ಬೇಳ: ಕಾಸರಗೋಡು ಗಿಡ್ಡ ತಳಿ ಪಶು ಸಂವರ್ಧನ ಕೇಂದ್ರದಲ್ಲಿ ಸೆಗಣಿಗೂ ಭಾರೀ ಬೇಡಿಕೆ: ಸೆಗಣಿ ಹುಡಿ ತಯಾರಿ ಘಟಕ ರೂಪಿಸಲು ಯೋಜನೆ ಸಲ್ಲಿಕೆ

by Narayan Chambaltimar
  • ಮಣ್ಣಿನ ಫಲವಂತಿಕೆ ಹೆಚ್ಚಿಸುವ ಅಮೃತ ಸಮಾನ, ರೋಗನಿರೋಧಕ ದೇಸಿ ದನದ ಸೆಗಣಿಗೆ ಕೃಷಿಕರ ನಡುವೆ ವ್ಯಾಪಕ ಬೇಡಿಕೆ

ವರದಿ: ಎಂ. ನಾ. ಚಂಬಲ್ತಿಮಾರ್
Kanipura News

ಕುಂಬಳೆ: ದೇಶದಲ್ಲೇ ಆತ್ಯಂತ ವಿಶಿಷ್ಟ ಮತ್ತು ಅಪೂರ್ವ ತಳಿಯೆಂದೇ ಪರಿಗಣಿತವಾಗಿ ಪ್ರಸಿದ್ಧಿಯಾದ “ಕಾಸರಗೋಡು ಗಿಡ್ಡ” ತಳಿ ದನಕ್ಕೆ ಬಂದಿರುವ ಬೇಡಿಕೆಯಂತೆಯೇ ಅದರ ಸೆಗಣಿಗೂ ಭರಪೂರ ಬೇಡಿಕೆ ಬಂದಿದೆ. ಬದಿಯಡ್ಕ ಗ್ರಾ. ಪಂ. ನ ಬೇಳ ಕುಮಾರ ಮಂಗಲ ದೇವಸ್ಥಾನದ ಮುಂಭಾಗದಲ್ಲಿರುವ ಕಾಸರಗೋಡು ಗಿಡ್ಡ ತಳಿ ದನ ಸಂವರ್ಧನ ಕೇಂದ್ರ ದಲ್ಲಿ ಸೆಗಣಿ ದೊರೆಯುತ್ತಿದ್ದು, ಖರೀದಿಸುವವರ ಸಂಖ್ಯೆ ಹೆಚ್ಚುತ್ತಿದೆ. ಸೆಗಣಿಗೆ ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ ಸೆಗಣಿ ಹುಡಿ ಮಾಡುವ ಘಟಕವೊಂದನ್ನು ಇಲ್ಲಿ ತೆರೆಯಬೇಕೆಂಬ ಯೋಜನೆ ರೂಪಿಸಲಾಗಿದ್ದು, ಸರಕಾರದ ಪರಿಗಣನೆಗೆ ಕಳುಹಿಸಲಾಗಿದೆ. ಯೋಜನೆ ಕೇರಳ ಮೃಗ ಸಂರಕ್ಷಣ ಇಲಾಖೆಯ ಪರಿಶೀಲನೆಯಲ್ಲಿದೆ.

ಸುಮಾರು 160ರಷ್ಟು ಕಾಸರಗೋಡು ಗಿಡ್ಡ ದನಗಳಿರುವ ಕೇಂದ್ರದಲ್ಲಿ ಕಳೆದ ಒಂದು ವರ್ಷದಲ್ಲಿ ಅತ್ಯಂತ ಫರಿಶುದ್ಧ, ಅಮೃತ ತುಲ್ಯವಾದ 51,716 ಲೀ. ಹಾಲು ವಿಕ್ರಯವಾಗಿದೆ. ಇದೇ ವೇಳೆ 19, 615 ಕಿಲೋ ಸೆಗಣಿ ಮಾರಾಟವಾಗಿದೆ. 600ಲೀಟರ್ ಗೋ ಮೂತ್ರ ಇಲ್ಲಿಂದ ಗ್ರಾಹಕರು ಕೊಂಡೊಯ್ದಿದ್ದಾರೆ. ಈ ಹಿಂದೆ ಒಂದು ಕಿಲೋ ಸೆಗಣಿಗೆ ಕೇವಲ 2.50 ರೂ ಇದ್ದದ್ದು ಈ ವರ್ಷದಿಂದ ರೂ. 3.50 ಕ್ಕೇ ಏರಿಸಲಾಗಿದೆ. ಒಂದು ಬುಟ್ಟಿ ಸೆಗಣಿಗೆ 98 ರೂ ಬೆಲೆ ವಸೂಲು ಮಾಡಲಾಗುತ್ತಿದೆ.

  • ಸೆಗಣಿಗೆ ಬೇಡಿಕೆ ಹೆಚ್ಚಲು ಕಾರಣ?

ಕಾಸರಗೋಡು ಗಿಡ್ಡ ತಳಿ ದನಕ್ಕೆ ಯಾವುದೇ ಇತರ ಪಶು ಆಹಾರಗಳ ಅಗತ್ಯವಿಲ್ಲ. ಆವು ಸಾಮಾನ್ಯ ಹುಲ್ಲು ತಿಂದು, ರೋಗ ನಿರೋಧಕವಾಗಿ ಬೆಳೆಯುತ್ತದೆ. ಈ ಕಾರಣದಿಂದ ಇದರ ಸೆಗಣಿ ಔಷಧಿಯುಕ್ತ ವಾಗಿ ವಾಸನೆ ರಹಿತವಾಗಿದೆ. ದೇವಸ್ಥಾನ, ದೖವಸ್ಥಾನಗಳ ಅಂಗಳಕ್ಕೆ ಸಾರಿಸಲು ಕೆಲವೆಡೆ ಸೆಗಣಿ ಅಗತ್ಯವಾಗಿದ್ದು, ಅನೇಕರು ಬೇಳವನ್ನೇ ಆಶ್ರಯಿಸುತ್ತಾರೆ.
ಉಳಿದಂತೆ ಕೃಷಿಯಲ್ಲಿ ಗೊಬ್ಬರವಾಗಿ ಸೆಗಣಿ ಅತ್ಯಧಿಕ ಫಲವಂತಿಕೆ ನೀಡುವ ಕಾರಣ ಕೃಷಿ ಉಪಯೋಗಕ್ಕೆ ಇಲ್ಲಿಂದ ಯಥೇಛ್ಛ ಸೆಗಣಿ ಕೊಂಡೊಯ್ಯತ್ತಾರೆ.

ಎಲ್ಲಾ ರೀತಿಯ ಕೃಷಿಯಲ್ಲೂ ಸೆಗಣಿ ಹುಡಿ ಅತ್ಯಂತ ಫಲವಂತಿಕೆಯ ಗೊಬ್ಬರವಾಗಿದೆ. ಇಲ್ಲಿ ಕಡಿಮೆ ಬೆಲೆಗೆ ಸಿಗುವ ಸೆಗಣಿ ಕೊಂಡೊಯ್ದು ಫ್ಯಾಕ್ಟರಿಗಳಲ್ಲಿ ಸೆಗಣಿ ಹುಡಿ ತಯಾರಿಸಿ ದುಬಾರಿ ಬೆಲೆಗೆ ಮಾರುವವರೂ ಇದ್ದಾರೆ. ಆದರೆ ಆ ಸೆಗಣಿ ಹುಡಿಗಳಲ್ಲಿ ಕೃತ್ರಿಮ ನಢೆಸುವುದರಿಂದ ಆ ಗೊಬ್ಬರವು ಯಶಸ್ವಿಯಾಗಿಲ್ಲ. ಆದ್ದರಿಂದ ಕೆಲವು ಫ್ಯಾಕ್ಟರಿಗಳು ಮುಚ್ಚಲ್ಪಟ್ಟಿವೆ.
-ರಾಜೇಶ್ ಕುಮಾರ್ ನೀರ್ಚಾಲು
(ಬೇಳ ಪಶು ಸಂವರ್ಧನ

 ಕೇಂದ್ರದ ನೌಕರ)

  •  ಸಗಣಿಯ ಉಪಯೋಗವೇನು?

ದೇಸಿ ದನದ ಸೆಗಣಿ ಅತ್ಯುತ್ತಮ ಸಾವಯವ ಗೊಬ್ಬರ. ತಾಜಾ ಸೆಗಣಿ ಎಲ್ಲೆಡೆ ಅಲಭ್ಯ. ಇದು ಕ್ರಿಮಿ ನಾಶಕ ಮತ್ತು ಹಿಂದೂ ಧಾರ್ಮಿಕತೆಯಲ್ಲಿ ಪವಿತ್ರವೆಂದು ಪರಿಗಣಿಸಲ್ಪಟ್ಟಿದೆ. ಇದು ಸಿರಜನಕ, ರಂಜಕ, ಪೊಟೇಷಿಯಂ ನಿಂದ ಸಮೃದ್ಧವಾಗಿದೆ. ಕೃಷಿಯಲ್ಲಿ ಮಣ್ಣಿನ ಫಲವತ್ತತೆ ಹೆಚ್ಚಳಕ್ಕೆ ಮತ್ತು ಪರಿಸರ ಶುದ್ಧೀಕರಣ, ಆಯುರ್ವೇದ ಔಷಧಿ ತಯಾರಿಗೆ ಇದರ ಬಳಕೆಯಾಗುತ್ತದೆ. ಇದು ಪರಿಸರ ಸ್ನೇಹಿ, ಬ್ಯಾಕ್ಟೀರಿಯ ವಿರೋಧಿ ಗುಣಗಳನ್ನು ಹೊಂದಿದೆ. ಸಸ್ಯಗಳಿಗೆ ಅಗತ್ಯವಾದ ಪೋಷಕಾಂಶ ನೀಡಿ ಮಣ್ಣಿನ ರಚನೆಯನ್ನು ಸುಧಾರಿಸುವ, ಸಾವಯವ ಕೃಷಿ ಚಟುವಟಿಕೆಗೆ ಅತ್ಯುತ್ತಮವಾದ್ದರಿಂದಲೇ ಸೆಗಣಿಗೆ ಬೇಡಿಕೆ ಹೆಚ್ಚಿದೆ.

  • ಎರಡು ರೀತಿಯ ಸೆಗಣಿ ಇಲ್ಲಿದೆ..

ಕಾಸರಗೋಡು ಗಿಡ್ಡ ದನ ಸಂವರ್ಧನ ಕೇಂದ್ರದಲ್ಲಿ ಎರಡು ನಮೂನೆಯ ಸೆಗಣಿ ಲಭ್ಯವಿದೆ.
ಒಂದು ದನದ ಸಹಜ ಸೆಗಣಿಯಾದರೆ ಇನ್ನೊಂದು ದಿನವೂ ತೊಳೆಯುವ ಹಟ್ಟಿಯಿಂದ ದನದ ಮೂತ್ರ ಸಹಿತವಾಗಿ ಹರಿದು ಬರುವ ಮಲಿನ ಜಲದ ಅಡಿಯಲ್ಲಿ ಹೆಪ್ಪು ಗಟ್ಟಿ ನಿಲ್ಲುವ ಸೆಗಣಿ ಹುಡಿ. ಈ ರೀತಿ ಹಟ್ಟಿ ತೊಳೆದು ಶೇಖರಣೆಯಾಗುವ ಜಲವನ್ನು ಪಂಪ್ ಮಾಡಿ ಪೖಪಿನ ಮೂಲಕ ಇಲ್ಲಿರುವ ಹುಲ್ಲು ಸಹಿತ ಕೃಷಿ ಗಿಡಗಳಿಗೆ ನೀರುಣಿಸಲಾಗುತ್ತದೆ. ಅಡಿಯಲ್ಲಿರುವ ಹುಡಿಯನ್ನು ಗಿಡಗಳಿಗೆ ಗೊಬ್ಬರವಾಗಿ ಒದಗಿಸಲಾಗುತ್ತದೆ. ಗ್ರಾಹಕರು ಬಯಸಿದರೆ ಈ ಸೆಗಣಿ ಹುಡಿಯೂ ಲಭ್ಯವಿದೆ.

ಅಳಿವಿನಂಚಿನಲ್ಲಿದ್ದ ಕಾಸರಗೋಡು ಕುಳ್ಳನ್ ಎಂದೇ ಕೇರಳದಲ್ಲಿ ಕರೆಯಲ್ಪಡುವ ಕಾಸರಗೋಡು ಗಿಡ್ಡ ತಳಿ ದೇಸಿ. ದನಗಳ ವಂಶ ಸಂವರ್ಧನೆಗೆಂದು ಕೇರಳ ಸರಕಾರ 15ವರ್ಷ ಹಿಂದೆ ಆರಂಭಿಸಿದ ಪಶು ಸಂವರ್ಧನ ಕೇಂದ್ರದಲ್ಲಿ 160 ರಷ್ಟು ದನಗಳಿವೆ. ಸುಮಾರು 30 ರಷ್ಟು ಕರುಗಳಿವೆ. ಇಲ್ಲಿಂದ ದನ ವಿಕ್ರಯವಾಗುತ್ತಿದ್ದು, ಅದಕ್ಕೆ ಭಾರೀ ಬೇಡಿಕೆ ಇದೆ. ಕೇರಳದ ನಟ`ನಟಿಯರು ಸಹಿತ ಇಲ್ಲಿಂದ ಕಾಸರಗೋಡು ಗಿಡ್ಡವನ್ನು ಕೊಂಡೊಯ್ದು ಸಾಕುತ್ತಿದ್ದಾರೆ. ಇದಕ್ಕೆ ಪ್ರತ್ಯೇಕ ತಳಿ ಅಂಗೀಕಾರ ನೀಡುವ ಅಧ್ಯಯನ ನಡೆದಿದ್ದು, ಯೋಜನೆ ಕೇಂದ್ರ ಸರಕಾರದ ಪರಿಗಣನೆಯಲ್ಲಿದೆ.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00