- ಗಡಿನಾಡಿನ ಬೇಳ ಗ್ರಾಮಕ್ಕೆ ಬಂಗಾಳಿ ಸಂಸ್ಕೃತಿಯ ಅಪರೂಪದ ಬೆಸುಗೆ ಬೆಸೆದ ವಿಶಿಷ್ಟ ವಿವಾಹ
Kanipura News Special Story
By-M. Na. Chambalhimar
ಕುಂಬಳೆ: ಮದುವೆ ಎರಡು ಮನಸುಗಳ ಬೆಸುಗೆಯಷ್ಟೇ ಅಲ್ಲ, ಅದು ಎರಡು ಮನೆತನಗಳ ಬೆಸುಗೆಯೂ ಹೌದು. ಆದರೆ ಮದುವೆಯೊಂದು ಉತ್ತರ-ದಕ್ಷಿಣಗಳ ಸಂಸ್ಕೃತಿಯನ್ನು ಬೆಸೆದು ಭಾವೖಕ್ಯತೆಯ ಬಾಂಧ್ಯವ್ಯ ಮೂಡಿಸುವ ಸಂಸ್ಕೃತಿಯ ಮಿಲನವಾಗುವುದು ಅಪರೂಪ. ಗಡಿನಾಡು ಕಾಸರಗೋಡಿನ ಬೇಳ ಕುಮಾರ ಮಂಗಲ ಕ್ಷೇತ್ರದಲ್ಲಿ ಇಂಥದ್ದೊಂದು ಅಪರೂಪದ ಮದುವೆ ನಡೆದಿದೆ. ಕೇರಳದ ಕಾಸರಗೋಡಿನ ಬೇಳ ಗ್ರಾಮಕ್ಕೆ ಪಶ್ಚಿಮ ಬಂಗಾಳದ ಗೋರಖ್ ಪುರ್ ನಂಟು ಬೆಸೆದಿದೆ.


ಬೇಳ ಕುಂಜಾರಿನ, ನಿವೃತ್ತ ಬಿಎಸ್ಎನ್ಎಲ್ ಅಧಿಕಾರಿ ಕೇಶವ ಕುಂಜಾರು-ಗೀತಾ ದಂಪತಿಯರ ಪುತ್ರ ವೈಶಾಖ್ ಅವರ ವಿವಾಹ ಜ.28
ರಂದು ಕುಮಾರಮಂಗಲ ಕ್ಷೇತ್ರ ಸಭಾಂಗಣದಲ್ಲಿ ಪ. ಬಂಗಾಳದ ಗೋರಖ್ ಪುರದ
ವಧು ಅಭಿಷಿಕ್ತಾರೊಂದಿಗೆ ನಡೆಯುವ ಮೂಲಕ ಅಪರೂಪದ ಆಚಾರ ಸಂಸ್ಕೃತಿಯ ಭಾವೖಕ್ಯತೆ ಮೆರೆಯಿತು. ಬದುಕೆಂದರೆ ಸಮರಸತೆಯ ಒಲವಿನ ಪಯಣ ಎಂದೇ ಸಾರಿತು.
ವರ ವೈಶಾಖ್ ಮುಂಬಯಿಯ ರೋಡ್ ಕನ್ಸ್ಟ್ರಕ್ಷನ್ ಕಂಪೆನಿಯಲ್ಲಿ ಉನ್ನತಾಧಿಕಾರಿ. ವಧು ಅಭಿಷಿಕ್ತ ಕೂಡಾ ಇದೇ ಸಂಸ್ಥೆಯ ಉದ್ಯೋಗಿ. ಇಬ್ಬರೂ ಪರಸ್ಪರ ಮೆಚ್ಚಿಕೊಂಡರು. ಮನೆಯಲ್ಲಿ ಹಿರಿಯರ ಮುಂದೆ ವಿವಾಹ ನಿವೇದನೆಯನ್ನಿರಿಸಿದರು. ಎರಡೂ ಕಡೆಯಿಂದ ಆಕ್ಷೇಪದ ಅಭ್ಯಂತರಗಳೇನೂ ಮೊಳಗಲಿಲ್ಲ. ಆದರೆ ಆಚಾರ ಸಂಪ್ರದಾಯಗಳ ಸಹಕಾರದ ವಿನಿಮಯವಾಯಿತು. ತನ್ಮೂಲಕ ಉತ್ತರ ದಕ್ಷಿಣ ನಂಟಿನ ಮದುವೆಯೊಂದು ಹಿಂದೂ ಬ್ರಾಹ್ಮಣ ಸಂಸ್ಕಾರದ
ವಿಧೇಯ ನಡೆಯಿತು.

ಪ. ಬಂಗಾಳದ ಕಲ್ಕತ್ತಾ ಸನಿಹದ ಬರಾಕ್ ಪುರದ ಸೋಮಾ-ಅಮಿತ್ ದಂಪತಿಯರಿಗೆ ಅಭಿಷಿಕ್ತಾ ಏಕೖಕ ಪುತ್ರಿ. ಬಂಗಾಳಿ ಹಿಂದೂ ಸಂಪ್ರದಾಯದಂತೆ ಸಾಂಸ್ಕೃತಿಕ ಆಚಾರ ಬದ್ಧವಾಗಿ ಮದುವೆ ನಡೆಸಬೇಕೆಂಬುದು ಅವರಾಸೆ. ಇತ್ತ ಬೇಳದ ಕೇಶವ ಕುಂಜಾರು ಅವರಿಗೂ ಏಕೖಕ ಪುತ್ರ. ಮದುವೆ ಬ್ರಾಹ್ಮಣ ಸಂಪ್ರದಾಯ ವಿಧೇಯ ಊರಲ್ಲೇ ಆಗಬೇಕೆಂಬ ತುಡಿತ. ಕೊನೆಗೆ ವರನ ಕಡೆಯ ಬೇಡಿಕೆಗೆ ವಧುವಿನ ಕಡೆಯವರೊಪ್ಪಿದರು. ಆದರೆ ಬಂಗಾಳಿ ಸಾಂಪ್ರದಾಯಿಕ ಆಚಾರಗಳಲ್ಲಿ ಅತಿ ಪ್ರಧಾನವಾದ ಕೆಲವನ್ನಾದರೂ ಪಾಲಿಸಬೇಕೆಂಬ ಬೇಡಿಕೆ ಇಟ್ಟರು. ಇದನ್ನೊಪ್ಪಿ ಕುಮಾರಮಂಗಲ ದೇವಳದಲ್ಲಿ ಬಂಗಾಳಿ ಮತ್ತು ಗಡಿನಾಡ ಬ್ರಾಹ್ಮಣ ಸಂಪ್ರದಾಯದ ಬೆಸುಗೆಯೊಂದಿಗೆ ವಿವಾಹ ನಡೆಯಿತು. ಮದುವೆಗೆ ವಧುವಿನ ಕಡೆಯ ಅಗತ್ಯದ ಬೆರಳೆಣಿಕೆ ಮಂದಿಯಷ್ಟೆ ಆಗಮಿಸಿದ್ದರು.

ಏನಿದು ಬಂಗಾಳಿ ಸಂಪ್ರದಾಯ?
ಬಂಗಾಳಿ ಹಿಂದೂ ವಿವಾಹ ಸಂಪ್ರದಾಯಗಳು ಸಾಂಸ್ಕೃತಿಕ ವೖವಿಧ್ಯತೆಯಿಂದ ಶ್ರೀಮಂತವಾಗಿದೆ. ಅದನ್ನೆಲ್ಲಾ ಇಲ್ಲಿ ಆಚರಿಸದೇ ಇದ್ದರೂ ಸಾತ್ ಪಾಕೆ ಗೋರಾ ಎನ್ನುವ ವರನಿಗೆ ಏಳು ಪ್ರದಕ್ಷಿಣೆ ಬಂದು ನಿಲ್ಲುವ ಕ್ರಮ ನಡೆದಿದೆ. ಕೆಂಪು ರೇಶ್ಮೆ ಸೀರೆಯನುಟ್ಟು ವಧು ತಲೆಗೆ ಟೋಪ್ ಎಂಬ ಕೀರೀಟ ವಿರಿಸಿ ಸಿಂಧೂರದಾನ ಮಾಡಿದ್ದಾಳೆ. ನಮ್ಮಲ್ಲಿ ಅಂತರಪಟ ಇರುವಂತೆಯೇ ಕಣ್ಣನ್ನು ವೀಳ್ಯದೆಲೆಗಳಿಂದ ಮುಚ್ಚಿಕೊಂಡು ಮಂಟಪಕ್ಕೆ ಬಂದು ವರನನ್ನು ಮೊದಲಬಾರಿ ನೋಡುವ ಶುಭದೃಷ್ಟಿಯನ್ನಿರಿಸಿ ಮಾಲಾಧಾರಣೆ ಮಾಡಲಾಗಿದೆ. ಬಂಗಾಳಿ ಶೖಲಿಯ ವಧೂ ಅಲಂಕಾರ ಮಾಡಲಿಗಿದೆ.
ವೖದಿಕವಾಗಿಯೂ ಸಣ್ಣ ಪುಟ್ಟ ಆಚಾರ ವ್ಯತ್ಯಾಸಗಳಿವೆಯೇ ಹೊರತು ಗಂಭೀರವಾದದ್ದೇನಲ್ಲ. ಒಟ್ಟಿನಲ್ಲಿ ಹಾರಾರ್ಪಣ, ಮಂತ್ರಾಕ್ಷತೆ, ಅಕ್ಷತಾರೋಪಣ, ತಾಳೀಬಂಧನದೊಂದಿಗೆ ಅಗ್ನಿಸಾಕ್ಷಿಯಾಗಿ ವಿವಾಹ ಜರುಗಿತು.

ಕಾಲ ಬದಲಾಗುತ್ತಲೇ ಸಾಗುವಾಗ ಬದುಕಿನಲ್ಲೂ ಆಚಾರ ಸಹಿತ ಸಾಂಸ್ಕೃತಿಕ ವಿನಿಮಯದ ಸಹಕಾರ ಅಗತ್ಯ. ನಮ್ಮಲ್ಲಿ ಒಪ್ಪಿಕೊಳ್ಳುವ ಹೊಂದಾಣಿಕೆಯ ಸ್ವಭಾವ ಇದ್ದರೆ ಸಮಸ್ಯೆಗಳೇ ಇಲ್ಲ. ಬದಲಾಗುತ್ತಿರುವ ಕಾಲಕ್ಕನುಸರಿಸಿ ಸಂಪ್ರದಾಯಕ್ಕೆ ವಿಪರೀತ ಪ್ರಾಶಸ್ತ್ಯ ಕೊಡಬೇಕೆಂದಿಲ್ಲ. ಎಲ್ಲಾ ಕಾಲಕ್ಕೂ ಸಂಸ್ಕೃತಿ, ಆಚಾರಗಳು ಪರಸ್ಪರ ವಿನಿಮಯದಿಂದಲೇ ಬೆಳೆದಿದೆ.
ಕೇಶವ ಕುಂಜಾರು
ವರನ ತಂದೆ








