ತುಳುವಿನ ಸಾಹಿತ್ಯಾಧ್ಯಯನ ಸಾಲದು, ಪ್ರಾಚೀನ ತುಳು ಕಾವ್ಯಗಳನ್ನು ಸಾಂಸ್ಕೃತಿಕ ಪಠ್ಯವಾಗಿ ಗಮನಿಸಬೇಕು

by Narayan Chambaltimar
  • ಮಂಗಳೂರು ವಿವಿ ತುಳು ಪೀಠದ ವೆಬಿನಾರಿನಲ್ಲಿ ವಿದ್ವಾಂಸ ಕಬ್ಬಿನಾಲೆ

ಮುಡಿಪು: ತುಳುವಿನಲ್ಲಿ ಅರುಣಾಬ್ಜನ ಮಹಾಭಾರತೊ, ವಿಷ್ಣುತುಂಗನ ಭಾಗವತೊ ಕಾವ್ಯಗಳಿಂದ ತೊಡಗಿ ಇತ್ತೀಚೆಗಿನವರೆಗೆ ಸಮೃದ್ಧ ಸಾಹಿತ್ಯ ರಚನೆಯಾಗಿದೆ. ಆದರೆ ತುಳು ಜಾನಪದ ಕ್ಷೇತ್ರದಲ್ಲಿ ನಡೆದಷ್ಟು ಸಾಹಿತ್ಯದ ಕುರಿತು ಅಧ್ಯಯನಗಳು ನಡೆದಿಲ್ಲ.ಪಳಂತುಳು ಕಾವ್ಯಗಳ ಗದ್ಯಾನುವಾದ, ಸಂಶೋಧನೆಗಳು ಹೆಚ್ಚು ನಡೆಯಬೇಕಿದೆ ಎಂದು ವಿದ್ವಾಂಸರಾದ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಹೇಳಿದರು.

ಅವರು ಮಂಗಳವಾರ ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀ ಮಂಜುನಾಥೇಶ್ವರ ತುಳುಪೀಠದ ವತಿಯಿಂದ ನಡೆದ ಗೇನ ಪೊಲಬುದ ಪುರಪು ಎಗ್ಗೆ 188 ರಲ್ಲಿ ಅರುಣಾಬ್ಜ ಕವಿಯ ಮಹಾಭಾರತೊ ಪಳಂತುಳು ಕಾವ್ಯದ ಕುರಿತ ವೆಬಿನಾರಿನಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಪಳಂತುಳು ಕಾವ್ಯಗಳು ಕೇವಲ ರಸನಿಷ್ಠ ಓದಿಗೆ ಮಾತ್ರವಲ್ಲ ಅವುಗಳನ್ನು ಸಾಂಸ್ಕೃತಿಕ ಪಠ್ಯಗಳಾಗಿ ಗ್ರಹಿಸಬೇಕು. ಅರುಣಾಬ್ಜ ಕವಿಯ ಮಹಾಭಾರತೊದಲ್ಲಿ ‘ಮಾಡಾಂಬಿ’ ಎಂಬ ತುಳುನಾಡಿನ ದೈವದ ಉಲ್ಲೇಖವಿದೆ. ದೈವದ ಗುಡಿಯ ಉಲ್ಲೇಖವೂ ಇದೆ. ಇದು ಭೂತಾರಾಧನೆಯ ಚಾರಿತ್ರಿಕ ದೃಷ್ಟಿಯಿಂದಲೂ ಮಹತ್ವದ ವಿವರವಾಗಿದೆ.

ದ್ರೌಪದಿಯ ವಿವಾಹದ ಸಂದರ್ಭದಲ್ಲಿ ತುಳುನಾಡಿನ ವಿವಾಹ ಪದ್ಧತಿಯ ಕೈಧಾರೆ, ಪಜೆಮದಿಮೆ ಇತ್ಯಾದಿಗಳ ವಿವರವಿದೆ. ಜ್ಯೋತಿಷ್ಯ, ಕರ್ಜೂರ ಇತ್ಯಾದಿಗಳ ಉಲ್ಲೇಖವೂ ಇದೆ. ಇವೆಲ್ಲವೂ ತುಳುನಾಡಿನ ಇತಿಹಾಸ ಮತ್ತು ಸಂಸ್ಕೃತಿ ಅಧ್ಯಯನಕ್ಕೆ ಅವಕಾಶ ಕಲ್ಪಿಸಿದೆ. ನಾವು ಪ್ರಾಚೀನ ತುಳು ಕಾವ್ಯಗಳನ್ನು ಸಾಂಸ್ಕೃತಿಕ ಪಠ್ಯಗಳಾಗಿ ಗಮನಿಸಬೇಕು ಎಂದರು.

ಕನ್ನಡ ಮತ್ತು ತುಳು ಕಾವ್ಯಗಳಲ್ಲೇ ಅತೀ ಹೆಚ್ಚು ಅಂಶಗಣಾನ್ವಿತ ಷಟ್ಪದಿಗಳನ್ನು ಹೊಂದಿರುವ ಕೃತಿ ಮಹಾಭಾರತೊ. ಈ ಕೃತಿಯ ಛಂದಸ್ಸು ಮತ್ತು ತುಳುವಿನ ಪ್ರಾಚೀನ ಪ್ರಯೋಗಗಳ ದೃಷ್ಟಿಯಿಂದ ಮಹತ್ವದ ಕೃತಿ. ಅಂಬಿಗರ ನಾಲಗೆ ಕೊಯ್ದ ಕತೆ, ಐರಾವತ ಪ್ರಸಂಗ ಮೊದಲಾದ ಹಲವು ಕಥಾನಕಗಳ ಮೂಲಕ ಈ ಕೃತಿ ರಸವತ್ತಾಗಿದೆ. ಹದಿನಾಲ್ಕನೇ ಶತಮಾನದಲ್ಲೇ ತುಳುವಿನಲ್ಲಿ ಇಂತಹ ಪ್ರೌಢಕಾವ್ಯ ರಚನೆಗೊಂಡಿರುವುದು ತುಳುವರು ಅಭಿಮಾನ ಪಡಬೇಕಾದ ವಿಷಯ ಎಂದು ಅವರು ಹೇಳಿದರು.

ಉಪನ್ಯಾಸದ ಬಳಿಕ ಡಾ.ರಾಧಾಕೃಷ್ಣ ಬೆಳ್ಳೂರು, ಡಾ.ಸುಭಾಷಿಣಿ ಶ್ರೀವತ್ಸ, ಸೀತಾ ಮೊದಲಾದವರು ಸಂವಾದದಲ್ಲಿ ಪಾಲ್ಗೊಂಡರು.
ತುಳು ಪೀಠದ ಸಂಯೋಜಕರಾದ ಡಾ.ಧನಂಜಯ ಕುಂಬ್ಳೆ ಸ್ವಾಗತಿಸಿದರು. ಸಿಬ್ಬಂದಿ ಪ್ರಸಾದ್ ಅಂಚನ್ ವಂದಿಸಿದರು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00