- ವೃದ್ಧಾಪ್ಯವನ್ನೂ ಕಡೆಗಣಿಸಿ 80ರ ಹರೆಯದವರೆಗೂ ನಡೆದಾಡಿ ಪುಸ್ತಕ ಮಾರಿದ ಅಕ್ಷರ ಪ್ರೀತಿಯ ಆಚಾರ್ಯ..
ಕಾಸರಗೋಡು: ಜಿಲ್ಲೆಯ ಕನ್ನಡ ಪ್ರದೇಶದ ಗ್ರಾಮ, ಗ್ರಾಮಗಳಲ್ಲಿ ಶಾಲಾ, ಕಾಲೇಜು, ಸರಕಾರಿ ಕಚೇರಿ ಎಂದಿಲ್ಲದೇ ಅಲೆದು ಕನ್ನಡ ಪುಸ್ತಕಗಳನ್ನು ಮಾರುತ್ತಿದ್ದ ಸರಸ್ವತೀ ಆರಾಧಕ ಕೆ. ಉಪೇಂದ್ರ ಆಚಾರ್ಯ ಇನ್ನಿಲ್ಲ. ಅವರು ಫೆ. 11ರಂದು ಮಧ್ಯಾಹ್ನ ಮೊಗ್ರಾಲ್ ಪುತ್ತೂರು ಬಳಿಯ ಬೆದ್ರಡ್ಕದ ಉಜಿರೆಕೆರೆ ಸಮೀಪದ ತಮ್ಮ ನಿವಾಸದಲ್ಲಿ ಕೊನೆ ಉಸಿರೆಳೆದರು. ಮೃತರು ಪುತ್ರ ದೀಪಕ್ ಆಚಾರ್ಯ ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ. ಇವರ ಪತ್ನಿ ಸಾವಿತ್ರಿ ಏಳು ವರ್ಷದ ಹಿಂದೆಯೇ ಅಗಲಿದ್ದರು.
ಇವರು ಮಕ್ಕಳಿಗಾಗಿರುವ ಕಥೆ, ಚಿತ್ರಕಥೆ ಪುಸ್ತಕ, ಸ್ಪರ್ಧಾತ್ಮಕ ಪರೀಕ್ಷಾ ಪುಸ್ತಕ, ಸಾಮಾನ್ಯ ಜ್ಞಾನ ಪುಸ್ತಕ, ಪಿಎಸ್ ಸಿ ಸ್ಪರ್ಧಾ ಪುಸ್ತಕ ಇತ್ಯಾದಿಗಳನ್ನೆಲ್ಲಾ ನಡೆದಾಡಿಯೇ ಸಾಗಿ ಜನರಿಗೆ ತಲುಪಿಸುತ್ತಿದ್ದ ಅಪರೂಪದ ವ್ಯಕ್ತಿಯಾಗಿದ್ದರು. ಇವರು ತರುವ ಪುಸ್ತಕಗಳ ಖರೀದಿಗೆಂದೇ ಕಾಯುವ ಓದುಗ ವರ್ಗವೂ ಇತ್ತು.
ಈ ಹಿಂದೆ ಮಣಿಪಾಲ ಪವರ್ ಪ್ರೆಸ್ ನಲ್ಲಿ ಮುದ್ರಣ ತಂತ್ರಜ್ಞರಾಗಿ ದುಡಿದಿದ್ದರು. ಬಳಿಕ ಕಾಸರಗೋಡು ನಾಯಕ್ಸ್ ರಸ್ತೆಯ ಸಹಕಾರಿ ಮುದ್ರಣಾಲಯದಲ್ಲಿ ಕೆಲಸ ಮಾಡಿದ್ದರು. ಅನಂತರ ವೃದ್ಧಾಪ್ಯವನ್ನು ಕಡೆಗಣಿಸಿ, ಬದುಕನ್ನು ಸಕ್ರಿಯವಾಗಿರಿಸಿ ಅವರು ನಡೆದಾಡುವ ಸಂಚಾರಿ ಗ್ರಂಥಾಲಯವಾಗಿದ್ದರು. ಅವರ ಸಂಚಾರಿ ಪುಸ್ತಕ ಸೇವೆಯ ಕುರಿತು ಕನ್ನಡ, ಮಲಯಾಳ ಮಾಧ್ಯಮಗಳಲ್ಲಿ ಸುದ್ದಿಕತೆಗಳು ಪ್ರಕಟವಾಗಿತ್ತು.
ಸಮ್ಮೇಳನ, ಸಮಾರಂಭಗಳಲ್ಲೂ ಪುಸ್ತಕ ಚೀಲದೊಂದಿಗೆ ಹಾಜರಿರುತ್ತಿದ್ದ ಅವರ ಪುಸ್ತಕ ಸೇವೆಯ ಕೊಡುಗೆ ಅಪಾರ. ಅವರಿಂದ ಪುಸ್ತಕ ಖರೀದಿಸಿ ಓದಿ ಪರೀಕ್ಷೆ ಬರೆದು ತೇರ್ಗಡೆಯಾದವರೂ ಇದ್ದಾರೆ. ಆದರೆ ಅವರ ಶ್ಲಾಘ್ಯ ಸೇವೆ ಮನ್ನಿಸಿ ಗಡಿನಾಡಿನ ಜನತೆ. ಅವರನ್ನು ಯೋಗ್ಯವಾಗಿ ಪುರಸ್ಕರಿಸಲಿಲ್ಲ ಎಂಬುದೇ ವಿಷಾದ!









