- ರಾಜಕೀಯ ವಿವಾದ: ಸಿಪಿಐಗೆ ಇರಿಸು ಮುರಿಸು: ಸ್ಪಷ್ಟನೆ ನೀಡುವಂತೆ ಸುಂದರಿ ಶೆಟ್ಟಿಗೆ ನೋಟೀಸ್ ಜ್ಯಾರಿ
ಹೊಸಂಗಡಿ: ಮೀಂಜ ಪಂಚಾಯತಿನ ಹಿರಿಯ ಸಿಪಿಐ ನಾಯಕಿ ಆರ್. ಎಸ್. ಎಸ್ ಏರ್ಪಡಿಸಿದ ಏಕತಾ ಸಮ್ಮೇಳನವೆಂಬ ಹಿಂದೂ ಸಮಾವೇಶದಲ್ಲಿ ಪಾಲ್ಗೊಂಡದ್ದು ಸಾಮಾಜಿಕ ರಾಜಕೀಯ ವಲಯದಲ್ಲಿ ಚರ್ಚಿತ ವಿಷಯವಾಗಿದೆ.

ಮೀಂಜ ಪಂಚಾಯತಿನ ಮಾಜಿ ಅಧ್ಯಕ್ಷೆ ಹಾಗೂ ಸಿಪಿಐ ಕಾಸರಗೋಡು ಜಿಲ್ಲಾ ಕೌನ್ಸಿಲ್ ಸದಸ್ಯೆಯಾದ ಸುಂದರಿ ಶೆಟ್ಟಿ ಅವರು ಮೀಂಜದಲ್ಲಿ ನಡೆದ ಹಿಂದೂ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಪಾಲ್ಗೊಂಡದ್ದಷ್ಟೇ ಅಲ್ಲದೇ ಭಾರತಾಂಬಾ ಚಿತ್ರಕ್ಕೆ ಪುಷ್ಪಾರ್ಚನೆ ನಡೆಸಿ, ಹಿಂದೂ ಸಮಾವೇಶ ವೇದಿಕೆಯಲ್ಲಿ ಭಾಷಣವನ್ನೂ ಮಾಡಿದ್ದರು. ಈ ಬೆಳವಣಿಗೆ ವಿವಾದವಾಗಿದ್ದು, ಸಿಪಿಐ ಜಿಲ್ಲಾ ಘಟಕ ಸುಂದರಿ ಶೆಟ್ಟಿಗೆ ಸ್ಪಷ್ಟೀಕರಣ ನೀಡುವಂತೆ ನೋಟೀಸ್ ಜ್ಯಾರಿಗೊಳಿಸಿದೆ.
ಸಿಪಿಐ ಸೖದ್ಧಾಂತಿಕವಾದ ಕಮ್ಯೂನಿಷ್ಟ್ ಧೋರಣೆಗಳನ್ನು ಅನುಸರಿಸುವ ಪಕ್ಷವಾಗಿದ್ದು, ಅದರ ಹಿರಿಯ ನಾಯಕಿಯೊಬ್ಬರು ಹಿಂದೂ ಸಮಾವೇಶದಲ್ಲಿ ಪಾಲ್ಗೊಂಡು, ಪಕ್ಷ ವಿರೋಧಿಸುವ ಪ್ರಕ್ರಿಯೆ ನಡೆಸಿರುವುದು ಸಿಪಿಐಗೆ ಇರಿಸು ಮುರಿಸುಂಟುಮಾಡಿದೆ. ಈ ಹಿನ್ನೆಲೆಯಲ್ಲಿ ಸುಂದರಿ ಶೆಟ್ಟಿ ಆವರ ವಿರುದ್ಧ ಪಕ್ಷದ ಶಿಸ್ತು ಕ್ರಮಕ್ಕೆ ಸಾಧ್ಯತೆಗಳಿರುವುದಾಗಿ ತಿಳಿದು ಬಂದಿದೆ. ಆರ್. ಎಸ್. ಎಸ್ ನೇತೃತ್ವದಲ್ಲಿ ಸಂಘದ ಶತಮಾನೋತ್ಸವ ಆಚರಣೆಯಂಗವಾಗಿ ಪ್ರಸ್ತುತ ಪಂಚಾಯತ್ ಮಟ್ಟದಲ್ಲಿ ಹಿಂದೂ ಸಮಾಜೋತ್ಸವ ನಡೆಸಲಾಗುತ್ತಿದೆ.








