- ಬಹುಭಾಷೆಗಳ ಸೊಗಡೇ ಕರಾವಳಿಯ ನಿಜವಾದ ಅಸ್ಮಿತೆ: ಪುರುಷೋತ್ತಮ ಬಿಳಿಮಲೆ
ಮಂಜೇಶ್ವರ: ಬಹು ಭಾಷಾ ಅಸ್ತಿತ್ವದ ಮೇಲೆಯೇ ನಮ್ಮ ಅಸ್ಮಿತೆ ರೂಪುಗೊಳ್ಳುತ್ತದೆ. ಅದುವೇ ಕರಾವಳಿಯ ನಿಜ ಅಸ್ಮಿತೆ.ಆ ಮೂಲಕ ಕನ್ನಡದ ಅಸ್ಮಿತೆಯನ್ನು ಗಟ್ಟಿಗೊಳಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಮತ್ತು ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಸಹಯೋಗದಲ್ಲಿ , ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ಕನ್ನಡ ವಿಭಾಗ ಮತ್ತು ಗಿಳಿವಿಂಡು ಕನ್ನಡ ಸಾಹಿತ್ಯಕ ಮತ್ತು ಸಾಂಸ್ಕೃತಿಕ ವೇದಿಕೆಯ ಸಹಕಾರದೊಂದಿಗೆ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನಲ್ಲಿ ನಡೆದ ‘ಕಾಸರಗೋಡಿನಲ್ಲಿ ಕನ್ನಡ ಅಸ್ಮಿತೆ ಯುವಶಕ್ತಿ ಮತ್ತು ಭವಿಷ್ಯ ‘ ಎಂಬ ವಿಷಯದ ಕುರಿತಾದ ಒಂದು ದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಅಧ್ಯಕ್ಷ ಡಾ. ರಮಾನಂದ ಬನಾರಿ ಅಧ್ಯಕ್ಷತೆ ವಹಿಸಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ಲ , ಸಾಹಿತಿ ರಾಧಾಕೃಷ್ಣ.ಕೆ ಉಳಿಯತ್ತಡ್ಕ ಅತಿಥಿಗಳಾಗಿದ್ದರು. ಖ್ಯಾತ ಸಾಹಿತಿ ಡಾ ರಮಾನಂದ ಬನಾರಿ ಸಾರಥ್ಯದಲ್ಲಿ ಪ್ರಕಟಗೊಳ್ಳುತ್ತಿರುವ ‘ಕನ್ನಡಿಯಲ್ಲಿ ಕನ್ನಡಿಗ ‘ಕೃತಿ ಸರಣಿಯ ಆರನೇ ಸಂಚಿಕೆಯನ್ನು ಸಾಹಿತಿ, ನಿವೃತ್ತ ಪ್ರಾಧ್ಯಾಪಿಕೆ ಡಾ. ಪ್ರಮೀಳಾ ಮಾಧವ್ ಬಿಡುಗಡೆ ಗೊಳಿಸಿದರು.
ನಂದಿನಿ, ವಿದ್ಯಾಲಕ್ಷ್ಮಿ ಪ್ರಾರ್ಥನೆ ಹಾಡಿದರು . ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ಪ್ರಾಂಶುಪಾಲ ಡಾ. ಮಹಮ್ಮದಾಲಿ ಪ್ರಾಸ್ತಾವಿಕ ಭಾಷಣ ಮಾಡಿದರು. ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಕಾರ್ಯದರ್ಶಿ ಡಾ. ಕಿಶೋರ್ ಕುಮಾರ್ ರೈ ಶೇಣಿ ಸ್ವಾಗತಿಸಿ,ಕೋಶಾಧಿಕಾರಿ ವಿಶಾಲಾಕ್ಷ ಪುತ್ರಕಳ ವಂದಿಸಿದರು.
.ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಶಿವಶಂಕರ. ಪಿ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಕಾಸರಗೋಡಿನ ಕನ್ನಡದ ಇತಿಹಾಸ ಮತ್ತು ಸವಾಲುಗಳ ಕುರಿತು ವಿಚಾರಗೋಷ್ಠಿ ನಡೆಯಿತು. ಆಕಾಶವಾಣಿಯ ವಿಶ್ರಾಂತ ನಿರ್ದೇಶಕ ಡಾ. ಸದಾನಂದ ಪೆರ್ಲ (ಕಾಸರಗೋಡಿನ ಕನ್ನಡ ಹೋರಾಟದ ಇತಿಹಾಸ), ಕಾಸರಗೋಡು ಸರಕಾರಿ ಕಾಲೇಜಿನ ಪ್ರಾಧ್ಯಾಪಕ ರಾಧಾಕೃಷ್ಣ ಬೆಳ್ಳೂರು( ಕನ್ನಡ ಸಾಹಿತ್ಯ ಮತ್ತು ಕನ್ನಡ ಅಸ್ಮಿತೆ), ಡಾ. ಬಾಲಕೃಷ್ಣ ಹೊಸಂಗಡಿ( ಶೈಕ್ಷಣಿಕ ಮತ್ತು ಔದ್ಯೋಗಿಕ ಸವಾಲುಗಳು) ಡಾ. ಶ್ರೀಧರ.ಎನ್ (ಸಾಂಸ್ಕೃತಿಕ ಮತ್ತು ರಾಜಕೀಯ ಸವಾಲುಗಳು),ಕು.ದೀಕ್ಷಿತ ( ಕನ್ನಡ ವಿದ್ಯಾರ್ಥಿಗಳ ಸಮಸ್ಯೆಗಳು ), ಅನಿರುದ್ಧ (ಕನ್ನಡದ ಅಸ್ತಿತ್ವ_ ವಿದ್ಯಾರ್ಥಿಗಳ ಪಾತ್ರ) ಪ್ರಬಂಧ ಮಂಡನೆ ಮಾಡಿದರು. ಸಹಾಯಕ ಪ್ರಾಧ್ಯಾಪಕ ಡಾ ಸುಜೀಶ್. ಎಸ್ ಸಮನ್ವಯಕಾರರಾಗಿದ್ದರು.

ಅಪರಾಹ್ನ ಸಾಂಸ್ಕೃತಿಕ ವಲಯದ ಕನ್ನಡ ಅಸ್ಮಿತೆಯ ಕುರಿತು ಸಂವಾದ ಕಾರ್ಯಕ್ರಮ ನಡೆಯಿತು. ಸಾಹಿತಿ ಡಾ. ಮಹೇಶ್ವರಿ .ಯು , ಯಕ್ಷಗಾನ ಗುರು ಶಿವಶಂಕರ ದಿವಾಣ, ರಂಗ ನಿರ್ದೇಶಕ ಉದಯ ಸಾರಂಗ್ , ಗಮಕಿ ಶಶಿರಾಜ ನೀಲಂಗಳ, ವಿದುಷಿ ಅನುಪಮಾ ರಾಘವೇಂದ್ರ ಉಡುಪುಮೂಲೆ, ಶ್ರೀಧರ ರೈ ಕಾಸರಗೋಡು ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು. ಕಾರ್ತಿಕ್ ಪಿ.ಕೆ, ದೇವಿಕಾ.ಪಿ, ಆದಿಶ್ರೀ ಎಸ್.ಎನ್, ಎ .ವಿವೇಕ್ ,ಮನೀಶ್, ಪೂಜಾ, ಶಿವಾನಿ.ಕೆ ,ಕೃಷ್ಣ ಪ್ರಣಾಮ್ ಸಂವಾದದಲ್ಲಿ ಪಾಲ್ಗೊಂಡರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಖ್ಯಾತ ವಿಮರ್ಶಕ ಡಾ. ಎಸ್ .ಆರ್ ವಿಜಯಶಂಕರ್ ಬೆಂಗಳೂರು ಸಮಾರೋಪ ಭಾಷಣ ಮಾಡಿದರು. ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಕಾರ್ಯಾಧ್ಯಕ್ಷ ಪ್ರೊ. ಪಿ .ಎನ್ ಮೂಡಿತ್ತಾಯ ಅಧ್ಯಕ್ಷತೆ ವಹಿಸಿದರು. ಕರ್ನಾಟಕ ಸಮಿತಿ ಅಧ್ಯಕ್ಷ ಮುರಳೀಧರ ಬಳ್ಳಕ್ಕುರಾಯ, ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧ್ಯಕ್ಷ ಸುಕೇಶ.ಎ, ಮಾತನಾಡಿದರು.ಸಹಾಯಕ ಪ್ರಾಧ್ಯಾಪಕಿ ಜಯಂತಿ.ಕೆ ಸ್ವಾಗತಿಸಿ, ಆಯಿಶಾ ಪೆರ್ಲ ವಂದಿಸಿದರು.







