- ನಿರ್ಮಾಣಕ್ಕಿದೆ ಹಲವು ವೖಶಿಷ್ಠ್ಯ: ನಾಲ್ಕಂಕಣದ ಮೆಟ್ಟಿಲು ಕೆರೆ ಗಡಿನಾಡ ಕ್ಷೇತ್ರದಲ್ಲಿ ಇದೇ ಮೊದಲು!
ಅತ್ಯುತ್ತರ ಕೇರಳದ ವಾಣಿಯ-ಗಾಣಿಗ ಸಮಾಜ ಕ್ಷೇತ್ರವಾದ ಪೆರ್ಣೆ ಮುಚ್ಚಿಲೋಟ್ ಭಗವತಿ ಸನ್ನಿಧಿಯಲ್ಲಿ ಕೇರಳದ ಕ್ಷೇತ್ರ ಪುಷ್ಕರಿಣೀ ಪರಂಪರೆಯ ಚಿತ್ರ ವಿನ್ಯಾಸಗಳ ಮೆಟ್ಟಿಲು ಕೆರೆ ನಿರ್ಮಾಣವಾಗುತ್ತಿದೆ. ಕಾಸರಗೋಡು-ಮಂಜೇಶ್ವರ ತಾಲೂಕಿನ ಕ್ಷೇತ್ರವೊಂದರಲ್ಲಿ ಇಂಥ ಕೆರೆ ನಿರ್ಮಾಣವಾಗುವುದು ಇದೇ ಮೊದಲು. ಅದರ ರಚನಾ ವೖಶಿಷ್ಟ್ಯವೇ ವಿಶೇಷ.

- ✍️ ಎಂ. ನಾ. ಚಂಬಲ್ತಿಮಾರ್
ಕುಂಬಳೆ: ನಾಡು ಕಡು ಬೇಗೆಯೊಂದಿಗೆ ಅತ್ಯುಷ್ಣದ ದಿನಗಳತ್ತ ಸಾಗುತ್ತಿರುವಾಗ ಪೆರ್ಣೆ ಶ್ರೀ ಮುಚ್ಚಿಲೋಟ್ ಭಗವತಿ ಕ್ಷೇತ್ರ ಸನ್ನಿಧಿಯಲ್ಲಿ ಕೇರಳದ ಕ್ಷೇತ್ರ ಶೈಲಿಯ ವಿಶಿಷ್ಟ ವಿನ್ಯಾಸದ ಮೆಟ್ಟಿಲು ಕೆರೆ ನಿರ್ಮಾಣ ಹಂತದಲ್ಲಿದೆ.
ಕೇರಳದ ಮಲಬಾರ್ ಪ್ರಾಂತ್ಯದಲ್ಲಿ ಪ್ರಾಚೀನ ಪರಂಪರೆಯಿಂದಲೇ ದೇವಾಲಯಗಳಲ್ಲಿ ಕಂಡುಬರುವ ವಿಶಿಷ್ಟ ಮೆಟ್ಟಿಲುಗಳ ಚಿತ್ರ ವಿನ್ಯಾಸದ ಕೆರೆಗಳು ಕಾಸರಗೋಡು ಭಾಗದಲ್ಲಿ ನಿರ್ಮಾಣಗೊಳ್ಳುವುದು ಇದೇ ಮೊದಲು. ಕೇರಳದ ಎಲ್ಲಾ ಮುಚ್ಚಿಲೋಟ್ ಭಗವತಿ ಕ್ಷೇತ್ರಗಳಲ್ಲೂ ಪ್ರಾಚೀನ ಕಾಲದಿಂದಲೇ ಇಂಥ ಕೆರೆಗಳಿವೆ. ಇದರಂತೆ ಅತ್ಯುತ್ತರ ಕೇರಳದ ಪೆರ್ಣೆ ಮುಚ್ಚಿಲೋಟ್ ಸನ್ನಿಧಿಯಲ್ಲೂ ಕೆರೆ ಇತ್ತು. ಅದು ನಾಶಗೊಂಡ ಬಳಿಕ ಪ್ರಾಯಶ್ಚಿತ್ತ ರೂಪೇಣ ನೂತನ ಮೆಟ್ಟಿಲು ಕೆರೆ ನಿರ್ಮಾಣಗೊಳ್ಳುತ್ತಿದೆ.

ಕ್ಷೇತ್ರಕ್ಕೊಂದು ಪುಣ್ಯ ಪುಷ್ಕರಿಣಿ ಕೇರಳದ ರೂಢಿ. ಇದರಂತೆ ಮುಚ್ಚಿಲೋಟು ಕ್ಷೇತ್ರಾಂಗಳದಲ್ಲೂ ಕೆರೆ ಇತ್ತು. ಅದರ ದಂಡೆಯಲ್ಲಿ ನಡೆದೇ ಹಿಂದೆ ಕ್ಷೇತ್ರ ಪ್ರವೇಶಿಸಬೇಕಿತ್ತು. ಕೆರೆ ದಂಡೆಯಲ್ಲಿ ನಡೆದು ಕ್ಷೇತ್ರ ಪ್ರವೇಶಿಸುವ ದಾರಿ ಅಪಾಯಕಾರಿಯೆಂದರಿತು ಕ್ರಮೇಣ ಆ ಕೆರೆಯನ್ನು ಮುಚ್ಚಲಾಯಿತು. ಇದಾಗಿ ಸುಮಾರು 60-70ವರ್ಷಗಳಾಯಿತಷ್ಟೇ..
ಈ ಕುರಿತು ಅಂದು ಪ್ರಶ್ನಾ ಚಿಂತನೆ ನಡೆಸುವುದೋ, ದೇವಿಯೊಪ್ಪಿಗೆ ಪಡೆಯುವುದೋ ಮಾಡಿರಲಿಲ್ಲ. ಅನಂತರ ಬೇರೊಂದು ಕೆರೆಯನ್ನು ತೋಡಲಾಗಿತ್ತು. ಅದು ಜೇಡಿ ಮಣ್ಣು ತುಂಬಿದ ಜಾಗ. ತೋಡಿದಷ್ಟೂ ಜರಿದು ಬೀಳುವುದು ವಾಡಿಕೆಯಾಯಿತು. ಕ್ರಮೇಣ ಜರಿದು ಬಿದ್ದು ಅದೇ ನಾಶವಾಯಿತು. 95-96ರ ಕಾಲದಲ್ಲಿ ಅದನ್ನು ಮುಚ್ಚಬೇಕಾಯಿತು.
ಅನಂತರ ಪೆರ್ಣೆ ಮುಚ್ಚಿಲೋಟು ಕ್ಷೇತ್ರ ಅಮೂಲಾಗ್ರ ನವೀಕರಣಗೊಂಡು, ಜೀರ್ಣೋದ್ಧಾರ ಸಹಿತ ಪೆರುಂಕಳಿಯಾಟ ನಡೆಯಿತು.
ಬಳಿಕ ಕೊರೋನಾ ಕಾಲದ ನಂತರ ಕ್ಷೇತ್ರದ ಪ್ರಶ್ನಾ ಚಿಂತನೆ ನಡೆದಾಗ ಪರಂಪರೆಯ ಕ್ಷೇತ್ರ ಕೆರೆ ನಾಶಗೊಂಡದ್ದು ಪುನರ್ ನಿರ್ಮಾಣವಾಗಲು ದೇವಿಯಾಣತಿ ಕಂಡುಬಂತು.
ಇದರಂತೆ ಕ್ಷೇತ್ರ ಕೆರೆ ನಿರ್ಮಾಣಕ್ಕೊಂದು ಸಮಿತಿ ರಚಿಸಲಾಯಿತು. ಹಳೇ ಕೆರೆ ಮುಚ್ಚಿದ ಜಾಗದಲ್ಲಿ ಪ್ರಾಯಶ್ಚಿತ್ತ ವಿಧೇಯ “ಕೂತ -ಖನನ-ಶಾಂತಿ ಹೋಮ’ ನಡೆಸಿ ಹೊಸ ಕೆರೆಗೆ ಸ್ಥಳ ನಿರ್ಣಯಿಸಿ ಕೆಲಸ ಪ್ರಾರಂಭಿಸಲಾಯಿತು.


ಇದು ಅಂತಿಂಥ ಕೆರೆಯಲ್ಲ…
24ಕೋಲು ಅಗಲ ಮತ್ತು 24ಕೋಲು ಉದ್ದದ ನೂತನ ಮೆಟ್ಟಿಲು ಕೆರೆ ನಿರ್ಮಾಣಕ್ಕೆ ಸುಮಾರು 1ಕೋಟಿಗೂ ಅಧಿಕ ವೆಚ್ಚ ನಿರೀಕ್ಷಿಸಲಾಗಿದೆ. ಕೆರೆಯ ಸುತ್ತ ಮೆಟ್ಟಿಲುಗಳ ವಿಶೇಷ ವಿನ್ಯಾಸಕ್ಕೆ ಭರ್ತಿ 1ಲಕ್ಷಕ್ಕೂ ಅಧಿಕ ನಿರ್ದಿಷ್ಟ ಆಯ, ಆಕೃತಿಗಳ ಮುರ ಕಲ್ಲುಗಳೂ ಬೇಕಾಗಿವೆ. ಅದು ನಾಲ್ಕೖದು ವಿನ್ಯಾಸದಲ್ಲಿ ರೂಪುಗೊಳ್ಳಬೇಕಾಗಿದೆ. ಈ ಕಲ್ಲುಗಳನ್ನು ಪೆರ್ಣೆ ಕ್ಷೇತ್ರ ಮುಂಭಾಗದಿಂದಲೇ ಕಡಿದು, ವಿನ್ಯಾಸಗೊಳಿಸಿ ಶೇಖರಿಸಿಡುವ ಕೆಲಸ ನಡೆಯುತ್ತಿದೆ. ಕಾಞಂಗಾಡು ಬಳಿಯ ಚಾಲಿಂಗಾಲ್ ಶಶಿ ಶಿಲ್ಪಿಯ ನಿರ್ದೇಶನದಂತೆ ಕೆರೆಯ ಆಯ ಅಳತೆ ನಿರ್ದೇಶಿಸಲ್ಪಟ್ಟರೆ ಚೆರುವತ್ತೂರಿನ ಶಶಿಧರನ್ ಮಣಿಯಾಣಿ ಕಲ್ಲಿನ ಮೆಟ್ಟಿಲು ಕಟ್ಟುವ ಪುಷ್ಕರಿಣಿ ವಿನ್ಯಾಸದ ಹೊಣೆ ವಹಿಸಿದ್ದಾರೆ.
ಇಂಥ ಕೆರೆಗಳ ನಿರ್ಮಾಣಕ್ಕೆ ಉತ್ತರ ಕೇರಳದಲಿ ಒಂದೆರಡು ವರ್ಷ ತಗುಲತ್ತದೆ ಎಂಬುದು ಆಡು ಮಾತು. ಆದರೆ ಪೆರ್ಣೆ ಮುಚ್ಚಿಲೋಟು ಸನ್ನಿಧಿಯಲ್ಲಿ ಎರಡು ವಾರಗಳ ಹಿಂದೆಯಷ್ಟೇ ಕೆಲಸ ಆರಂಭಗೊಂಡಿದೆ. ಈಗ ಕೆರೆ ಹೂಳುವ ಕೆಲಸ 50ಶೇ. ಆಗಿದೆ. ಮಾರ್ಚ್ ಅಂತ್ಯ ಅಥವಾ ಎಪ್ರೀಲ್ ತಿಂಗಳ ಆರಂಭಕ್ಕೆ ಕೆರೆ ನಿರ್ಮಾಣ ಪೂರ್ಟಣವಾಗುವ ನಿರೀಕ್ಷೆ ಇದೆ.

ಗಡಿನಾಡಿನ ದೇವಾಲಯವೊಂದರಲ್ಲಿ ಕೇರಳ ಶೖಲಿಯ ಇಂಥ ಕೆರೆ ನಿರ್ಮಾಣವಾಗುವುದು ಇದೇ ಮೊದಲು. ಈ ಕೆರೆ ನಿರ್ಮಾಣಗೊಂಡ ಬಳಿಕ ಕ್ಷೇತ್ರದ ಕಳೆಯೇ ಬೇರಾಗಲಿದೆ. ಪೆರ್ಣೆ ಕ್ಷೇತ್ರದ ಏಳು ಮಂದಿ ಕಾರ್ನವರ್ ಗಳ ನೇತೃತ್ವದ ಸಲಹೆಯಂತೆ ಕೆರೆ ನಿರ್ಮಾಣ ಸಮಿತಿ ಈ ಜವಾಬ್ದಾರಿ ಕೖಗೆತ್ತಿಕೊಂಡಿದೆ. ಮೊದಲು ಪೆಟ್ಟಿಗೆ ಆಕಾರದ ಕೆರೆ ನಿರ್ಮಿಸಿ ಅದನಂತರ ಅದರೊಳಗಿಂದ ನಿರ್ದಿಷ್ಟ ವಿನ್ಯಾಸ, ಆಕಾರದ ಕಲ್ಲು ಹಾಸುತ್ತಾ ಜೋಡಿಸುವುದು ಇದರ ರೂಢಿ. ಇದಕ್ಕೆ ಈ ಕೆಲಸದ ಅನುಭವದಲ್ಲಿ ಪಳಗಿದ ಕಾರ್ಮಿಕರೇ ಬೇಕು. ಏನಾದರೂ ಒಂದಿಂಚು ಆಯ ತಪ್ಪಬಾರದು. ಈ ಕೆರೆ ಸ್ನಾನಾದಿ ವಗೖರೆ ಉದ್ದೇಶದಲ್ಲ. ಭಕ್ತರಿಗೆ ಪಾದಸ್ಪರ್ಶಿಸಿ, ತಲೆಗೆ ಪ್ರೋಕ್ಷಣೆ ಮಾಡಬಹುದು. ಜತೆಗೆ ಪ್ರಕೃತಿಯ ಪ್ರಾಣಿ ಪಕ್ಷಿಗಳ ಜಲಮೂಲವೂ ಹೌದು. ಒಟ್ಟಿನಲ್ಲಿ ಪೆರ್ಣೆ ಕ್ಷೇತ್ರ ಮತ್ತು ಪರಿಸರಕ್ಕೆ ಇದು ಶೋಭೆಯ ಕಳೆ ನೀಡಲಿದೆ.
–ಗೋಪಾಲಕೃಷ್ಣ ಮಾಸ್ತರ್ ಪಂಜತ್ತೊಟ್ಟಿ
(ಕೆರೆ ನಿರ್ಮಾಣ ಸಮಿತಿ ಸಂಚಾಲಕ)









