ನಮ್ಮ ದೇಶದಲ್ಲೇ ಉಳಿದು ಜನರಿಗೆ ಒದಗಬೇಕಲ್ಲ? ತಳಿಗಳೆಲ್ಲವೂ ತಾಜಾ ತನದಿಂದ ಸಂರಕ್ಷಿಸಲ್ಪಡಬೇಕಲ್ಲವೇ..?
-ಪದ್ಮಶ್ರೀ ಸತ್ಯನಾರಾಯಣ ಬೆಳೇರಿ

ಭರ್ತಿ 650ಕ್ಕೂ ಅಧಿಕ ಭತ್ತದ ತಳಿ ವೖವಿಧ್ಯ ಸಂಗ್ರಹ, ಸಂರಕ್ಷಣೆ ಆಗಬೇಕಿದ್ದರೆ ಸತ್ಯನಾರಾಯಣ ಬೆಳೇರಿ ದೇಶ ಸುತ್ತಿದ್ದಾರೆ. ಸೌಕರ್ಯ, ಸೌಲಭ್ಯ ಬಯಸದೇ ಅಲೆದಿದ್ದಾರೆ. ದೇಶದ ತಳಿಗಳು ಸಂರಕ್ಷಣೆಯಾಗಿ ಭವಿಷ್ಯಕ್ಕೆ ಕೖದಾಟಬೇಕೆಂಬುದಷ್ಟೇ ಅವರ ಬಯಕೆ. ಹೌದು.. ಪರಿಶುದ್ಧ ತಾಜಾ ತಳಿ ಉಳಿದರಷ್ಟಲ್ಲವೇ ನಾಳಿನ ಪೀಳಿಗೆಗೂ ವಿಷರಹಿತ ಅನ್ನ ಉಣ್ಣಲು ಸಾಧ್ಯ?

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00